೧೯೯೧/೯೨ ರಲ್ಲಿ ನಮ್ಮ ಜಿಲ್ಲಾಯಾದ್ಯಾಂತ ನಡೆಯುತ್ತಿರವಾಗ ಆ ಜಾಥಾದಲ್ಲಿ ನಾನು ಕೂಡ ಸ್ವಯಂ ಸೇವಕಿಯಾಗಿ ಹಳ್ಳಿ ಹಳ್ಳಿಯಲ್ಲಿ ಸಾಕ್ಷರತೆಯ ರೂಪಕಗಳನ್ನು ಮಾಡುತ್ತ ಹಾಡುಗಳನ್ನು ಹಾಡುತ್ತ ಸಾಗುತ್ತ, ಮಲವಳ್ಳಿ ಯ ಭಾಗ ತಲುಪಿದೆವು. ಅದೊಂದು ವಿಶೇಷ ಸಂದರ್ಭವೊದಗಿ ಬಂತು. ವಾಹನಗಳು ಚಲಿಸದ ಬೆಟ್ಟ ಗುಡ್ಡದ ಕಾಲುದಾರಿಯಲ್ಲಿ ೨&೩ಕಿ.ಮೀ‌ ಸಾಗಿಹೋದಾಗ ಕಂಡ ದೃಶ್ಯ ಆಶ್ಚರ್ಯ. ಅಲ್ಲಿಯ ಮನೆಗಳು ಮರಗಿಡ ಗಳಿಗೆ ಒರಗಿಕೊಂಡೆ ಇದ್ದುದ್ದು, ನಾವು ಬಂದಾಕ್ಷಣ ಯಾರು ಮನೆಯ ಮುಂದೆ ಇರದೆ ಎಲ್ಲರೂ ಮನೆಯಲ್ಲಿ ಅವಿತುಕೊಂಡು, ಪರದೆಯ ಮರೆಯಿಂದ ಇಣುಕಿದ ಕಂಗಳು ನಮ್ಮನ್ನು ಅನುಮಾನಾತ್ಮಕ ದೃಷ್ಟಿಯಿಂದ ನೋಡುತ್ತಿರುವು ದಕ್ಕೆ ಕಾರಣ ನಾವು ಅಪರಿಚಿತರು. ನಾಗರಿಕತೆ ಇಷ್ಟು ಬೆಳೆದರೂ ಕಾಡಿನ ಮಕ್ಕಳು ಪ್ರಗತಿಯನ್ನು ಇನ್ನೂ ಹೆಚ್ಚಿಗೆ ಕಾಣುವಂತಾಗಲಿ ಎಂದು ಶಿಕ್ಷಣದ ಮಹತ್ವ ಅವರ ಮುಂದೆ ರೂಪಕ, ನಾಟಕ ಮಾಡುವುದು ನಮಗೆ ಸವಾಲಾಗಿತ್ತು.

ಅವರೊಡನೆ ಸದಾ ಸಂಪರ್ಕದಲ್ಲಿರುವ ಪರಿಚಯಸ್ಥರು ಬಂದು ಅವರೊಟ್ಟಿಗೆ ಮಾತಾಡಿ ಅವರ ನ್ನೆಲ್ಲ ಒಂದೆಡೆ ಸೇರಿಸಿದಾಗ ಲೂ ಮಹಿಳೆ ಯರು, ಪುರುಷರು ಗುಂಪು ಗುಂಪಾಗಿ ಇರುವೆ ಸಾಲಿನಂತೆ ಒತ್ತೊತ್ತಿ ಕುಳಿತಿದ್ದನ್ನು ಕಂಡು ನನಗೆ ಭಯ ವಾಗಿತ್ತು. ಕಾಡಿ‌ನ ಜನಜೀವನಕ್ಕೆ ಹೊಂದಿ ಕೊಂಡು ಬದುಕುವ ಅವರಿಗೆ ಕಾಡಿನ ಉತ್ಪನ್ನ ವೇ ಆಧಾರ. ಅವರ ವೇಷಭೂಷಣ ಕಂಡು “ಕುಣುಬಿ” ಜನಾಂಗಕ್ಕೆ ನಾವು ಶಿಕ್ಷಣದಿಂದ ವಂಚಿತರಾಗದಿರಿ ಎಂಬ“ಸಾಕ್ಷರತಾ ‌ಜಾಗೃತಿ” ಮೂಡಿಸಿದ ನೆನಪು, ಶಿಕ್ಷಣದ ಮಹತ್ವ ಅವರಿ ಗೆಷ್ಟು ಅರ್ಥವಾಯಿತೋ ಗೊತ್ತಿಲ್ಲ, ನನಗಂತೂ ಸಂಪೂರ್ಣವಾಗಿ ಅರ್ಥವಾಗಿತ್ತು.

