“ತೆರೆದ ಬಾಗಿಲು” ಕವನ ಸಂಕಲನದ “ಕವನ ಹುಟ್ಟುವ ಸಮಯ” ಈ ಕವನದಲ್ಲಿ ತಾವು ಕವನ ಕ್ಕಾಗಿ ಕಾಯುತ್ತಿರುವ ಕವನ ಹುಟ್ಟುವ ಸಮಯ ವನ್ನು ಇಲ್ಲಿ ವರ್ಣಿಸುತ್ತಾರೆ.

ಬಿದಿರ ತಡಿಕೆಯ ಹಿಂದೆ ಬಿಚ್ಚಲಾಗದ ಕಣ್ಣು ಕವನ ಹುಟ್ಟಿತೇ? ಎಂದು ಕೇಳುತ್ತಿದೆ
ಈ ಸಾಲಿನಲ್ಲಿ ಕವಿಯ ಅವ್ಯಕ್ತ ಭಾವನೆಗಳು ಕವನವನ್ನು ಪ್ರತೀಕ್ಷಿಸುತ್ತ ಕವನ ಹುಟ್ಟಿತೇ ಎಂದು ಕೇಳುವ ಭಾವ. ಆದರೆ ಕವಿಯೇ ಇನ್ನೂ ಆ ಸಮಯ ಬಂದಿಲ್ಲ ಇನ್ನೊಂದು ದಿನ ಕಾದರೆ ಏನು ನಷ್ಟ ಎನ್ನುವ ಭಾವವನ್ನು ತೋರುತ್ತಾರೆ. ನಂತರದ ಸಾಲುಗಳಲ್ಲಿ ಕವನದ ಹುಟ್ಟಿಗೆ ಅನುಭವ ಆಯ್ಕೆಯಾಗಿದ್ದು ಆದರೆ ಅನುಭವದ ಅನುಭಾವ ಒದಗಿರಲಿಲ್ಲ. ಹಾಗಾಗಿ ಗಟ್ಟಿ ಪಂಕ್ತಿ ಗಳ, ಸಹಜ ಸಂಚಾರಗಳ ಕವನ ಕಟ್ಟುವಿಕೆಯ ಕನಸನ್ನು ಕಾಣುತ್ತಾರೆ.
ಆಳದ ಅನುಭವವನ್ನು ಮಾತು ಕೈ ಹಿಡಿದಾಗ ಕಾವು ಬೆಳಕಾದಾಗ ಒಂದು ಕವನ
ಎನ್ನುತ್ತಾ ಬಯಲಿನಲ್ಲಿ ವರ್ತಮಾನಕ್ಕಾಗಿ ಕಾಯುತ್ತಿರುವೆ ಎನ್ನುತ್ತಾರೆ. ಇಲ್ಲಿ ವರ್ತಮಾನ ಅರ್ಥವನ್ನು ಎರಡು ತರಹದಲ್ಲಿ ಅರ್ಥೈಸಿ – ಕೊಳ್ಳಬಹುದು, ಸುದ್ದಿ ಸಮಾಚಾರ ಎಂದು ಒಂದು ಅರ್ಥವಾದರೆ ಮತ್ತೊಂದು ಅರ್ಥ ಪ್ರಸಕ್ತ ಸಮಯ. ಹಾಗೆ ಮುಂದುವರಿಸುತ್ತಾ ಪ್ರತೀ ಪದಕ್ಕೂ ಬೆಲೆ ಇದೆ ಒಂದೊಂದು ಮಾತಿಗೊಂದು ಇತಿಹಾಸವಿದೆ ನಾನು ಬೇರಿನ ತನಕ ಹೋಗಲಿಲ್ಲ ಎನ್ನುತ್ತಾರೆ. ಇತಿಹಾಸ ಆಳಕ್ಕೆ ಇಳಿದಿರುತ್ತದೆ ಅದನ್ನು ಮುಟ್ಟಲು ತನಗೆ ಸಾಧ್ಯವಾಗಲಿಲ್ಲ ಎಂಬುದು ಕವಿಯ ವಿಷಾದ.

