ಇಂದು ನಾಡಿಗೆಲ್ಲ ಸಂಕ್ರಮಣ ಕಾಲ
ಸಜ್ಜಾಗುತಿದೆ ಆ ಸುಗ್ಗಿಗೆ ಜೀವಜಾಲ
ಸೂರ್ಯನೂ ಬದಲಿಸುತಿಹನು ದಿಕ್ಕು
ಕಳೆಯುತಾ ಕವಿದ ಜಡತೆಯ ಬಿಕ್ಕು.!

ಮರೆಯಾಗುತಿದೆ ಮಾಗಿಯ ಚಳಿ ಮೆಲ್ಲ
ಬೆಚ್ಚನೆ ಸವಿಸ್ಪರ್ಶವಾಗುತಿದೆ ಬುವಿಗೆಲ್ಲ
ಸೂಚಿಸುತಿದೆ ವಸಂತಾಗಮನದ ಸೊಲ್ಲ
ಹಿಗ್ಗಿನ ಸಂಚಲನ ಕಣ ಕಣದೊಳಗೆಲ್ಲ.!

ಮಾಸಗಳ ಮಳೆಚಳಿಗೆ ನಲುಗಿದ ಧರೆ
ಪುಳಕದಿ ಬಯಸಿಹಳು ಭಾಸ್ಕರನ ಕೈಸೆರೆ
ಅವನಿಯಲಿ ಎಲ್ಲೆಡೆ ಋತುಗಾನದಿಂಚರ
ಬರುವ ಆ ವಸಂತೋತ್ಸವದ ಸಡಗರ.!

ಮೊಗ್ಗು ಹೂವಾಗಿ ಬಿರಿವ ಸಂಭ್ರಮ
ಧರಣಿ ಸಿಂಗಾರಕೆ ನಗುತಿಹ ಚಂದ್ರಮ
ಮಾರ್ದನಿಸಿಹುದು ಭೃಂಗ ಝೇಂಕಾರ
ನವಸಂವತ್ಸರಕೆ ನಿಸರ್ಗದ ಓಂಕಾರ.!

ಜಾಡ್ಯ ಕರಗಿ ಹುರುಪು ಮೂಡುವ ವೇಳೆ
ಹೊಸವರ್ಷ ಹೊಸತನಕೆ ಕಾದಿದೆ ಇಳೆ
ಪ್ರಕೃತಿ ಸಂಸ್ಕೃತಿಯ ಸಂಕ್ರಮಣ ಕಾಲ
ಇದು ಬದುಕು ಬೆಳಕಿನ ಸಂಕ್ರಾಂತಿ ಲೀಲ.!

ಎಳ್ಳಿನ ಚೈತನ್ಯ ಬೆಲ್ಲದ ಕಾರುಣ್ಯ ಕೂಡಿ
ನಡೆ-ನುಡಿಯಲ್ಲವನು ಬೆಳಗುತ ಹಾಗೆ
ಹೊಸಹಾದಿಗೆ ಹಾಕಲಿ ಬದುಕಿನ ಬೆಸುಗೆ
ಸಂಕ್ರಾಂತಿ ಹೆಚ್ಚಿಸಲಿ ಒಳಿತುಗಳ ಒಸಗೆ.!

✍️ಎ.ಎನ್.ರಮೇಶ್.ಗುಬ್ಬಿ.