ನಾವು ತಂದ ಬ್ಯಾಟರಿ ಸಂಪೂರ್ಣ ಆರಿತ್ತು. ಕುಣಬಿ ಜನರು ನಮ್ಮ ದಾರಿ ಸುಗಮವಾಗ ಲೆಂದು ರಾತ್ರಿ ವೇಳೆಗೆ “ಸೂಡಿ”‌ ಸಿದ್ದಪಡಿಸಿ ಅದಕ್ಕೆ ಬೆಂಕಿಹಚ್ಚಿದ್ದೆ ತಡ ಅದು ಅದರ ಜ್ವಾಲೆ ಮರಿ ಸೂರ್ಯನಂತೆ ಕಾಣುತ್ತಿತ್ತು. ಅದನ್ನು ಹಿಡಿದು ಕಾಡಿನಲ್ಲಿ ಸಂಚರಿಸುವಾಗ ಅಲ್ಲಲ್ಲಿ ಗುರುತುಗಳನ್ನು ಮಾಡಿದ್ದು ಅದನ್ನು ಅನುಸರಿಸಿ ಊರು ಸೇರುವುದರೊಳಗೆ ಸಾಕಾಗಿತ್ತು. ಅಬ್ಬಾ! ಇಂತಹ ಸೋಜಿಗದ ಸನ್ನಿವೇಶ ಕಾಡಿನ ಮಧ್ಯೆ ತಮ್ಮವರೊಂದಿಗೆ ಗುಂಪಾಗಿ ವಾಸಿಸುವ ಕುಣಬಿ ಗಳ ಪ್ರಪಂಚ ಸುಧಾರಿಸಬೇಕು ಅನ್ನಿಸದಿರಲಿಲ್ಲ.

ಕಾಡಿನ ಮಕ್ಕಳು ಈ ಕುಣಬಿಗಳು, ಇವರು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಲ್ಲಿನ ಪಶ್ಚಿಮ ಘಟ್ಟಗಳ ಅರಣ್ಯಪ್ರದೇಶಲ್ಲಿ ಮಾತ್ರ ಹೆಚ್ಚಾಗಿ ವಾಸಿಸುವ ವಿಶಿಷ್ಟ ಜನಾಂಗ. ಇವರು ಅರಣ್ಯದ ನಿತ್ಯ ಒಡನಾಡಿಗಳು. ಕುಂಬ್ರಿ ಮರಾಠಿ ಇವರ ಭಾಷೆ. ಗಡ್ಡೆಗೆಣಸು, ಅರಣ್ಯ ಕಿರು ಉತ್ಪನ್ನಗಳೇ ಇವರ ವ್ಯಾವಹಾರಿಕ ಸಂಪತ್ತು. ಅತ್ಯಂತ ಪ್ರಾಚೀನ ಬುಡಕಟ್ಟು ಜನಾಂಗಗಳ ಪೈಕಿ ಕುಣಬಿಗಳೂ ಪ್ರಮುಖವಾಗಿ ದ್ದಾರೆ. ಕುಣಬಿ ಜನಾಂಗ ದವರ ಗೆಡ್ಡೆ, ಗೆಣಸಿನ ಬೆಳೆ ಎಷ್ಟು ಜನಪ್ರಿಯತೆ ಪಡೆದಿದೆಯೆಂದರೆ ಜೋಯಿಡಾದಲ್ಲಿ ಪ್ರತಿವರ್ಷ ಗೆಡ್ಡೆ ಗೆಣಸು ಮೇಳ ಆಯೋಜಿಸ ಲಾಗುತ್ತಿದ್ದು, ನೂರಾರು ಬಗೆಯ ಅಪರೂಪದ ತಳಿಗಳು ಇಲ್ಲಿ ಕಾಣಸಿಗು ತ್ತವೆ. ಜೊಯಿಡಾ, ಶಿರಸಿಯ ವಾನಳ್ಳಿ ಸುತ್ತ ಮುತ್ತ ಮತ್ತು ಯಲ್ಲಾಪುರ ತಾಲೂಕಿನ ಬಂಕೊಳ್ಳಿ, ಮಲವಳ್ಳಿ, ಬಾರೆ, ಹಲವೆಡೆ ಈ ಸಮಾಜದ ಜನರು ವಾಸಿಸುತ್ತಾರೆ.