ಕಾಯುವುದು ಕಷ್ಟವೂ ಅಲ್ಲ ನಕ್ಷತ್ರಗಳು ಆದಿಯಿಂದಲೂ ಹೀಗೆ ಕಾಯುತ್ತಿವೆ
ಎಂದು ಈದೀರ್ಘ ಪ್ರತೀಕ್ಷೆಯನ್ನು ವರ್ಣಿಸುವ ಕವಿ ಈ ಕವನ ಹುಟ್ಟುವ ಸಮಯದಲ್ಲಿ ನನ್ನಿಂದ ಇಲ್ಲಿ ನೂರಾರು ಕೆಲಸಗಳು ಆಗಬೇಕಿದೆ ಎಂಬ ಭವಿಷ್ಯ ಹೇಳುತ್ತಾರೆ.ಆದರೆ ಇದ್ಯಾವುದೂ ಆಗದೆ ಕಾಲದ ಪಯಣದಲ್ಲಿ ಮುಂದೆಹೋಗುತ್ತಾ ಬಾಳು ಶಿಶಿರದೆಡೆಗೆ ಅಂದರೆ ಅಂತ್ಯದೆಡೆಗೆ ಸಾಗುತ್ತಿರುವ ಹಾಗೂ ಮನದಾಳದ ಅವ್ಯಕ್ತ ಭಾವಕ್ಕೆ ಪದದ ಇಷ್ಟ ರೂಪವನ್ನು ತೊಡಿಸಿ ನಾಳೆಯೊಳಗೆ ಕಳಿಸಿಕೊಡಲು ಅಂದರೆ ಶೀಘ್ರವಾಗಿ ಕವನ ಕಟ್ಟಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ಈ ಸಾಲುಗಳಲ್ಲಿ
ನನ್ನ ತೊಡಕುಗಳನ್ನೇ ಅರಿಯದೆ ಪರೀಧಾವಿ ಸುತ್ತಿದೆ ತನ್ನ ಶಿಶಿರದೆಡೆಗೆ
ಅಶರೀರ ಭಾವಕ್ಕೆ ಇಷ್ಟ ರೂಪವ ತೊಡಿಸಿ ಕಳುಹಿಸಿಕೊಡಲಾಗದೆ ನಾಳೆಯೊಳಗೆ
ಭಾವದ ಬಸಿರು ತಾನಾಗಿ ಹೊರ ಚಿಮ್ಮಿದಾಗ ಮಾತ್ರ ಕವಿತೆಯ ಪ್ರಸವ. ಹಾಗಲ್ಲದೆ ಪದಗಳನ್ನು ಹುಡುಕುತ್ತಾ ಶಬ್ದಗಳನ್ನು ಜೋಡಿಸುತ್ತಾ ಕವನ ಕಟ್ಟುವಿಕೆಯಲ್ಲಿ ನಿಜವಾಗಿ ಭಾವದ ಅಭಿವ್ಯಕ್ತಿ ಆಗಲಾರದು ಪರಿಣಾಮ ಬೀರಲಾರದು. ಇದನ್ನೇ ಕವಿ ಹೇಳ ಹೊರಟಿರುವುದು. ಕವನ ಹುಟ್ಟುವ ಸಮಯ ಎಂದಿಗೂ ನಿಶ್ಚಿತವಾಗಿರುವುದಿಲ್ಲ ಅದು ಅನಿರೀಕ್ಷಿತ ಅಕಸ್ಮಾತ್ ಸಂಭವನೀಯ ಹಾಗೂ ಸಹಜ ಮತ್ತು ಸ್ವಾಭಾವಿಕ.

