ಮೊನ್ನೆ ಉಳವಿಯಲ್ಲಿ ಜರುಗಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾನ ಮನಸ್ಸಿನ ಹೊಸ ಗೆಳೆಯನೊಬ್ಬ ಸಿಕ್ಕ. ಕಂಡೊಡನೇ ಆಕರ್ಷಿಸುವ ಪ್ರವೀಣ್ ಕುಮಾರ ಮೂಲತಃ ಬಾಗಲಕೋಟೆಯ ಗುಳೇದಗುಡ್ಡದ ವರು. MSc (ಭೂಗೋಳ ಶಾಸ್ತ್ರ, ಕನ್ನಡ, ಮತ್ತು ಇತಿಹಾಸದಲ್ಲಿ ಬಿ.ಎಡ್. ಪದವಿ ಪಡೆದಿರುವ ಸ್ವಾಭಿಮಾನಿ. ಪ್ರಜಾವಾಣಿ ವರದಿಗಾರನಾದ ಪ್ರವೀಣ ದಾಂಡೇಲಿಯ ಲೈಯನ್ಸ್ ಸ್ಕೂಲಿನಲ್ಲಿ ಅತಿಥಿ ಶಿಕ್ಷಕ. ಸದ್ಯಕ್ಕೆ ಬ್ರಹ್ಮಚಾರಿಯೂ ಹೌದು. ‘ಪ್ರವೀಣಕುಮಾರ’ ಹೆಸರು ಅನೇಕರಿಗೆ ಇರುವ ದರಿಂದ ‘ವೃಶ್ಚಿಕಮುನಿ’ ಕಾವ್ಯನಾಮದಿಂದ
ಬರೆಯುತ್ತಿರುವ ಪ್ರವೀಣ್ ಪ್ರಗತಿಪರ ವಿಚಾರ ಧಾರೆಯ, ಜೀವಪರ ವ್ಯಕ್ತಿತ್ವವನ್ನು ಬೆಳೆಸಿಕೊಂಡ ಭರವಸೆಯ ಬೆರಗುಗಣ್ಣಿನ ಯುವಕ.

‘ಅಯ್ಯೋ ನಾನು ದೇವರಲ್ಲ‘ ಇದು ವೃಶ್ಚಿಕ ಮುನಿಯ ಎರಡನೇಯ ಕವನ ಸಂಕಲನ. ಹೊಸನಗರದ ಯಳಗಲ್ಲು , ಕೋಡೂರಿನ ‘ಬೆನಕ ಬುಕ್ಸ್ ಬ್ಯಾಂಕ್ ‘ ಪ್ರಕಟಿಸಿದ 100 ಪುಟದ ಈ ಪುಸ್ತಕದಲ್ಲಿ 67 ವೈವಿಧ್ಯಮಯ ಕವಿತೆಗಳಿವೆ.ಇಲ್ಲಿಯ ಕವಿತೆಗಳಲ್ಲಿ ದೇವರ ಹುಡುಕಾಟವಿದೆ, ಹಸಿವಿದೆ, ಬಡತನವಿದೆ,
ಮನುಷ್ಯ ಪ್ರೀತಿ ಇದೆ, ವಿರಹಿಯ ಅಳಲಿದೆ, ಕತ್ತಲೆಯ ಬೆತ್ತಲ ನೋವಿದೆ, ಅಪ್ಪ ಅಮ್ಮರ ಬದುಕಿನ ಬವಣೆಯಿದೆ.

ಮಧ್ಯರಾತ್ರಿ ಹೋಗಿ ಕದ್ದರೂ ಸುಮ್ಮನಿರುತ್ತಾನೆ
ಹುಂಡಿಯೊಳಗಿನ ಕಾಸು ಯಾರದಾದರೇನು ಯಾವುದಾದರೇನು ಲಂಚವಿರಲಿ, ವಂಚನೆ ಯಿಂದಾಗಿ ಸಂಧಿತ ಕದ್ದವನಿಗೆ ಸಂಚಿತ. ದೇವಸ್ಥಾನದಲ್ಲಿ ನಡೆಯಬಾರದು ನಡೆದರೂ ಕಣ್ಣು ಮುಚ್ಚಿ ಕೊಂಡು ಸುಮ್ಮನಿರುತ್ತಾನೆ ಯಾಕೆಂದ್ರೆ ಇವನು ದೇವರು ….‌ !