ಕುಣಬಿ ಸಮುದಾಯದವರು ಮೊದಲು ಗೋವಾದಲ್ಲೇ ಹೆಚ್ಚಾಗಿ ವಾಸವಾಗಿದ್ದವರು. ಆದರೆ 1927 ರಲ್ಲಿ ಉಂಟಾದ ಭೀಕರ ಪ್ಲೇಗ್‌ ನಿಂದಾಗಿ ಅಲ್ಲಿ ಊರಿಗೆ ಊರೇ ಗುಳೆ ಏಳು ವಂತಾಗಿತ್ತಂತೆ. ಈ ಹಿನ್ನೆಲೆಯಲ್ಲೀಗ ಗೋವಾ ದಲ್ಲಿ ಕುಣಬಿಗಳ ಸಂಖ್ಯೆ ಕಡಿಮೆಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ದಟ್ಟ ಅರಣ್ಯ ಮತ್ತು ನದಿ ತೀರದ ಪ್ರದೇಶದಲ್ಲೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ತೀರಾ ಇತ್ತೀಚೆಗೆ ಶೈಕ್ಷಣಿಕ ಪ್ರಗತಿ ಯನ್ನೂ ಸಾಧಿಸಿದ್ದಾರೆ.

ಕುಣಬಿ ಜನಾಂಗದವರು ಪೋರ್ಚುಗೀಸರ ದಬ್ಬಾಳಿಕೆಯಿಂದಾಗಿ ಕರ್ನಾಟಕಕ್ಕೆ ಬಂದು ನೆಲೆಸಿರುವವರು.ಇವರು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಯಲ್ಲಾಪುರ, ಅಂಕೋಲಾ, ಹಳ್ಯಾಳ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಸುಮಾರು 25 ರಿಂದ 30 ಸಾವಿರದಷ್ಟು ಕುಣಬಿಗಳು ವಾಸವಾಗಿದ್ದಾರೆ. ವಿಶೇಷ ವಾಗಿ ಜಿಲ್ಲೆಯ ಗಡಿಭಾಗದಲ್ಲೇ ವಾಸ ಮಾಡಿ ರುವ ಕುಣಬಿ ಗಳು ಅರಣ್ಯ ಉತ್ಪನ್ನ ಗಳನ್ನು ಮಾರಿ ಬದುಕು ಸಾಗಿಸುತ್ತಿದ್ದು,ಈಗ ಕೃಷಿಯಲ್ಲೂ ತೊಡಗಿ ದ್ದಾರೆ.

