ಹಬ್ಬ ಬಂತು ಹಬ್ಬ ನಮ್ಮ ಸಂಕ್ರಾಂತಿ ಹಬ್ಬ
ಹಿಗ್ಗಿ ಆಚರಿಸುವ ಹೆಮ್ಮೆಯ ಸುಗ್ಗಿ ಹಬ್ಬ
ರಾಸುಗಳ ಪೂಜಿಸುವ ಅಚ್ಚುಮೆಚ್ಚಿನ ಹಬ್ಬ
ಕಿಚ್ಚು ಹಾಯಿಸಿ ಮಾಗಿ ಚಳಿಯ ದಬ್ಬುವ ಹಬ್ಬ
ಹಿಂಗಾರು ಫಸಲ ತೆನೆ ರಾಶಿಗಳ ಸಂಗಮ ಹಿಗ್ಗ ನೂರ್ಮಡಿಗೊಳಿಸುವ ಸಂಭ್ರಮ
ಕುಳಿರು ಚಳಿಗೆ ಕಚಗುಳಿ ಹೇಳುವ ವಿದಾಯ
ಸ್ವಾಗತಿಸುವ ಹೊಸತನದಿ ಸವಿಘಳಿಗೆಗಳ
ಹಸಿರು ತೊರಣದಿ ಮನೆ ಮನೆಗಳು ಸಿಂಗಾರ
ರಂಗೋಲಿಯಲಿ ಮನೆ ಮನಗಳ ಸಡಗರ
ಕಬ್ಬು ಎಳ್ಳು ಬೆಲ್ಲ ಅವರೆಯ ಖಾದ್ಯಗಳು
ಹಂಚಿ ಸವಿಯುವುದರಲ್ಲಿದೆ ಸ್ವಾದಗಳು
ತೆಂಗು ಬಾಳೆ ನೇಸರಕೆ ಸ್ವಾಗತವ ಕೋರಿವೆ
ರವಿಯ ಪಯಣ ಬಡಗಣದತ್ತ ಸಾಗಿದೆ
ಭರವಸೆಯ ತಂಗಾಳಿಯಲಿಹುದು ಗಾಳಿಪಟ
ಮನವ ಬಿಚ್ಚಿ ಕಲಿಯುತ ಹೊಸಬಾಳ ಪಾಠ
ಎಳ್ಳು ಬೆಲ್ಲವ ಹಂಚುತ್ತಾ ಕಹಿಯ ದೂಡುವ
ಉತ್ತರಾಯಣದಿ ಸ್ನೇಹವ ಕೂಡಿಸುವ
ದ್ವೇಷ ಅಸೂಯೆಗಳು ಮರೆಯಾಗಲಿ
ರವಿ ಕಿರಣಗಳು ಬಾಳ ಬೆಳಗಿ ಸಮೃದ್ಧಿ ತರಲಿ

✍️ನಂದಿನಿ ರಾಜಶೇಖರ್
ಹಾಸನ