ಗತಿಸಿದ ಹಳತುಗಳ ರಾಡಿ ತೊಳೆದು
ಎದೆಯ ನರಳಿಕೆಗಳ ರಾಶಿ ಕಳೆದು
ಹೊಸತುಗಳ ಹೊಂಬೆಳಕ ಸ್ಫುರಿಸುತ
ನವ ಭರವಸೆ ಕಿರಣಗಳ ಹರಿಸುತ
ಮೂಡಿ ಬರಲಿ ನವ ನವೀನ ವರ್ಷ.!

ಕಳೆದುದರ ನೆನಪುಗಳು ಕಾಡದಂತೆ
ತೊರೆದುದರ ನೋವುಗಳು ತೀಡದಂತೆ
ನವೋಲ್ಲಾಸ ನವೋತ್ಸಾಹ ಬೀರುತ
ಹೊಸ ಕನಸುಗಳ ಹಾದಿ ತೋರುತ
ಮಿನುಗಿ ಹೊಳೆಯಲಿ ಹೊಸ ವರ್ಷ.!

ಕಾಡಿದ ಸೋಲುಗಳು ಕನಲಿಸದಂತೆ
ಹಿಂದಿನ ವೈಫಲ್ಯಗಳು ಕಂಗಾಲಾಗಿಸಿದಂತೆ
ಹೊಸ ಹುಮ್ಮಸ್ಸು ಗೆಲುವುಗಳ ನೀಡುತ
ನವ ಯಶಸ್ಸಿನ ಶೃಂಗದಡೆ ಮುನ್ನಡೆಸುತ
ಹೊಳೆದು ಮಿನುಗಿ ಬರಲಿ ನವ ವರ್ಷ.!

ಮನದ ಕಣಕಣವು ಬೆಳದಿಂಗಳಾಗುವಂತೆ
ಕ್ಷಣ ಕ್ಷಣವು ತಿಂಗಳ ಬೆಳಕಾಗುವಂತೆ
ಹೃನ್ಮನಗಳಲಿ ಚೈತನ್ಯಕಾಂತಿ ಚಿಮ್ಮಿಸುತ
ಅಡಿಗಡಿಗೂ ಸ್ಫೂರ್ತಿ ನಾದ ಹೊಮ್ಮಿಸುತ
ಮೂಡಿ ಮೈದಳೆಯಲಿ ಹೊಚ್ಚ ಹೊಸವರ್ಷ.!

ಮನೆಗೋಡೆ ಕ್ಯಾಲೆಂಡರಿನ ಜೊತೆಜೊತೆಗೆ
ಮನ ಮನದ ಪುಟಗಳೂ ಬದಲಾಗಲಿ
ನವ ಕ್ಯಾಲೆಂಡರ್ ಅಲಂಕರಿಸಿದಂತೆ
ಬಾಳಿನಾ ಯಾದಿಯೂ ನವೀಕರಿಸಲಿ
ಬದುಕು ರಂಗು ರಂಗಾಗಿಸಲಿ ನವವರ್ಷ.!

ನವ ನವ್ಯ ಸಂಕಲ್ಪಗಳಿಗೆ ನಾಂದಿಯಾಗಿ
ಹೊಸ ಗುರಿ ಗಮ್ಯಗಳಿಗೆ ಹಾದಿಯಾಗಿ
ಹೊಸ ಹೊಸತುಗಳ ಸಾಕಾರವಾಗಿಸುತ
ಸಂತಸ ಸಂಭ್ರಮಗಳ ಝೇಂಕಾರವಾಗಿಸುತ
ಅವತರಿಸಲಿ ಆವಿರ್ಭವಿಸಲಿ ಹೊಸವರ್ಷ.!

✍️ಎ.ಎನ್.ರಮೇಶ್. ಗುಬ್ಬಿ.