ಮರೆತುಹೋದ ಸ್ವಾತಂತ್ರವೀರರನ್ನು ಕುರಿತು ಬರೆಯುತ್ತಿದ್ದಂತೆ ಒಂದುದಿನ ನಾನು ಸಂಪಾದಕ ರನ್ನು, ನಮ್ಮ ತಂದೆಯವರನ್ನು ಕುರಿತು ಬರೆಯ ಬಹುದೇ ಎಂದು ಕೇಳಿದೆ. ಅದಕ್ಕವರು ಧಾರಾಳ ವಾಗಿ ಅವರೂ ಒಬ್ಬ ಸ್ವಾತಂತ್ರ ಸಿಪಾಯಿ, ಮರೆತುಹೋದ ಅವರ ತ್ಯಾಗವನ್ನು ನೆನಪಿಸಿಕೊ ಳ್ಳುವುದರಲ್ಲಿ ಯಾವ ಅಡ್ಡಿಯೂ ಇಲ್ಲ ಎಂದರು. ಅದೇ ಪ್ರೇರಣೆ ಯಲ್ಲಿ ಇಂದು ನನ್ನ ತಂದೆಯವ ರನ್ನು ಕುರಿತು, ಅವರ ರಾಜಕೀಯದ ಅನುಭವ ಗಳನ್ನು ಕುರಿತು ಬರೆಯತೊಡಗಿದ್ದೇನೆ.

ನನ್ನ ತಂದೆಯವರೂ ಸ್ವಾತಂತ್ರ ಸಂಗ್ರಾಮದ ನೇಕಾರರ ನೂಲುಗಳಲ್ಲಿ ಒಂದಾಗಿದ್ದರು ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಮೊದಲಿಗೆ ಅವರ ಪರಿಚಯವನ್ನು ಮಾಡಿ ಕೊಟ್ಟು ಮುಂದುವರಿಯುವ ಸಾಹಸ ಮಾಡುತ್ತೇನೆ. ಉಗ್ರವಾದಿ ಯಾಗಿದ್ದ ಅರವಿಂದರು ಹೇಗೆ ಜೈಲಿನಿಂದ ಹೊರಕ್ಕೆ ಬಂದಮೇಲೆ ಅಧ್ಯಾತ್ಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅರವಿಂದ ಮಹರ್ಷಿ ಯೆನಿಸಿದರೋ ಅಂತೆಯೇ ನನ್ನ ತಂದೆಯ ವರು ಕೂಡ. ಅರವಿಂದರು ಲೋಕವಿಖ್ಯಾತ ರಾದ ಮಹಾನುಭಾವರು. ನನ್ನ ತಂದೆಯವರು ಆ ಮಟ್ಟದಲ್ಲಿ ಅಲ್ಲದಿದ್ದರೂ ಮೈಸೂರು ಹಾಗೂ ಸುತ್ತಮುತ್ತಲಿನ ಊರುಗಳ ಲ್ಲೆಲ್ಲ ಅವರ ಅಧ್ಯಾತ್ಮತೆಗೆ ಪ್ರಸಿದ್ಧಿಯಾಗಿದ್ದರು. ಮೈಸೂರಿನ ಲ.ನ.ಶಾಸ್ತ್ರಿಗಳು ಅವಧಾನಿ ಗಳನ್ನು ಕುರಿತು “ಸಂತರು ಮಹಂತರು” ಸರಣಿಯಲ್ಲಿ ಇವರನ್ನು ಕುರಿತಾದ ಲೇಖನ ವೊಂದನ್ನು ಪ್ರಕಟಿಸಿದ್ದಾರೆ. ಬಹುಮುಖ ವ್ಯಕ್ತಿತ್ವದ ಅವಧಾನಿಗಳ ಸ್ಥೂಲ ಪರಿಚಯ ಕೊಡುವ ಲೇಖನ ಇದಾಗಿದೆ.

