ನೋಡಲ್ಲಿ..!
ನನ್ನ ಕನಸುಗಳೆಲ್ಲಾ
ಹೊತ್ತಿ ಉರಿಯುತ್ತಿವೆ..!

ಬೆಂಕಿ ಹಚ್ಚಿದವರು
ಯಾರೆಂಬ ಪ್ರಶ್ನೆ
ನನ್ನದಲ್ಲ..

ನನ್ನ
ಕನಸುಗಳ ಕಾವು
ಅಂಥಾದ್ದು..!

ಈಡೇರಬೇಕು
ಇಲ್ಲ..
ಉರಿದು ಬೂದಿಯಾಗಬೇಕು!

ಇಲ್ಲಿ
ಚಳಿ ಕಾಯಿಸುವ
ಗುಂಪೇ ಇದೆ ಎಂದರೆ
ಅವರಾರೂ ಶತೃಗಳಲ್ಲ..
ಹಿತವರು…
ತಮ್ಮ ಹಿತಕ್ಕಾಗಿ
ಬಂದವರು…

ಆರಿಸುವ ಪ್ರಯತ್ನವಿರಲಿ
ಗಾಳಿ ಬೀಸದಿದ್ದರೆ
ಅದೇ ಮಹದುಪಕಾರ..!

ಬೂದಿಯಾದ ಕನಸುಗಳ
ವಿಲೇವಾರಿಗೆ
ಯೋಜನೆಯಿಲ್ಲ

ಗಾಳಿಗೆ ಹಾರಿದರೆ
ಅದೇ ಸದ್ಗತಿ…! -

ಸೌಮ್ಯ ದಯಾನಂದ

✍️ ಸೌಮ್ಯ ದಯಾನಂದ
ಶಿಕ್ಷಕರು,ದಾವಣಗೆರೆ.