ಜೋಯಿಡಾ ತಾಲ್ಲೂಕಿನ ದಟ್ಟಾರಣ್ಯದಲ್ಲಿ ಕುಣಬಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾ ಗಿದ್ದು ರಸ್ತೆ, ಸೇತುವೆ, ಕಾಲು ಸಂಕಗಳಿಲ್ಲದೆ ಇರುವುದರಿಂದ ಇವರು ನಗರ ಪ್ರದೇಶಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಕುಣಬಿ ಜನಾಂಗ ವಾಸಿಸುತ್ತಿರುವ ಗ್ರಾಮಗಳಲ್ಲಿ ವಸತಿ ಸೌಕರ್ಯ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ರಸ್ತೆ ಸಂಪರ್ಕಗಳಿಲ್ಲ ಎನ್ನುವುದಕ್ಕೆ ಬಜಾರ್‌ ಕುಣಾಂಗ್ ಗ್ರಾಮವೇ ಸಾಕ್ಷಿ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 29 ಹಳ್ಳಿಗಳಲ್ಲಿ ಕೇವಲ ಎರಡು ಗ್ರಾಮಗಳಲ್ಲಿ ಮಾತ್ರ ವಿದ್ಯುತ್ ದ್ವೀಪವಿದೆ. ಸೇತುವೆ, ರಸ್ತೆ, ಸಂಚಾರ ಪೂರ್ಣ ಗೊಳ್ಳಬೇಕಿದೆ. ಸರ್ಕಾರಿ ಆದೇಶದ ಪ್ರಕಾರ ಕುಣಬಿ ಜನಾಂಗ ಪ್ರವರ್ಗ-1ರಲ್ಲಿ ಸೇರಿದೆ. ಈ ಗುಂಪಿನಲ್ಲಿ ಅನೇಕ ಜಾತಿ-ಉಪಜಾತಿಗಳಿರು ವುದಿಂದ ಪ್ರಬಲ ಜಾತಿ, ಉಪ ಜಾತಿಯವರೊ ಡನೆ ಪೈಪೋಟಿ ನಡೆಸಿ, ಶೈಕ್ಷಣಿಕ, ಔದ್ಯೋಗಿಕ ಮತ್ತು ಇತರ ಸೌಯರ್ಕಗಳನ್ನು ಪಡೆಯಲು ಇವರಿಗೆ ಸಾಧ್ಯವಾಗುತ್ತಿಲ್ಲ.ಇನ್ನೂ ಹೆಚ್ಚು ಪ್ರಗತಿ ಶೀಲರಾಗಿ ಬೆಳೆಯುವುದು ಅಗತ್ಯವಿದೆ.

ನಾನಾಗ ಪಿಯುಸಿ ವಿದ್ಯಾರ್ಥಿ, ಸಾಕ್ಷರತಾ ಜಾಥಾದಲ್ಲಿ ರೂಪಕಗಳನ್ನು ಮಾಡುವಾಗ ಮುಜುಗರವೆನಿಸುತ್ತಿತ್ತು.ಆದ್ರೆ ಯಾವಾಗ ಕುಣಬಿ ಜನಾಂಗದ ಮಹಿಳೆಯರನ್ನು ಕಂಡೆನೋ ಆಗ ನನ್ನೊಳಗಿನ‌ ಮುಜುಗರ ನಾಪತ್ತೆಯಾಗಿತ್ತು. ಶಿಕ್ಷಣವೆಂಬು ದು ಎಷ್ಟು ಮುಖ್ಯ ಬದುಕಿಗೆ ಎಂಬ ಅರಿವಿನ ಪಾತ್ರವನ್ನು ನೈಜವಾಗಿ ಅಭಿನಯಿಸಿದ್ದೆ. ಅವರೆಲ್ಲ ಕಣ್ಣು ಪಿಳುಕಿಸಿ ನಮ್ಮ ನೋಡುವಾಗ ಅವರ ಮುಗ್ಧತೆ ಎದ್ದು ಕಾಣುತ್ತಿತ್ತು. ಅವರಿಗೆ ಒಲಿದ ಕಲೆ, ವೇಷ ಭೂಷಣ ಎಲ್ಲವೂ ಆಕರ್ಷಿಸಿತ್ತು.