ಎನ್ನುತ್ತಾ ‘ಯಾಕೆಂದರೆ ಇವನು ದೇವರು… !’ ಕವಿತೆಯಲ್ಲಿ ಈ ಅಸಾಯಕ, ಮನುಷ್ಯ ಕಲ್ಪಿತ ದೇವರ ಕುರಿತಾಗಿ ವಿಡಂಬನಾತ್ಮಕವಾಗಿ ವರ್ಣಿ ಸಿರುವರು. ಕವಿ ಹೇಳುವಂತೆ, ಅವನು ನಮ್ಮನ್ನು ಸೃಷ್ಟಿಸಿದನೋ ನಾವು ಅವನನ್ನು ಸೃಷ್ಟಿಸಿದೆವೋ ಇದೊಂದು ಯಕ್ಷಪ್ರಶ್ನೆಯಾಗಿ ಕಾಡುತ್ತದೆ. ಅರಳಿ ಕಟ್ಟೆಯ ಕೆಳಗಿನ ಈ ದೇವರೇ ಅನಾಥನೆಂಬಂತೆ ಕಾಣುವನು. ಮನುಷ್ಯನ ಈ ಎಲ್ಲಾ ಅನಿಷ್ಟ ಅನಾಚಾರ ಗಳನ್ನೂ ನೋಡುತ್ತಾ ಕುಳಿತುಕೊಳ್ಳು ವನು; ಅಷ್ಟೇ ಏಕೆ ಹುಂಡಿಯ ಕಾಸು ಕದ್ದರೂ ನೋಡಿ ಕುರುಡನಂತೆ ವರ್ತಿಸುವನು. ಮಳೆ, ಚಳಿ, ಗಾಳಿ ಯಾವುದಕ್ಕೂ ಅಂಜದೇ, ಎದುರೆದುರೇ ಬಡಿದಾಡಿ ಸತ್ತರೂ ಕಣ್ಬಿಡದೇ ಎಲ್ಲವನೂ ಸಹಿಸಿಕೊಂಡು ಕುಳಿತುಕೊಂಡಿರುವ ದೇವರ ಕುರಿತಾಗಿ ಗಟ್ಟಿಮನದಿಂದ ಬರೆದ ಕವಿತೆ ಇದಾಗಿದೆ, ಯಾಕೆಂದರೆ ಕವಿಗೆ ದೇವರ ಕುರಿತಾಗಿ ಏನೇ ಬರೆದರೂ ತನಗೆ ಶಿಕ್ಷೆಯನ್ನು ಕೊಡುವದಿಲ್ಲಾ ಎಂಬ ಭರವಸೆಯಿದೆ.

ಪುಳಕದ ಮೆಲುಕು’ ಕವಿತೆಯಲ್ಲಿ

ಅಪ್ಪನ ಹೆಗಲಿನ ಕುದುರೆ ನೆನಪು
ಮಾವಿನ ಮರದ ಕೋತಿಯ ಆಟದ ಮೆಲುಕು
ಅಮ್ಮನ ಬಿಸಿರೊಟ್ಟಿಯಲಿ ತುಪ್ಪದ
ಸವಿ ತುತ್ತಿನಲಿ ಕರಗಿದ ಆ ಬಾಲ್ಯದ ಮೆಲುಕು….

