ಕುರುಡು ಕಾಂಚಾಣ ಕುಣಿಯುತಲಿತ್ತ ಪ್ರಜಾಪ್ರಭುತ್ವದ ಜಾತ್ರ್ಯಾಗ ಮೆರೆಯುತಲಿತ್ತ.
ಕಾಲಾಗ ಸಿಕ್ಕವರನ್ನ ತುಳಿಯುತಲಿತ್ತ.
ಚುನಾವಣೆ ಬಂತಂದ್ರ ಮತದಾರರ ಕಿಸೆ ತುಂಬಿಸುತಲಿತ್ತ.
ಮತದಾರರ ಮನಸ ಗೆಲ್ಲುತಲಿತ್ತ.
ಮತ ಮಾರಿಸುತಲಿತ್ತ.
ತನ್ನ ರೂಪ ಬದಲಾಯಿಸುತಲಿತ್ತ.
ಗಂಡು ಹೆಣ್ಣುಮತದಾರರ ಮನಸ್ಸಿಗೆ ತಕ್ಕಂತ ಕುಣಿಯುತಲಿತ್ತ.
ಹೆಣ್ಣು ಮತದಾರರ ಕಾಲಾನ ಬೆಳ್ಳಿಗೆಜ್ಜೆಯಾಗಿ ಕುಣಿಯುತಲಿತ್ತ.
ಮೂಗಿಗೆ ಮೂಗುತಿಯಾಗಿ ಶೋಭಿಸುತಲಿತ್ತ.
ಮೈಮ್ಯಾಲೆ ಒಪ್ಪುವ ಸೀರೆಯಾಗಿ ಮೆರೆಯುತಲಿತ್ತ.
ಕಿವಿಗೆ ಬೆಂಡಾಲಿ ಜುಮುಕಿಯಾಗಿ ಕಂಗೊಳಿಸುತಲಿತ್ತ.
ಕುಕ್ಕರ್ ರೂಪದಾಗ ಅನ್ನಪೂರ್ಣೇಶ್ವರಿಯಾಗಿ ಹಸಿದ ಹೊಟ್ಟೆ ತುಂಬಿಸುತಲಿತ್ತ.
ಗಂಡು ಮತದಾರರಿಗೆ ಹಣದ ಆಮಿಷ ತೋರಿಸುತಲಿತ್ತ.
ಬೈಕ್ ಮೇಲೇರಿಸಿ ಮೆರವಣಿಗೆ ಮಾಡಿಸುತಲಿತ್ತ.
ಹೆಂಡ ಕುಡಿಸಿ ಮತ್ತೇರಿಸಿ ಜೋಲಿ ಹೊಡೆಸಿ ಗಟಾರ ದರ್ಶನ ಮಾಡಿಸುತಲಿತ್ತ.
ಅಭ್ಯರ್ಥಿಯನ್ನು ಮತದಾರರ ಮುಂದ ಕೈ ಮುಗಿಸುತಲಿತ್ತ.
ಚುನಾವಣೆ ಮುಗಿದನಂತರ ಉಲ್ಟಾ ಹೊಡೆಯುತಲಿತ್ತ.
ಗೆದ್ದ ಅಭ್ಯರ್ಥಿಗೆ ಮತದಾರರಿಂದ ಕೈ ಮುಗಿಸುತಲಿತ್ತ.
ಮುಂದಿನ ಐದು ವರ್ಷ ಮಂಗನ ಕೈಯಾಗ ಮಾಣಿಕ್ಯ ಕೊಟ್ಟು ಕಹಿ ಅನುಭವದ ರುಚಿ ಎತ್ತಿ ತೋರಿಸುತಲಿತ್ತ.
ಕುರುಡು ಕಾಂಚಾಣ ಕುಣಿಯುತಲಿತ್ತ ಪ್ರಜಾಪ್ರಭುತ್ವದ ಜಾತ್ರ್ಯಾಗ ಮೆರೆಯುತಲಿತ್ತ.
ಶ್ರೀನಿವಾಸ ಪಾಟೀಲ, ಕಡಿವಾಲ
ಕಲ್ಯಾಣ ನಗರ, ಧಾರವಾಡ.