ದೂರದಲ್ಲಿ ಹಿರಿಯ ಕುಣುಬಿ ಹೆಣ್ಮಕ್ಕಳು, ಗಂಡು ಮಕ್ಕಳ ಹಾಡು ಕುಣಿತವನ್ನು ಕೇಳುತ್ತ ನೋಡುತ್ತ ಸುಮ್ಮನೆ ಕೂತಿದ್ದರು. ಎರಡೂ ಹೆಗಲು ಕಾಣು ವಂತೆ ಸೀರೆಯುಡುವ ಆ ಮಹಿಳೆಯರು ನಾಗರಿಕರ ನಡುವೆ ‘ಶಿಷ್ಟ’ವಾಗಿ ಕಾಣಲು ಟವೆಲು ಹೊದ್ದುಕೊಂಡಿದ್ದರು. ಈಗ ಹೆಣ್ಮಕ್ಕಳ ಸರದಿ. ಡೋಲು ಹಿಡಿದು ಗುಂಪಿ ನಲ್ಲಿ ವೃತ್ತಾಕಾರವಾಗಿ ತಿರುಗುತ್ತ ಎಲ್ಲ ಒಟ್ಟಿಗೆ ಹಾಡಿಕೊಳ್ಳತೊಡಗಿ ದರು. ಒಬ್ಬರಾದರೂ ಮೈಕ್ ಎದುರು ಬನ್ನಿ, ಆಗ ಹಾಡು ಎಲ್ಲರಿಗೆ ಕೇಳೀತು ಎಂದರೆ ಊಂ ಹ್ಞೂಂ, ಗುಂಪು ಬಿಟ್ಟರೆ, ಹೆಜ್ಜೆ ಹಾಕದಿದ್ದರೆ ಹಾಡು ಹೊರಡು ವುದೇ ಇಲ್ಲ ಹುಟ್ಟಾ ಕೃಷಿಕರಾದ ಅವರ ಹಾಡಿನ ತುಂಬ ಕೃಷಿಯ ವಿವರಗಳು. ನಿಂಬೆಗಿಡ ನೆಟ್ಟದ್ದು, ಮಣ್ಣು-ನೀರು- ಗೊಬ್ಬರ ಹಾಕಿದ್ದು; ಮೊದಲ ಎಲೆ ಚಿಗುರಿದ್ದು; ಎರಡೆಲೆ ಆಗಿದ್ದು; ನಾಲ್ಕೆಲೆ, ಎಂಟೆಲೆ ಹೀಗೇ ಚಿಗುರುತ್ತ ಹೋಗಿ ಕೊನೆಗೆ ಹೂವಾಗಿದ್ದು; ಫಲವಾಗಿ ‘ಹಳದಿ’ ನಿಂಬೆ ಹಣ್ಣಾಗಿದ್ದು ಎಲ್ಲವೂ ಹಾಡಿನಲ್ಲಿ ಸುಳಿದವು.

‘ಹಣ್ಣು ಕಿತ್ತು ಬುಟ್ಟಿಯಲಿಟ್ಟು ಸಂತೆಗೆಂದು ಜೋಯ್ಡಾಕ್ಕೆ ಒಯ್ದೆ, ನೂರಕ್ಕೆ ಮೂರು ರೂಪಾಯಿ ಎಂದರು. ದಾಂಡೇಲಿಗೆ ಒಯ್ದೆ – ಮೂರು ರೂಪಾಯಿ ಎಂದರು. ಲೋಂಡಾಕ್ಕೆ ಒಯ್ದೆ, ಅಲ್ಲೂ ಮೂರೇ ರೂಪಾಯಿ ಎಂದರು..’

ಎಂದು ಹಾಡು ಕೊನೆಯಾಗುತ್ತದೆ. ಎಂದರೆ ತಾವು ತಿಂಗಳುಗಟ್ಟಲೆ ಬೆಳೆಸಿದ್ದಕ್ಕೆ ಯಾವ ಪೇಟೆಗೆ ಹೋದರೂ ಸೂಕ್ತ ದರ ಸಿಗಲಿಲ್ಲ ಎಂಬುದು ಒಟ್ಟೂ ಹಾಡಿನ ತಾತ್ಪರ್ಯ. ಬೆಳೆ ಬೆಳೆಯುವ; ಅದನ್ನು ವನ್ಯ ಪ್ರಾಣಿಗಳಿಂದ ರಕ್ಷಿಸಿ ಹೊತ್ತು ಮಾರುಕಟ್ಟೆಗೆ ತರುವ ಕೆಲಸ ಸೂಕ್ತ ದರ ಸಿಗದೇ ಹೋದರೆ ಶ್ರಮವೆನಿಸಿ ಹೇಗೆ ನಿರಾಸೆ ಆವರಿಸುತ್ತದೆ ಎನ್ನುವುದು ಅವರ ಸಾಲಿನಲ್ಲಿ ವ್ಯಕ್ತವಾಗುತ್ತದೆ.

