ಮಳೆ ನಿಂತಮೇಲೂ ಮರದೆಲೆಯ ಹನಿಗಳು ತೊಟ್ಟಿಕ್ಕುತ್ತಿರಲಿಲ್ಲ ನಿನ್ನೊಲುಮೆ ಇರದಿರೆ
ಜೀವಿಸಬೇಕೆಂಬ ಆಸೆಯೊಂದು ಕೊರಡಿನಲಿ ಕೊನರುತ್ತಿರಲಿಲ್ಲ ನಿನ್ನೊಲುಮೆ ಇರದಿರೆ

ಅದೆಷ್ಟೋ ಕೃತಕ ದೀಪಗಳ ಸೃಜಿಸಿದರೂ ಬಿಸಿಲು ಸೃಜಿಸಲು ಸಾಧ್ಯವೆ ಯುಗ ಯುಗಗಳಲಿ ಸಾಕಿ
ನನ್ನ ಬದುಕ ಬಾನಲಿ ಉಷೆಯ ಹೊಂಗಿರಣ ಗಮಿಸುತ್ತಿರಲಿಲ್ಲ ನಿನ್ನೊಲುಮೆ ಇರದಿರೆ

ಕತ್ತಲೊಳು ಕರಿಬಟ್ಟೆ ಕಣ್ಣಿಗೆ ಕಟ್ಟಿ ಕಾಡೊಳು ಬಿಟ್ಟರೂ ಅಂಧನಿಗೇನದು ವ್ಯತ್ಯಾಸವಿಲ್ಲ ಬಿಡು
ನನ್ನಂತರಂಗದ ನಯನ ಬೆಳಕಿನಲಿ ನಾನು ಕಣ್ಮುಚ್ಚಿ ನಡೆಯುತ್ತಿರಲಿಲ್ಲ ನಿನ್ನೊಲುಮೆ ಇಲ್ಲದಿರೆ

ನಿನ್ನ ಕರುಣೆಯ ಕಟಾಕ್ಷದ ಪಂಚಭೂತಗಳಿಗೆ ಒಮ್ಮೆಯೂ ಸುಂಕ ತೆರಲಿಲ್ಲ ನೋಡು ನಾನು
ನಿನ್ನ ಕಂಡೂ ಕಾಣದೆಯೂ ನಿನ್ನಿರುವ ವಿಚಾರಗಳ ಮಥಿಸುತ್ತಿರಲಿಲ್ಲ ನಿನ್ನೊಲುಮೆ ಇರದಿರೆ

ಪ್ರತಿ ನಿತ್ಯವೂ ಮಿಲನ ಜುದಾಯಿ ಎಲ್ಲಿಯದು ಮನದಲಿ ನೀ ಬಂದು ನೆಲಸಿದ ಮೇಲೆ
ಕರುಣೆಯ ಕೈ ಚಾಚಿ ತಬ್ಬಿದ ನಿನ್ನದೇ ರೂಪದ ಆಕಾನ ನಂಬುತ್ತಿರಲಿಲ್ಲ ನಿನ್ನೊಲುಮೆ ಇಲ್ಲದಿರೆ

ಪಯಣಿಸುವ ನಾವೆಯೊಂದು ಬಿರುಗಾಳಿ ಹೊಡೆತಕೆ ನಡು ನೀರಿನಲಿ ಡೋಲಾಯಮಾನವಾಗಿತ್ತು ಸಾಕಿ
ಹುಟ್ಟು ಹಾಕಿ ಕಿನಾರೆಯನು ತಲುಪಿಸಿದ ಕನಸು ಕಾಣುತ್ತಿರಲಿಲ್ಲ ನಿನ್ನೊಲುಮೆ ಇಲ್ಲದಿರೆ

ಹಾಡು ಮುಗಿದ ಮೇಲೂ ಒಳದನಿಯೊಂದು ಇಣುಕಿ ಮುಗಿಯದ ಹಾಡಿಗೆ ಪಲ್ಲವಿ ಹೇಳುತ್ತಿದೆ ಅನು
ಬೇಸಹಾರದಲ್ಲೂ ಅದೆಷ್ಟೋ ಜೀವಗಳು ಸಂಘರ್ಷಿಸಿ ಬದುಕುತ್ತಿರಲಿಲ್ಲ ನಿನ್ನೊಲುಮೆ ಇಲ್ಲದಿರೆ

(ಜುದಾಯಿ= ಅಗಲಿಕೆ
ಆಕಾ= ಭಗವಂತ
ಕಿನಾರೆ= ದಂಡೆ
ಬೇಸಹಾರ= ಆಸರೆಯಿಲ್ಲದ (ಅನಾಥ)

✍️ಅನಸೂಯ ಜಹಗೀರದಾರ
ಶಿಕ್ಷಕಿ, ಕೊಪ್ಪಳ