ವೇದಬ್ರಹ್ಮ ಚನ್ನಕೇಶವ ಅವಧಾನಿ, ಸಾತಂತ್ರ ಸಂಗ್ರಾಮದ ಶಂಕರ. ವೇದಬ್ರಹ್ಮ ರಾಮಾವ ಧಾನಿಗಳ ಮಗ. ರಾಮಾವಧಾನಿಗಳ ತಂದೆ ತಾವು ಸಾಯುವ ಕೆಲವೇ ಗಂಟೆಗಳ ಮೊದಲು ಊರವರಿಗೆಲ್ಲ ಸುದ್ದಿಕೊಡುವಂತೆ ಹೇಳಿದ್ದ ರಂತೆ! ಅಂತಹ ಅಧ್ಯಾತ್ಮ ಜೀವಿಗಳ ವಂಶದಲ್ಲಿ ಹಾಸನ ಜಿಲ್ಲೆಯ,ಅರಕಲಗೂಡು ತಾಲ್ಲೂಕಿನ ಕೇರಳಾ ಪುರದಲ್ಲಿ ಇವರ ಜನನ. ಹುಟ್ಟಿ ಏಳು ವರ್ಷ ಗಳಾದರೂ ಮಾತನಾಡದೆ ಇದ್ದ ಮಗನನ್ನು ನೋಡಿ ಮೂಕ ಮಗ ಹುಟ್ಟಿದನೆಂದೇ ತಿಳಿದರು. ಆದರೆ ಒಮ್ಮೆ ಮಾತನಾಡಲು ತೊಡಗಿದ ಮೇಲೆ ಇವರ ಕಂಚಿನ ಕಂಠವನ್ನು ಕೇಳಲು ಜನ ಉತ್ಸುಕರಾ ಗಿರುತ್ತಿದ್ದರು. ಮೈಸೂರು ವೇದಪಾಠಶಾಲೆ ಯಲ್ಲಿ ವಿದ್ಯಾಭ್ಯಾಸ ಕ್ಕೆ ಸೇರಿದ ಇವರು ವಾರಾನ್ನದಲ್ಲಿ ಉಟಮಾಡುತ್ತ ವೇದವನ್ನು ಕಲಿತರು. ಆಗಿನ ಕಾಲದಲ್ಲೂ ವಾರಾನ್ನಕ್ಕೆ ಮನೆಗಳು ಸಿಗುತ್ತಿದ್ದುದು ಕಷ್ಟವಾಗಿತ್ತು.

ಇವರ ವೇದಪಾಠವನ್ನು ಕೇಳಲು ಜನ ಹಾತೊರೆ ಯುತ್ತಿದ್ದರು. ಅದಕ್ಕೆ ಕಾರಣ ಇವರ ಕಂಚಿನ ಕಂಠ ಹಾಗೂ ಕಲಿಯು ವುದರಲ್ಲಿ ಇವರು ತೋರಿಸುತ್ತಿದ್ದ ಪರಿಶ್ರಮ. ಇದರಿಂದ ಇವರಲ್ಲಿ ಅಹಂಕಾರ ಉಂಟಾಗಿ ಸಹಪಾಠಿ ಗಳನ್ನು ಕಾಡ ತೊಡಗಿದಾಗ ಅದನ್ನು ನಿವಾರಿಸಲು ಇವರ ಗುರುಗಳೇ ಬರಬೇಕಾ ಯಿತು. ಗುರುಗಳು ಕೇಳಿದಾಗ ಸರಳದಲ್ಲಿ ಸರಳವಾದ ಒಂದು ಶ್ಲೋಕವನ್ನೂ ಹೇಳಲು ಸಾಧ್ಯವಾಗದೆ ಹೋಯಿತು. ಆಗ ತಮ್ಮ ಸೋಲು ಒಪ್ಪಿಕೊಂಡ ಶಂಕರ ಅಂದಿನಿಂದ ಮುಂದೆ ವಿದ್ಯಾ ವಿನಯ ಶೀಲರಾಗಿ, ಆಪ್ತ ಶಿಷ್ಯರಾಗಿ, ಪರಮಾಪ್ತ ಗುರುಗಳಾಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿದರು ಎನ್ನುವುದು ವಿಶೇಷ ಸಂಗತಿ.

