ನಾನು ನಡೆದಾಡಿದ ಹಾದಿಗಳನು
ಅರೆಕ್ಷಣ ಹಿಂತಿರುಗಿ ನೋಡಿದೆನು
ಆಗ ಕಂಡವು ನನಗೆ ಕಂಡವು
ಅದೆಷ್ಟೋ ಏಳುಗಳು ಜೊತೆಗೆ ಬೀಳುಗಳು
ನಾನು ಮಾಡಿರುವ ಕೆಲಸಗಳನು
ಅರೆಕ್ಷಣ ಹಿಂತಿರುಗಿ ಪರಿಶೀಲಿಸಿದೆನು
ಆಗ ಕಂಡವು ನನಗೆ ಕಂಡವು
ಅದೆಷ್ಟೋ ಒಪ್ಪುಗಳು ಜೊತೆಗೆ ತಪ್ಪುಗಳು
ನಾನು ಆಡಿರುವ ಮಾತುಗಳನು
ಅರೆಕ್ಷಣ ಮೆಲುಕು ಹಾಕಿದೆನು
ಆಗ ಕಂಡವು ನನಗೆ ಕಂಡವು
ಅದೆಷ್ಟೋ ಸತ್ಯಗಳು ಜೊತೆಗೆ ಅಸತ್ಯಗಳು
ನನಗೆ ಹಿರಿಯರು ಹೇಳುತ್ತಿದ್ದರು:
ಏಳು-ಬೀಳು, ಒಪ್ಪು-ತಪ್ಪು, ಸತ್ಯ-ಅಸತ್ಯಗಳು
ಮನುಷ್ಯರ ಸಹಜ ನಡೆ-ನುಡಿಗಳು
ಕಾಲಕಾಲಕೆ ಸರಿಪಡಿಸುತ್ತ ಸಾಗಬೇಕು

✍️ಶ್ರೀ ಶಂಕರಗೌಡ ಸಾತ್ಮಾರ
ಹಿರಿಯ ಕವಿಗಳು, ಹುಬ್ಬಳ್ಳಿ