ನಮ್ಮ ಮಾತು ಎಂದೆಂದಿಗೂ ಮುಗಿಯದಿರಲಿ ಲವ್ ಯು ಜೀ
ರಸಮಯ ಗಳಿಗೆ ಹೀಗೆ ಮುಂದುವರಿಯಲಿ ಲವ್ ಯು ಜೀ

ಇದಿರು ಮಾತು ಮನದಲಿ ಹೂತು ಪೆಡಸು ತಂದೀತು ನಮ್ಮಲಿ
ಸದಾ ಸಾಥ್ ಕೊಡುವ ಅಭಿಮತ ತೀರದಿರಲಿ ಲವ್ ಯು ಜೀ

ಜೊತೆ ಹೆಜ್ಜೆಯಲ್ಲೂ ತಗ್ಗು ದಿಮ್ಮಿ ನಡೆ ಗೊತ್ತಿದೆ ಈ ಬದುಕಲಿ
ನಿಂತು ಸಾವರಿಸಿಕೊಳ್ಳುವ ಪಾದ ನರಳದಿರಲಿ ಲವ್ ಯು ಜೀ

ಪ್ರತಿ ಬೆಳದಿಂಗಳು ಚೆಲ್ಲೀತೆ ಚಂದಿರನಿಗೂ ಮೋಡದ ಮರೆ ಇದೆ
ಮನದ ಮನೆಯ ಚಂದ್ರಿಕೆ ಮಸುಕಾಗದಿರಲಿ ಲವ್ ಯು ಜೀ

ಎಲ್ಲ ಆಸೆ ಫಲಿಸದು ಭವ ಜಂಜಡದಲಿ ಸಿಲುಕಿರುವಾಗ ನಾವು
ಗೊತ್ತಿದೆ ನಲ್ಲ ಈ ಗ್ರಹಿಕೆ ಕೊನೆಯಾಗದಿರಲಿ ಲವ್ ಯು ಜೀ

ತಮಾಷೆಗೂ ಆಡದಿರು ದೂರ ಸರಿವ ಮಾತು ಕೇಳಿ ಉಳಿಯುವೆನೆ
ಯಾವ ತೂಫಾನಿಗೂ ಪ್ರೀತಿ ದೋಣಿ ನಿಲ್ಲದಿರಲಿ ಲವ್ ಯು ಜೀ

ಗಾಳಿ ಜಲ ಬೆಂಕಿ ಭೂಮ್ಯಾಕಾಶ ಪಂಚಭೂತ ಅಸ್ತಿತ್ವ ನಾವಲ್ಲವೆ ಅನು
ನಮ್ಮ ಆಸ್ಮಿತೆ ನಮಗೆ ಈ ಗೌರವ ಸ್ಥಿರವಾಗಿರಲಿ ಲವ್ ಯು ಜೀ

✍️ಅನಸೂಯ ಜಹಗೀರದಾರ
ಶಿಕ್ಷಕಿ,‌ಕೊಪ್ಪಳ