ಇವರ ವಿದ್ಯಾರ್ಥಿಜೀವನದ ಕೊನೆಕೊನೆಯ ವರ್ಷಗಳು ಸ್ವಾತಂತ್ರ ಸಂಗ್ರಾಮದ ದಿನಗಳಾಗಿ ದ್ದವು ಎನ್ನುವುದು ತಮ್ಮ ಸೌಭಾಗ್ಯವೆಂದು ಹೇಳುತ್ತಿದ್ದರು. ಇವರು ಮೈಸೂರಿನಲ್ಲಿ ಇರುವಾಗ ಅಲ್ಲೆ ಗರಡಿಮನೆಯನ್ನು ಸೇರಿ ವ್ಯಾಯಾಮ ವನ್ನೂ ಕಲಿಯುತ್ತಿದ್ದರು. ಹಳ್ಳಿ ಯನ್ನು ಬಿಟ್ಟು ಮೈಸೂರನ್ನು ವಿದ್ಯಾಭ್ಯಾಸ ಕ್ಕಾಗಿ ಸೇರಿದುದೇ ವರದಾನವಾಯಿತು. ಆಗ ಗಾಂಧೀಜಿಯವರ ‘ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ’ ಚಳುವಳಿಯ ಕಾವು ಎಲ್ಲ ಕಡೆಯಲ್ಲಿಯೂ ಹರಡಿತ್ತು. ಮೈಸೂರು ಪ್ರಾಂತವೂ ಇದಕ್ಕೆ ಹೊರತಾಗಿರಲಿಲ್ಲ. ಅದರಲ್ಲಿ ಭಾಗವಹಿಸಿದ ಶಂಕರ ಹಲವುಬಾರಿ ಜೈಲುಖಾನೆಯನ್ನು ಸೇರ ಬೇಕಾಯಿತು. ಆಗಿನ ಅವರ ಅನುಭವಗಳನ್ನು ಒಮ್ಮೊಮ್ಮೆ ನಮಗೆ ಹೇಳುತ್ತಿದ್ದರು. ತನ್ನ ಸ್ವಂತ ಊರಿನಲ್ಲೂ ತಲೆಮರೆಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಶಂಕರನದು. ಸತ್ಯಾಗ್ರಹದ ಕಾವು ಸ್ವಲ್ಪ ಇಳಿದಾಗ ತನ್ನ ಊರಾದ ಕೇರಳಾಪುರಕ್ಕೆ ಶಂಕರ ಬಂದರೆ ಅಲ್ಲಿಯೂ ಪೋಲಿಸರು ಅವನನ್ನು ಹುಡುಕಿ ಕೊಂಡು ಬಂದರು. ಇದಕ್ಕೆ ಕಾರಣ ನಮ್ಮ ಜನರೇ! ಎಂದರೆ ಆಶ್ಚರ್ಯವಾ ದೀತೆ? ಶಂಕರ ಊರಿಗೆ ಬಂದಿರುವ ಸುದ್ದಿಯನ್ನು ಪೋಲೀಸರಿಗೆ ತಿಳೀಸಿದುದೇ ಅಲ್ಲದೆ ಅವನನ್ನು ಹುಡುಕಿಕೊಂಡು ಬಂದ ಪೋಲೀಸರಿಗೆ ಶಂಕರ ಇದ್ದ ಸ್ಥಳವನ್ನು ತೋರಿಸಿ ಕೊಟ್ಟು ಆತನನ್ನು ಬಂಧಿಸುವಂತೆ ಮಾಡಿದ್ದರು. ಆದರೆ ಶಂಕರನೇನೂ ಇದಕ್ಕೆ ಹೆದರಲಿಲ್ಲ. ಜೈಲಿನಿಂದ ಹೊರಬಂದ ಕೂಡಲೆ ಸತ್ಯಾಗ್ರಹದ ಚಟುವಟಿ ಕೆಗಳನ್ನು ಮತ್ತೆ ಪ್ರಾರಂಭಿಸುತ್ತಿದ್ದರು. ಎರಡು ಮಕ್ಕಳ ತಂದೆಯಾಗಿದ್ದ ಶಂಕರ, ಮಡದಿ ಮಕ್ಕಳನ್ನು ಕೇರಳಾಪುರದಲ್ಲಿ ಬಿಟ್ಟು ಮೈಸೂರಿಗೆ ಹೊರಟು ಬಿಡುತ್ತಿದ್ದರು. ಭಾಷೆಯ ತೊಡಕು ಅವರನ್ನು ಹಿಂದಿಯನ್ನು ಕಲಿಯುವಂತೆ ಮಾಡಿತು. ಸಂಸ್ಕೃತದ, ವೇದದ ಪರಿಚಯ ವಿದ್ದ ಅವರಿಗೆ ಹಿಂದಿ ಕಲಿಯುವುದು ಕಷ್ಟವಾಗಲಿಲ್ಲ.