ಕುಣಬಿಗಳು ಎಂದು ಹೆಸರು ಬರಲು ಗುಜರಾತ್, ಗೋವಾ, ಕರ್ನಾಟಕ, ಆಂಧ್ರ, ಕೇರಳಗಳಲ್ಲಿ ಮುಖ್ಯವಾಗಿ ಕಾಣುವ ಇವರು ಮಹಾರಾಷ್ಟ್ರ, ಗುಜರಾತ್, ಗೋವಾಗಳ ಮೂಲ ನಿವಾಸಿಗಳು. ವಲಸೆ ಬಂದ ಉತ್ತರದ ಮುಂಡಾರಿ ಸಮುದಾ ಯವೇ ನಂತರ ಕುಣಬಿ ಎಂದಾಯಿತು ಎಂದೂ ಕೆಲವರ ಅಭಿಪ್ರಾಯ.ತಮ್ಮನ್ನು ಮರಾಠ ಕುಣಬಿ ಗಳೆಂದು ದಾಖಲಿಸಿದರು. ಶಿಂಧೆ (ಸಿಂಧಿಯಾ), ಗಾಯಕ್ವಾಡ್ ಮುಂತಾದ ಆಳುವ ಮನೆತನ ಗಳು ಕುಣಬಿ ಮೂಲದವರೆಂದು ಹೇಳ‌ಲಾಗು ತ್ತದೆ. ಕರ್ನಾಟಕ, ಕೇರಳದಲ್ಲಿ ಇವರು ವಲಸೆ ಬಂದ ಸಮುದಾಯಗಳು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಅತಿ ಹಿಂದುಳಿದ ಬುಡಕಟ್ಟು ಜನಾಂಗ. ಬುಡಕಟ್ಟು ಆದರೂ ಬುಡಕಟ್ಟು ಎನಿಸಿಕೊಳ್ಳದೇ ‘ಹಿಂದುಳಿದ ಜಾತಿ’ಯಾಗಿ ಪರಿಗಣಿಸಲ್ಪಟ್ಟ ಜನಾಂಗ.

ಅವರಿಗೆ ಈಗ ಆನೆ ಒಂದು ಸಮಸ್ಯೆ; ಕಾಡು ಒಂದು ಸಮಸ್ಯೆ; ಹುಲಿ ಒಂದು ಸಮಸ್ಯೆ; ಜಿಲ್ಲಾ ಕೇಂದ್ರದಿಂದಿರುವ ದೂರ ಒಂದು ಸಮಸ್ಯೆ. ಆಡುವ ಭಾಷೆ, ಆಡಳಿತ ಭಾಷೆ ಎರಡೂ ಸಮಸ್ಯೆಗಳೇ. ಕಡಿಮೆ ಜನಸಂಖ್ಯೆ ಒಂದು ಸಮಸ್ಯೆ, ಅಧಿಕಾರ ಕೇಂದ್ರದಿಂದ ದೂರ ಇರುವುದೇ ಮುಖ್ಯ ಸಮಸ್ಯೆ. ಅವರ ಭಾಷೆ ಕುಣಬಿ ಕೊಂಕಣಿ. ಜೋಯ್ಡಾದ ೬೫% ಜನ ಆಡುವ ಭಾಷೆ ಕೊಂಕಣಿ. ಆದರೆ ಭಾಷೆ ಅವರಿಗೆ ಹೇಗೆ ಅಸ್ಮಿತೆಯಾಗಿದೆಯೋ ಹಾಗೇ ತಡೆಗೋಡೆ ಯೂ ಆಗಿದೆ.ಆ ಸಮಾಜದ ಮುಖಂಡರು ಸಹಾ ತಮಗೆ ‘ಕನ್ನಡ್ ಅಷ್ಟ್ ಸರೀ ಬರೂದಿಲ್ಲ, ಹ್ಞಾಂವ್ ಕೊಂಕಣಿ ಉಲಯತಾ’ ಎನ್ನುತ್ತ ಕೊಂಕಣಿಯಲ್ಲೇ ಮಾತನಾಡುತ್ತಾರೆ. ಕುಣಬಿ ಮಕ್ಕಳು ಶಾಲೆಗೆ ಹೋದರೂ ಕನ್ನಡ ಅವರಿಗೆ ಇಂಗ್ಲೀಷಿನಷ್ಟೇ ಕಾಡುತ್ತದೆ. ಅವರು ಬೆಳೆದ ಪರಿಸರ ಪೂರ್ತಿ ಕೊಂಕಣಿಮಯವಾಗಿರುವುದ ರಿಂದ ಕನ್ನಡ ಅವರಿಗೆ ಪರಕೀಯ ಭಾಷೆ. ಅದರ ಜೊತೆಗೆ ಇಂಗ್ಲಿಷ್, ಹಿಂದಿ ಎಂಬ ಇನ್ನಷ್ಟು ಪರಕೀಯ ಭಾಷೆ ಸೇರಿದರಂತೂ ಮುಗಿಯಿತು, ಮಕ್ಕಳನ್ನು ಅಪರಿಚಿತ ಭಾಷೆಗಳೇ ಶಾಲೆಯಿಂದ ಹೊರತಳ್ಳುತ್ತವೆ.