ಎನ್ನುತ್ತಾ ನಡೆದುಬಂದ ದಾರಿಯ ಸಿಂಹಾವ ಲೋಕನಮಾಡಿದಾಗ ಆ ನೆನಪುಗಳೇ ನಮ್ಮನ್ನ ಪುಳಕಗೊಳಿಸುವುದು ಎಂದು ಬಾಲ್ಯಕ್ಕೆ ಕಣ್ಣಾಗುವರು. ಬಾಲ್ಯ ಮತ್ತೆಂದೂ ಬರಲು ಸಾಧ್ಯವಿಲ್ಲ, ಆದರೆ ಆ ನೆನಪುಗಳೇ ನಮ್ಮೆದೆ ಯಲಿ ಸದಾ ಶಾಶ್ವತ ಎಂದು ಕವಿ ಕ್ಷಣದಲ್ಲಿ ಬಾಲ್ಯಕ್ಕೆ ಹೊರಳಿ ಮಗುವಾಗಿಬಿಡುವರು. ಆಟದಲ್ಲಿ ಸೋತು ಗೆಳತಿಯ ಮುಂದೆ ಮಂಗನಾ ದದ್ದು, ಕಾಲಿನ ಗಾಯವನ್ನೂ ಲೆಕ್ಕಿಸದೇ ಮರಳಿ ನಲ್ಲಿ ಗೂಡು ಕಟ್ಟಿದ್ದು, ಅಜ್ಜಿಯ ಚೀಲದಿಂದ ಕದ್ದು ಮೀಠಾಯಿ ಮೆದ್ದದ್ದು, ಅಪ್ಪನ ಹೆಗಲಿನ ಕುದುರೆಯಾಟ, ಅಮ್ಮನ ಬಿಸಿರೊಟ್ಟಿಯ ನೆನಪುಗಳು ಇಂದಿಗೂ ಈ ಧಾವಂತದ ಬದುಕಿ ನಲ್ಲೂ ನಮ್ಮನ್ನು ಜೀವಂತವಾಗಿರಿಸಿದೆ ಎಂದು ಕವಿ ಆ ನೆನಪುಗಳೇ ಇಂದಿನ ಖುಷಿಯ ಬದುಕಿನ ನೆಲೆಗಟ್ಟು ಎಂದು ನೆನೆಯುವರು.

ಪತ್ರಕರ್ತ ಕೆ.ಗಣೇಶ ಕೋಡೂರರವರು ಈ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ ‘ನನ್ನ ಕವಿತೆಗಳು ನನ್ನ ಬದುಕಿನ ಪ್ರತಿಬಿಂಬದಂತೆ ಎಂದೇ ಭಾವಿಸಿಕೊಂಡು ಕವಿತೆಗಳನ್ನು ಅಕ್ಷರ ಗಳಲ್ಲಿ ಪೋಣಿಸಿಡುವ ಪ್ರವೀಣಕುಮಾರ ಅವರ ಕವಿತೆಗಳು ಬದುಕಿನೆಲ್ಲ ಸಂಗತಿಗಳನ್ನೂ ಒಳಗೊಳ್ಳುತ್ತಾ ಹೋಗುವುದರಿಂದಲೇ ಇನ್ನಷ್ಟು ಖುಷಿ ಕೊಡುತ್ತದೆ. ಅವರು ಕವಿತೆಗಳನ್ನು ಬರೀ ಪ್ರೀತಿಯ ಗೂಟಕ್ಕೆ ಮಾತ್ರವೇ ಕಟ್ಟಿ ಹಾಕಿಲ್ಲ, ಬದಲಿಗೆ ಬದುಕು ಸಾಗುವ ದಾರಿಯಲ್ಲಿ ಎದು ರಾಗುವ ಎಲ್ಲವಕ್ಕೂ ಕವಿತೆಗಳನ್ನು ಕಟ್ಟುತ್ತಾ ಹೋಗುತ್ತಾರೆ. ಇದೇನು ಕವಿತೆ ಎಂದರೆ ಬರೀ ಪ್ರೀತಿಯನ್ನಪ್ಪಿಕೊಂಡು ಬಿಟ್ಟಿದೆ ಎಂದುಕೊಳ್ಳು ವಾಗ ಬಂಡಾಯದ ಬಾವುಟದ ಕೂಟದಲ್ಲಿ ಕವಿತೆ ಪಟಪಟಿಸುತ್ತದೆ! ನಮ್ಮದೇ ಯೋಚನೆ, ಆಕ್ರೋಶ, ಚಿಂತನೆಗಳು ಜೋಳಿಗೆಯಾಗಿ
ಅವರ ಕವಿತೆಗಳು ನಮ್ಮ ಹೆಗಲಿಗೇರಿದಂತೆ ಭಾಸವಾಗುತ್ತದೆ’ ಎಂದಿರುವರು.