ಇವರ ರಾಜಕೀಯ ಪ್ರವೇಶಕ್ಕೆ ಕಾರಣವಾದ ಘಟನೆಯನ್ನು ಆಗಾಗ ಬಹಳ ಸ್ವಾರಸ್ಯಕರ ವಾಗಿ ಹೇಳುತ್ತಿದ್ದರು. ಬಹಳ ಬಿರುಸಿ ನಿಂದ ಚಳುವಳಿ ನಡೆಯುತ್ತಿದ್ದ ಕಾಲ. ಆಗ ಮೈಸೂರಿ ನಲ್ಲಿದ್ದ ಶಂಕರ ಒಂದುದಿನ ಶಾಲೆಯನ್ನು ಮುಗಿಸಿ ಕೊಂಡು ತಾನು ವಾಸಿಸುತ್ತಿದ್ದ ಮನೆಯ ಕಡೆಗೆ ನಡೆಯುತ್ತಿದ್ದ. ದಾರಿಯಲ್ಲಿ ಒಂದು ಕಡೆ ಬಹಳಷ್ಟು ಜನ ಸೇರಿದ್ದರು. ಏನಿರ ಬಹುದೆಂಬ ಕುತೂಹಲದಿಂದ ಅಲ್ಲಿಗೆ ಹೋದ ಶಂಕರ. ಅಲ್ಲೊಬ್ಬ ಮಹಿಳೆ ಮಾತಾನಾಡುತ್ತಿ ದ್ದುದನ್ನು ಕೇಳಿದರು. ಆಕೆ ಕನ್ನಡದವಳಲ್ಲ ವಾದ್ದರಿಂದ ಹಿಂದಿಯಲ್ಲಿ ಮಾತನಾಡುತ್ತಿದ್ದಳು, ಪಕ್ಕದಲ್ಲಿದ್ದ ವರೊಬ್ಬರು ಕನ್ನಡಕ್ಕೆ ಅನುವಾದಿಸಿ ಹೇಳುತ್ತಿದ್ದರು. ಆಲಿಸುತ್ತ ಅಲ್ಲಿಯೇ ನಿಂತ ಶಂಕರ. ಅವಳ ಮಾತಿನಲ್ಲಿ ಏನೋ ಒಂದು ಆಕರ್ಷಣೆ, ಸತ್ಯ ಇರುವುದು ಕಂಡುಬಂದಿತು. ಅಷ್ಟರಲ್ಲಿ ಸಣ್ಣಗೆ ಮಳೆಹನಿ ಗಳು ಬೀಳತೊಡಗಿ ದವು. ಜನರೆಲ್ಲ ಚೆಲ್ಲಪಿಲ್ಲಿ ಯಾಗಿ ಓಡತೊಡಗಿ ದರು. ಆಗ ಅವಳು ಹೇಳಿದ ಮಾತು ಶಂಕರನ ಜೀವನದ ಗುರಿ ನಿಶ್ಚಯಿಸಿತು. ‘ಓಡುತ್ತಿದ್ದ ಜನಗಳನ್ನು ಕುರಿತು ಆಕೆ,”ಸೋದರ ಸೋದರಿ ಯರೆ ಇಷ್ಟು ಸಣ್ಣ ಮಳೆಹನಿಗಳಿಗೆ ಹೆದರಿ ಓಡು ತ್ತಿದ್ದೀರಿ, ಇನ್ನು ನೀವು ಬ್ರಿಟಿಷರನ್ನು ಎದುರಿಸಿ ಹೋರಾಡಲು ಸಾಧ್ಯವೇ? ಹೋಗಲಿ ಇಗೋ ಈ ಬಳೆಗಳನ್ನಾ ದರೂ ತೊಟ್ಟುಕೊಂಡು ಹೋಗಿರೆಂದು ತನ್ನ ಕೈತುಂಬ ತೊಟ್ಟುಕೊಂಡಿದ್ದ ಬಳೆಗಳನ್ನು ತೆಗೆದು ಜನರ ಮೇಲೆಸೆದಳು. ಅಷ್ಟೇ! ಜನರೆಲ್ಲ ಸ್ಥಗಿತರಾದರು. ನಂತರ ಮಳೆ ಜೋರಾದರೂ ಆಕೆಯ ಭಾಷಣ ಮುಗಿಯುವ ವರೆಗೆ ಸ್ಥಳ ಬಿಟ್ಟು ಕದಲಲಿಲ್ಲ.ಇದು ಶಂಕರನ ಜೀವನದಲ್ಲಿ ಸ್ವಾತಂತ್ರ ಹೋರಾಟಗಾರನಾಗುವ ಇಚ್ಛೆಯನ್ನು ಪ್ರಬಲಗೊಳಿಸಿದುದೇ ಅಲ್ಲದೆ ಹಿಂದಿಯನ್ನು ಕಲಿಯಲೂ ಪ್ರೇರೇಪಿಸಿತು. ಅವರು ಯಾವಾಗಲೂ ತಾವು ಪ್ರೇರಿತರಾದ, ಉತ್ಸಾಹಿತರಾದ ಈ ಮಹಿಳೆಯ ಭಾಷಣವನ್ನ ಕುರಿತು ಆಗಾಗ ಪ್ರಸ್ತಾಪಿಸುತ್ತಿದ್ದರು. ಹಲವಾರು ಬಾರಿ ಬಂದಿಖಾನೆಯ ಶಿಕ್ಷೆಯನ್ನು ಅನುಭವಿಸಿ ದರೂ, ಗಾಂಧೀಜಿಯವರ ಅನುಯಾಯಿಯಾಗಿ ಚಳುವಳಿಯಲ್ಲಿ ಸತತವಾಗಿ ಭಾಗವಹಿಸಿದರೂ ಶಂಕರನ ಹೆಸರು ಎಲ್ಲಿಯೂ ಉಲ್ಲೇಖವಾಗಲಿಲ್ಲ ಎನ್ನುವುದು ಕೊರತೆಯೇ ಸರಿ. ಶಂಕರನೊಬ್ಬನೇ ಏಕೆ ಇನ್ನೂ ಹಲವಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಾಠಶಾಲೆಯ ಬಾಲಗಣಪತಿ ಭಟ್ಟ,ಕೇಶವ ಮೂರ್ತಿ, ಸೂರ್ಯನಾರಾಯಣ ಶಾಸ್ತ್ರಿ, ಕೃಷ್ಣ ಇವರೆಲ್ಲ ಚಳುವಳಿಯಲ್ಲಿ ಭಾಗವಹಿ ಸಿದ್ದರು. ಆದರೆ ಎಲ್ಲರಿಗಿಂತ ಚಳುವಳಿಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡದ್ದೆಂದರೆ ಶಂಕರನೇ.

