ಹೊಸತೆಲ್ಲವೂ ಹಳೆತಾಗುವದು
ಈ ಪ್ರಕೃತಿಗೆ ಸಹಜ
ಮಾಸಿದ್ದೆಲ್ಲವೂ ಹೊಸತನ
ಬಯಸುವದೂ ನಿಜ

ಭೌತಿಕವೆಲ್ಲ ಬದಲಾಗುವದು,
ನೈತಿಕತೆಗೆ ಏನಾಗಿದೆ
ಬದಲಾಗಬೇಕು ಭಾವಗಳು
ಒಂದೆಂಬ ಗೂಡಿನಲಿ ||

ಹೃದಯ ಹರವಾಗಬೇಕು
ಹದುಳ ಬಯಸುತ
ಮಾತು ಮೃದುವಾಗಬೇಕು
ಮತಿಯ ಬೆಳಗಿಸುತ ||
ಸ್ಥಿತಿಯರಿತು ನಡೆಯಬೇಕು
ಮಿತಿ ಮೀರದಂತೆ
ಧೃತಿಗೆಡದೆ ಎಡವಲಾರದೆ
ಮುನ್ನಡೆಯ ಬೇಕು ||

ನೆರಳು ಸರಿಸಿ ಅರಿಯಬೇಕು
ನೆರೆಹೊರೆಯನ್ನಪ್ಪುತ
ಅರಿವೆ ಗುರುವಾಗಬೇಕು
ಭರಿಸಿ ಜ್ಞಾನಾಮೃತ ||
ಬರುವದೆಲ್ಲವೂ ಬರಲೇಬೇಕು
ಬೆರೆಯಬೇಕು ಅನುದಿನ
ಧರೆಯ ನಿಯಮಕೆರಗಬೇಕು
ಸ್ಮರಿಸಿ ಶಿವನ ಕ್ಷಣಕ್ಷಣII

ಹೊಸ ಕ್ಷಣ, ಹೊಸ ದಿನಗಳು
ಹೊಸತು ಜನಜೀವನ
ನಸುನಗುತ ಹೊಸೆಯಬೇಕು
ಬೆಸಗೊಳ್ಳಲಿ ಭಾವನ ||
ತುಸು ದುಡುಕು ನಸು ಕೋಪ
ಮಸಣ ಸೇರಿ ಮಲಗಲಿ
ವ್ಯಸನವೆಲ್ಲವೂ ಹಸನವಾಗಲಿ
ಯಶವು ಜೀವಿ ಪಥದಲಿ ||

✍️"ಜೀವಿ''
(ಗದಿಗೆಯ್ಯ ವಿ ಹಿರೇಮಠ)
ಜೀವಿ ಕಲಾ ಬಳಗ
ಹುಬ್ಬಳ್ಳಿ