ಅಪ್ಪನಿಗೂ ವಯಸ್ಸಾಗಿದೆ
ಸ್ಕೂಟರಿಗೂ ಅಷ್ಟೇ ಪ್ರಾಯ
ಅಪ್ಪನ ಫೋಟೋ ಗೋಡೆಗೇರಿದೆ
ಸ್ಕೂಟರ್ ಮೂಲೆ ಸೇರಿದೆ

ಎಂದು ‘ಅಪ್ಪನ ಲಡಕಾಸಿ ಸ್ಕೂಟರ್ ‘ ಕವಿತೆ ಲಯಲ್ಲಿ ಅಂದಿನ ತಮ್ಮ ಬದುಕಿನ ಉಸಿರಾದ ಅಪ್ಪ ಮತ್ತು ಸ್ಕೂಟರ್ ನ ಕುರಿತಾಗಿ ಬರೆಯುತ್ತ ಈಗ ಆ ಎರಡೂ ಕಾಲಮಾನಕ್ಕೆ ತಕ್ಕಂತೆ ಕಣ್ಮರೆ ಯಾದರೂ ಆ ನೆನಪು ಮಾತ್ರ ಹಚ್ಚ ಹಸಿರು ಎಂದು ಅದರ ಕಿಕ್ ನ ಗೊರಗೊರ ಶಬ್ದವೇ ನಮಗೆ ಶಹನಾಯಿಯ ಸಂಗೀತ ಎಂದು ನೆನೆದಿರುವರು. ಅಪ್ಪನ ಕೈ ತಪ್ಪಿಸಿ ಹಾರ್ನ್ ಅಮಕುವ ಕ್ಷಣ ಬದುಕಿನ ಮರೆಯಲಾರದ ನೆನಪೂ ಹೌದು.

‘ಕೋಣೆಯೊಳಗಿನ ಕನ್ಯೆಯರು ನಾವು’
ಕವಿತೆಯಲ್ಲಿ

ಗಂಡಸು ಎಂಬುವರು ಹೊಸ ಮುಖವಾಡ ಧರಿಸಿ
ಧನಿಕ, ಕಾರಕೂನ, ಆಫೀಸರ್,ರಾಜಕಾರಣಿ,
ಅರ್ಚಕ, ಮುಲ್ಲಾ, ಫಾದರ್, ಭಿಕ್ಷುಕ
ಯಾವ ಮುಖವಾಡವಿದ್ದರೂ ಸುಖ ಹುಡುಕುವವರೆ
ಮಲಗಿ ಮೈಲಿಗೆಯಾಗಿ ಮಡಿಯಾಗಲು
ಎದ್ದು ಹೋಗುವವರೆ.

ಎನ್ನುತ್ತಾ ಸಮಾಜದ ಇಂದಿನ ಹಿಂದಿನ ಅಸಹಾಯಕ ಹೆಣ್ಣಿನ ಧಾರುಣತೆಯನ್ನು ಚಿತ್ರಿಸಿರುವರು. ಎಲ್ಲರೂ ಮುಖವಾಡಿಗಳೇ. ಅದಕ್ಕೆ ಕಾಲ ದೇಶದ ಹಂಗಿಲ್ಲಾ. ಬಡತನ, ಹಸಿವು, ಅಸಹಾಯಕ ಕ್ಷಣಗಳಿಂದ ಅವರು ಕಂಗೆಟ್ಟಿರು ವರು. ನಾವು ಎಂದೂ ಬೆಳಕು ಕಾಣುವುದಿಲ್ಲ ಎನ್ನುವ ಕತ್ತಲಕೋಣೆಯ ಕನ್ಯೆಯರ ಕೆಂಪು ದೀಪದ ಕೆಳಗಿನ ಕತ್ತಲೆ ಬದುಕನ್ನು ಚಿತ್ರಿಸಿರುವರವರು.