ದಕ್ಷಿಣ ಭಾರತದ ಜನಸಮುದಾಯಗಳ ಅಧ್ಯಯನ ನಡೆಸಿ ೧೯೦೪ರಲ್ಲಿ ಪುಸ್ತಕ ಪ್ರಕಟಿ ಸಿದ ಎಡ್ಗರ್ ಥರ್ಸ್ಟನ್ ಈ ಸಮುದಾಯ ಹಲವು ಹೆಸರುಗಳಿಂದ ಕರೆಯಲ್ಪಡುವುದನ್ನು ಗುರುತಿ ಸಿದ್ದ. ಕುಣಬಿ, ಕುಮ್ರಿ, ಕುನಪಿ, ಕುಣ್ಬಿ, ಕುಡುಬಿ, ಕುಡುಂಬಿ, ಮರಾಠ ಕುಣಬಿ, ಕುಮ್ರಿ ಮರಾಠಿ ಎಂದೆಲ್ಲ ವಿವಿಧ ಹೆಸರುಗಳಿಂದ ಕರೆ ಯಲ್ಪಡುವ ಸಮುದಾಯ ಒಂದೇ ಎಂದು ಆತ ಗುರುತಿಸಿದ್ದ.ಕೊಂಕಣ-ಗೋವಾದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಭಾವನಾತ್ಮಕ ವಾಗಿ, ಭೌಗೋಳಿಕವಾಗಿ, ಭಾಷಿಕವಾಗಿ ಅವರಿಗೆ ಕರ್ನಾಟಕ-ಬೆಂಗಳೂರಿಗಿಂತ ಗೋವಾ-ಪಣಜಿ ತುಂಬ ಹತ್ತಿರ. ಜೋಯ್ಡಾದ ಕೆಲ ಊರು ಗಳ ಹೆಸರು ನೋಡಿ: ದುಧಗಾಳಿ, ಕಾಟೋಳಿ, ಧೋಕ್ರಪಾ, ಲಾಂಡೆ, ಕಾಲಟೇಲಾ, ಬಾಡ ಪೋಲಿ, ಗುಂಡಾಳಿ, ನಿಗುಂಡಿ.. ವಲಸೆ ಬಂದ ಸಮುದಾಯಗಳ ಕುಲದೇವತೆಗಳು ಗೋಮಾಂತಕದ ಲ್ಲಿದ್ದು ಜಾತ್ರೆ-ಮಹೋತ್ಸ ವಗಳ ಕಾಲದಲ್ಲಿ ಜನರನ್ನು ಸೆಳೆಯುತ್ತಾರೆ. ಈ ಸಮುದಾಯಗಳು ಇಂದಿಗೂ ತಮ್ಮ ಮನೆತನದ ಹಳೆಯ ಹೆಸರು ಗಳನ್ನು( ಸರ್ ನೇಮ್) ಹಾಗೇ ಉಳಿಸಿಕೊಂಡಿದ್ದಾರೆ.

ಕುಣಬಿ ಮುಖಂಡರಲ್ಲೊಬ್ಬರು ದಯಾನಂದ ಗಾವುಡಾ ಜೊಯ್ಡಾ. ಖಾಸಗೀಕರಣ- ಜಾಗತೀ ