ಬವಣೆಗಳಲಿ ಬೆಂದುಂಡ ಜನಕೆ
ಮಿಥ್ಯದ ಆಶ್ವಾಸನೆಯ ಬಿತ್ತಿ
ಲಕ್ಷೋಪಲಕ್ಷ ಕನಸುಗಳ
ಹಕ್ಕಿಗಳನ್ನು ಹಾರಿಬಿಟ್ಟು
ನನಸಾಗುವ ಮುನ್ನವೆ
ರೆಕ್ಕೆ ಕತ್ತರಿಸುವ
ಢಂಬಾಚಾರಿಗಳ ಮನದಲ್ಲಿ
ಸತ್ಯದ ಪ್ರಣತಿ ಬೆಳಗಿಸಬೇಕು

ಮತಾಂಧತೆಯ ಅಫೀಮು ಕುಡಿದು
ಮೇಲು ಕೀಳುಗಳೆಂಬ ನಿಶೆಯಲ್ಲಿ ತೇಲುತ್ತ
ಜನಮನದ ನಡುವೆ ದ್ವೇಷಾಸೂಯೆಗಳ
ಉಕ್ಕಿನ ಭದ್ರಕೋಟೆ ನಿರ್ಮಿಸಿ
ತಮ್ಮ ಬೇಳೆ ಬೇಯಿಸಿಕೊಳ್ಳುವ
ಸಮಯ ಸಾಧಕರ ಅರಿವಿಗೆ
ಸಾಮರಸ್ಯದ ಪ್ರಣತಿ ಬೆಳಗಿಸಬೇಕು

ಆಸೆ ಅತಿಯಾಸೆ ದುರಾಸೆಗಳ
ನಾವೆಯನತ್ತಿ
ಬ್ರಷ್ಟಾಚಾರ ಮೋಸ ಅನ್ಯಾಯಗಳ ಹುಟ್ಟು ಹಾಕುತ
ಭಾರವು ಬಹುವಾಗಿ
ಶೋಕ ಸಾಗರದಲ್ಲಿ ಮುಳುಗುವ ಮನುಜರ
ತೀರದ ದಾಹಕೆ ಸಂತೃಪ್ತಿಯ ಪ್ರಣತಿ ಬೆಳಗಿಸಬೇಕು

ಜ್ಯೋತಿರ್ವರ್ಷಗಳಿಂದ ಮೌಢ್ಯದ
ಮಹಲಿನಲ್ಲಿ ವಿರಾಜಮಾನವಾಗಿ
ಮರೆಯುತಿರುವ ಅಜ್ಞಾನಿಗಳ ಮಿದುಳೊಳಗೆ
ತುಸುವಾದರು ವಿಜ್ಞಾನದ ಸಾರವನ್ನು
ಭಟ್ಟಿ ಇಳಿಸುವ ಭರವಸೆಯ
ಪ್ರಣತಿ ಬೆಳಗಿಸಬೇಕು

ಸ್ವಾರ್ಥ ಲಾಲಸೆಯಗಳನ್ನು
ಎದೆಗವಚಿಕೊಂಡು
ಮಾನವೀಯತೆಯನ್ನು
ಮಣ್ಣಲ್ಲಿ ಹುದಗಿಸುತ
ಪೈಶಾಚಿಕ ಕೃತ್ಯವೆಸಗಿ
ಹತ್ತಾರು ಜನರ ರಕ್ತದೋಕುಳಿಯಲಿ
ಗೋರಿಯ ಕಟ್ಟಿ
ಬದುಕುವ ಬಂಡಗೇಡಿಗಳಿಗೆ
ಶಾಂತಿ ಸೌಹಾರ್ದತೆಯ
ಪ್ರಣತಿ ಬೆಳಗಿಸಬೇಕು

✍️ಅನುಸೂಯ ಯತೀಶ್
ಬೆಂಗಳೂರು