ನಾನಿಂದು ಕವಿತೆ ಬರೆಯಲಾರೆ
ಸತ್ತು ಹೋಗಿರುವ ಶಬ್ದಗಳ
ಆತ್ಮಗಳ ಬೆದಕಿ
ಉದುರಿಹೋಗಿರುವ ತರುಲತೆಗಳ
ಹೃದಯದೊಳಗೆ ಕಲಕಿ
ಸಹೃದಯರ ಗಂಟಲೊಳಗೆ ಇಕ್ಕಟ್ಟಿನ ಕಡುಬ ತುರುಕಿ
ನಾನಿಂದು ಪದವ ಒರೆಯಲಾರೆ
ಬತ್ತಿಹೋದ ಎದೆಯಕುಂಡದೊಳಗೆ ಮುತ್ತು ರತ್ನದ ಸ್ವರಗಳ ಕೆದಕಿ
ಒಣಗಿಹೋಗಿರುವ ಕಿರುನಾಲಿಗೆಯೊಳಗೆ ಜೀವಸತ್ವಗಳ ತಡಕಿ
ಬಾಡಿಹೋದ ಭಾವನೆಗಳ ಅಂತರಂಗವ ಮಿಡುಕಿ
ನಾನಿಂದು ಸರವೆತ್ತಿ ಪಾಡಲಾರೆ
ನೈದಿಲೆಗಳಿಲ್ಲದ ಕೊಳದೊಳಗೆ ಮರೀಚಿ ಮಂಜರಿಯನರಸಿ
ಕವಿದಿರುವ ಕಾರ್ಮೋಡದೊಳಗೆ ಬಿದಿಗೆ ಚಂದ್ರಮನ ಶೋಧಿಸಿ
ಬಂಜರಾದ ಮನದ ಕಾಡಿನೊಳಗೆ ಪ್ರೇಮದ ಮಿಣುಕುಹುಳವ ತೋರಿಸಿ
ನಾನಿಂದು ಒಲಿದು ಆಲಾಪಿಸಲಾರೆ
ಕಮರಿದ ಕನಸುಗಳೊಳಗಿನ ನಿರವಯವದ ಗಾಳಿಯಲಿದ್ದು
ಬಂಜೆಯಾಗಿರುವ ಯುಗದ ಬಯಲೊಳಗೆ ಭರವಸೆಯ ಮರೀಚಿಕೆ ಬೆನ್ನುಬಿದ್ದು
ಯೋಗದೊಡಲಿನೊಳಗಿದ್ದು ಕಂಡದ್ದೆಲ್ಲವನ್ನೂ ಮೆದ್ದು
ನಾನಿಂದು ಹಾಡು ಹಾಡಲಾರೆ
ಮಾರಿಕೊಂಡ ಕರುಣೆ ಮಮಕಾರ ವಾತ್ಸಲ್ಯಗಳ ಕಾಲುಬಿದ್ದು
ಬಳಸಿ ಬಿಸಾಕುವ ಬುದ್ಧಿವಂತಿಕೆಯ ಜಾಲದೊಳಗಿದ್ದು
ತೀರದ ದಾಹದಂತಹ ಅಪಸವ್ಯಗಳಿಗೆಲ್ಲ ಹುಡುಕಿ ಮದ್ದು

✍️ಶ್ರೀಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು, ಬೀಳಗಿ