ವೇದಾಭ್ಯಾಸದ ನಡುನಡುವೆ ನಡೆಸು ತ್ತಿದ್ದ ಈ ಚಳಿವಳಿಗಳಿಂದಾಗಿ ವಿದ್ಯಾಭ್ಯಾಸಕ್ಕೆ ಅಡಚಣೆ ಯುಂಟಾಗುತ್ತಿತ್ತು. ಆದರೂ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಶಂಕರ. ವೇದಾಭ್ಯಾಸ ದಲ್ಲಿ ಹಲವಾರು ಪರಿಕ್ಷೆಗಳಿದ್ದು ಅವುಗಳನ್ನು ತೇರ್ಗಡೆ ಯಾದ ಹಾಗೆಲ್ಲ ಪದವಿಗಳು ದೊರಕುತ್ತಿದ್ದವು. ಹಾಗೆ ಶಂಕರ ತನ್ನ ‘ಘನಪಾಠ’ ದ ಪರೀಕ್ಷೆಯನ್ನ ಮುಗಿಸಿದಾಗ ಮೈಸೂರು ಮಹಾರಾಜರು ಬಿರುದನ್ನು ನೀಡುತ್ತಿದ್ದರು. ಶಂಕರನ ಅದೃಷ್ಟವೊ ದುರದೃಷ್ಟವೋ ಆ ಸಮಯಕ್ಕೆ ಸರಿಯಾಗಿ ಶಂಕರ ಚಳುವಳಿಯ ಸಲುವಾಗಿ ಜೈಲುವಾಸ ವನ್ನು ಅನುಭವಿಸುತ್ತಿದ್ದ. ಹಾಗಾಗಿ ಅವನ ಹೆಸರಿನ ಕೊನೆಗೆ ಬರಬೇಕಾಗಿದ್ದ “ಘನಪಾಠಿ’ ಅಂಕಿತ ಬರದೇ ನಿಂತುಹೋಯಿತು. ಇವರ ಸಹಪಾಠಿಯಾಗಿದ್ದು ಆಗಾಗ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದ “ಕೃಷ್ಣ” ಆ ಸಮಯದಲ್ಲಿ ಹೊರಗಡೆ ಇದ್ದದ್ದರಿಂದ ಬಿರುದನ್ನು ಸ್ವೀಕರಿಸಿ ಘನಪಾಠಿಯಾದ. ಶಂಕರ ಅವಧಾನಿಯಾ ಗಿಯೆ ಉಳಿದ. ಹೆಂಡತಿ ಮಕ್ಕಳನ್ನು ಅವರಷ್ಟಕ್ಕೇ ಬಿಟ್ಟು ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ ಹೆಮ್ಮೆ ಯೊಂದೇ ಇವರಿಗೆ ಉಳಿದದ್ದು.

ಸಾಮಾನ್ಯ ಕೈದಿ ಗಳಾಗಿ ಜೈಲಿನಲ್ಲಿರಬೇಹಾದ ಸಂದರ್ಭಗಳಲ್ಲಿ ಪ್ರತಿದಿನ ಹೊಟ್ಟೆತುಂಬ ಊಟ ಸಿಗದೆ ಇದ್ದಂತಹ ಪರಿಸ್ಥಿತಿಗಳೇ ಹೆಚ್ಚು. ಜೈಲಿನ ಅಧಿಕಾರಿಗಳು ಮನಸ್ಸಿಗೆ ಬೇಕಾದಂತೆ ನಡೆದು ಕೊಳ್ಳುತ್ತಿದ್ದಂತಹ ಪರಿಸ್ಥಿತಿ. ಆಗೆಲ್ಲ ಇವರ ಗುಂಪು ಸಮಯಕ್ಕೆ ತಕ್ಕಂತೆ ಒಂದು ನಾಟಕ ಹೂಡಿ ಹೊಟ್ಟೆ ತುಂಬ ಊಟ ಗಿಟ್ಟಿಸಿ ಕೊಳ್ಳುತ್ತಿದ್ದರಂತೆ. ಅಂತಹ ಸಂದರ್ಭಗಳಲ್ಲಿ ಒಂದು. ತಟ್ಟೆಗೆ ಬಡಿಸಿದ ಊಟದ ಬಹುಭಾಗ ವನ್ನು ಮುಗಿಸಿ ನಂತರ ತಾವೇ ತಂದಿದ್ದ ಒಂದು ಜಿರಲೆ ಯನ್ನೋ ಇನ್ಯಾವುದೋ ಸಣ್ಣ ಹುಳುವನ್ನೋ ತಟ್ಟೆಯಲ್ಲಿ ಹಾಕಿ ಅಧಿಕಾರಿಗೆ ಅದನ್ನು ತೋರಿಸಿ ಬೇರೆ ಊಟಕೊಡಲು ಹೇಳುತ್ತಿದ್ದರಂತೆ. ಇದರಿಂದ ಎಲ್ಲರಿಗೂ ಹೊಟ್ಟೆ ತುಂಬ ಸಿಗದೆ ಇದ್ದರೂ ಒಬ್ಬರಿ ಗಾದರೂ ಮತ್ತೆ ಊಟ ಸಿಗುತ್ತಿದ್ದು ಅದನ್ನು ಹಂಚಿಕೊಳ್ಳುತ್ತಿದ್ದ ರಂತೆ.

