ಅಕ್ಷರಗಳೆಲ್ಲಾ
ಪ್ರೀತಿಯ ಬಣ್ಣದಲ್ಲಿದ್ದವು!
ಕೈಯಲ್ಲಿ
ಹೂ ಹಿಡಿದು
ಕನಸನ್ನು ಮುಡಿದಿದ್ದವು!

ಕೆಲವು ಸಾಲುಗಳು
ಮನಸಿನಲ್ಲಿ
ಸಜ್ಜೆ ಮನೆಯ
ದೀಪ ಹೊತ್ತಿಸಿದರೆ;
ಕೆಲವು
ಹೊಟ್ಟೆಯಲ್ಲಿ
ಬೆಂಕಿಯನ್ನು ಹಾಕಿದವು!

ಮನಸನ್ನು
ಉಯ್ಯಾಲೆಯಲ್ಲಿಟ್ಟು
ತೂಗಿದ ಸಾಲುಗಳೆಷ್ಟೋ..!
ಹೃದಯಕ್ಕೆ ನಾಟಿ
‌ಹಿತವಾದ ಗಾಯ
ಮಾಡಿದ ಪದಗಳೆಷ್ಟೋ..!

ಮುಖವನ್ನು
ಕೆಂಪಾಗಿಸುವುದಕ್ಕಿಂತಲೂ,
ಕೆನ್ನೆಯನ್ನು
ಗುಲಾಬಿಯಾಗಿಸಿದ
ದೂರುಗಳನ್ನು
ಮತ್ತೆ ಮತ್ತೆ ಓದಿದೆ..!

ಹೂಬಾಣದ
ಮಾತುಗಳ ಮೈಯಲ್ಲಿ
ಪ್ರೀತಿಯದೇ
ಘಮಲು-ಅಮಲು..
ಒಮ್ಮೊಮ್ಮೆ
ನೆತ್ತಿಗಡರಿ
ಮೈಮರೆಸಿದವು…

ಅಮಲಿನ ಅಕ್ಷರಗಳಿನ್ನೂ
ಹೊಕ್ಕಳಿನ ಸುತ್ತ
ಗಿರಕಿ
ಹೊಡೆಯುತ್ತಲೇ ಇವೆ..
ಪ್ರೇಮದ ಸುಳಿಯನ್ನು
ಹೇಗೆ ತಾನೇ ತಪ್ಪಿಸಿಕೊಂಡಾವು?!

✍️ಸೌಮ್ಯ ದಯಾನಂದ
ಡಾವಣಗೆರೆ