ಜ್ಞಾನ ಸಾಗರ ಒಡಲಲಿ ಅಡಗಿಸಿಕೊಂಡವರು ಬಯಲಾದರು
ಎಲ್ಲರ ಹೃದಯದಲಿ ಪ್ರೀತಿಯನು ತುಂಬಿದವರು ಬಯಲಾದರು
ತರು ಲತೆಗಳ ಮೈದಡವಿ ಪಿಸುಮಾತಲಿ ಚಿಗುರಿಸಿದವರು
ಪ್ರಕೃತಿಯಲಿ ಪರಮಾತ್ಮನನು ತೋರಿಸಿದವರು ಬಯಲಾದರು
ಮಸ್ತಕದಲಿ ಪುಸ್ತಕ ರಚಿಸಿ ಶರಣರ ನುಡಿಯಂತೆ ನಡೆದವರು
ಪ್ರವಚನಗಳಿಂದ ಶಾಂತಿಯ ಬೀಜ ಬಿತ್ತಿದವರು ಬಯಲಾದರು
ಗುರು ಮಂತ್ರವ ಜಪಿಸುತ ಅನುಭಾವದ ನುಡಿ ಸಾರಿದವರು
ಭಕ್ತಿಯಲಿ ನಮಿಸುತ ಅರಿವೇ ಗುರು ಎಂದವರು ಬಯಲಾದರು
ಜಾತಿ ಧರ್ಮಗಳ ಸೂತಕವ ಹರಿದು ನಡೆದಾಡುವ ದೇವರಾದವರು
ಮುಗ್ಧ ನಗುವ ಸೂಸುತ ಶುದ್ಧ ಬಾಳನು ಬಾಳಿದವರು ಬಯಲಾದರು
ಸರ್ವರಲಿ ಒಂದಾಗಿ ಅವರವರ ಭಾವದಿ ಮನದಲಿ ನೆಲಿಸಿದವರು
ಮಾಯೆಗೆ ಸಿಲುಕದೆ ಶತಮಾನದ ಅಲ್ಲಮ ಆದವರು ಬಯಲಾದರು
ತಾಮಸ ದೂಡುತ ಆಧ್ಯಾತ್ಮಿಕ ದಾರಿಗೆ ಜ್ಯೋತಿಯಾದವರು
ಧ್ಯಾನ “ಪ್ರಭೆ” ಯನು ವಿಶ್ವಕೆ ಹರಡಿದವರು ಬಯಲಾದರು
✍️ಪ್ರಭಾವತಿ ಎಸ್ ದೇಸಾಯಿ
ವಿಜಯಪುರ