ಸಂಕಲನದ ಕವಿ ಪ್ರವೀಣಕುಮಾರ ಸುಲಾಖೆ ತಮ್ಮ ಕವಿತೆ ಕುರಿತು ಬರೆಯುತ್ತ ‘ಕವಿತೆಯು ಜೀವನಾನುಭವ ಅಭಿವ್ಯಕ್ತಿಯ ರಸಗ್ರಹಣ. ಇಂತಹ ಅನುಭವಗಳು ಬದುಕಿನ ಏರುಪೇರು ಪಯಣದಲಿ ಜೊತೆಯಾದವುಗಳೇ. ಸಂತಸ,
ದುಃಖ, ದುಮ್ಮಾನ, ಹತಾಶೆ, ಬಡತನ, ಹಸಿವು, ಜಗತ್ತು ಹೀಗೇಕೆ, ದೇವರು ಎಲ್ಲರಿಗೂ ಯಾಕೆ ಒಳ್ಳೆಯದನ್ನು ಮಾಡುವುದಿಲ್ಲ, ಅವನು ಇರುವು ದಾದರೂ ನಿಜವೇ ಎನ್ನುವ ಜಿಜ್ಞಾಸೆ ಯ ಪ್ರಶ್ನೆಗಳಿಗೆ ಬಹುಶಃ ಕವಿತೆಗಳು ಉತ್ತರ ನೀಡ ಬಹುದು’ಎನ್ನುತ್ತಾ’ ಅಯ್ಯೋ ನಾನು ದೇವರಲ್ಲಾ’ ಎಂದು ದೇವರು ಇದ್ದರೆ ಹೇಗಿರಬಹುದು, ಎಲ್ಲಿರಬಹುದು ಎಂಬ ಹುಡುಕಾಟದಲ್ಲಿ ತೊಡಗಿರುವರು.

ನೀನು ಸತ್ಯವಂತನಾಗದಿದ್ದರೂ ಚಿಂತೆಯಿಲ್ಲ ಮನುಜನಾಗು
ಸ್ವಾಭಿಮಾನಕ್ಕೆ ಹೆಸರಾಗದಿದ್ದರೂ ಅಭಿಮಾನಶೂನ್ಯನಾಗಬೇಡ
ದೇಶ ನಿನ್ನದು ಪ್ರೀತಿಸುವುದನು ಮರೆಯಬೇಡ

ಎಂದು ‘ಕಿರೀಟ’ ಕವನದಲ್ಲಿ, ನೀನು ನೀನಾಗಿರು ಎಂದು ಕಿವಿಮಾತು ಹೇಳಿರುವರು. ಅಪ್ಪ ಅಮ್ಮರ ಕನಸು ನನಸು ಮಾಡಬೇಕಿದೆ ಈಗ. ಅವರು ಬದುಕು ಕಟ್ಟುವದರ ಜೊತೆ ಕನಸನ್ನೂ ಕಟ್ಟಿದರು. ಮತ್ತೊಬ್ಬರಿಗೆ ಆಸರೆ ಯಾಗು ಎಂದಿಗೂ ಅಹಂಕಾರಿಯಾಗ ಬೇಡ, ಕೂಗಾಡದೇ ದಮನಿತರ ಧ್ವನಿಯಾಗು, ಹೋರಾಡು; ಎಂದಿಗೂ ಹಾರಾಡ ಬೇಡ ಇದೇ ವಾಕ್ಯದಲ್ಲೇ ನಾವೀಗ ಬದುಕನ್ನು ಕಟ್ಟಿಕೊಳ್ಳ ಬೇಕಿದೆ. ಮನುಷ್ಯ ಸಂಬಂಧ, ಮಾನವೀಯ ನಡೆ-ನುಡಿಗಳಲ್ಲಿ ನಡೆದು ಪ್ರೀತಿಯಲ್ಲಿ ನಡೆಯ ಬೇಕಾಗಿದೆ. ದೇಶ ನಮ್ಮದು, ಈ ದೇಶ ನಮಗೆ ಎಲ್ಲವನೂ ಕೊಟ್ಟಿದೆ. ದೇಶವನ್ನು ಪ್ರೀತಿಸು ಜೊತೆಗೇ ನಂಬಿದವರನ್ನೂ ಸಹ ಇದೇ ಬದುಕಿನ ಕಿರೀಟ ಎಂದು ಕವಿ ಮನುಷ್ಯತ್ವಕ್ಕೆ ಸಾಕ್ಷಿಯಾಗಿ ರುವರು.