ಹೀಗೆ ಭಾವ ಬಸಿರಿನಿಂದ ಹೊರಬಂದ ಕವನದ ನಿರ್ದಿಷ್ಟ ಗಮ್ಯವೇನು ಉದ್ಧೇಶವೇನು ಎಂದು ಕೇಳ ಹೊರಟರೆ ಕವಿ ಹೇಳುವುದು ಸಮಾಜ ಮುಖಿ ಸಂದೇಶ. ಅವನ ಅಭಿಲಾಷೆ ಎಲ್ಲರಿ- ಗೊಳಿತನು ಬಯಸಲಿ ಕವನ ಎಂಬುದೇ.

ನವ ಪಲ್ಲವ ಕವನ ಸಂಕಲನದ “ಎಲ್ಲರಿಗೊಳಿತನು ಬಯಸಲಿ ಕವನ”ದ ಮೂಲಕ ಕವಿ ಶುಭಮಂಗಳ ಗೀತೆ ಹಾಡುತ್ತಾರೆ. ಹೊಸ ಭರವಸೆಯ ಪ್ರವಾದಿಯಾಗುತ್ತಾರೆ.
ಬೇದವನರಿಯದು ನೀಲಿಯ ಗಗನ
ಒಂದೇ ಮಣ್ಣಿನಿಂದೆಲ್ಲರ ಜನನ
ಒಂದೇ ದಿಕ್ಕಿನಲಿ ಎಲ್ಲರ ಪಯಣ
ನೋವೋ ನಲಿವೋ ಬಂದದು ಬರಲೆಂದು
ಎಲ್ಲರಿಗೊಳಿತನು ಬಯಸಲಿ ಕವನ
ಮೇಲೆ ಹಬ್ಬಿರುವ ನೀಲಿಯ ಗಗನ ಕೆಳಗೆ ಆಶ್ರಯ ಕೊಟ್ಟಿರುವ ಭೂಮಿಯ ಮಣ್ಣು ಎಲ್ಲರಿಗೂ ಒಂದೇ, ಹುಟ್ಟಿದ ಮನುಷ್ಯ ಸಾವಿನೆ ಡೆಗೇ ಪಯಣ ಬೆಳೆಸುವುದು ಯಾರಿಗೂ ಯಾವುದರಲ್ಲೂ ಭೇದವಿಲ್ಲ.ಹಾಗಾಗಿ ತಾರತಮ್ಯವಿಲ್ಲದೆ ನೋವಿರಲಿ ನಲಿವಿರಲಿ ಯಾವುದನ್ನಾದರೂ ಸ್ವೀಕರಿಸುವ ಮನೋಭಾವ ವಿರಲಿ ಎಲ್ಲರಿಗೂ ಒಳಿತಾಗಲಿ ಎಂಬುದು ಕವಿ ಆಶಯ.
ಹಾಗೆ ಮುಂದೆ ಕವಿ ಬೇಧ ಭಾವಗಳ ಅಡ್ಡಗೋಡೆ ಗಳನ್ನು ಒಡೆದು ಬಡವರು ಬಲ್ಲಿದರು ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟಿಗೆ ದುಡಿದು ಹಾಗೆ ಗಳಿಕೆಯನ್ನು ಒಟ್ಟಿಗೆ ಸವಿಯಲಿ ಎಂಬ ಸಹಕಾರ ತತ್ವವನ್ನು ಸಾರುತ್ತಾ ಎಲ್ಲರಿಗೂ ಒಳಿತಾಗಲಿ ಎಂಬ ಸದಾಶಯ ತೋರುತ್ತಾರೆ.
ಲಭಿಸಲ್ಲೆಲ್ಲರಿಗೂ ನಿಲ್ಲಲು ನೆರಳು
ಎಲ್ಲ ಮಕ್ಕಳಿಗೂ ಒಳ್ಳೆಯ ಹಾಲು
ಹೊಂಬಿಸಿಿಯಲಿ ಎಲ್ಲರ ಮೇಲು
ನೆಮ್ಮದಿಯುಕ್ಕಲಿ ಎಲ್ಲರಿಗೆಂದು
ಎಲ್ಲರಿಗೊಳಿತನು ಬಯಸಲಿ ಕವನ
ಎಲ್ಲರಿಗೂ ಸಂತೃಪ್ತಿ ಸಮಾಧಾನ ಸಂತೋಷ ದೊರೆಯಲೆಂದು ಕವನದ ಮೂಲಕ ಕವಿ ಆಶಿಸುತ್ತಾರೆ.
ಭೂಮಿಯ ಕರುಣೆಗೆ ಮಿತಿ ಇರದೆಂದು
ಎಲ್ಲರ ದುಡಿಮೆಗೆ ಫಲವಿಹುದೆಂದು
ನಾಳೆಯ ಬಾಗಿಲು ನಂದನವೆಂದು
ಪ್ರೀತಿಗೆ ಶಾಂತಿಗೆ ಜಯವಿರಲೆಂದು ಎಲ್ಲರಿಗೊಳಿತನು ಬಯಸಲಿ ಕವನ

ಹೀಗೆ ತನ್ನ ಮನಸ್ಸಿನ ಶಾಂತಿಯು ಎಲ್ಲರಿಗೂ ಹರಡಲೆಂದು ನೆಮ್ಮದಿಯು ಇರಲೆಂದು ಮುಂದೆ ಸ್ವರ್ಗವೇ ಇದೆ ಎಂಬ ಆಶಾಭಾವ ವನ್ನು ಕವಿ ಎಲ್ಲರ ಮನದಲ್ಲಿ ಮೂಡಿಸುತ್ತಾನೆ. ನಿಜವಾದ ಸಾಹಿತ್ಯದ ಅರ್ಥ ಉದ್ದೇಶ ಅದೇ ತಾನೇ? ಕಹಿ ವಿಷಯ ದ್ವೇಷಗಳನ್ನು ಹರಡು ವಂತಹ ಪ್ರಚೋದನಕಾರಿ ಸಾಹಿತ್ಯಗಳು ಇಂದಿನ ಪ್ರಸ್ತುತ ಕಾಲಮಾನದಲ್ಲಿ ಹುಟ್ಟಿಸುತ್ತಿ ರುವ ಅಶಾಂತಿ ತಳಮಳಗಳು ನಾವೆಲ್ಲ ತಿಳಿದದ್ದೇ ಅಲ್ಲವೇ? ಸಾಹಿತ್ಯದ ಮೂಲಕ ಭಾವುಕ ಕವಿಮನಗಳು ಸಮಾಜಕ್ಕೆ ಒಳಿತಾಗು ವಂತಹ ಇಂತಹ ಸಂದೇಶ ವನ್ನು ಹೀಗೆ ಸಾರುತ್ತಿದ್ದರೆ ಪ್ರಕ್ಷುಬ್ಧ ಮನಃಸ್ಥಿತಿ ಗಳು ಸ್ವಲ್ಪ ವಾದರೂ ಶಮನವಾಗಿ ಭೂಮಿಯ ಮೇಲೆ ಶಾಂತಿ ಮೂಡಲು ಕಾರಣವಾಗಬಹುದು.
✍️ಸುಜಾತಾ ರವೀಶ್
ಮೈಸೂರು
ಸೊಗಸಾದ ಸಾಂಧರ್ಭಿಕ ಚಿತ್ರಗಳ ಮೂಲಕ ನ ನ್ನ ಬರಹಕ್ಕೆ ಕಳೆ ಕೊಟ್ಟು ಪ್ರಕಟಿಸಿದ ಸಂಪಾದಕರಾದ ಶ್ರೀ ರವಿಶಂಕರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು .
ಸುಜಾತಾ ರವೀಶ್
LikeLiked by 1 person