ತಾನೇ ಕಟ್ಟಿದ ನಾಟಕ ಕಂಪೆನಿಯಲ್ಲಿ ಬ್ರಿಟಿಷರ ದಬ್ಬಾಳಿಕೆಯನ್ನು ನಿರೂಪಿಸಲು ಶಂಕರ ತಾನೇ “ಧರ್ಮ ರತ್ನಾಕರ” ನಾಟಕವನ್ನು ಬರೆದು ನಿರ್ದೇಶಿಸಿ,ಪ್ರಮುಖ ಪಾತ್ರವನ್ನು ವಹಿಸಿ ನಾಟಕ ಆಡಿದರು ಸಹ. ಅದೊಂದೇ ಅಲ್ಲದೆ ಭೂಕೈಲಾಸರಾವಣನ ಪಾತ್ರಕ್ಕೆ ಬಿ.ಡಿ. ಜತ್ತಿ ಯವರಿಂದ ಬೆಳ್ಳಿಪದಕವನ್ನೂ, ಬೇಡರ ಕಣ್ಣಪ್ಪ ನ ಪಾತ್ರಕ್ಕೆ ದೊಡ್ಡದೊಂದು ನಿಲುವು ಗನ್ನಡಿ ಯನ್ನೂ ಪಡೆದು ಪುರಸ್ಕೃತನಾಗಿದ್ದ ಶಂಕರ.

ಇಷ್ಟೇ ಅಲ್ಲದೆ ನುರಿತ ವ್ಯಾಪಾರಿ, ಮಾದರಿ ರೈತ ನಾಗಿಯೂ ಹೆಸರುಮಾಡಿದ ಶಂಕರ. ಕೊನೆಗೆ ಸ್ವಾತಂತ್ರ ಬಂದಾಗ ಸರ್ಕಾರದ ವತಿಯಿಂದ ಜಮೀನು, ಮಕ್ಕಳ ಓದಿಗೆ ಬೇಕಾದ ಹಣದ ಖರ್ಚು ಎಲ್ಲವನ್ನೂ ಕೊಡಲು ಬಂದರೂ “ನನ್ನ ತಾಯ ಸೇವೆಯನ್ನು ಮಾಡಿದ್ದೇನೆ, ನನಗಾವ ಸೌಲಭ್ಯವೂ ಬೇಕಿಲ್ಲ” ಎಂದು ನಿರಾಕರಿಸಿ ಸ್ವಂತ ದುಡಿಮೆಯಿಂದ ತನ್ನೆಲ್ಲ ಮಕ್ಕಳಿಗೂ ಸಮಾಜ ದಲ್ಲಿ ಗೌರವಯುತ ಸ್ಥಾನವನ್ನು ದೊರಕಿಸಿ ಕೊಟ್ಟ. ಬರಬರುತ್ತ ಶಂಕರ ಹೆಸರು ಮರೆಯಾಗಿ ಅವರು ಮಾಡಿದ ಅಧ್ಯಾತ್ಮ ಸೇವೆಯಿಂದ ಚನ್ನಕೇಶವ ಅವಧಾನಿ ಹೆಸರೇ ಗಟ್ಟಿಯಾಯಿತು. ಇವರ ವಿದ್ವತ್ತನ್ನು ಗೌರವಿಸಿ ಶೃಂಗೇರಿ ಶ್ರೀಸ್ವಾಮಿ ಗಳವರು ಕನ್ನಡ ಚಲನಚಿತ್ರ ಜಗತ್ತಿನ ಮೇರು ನಟರಾದ ಡಾ.