‘ಅಪ್ಪನೆಂಬ ಆತ್ಮೀಯ ಭಾವ’ ಕವಿತೆಯಲ್ಲಿ

ಅಮ್ಮ ಹೊತ್ತಿದ್ದು ಒಂಬತ್ತು ತಿಂಗಳ
ಅಪ್ಪ ಹೊತ್ತಿದ್ದು ಅವನು ಇಲ್ಲವಾಗುವವರೆಗೂ

ಎನ್ನುತ್ತಾ ಅಪ್ಪನ ತ್ಯಾಗವನ್ನು ಕಣ್ಣೀರಾಗಿ ನೆನೆದಿರುವರು. ತನ್ನ ಬೆವರು ಸುರಿಸುತ್ತಾ ಅಪ್ಪ ಮಕ್ಕಳ ಕನಸುಗಳಿಗೆ ಇಂಧನವಾಗಿ ತನ್ನನ್ನು ತಾನೇ ದಹಿಸಿಕೊಳ್ಳುವನು. ಅಪ್ಪ ತನ್ನ ಯಾತ್ರೆ ಮುಗಿಸುವ ತನಕ ಅವನನ್ನು ಅಷ್ಟಕಷ್ಟೇ ಆಗಿ ನೋಡುವರು. ನಂತರದ ದಿನದಲ್ಲಿ ನೆನೆನೆನೆದು ಫೋಟೋಕ್ಕೆ ಮಾಲೆ ಹಾಕಿ ಕಣ್ಣೀರು ಸುರಿಸು ವರು, ಈ ಜನ. ಅಪ್ಪನೆಂದರೆ ಆತ್ಮೀಯ ಭಾವ
ಎಂದು ಕವಿ, ಅಪ್ಪನ ಜವಾಬ್ದಾರಿ ಏನೆಂಬುದು ನಾನು ಅಪ್ಪನಾದಾಗಲೇ ಮನಗಂಡೆ ಎಂದು ಅಪ್ಪನ ನೆನೆದು ಕಣ್ಣೀರಾಗುವರು.

ಇಷ್ಟಾದರೂ’ ಕವಿತೆಯಲ್ಲಿ

ಜಾತ್ರೆಯ ಬತ್ತಾಸು ಕಾಣಲಿಲ್ಲ
ಬಣ್ಣದ ರಿಬ್ಬನ್ನು ಗಾಜಿನ ಬಳೆ ಮೌನವಾದವು
ಜಾತ್ರೆ ನಿಂತಲ್ಲೇ ನಿಂತಿದೆ

ಎನ್ನುತ್ತಾ,

ಪ್ರೇಯಸಿಯ ಕುರಿತು ಹಂಬಲಿಸಿ
ವಿರಹ ವೇದನೆಯಲ್ಲಿ ಮುಳುಗಿ
ನಿಜತಿಳಿದೊಡನೆ ಈ ಮನ
ನೋವಿನ ಗೂಡಾಯಿತು


ಎನ್ನುವಾಗ ಭಗ್ನತೆಯ ನೋವು ಅರಿತವನೇ ಬಲ್ಲ.

‘ಬಡವರ ಬೆನ್ನು ಹುರಿ ದೇಶದ ನರನಾಡಿ’ ಎಂಬ ಸಾಮಾಜಿಕ ಪ್ರಜ್ಞೆ ಅರಿತಿರುವ ಪ್ರವೀಣ ಕುಮಾರರ ಈ ಸಂಕಲನದುದ್ದಕ್ಕೂ ಜನಪರ ಕಾಳಜಿಯಿದೆ; ವಿಷಯ ವೈವಿಧ್ಯತೆಯಿದೆ. ಕವನ ಕಟ್ಟುವ ಕಸರತ್ತು ಅರಿತಿರುವ ಈ ಕವಿಯ ಕವಿತೆಗಳು ಗದ್ಯದ ಶುಷ್ಕ ಗಾಳಿಯಿಂದ ಹೊರ ಬಂದು ಮುಂದಿನ ದಿನಗಳಲ್ಲಿ ಕಾವ್ಯಾತ್ಮಕ ಕವಿತೆಗಳು ನಳನಳಿಸಲಿ ಎಂದು ಶುಭಕೋರಿ ಅಭಿನಂದಿಸುವೆ.

✍️ಪ್ರಕಾಶ ಕಡಮೆ
ನಾಗಸುಧೆ, ಹುಬ್ಬಳ್ಳಿ.