ರಾಜಕುಮಾರ್ ಅವರ ಅಮೃತ ಹಸ್ತದಿಂದ “ವೇದರತ್ನ” ಬಿರುದನ್ನು ದಯಪಾಲಿ ಸಿದರು. ಆಗ ಪ್ರಧಾನಿಗಳಾಗಿದ್ದ ಶ್ರೀರಾಜೀವ ಗಾಂಧಿ ಯವರು ಭಾರತದಲ್ಲಿ ಉಂಟಾದ ಬರಗಾಲದ ನಿವಾರಣೆಗಾಗಿ, ಮಳೆಬೆಳೆಗಳಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಯಾಗವೊಂದನ್ನು ನಡೆಸ ಬೇಕೆಂದು ಅವಧಾನಿಗಳನ್ನು ವಿಮಾನದಲ್ಲೇ ಬರಲು ಪ್ರತ್ಯೇಕವಾಗಿ ಏರ್ಪಾಡು ಮಾಡಿ ಕರೆಸಿ, ಅವರಿಗೆ ನೂರಕ್ಕೂ ಮಿಕ್ಕಿದ ಋತ್ವಿಕರಿಂದ ಯಾಗವನ್ನು ಮಾಡಿಸಬೇಕೆಂದು ವಿನಂತಿಸಿ ಕೊಂಡರು. ಅಂತೆಯೇ ಅವಧಾನಿಗಳು ಇಡೀ ಯಾಗದ ಜವಾಬ್ದಾರಿಯ ನ್ನು ಪ್ರಧಾನ ಋತ್ವಿಕ ರಾಗಿ ತೆಗೆದು ಕೊಂಡು ನಿರ್ವಹಿಸಿದರು. ಅವರ ಪ್ರಾರ್ಥನೆ ಸುಳ್ಳಾಗಲಿಲ್ಲ ಎಂಬುದು ಸಂತೋಷದ ಸಂಗತಿ.

ಜೀವನದ ಕೊನೆಯ ದಿನಗಳಲ್ಲಿ ಶೃಂಗೇರಿಯ ಶಾರದಾ ಪೀಠದ ವತಿಯಿಂದ ನಡೆಯುತ್ತಿದ್ದ ವೇದಪಾಠಶಾಲೆಯ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಈ ನಡುವೆ ಕುಮಾರವ್ಯಾಸ ಭಾರತದ ಸಂಪೂಣ ವ್ಯಾಖ್ಯಾನವನ್ನೂ ಜನಗಳ ಒತ್ತಾಯದ ಮೇರೆಗೆ ಮಾಡಿದ್ದರು ಅವಧಾನಿ ಗಳು.ಲಕ್ಷಗಟ್ಟಲೆ ಹೋಮಗಳನ್ನು ಮಾಡಿ ಊರ, ಪಟ್ಟಣದ ಸುಖ ಶಾಂತಿಗಳಿ ಗಾಗಿ ತಮ್ಮ ಜೀವನವನ್ನು, ತಮ್ಮೆಲ್ಲ ಆದಾಯವನ್ನೂ ಮುಡಿಪಾಗಿಟ್ಟು ಬಹು ದೊಡ್ಡ ಶಿಮಂತರಾದ ವ್ಯಕ್ತಿ ಅವಧಾನಿಗಳು.

ಇಂತಹ ಎಷ್ಟೋ ಹೋರಾಟಗಾರರು ತೆರೆಯ ಮರೆಯಲ್ಲಿ ಉಳಿದಿದ್ದಾರೆ. ಅವರನ್ನೆಲ್ಲ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಅಲ್ಲವೇ?

✍️ಡಾ.ಸತ್ಯವತಿ ಮೂರ್ತಿ
ಮ್ಯಾಂಚೆಷ್ಟರ್, ಇಂಗ್ಲೆಂಡ್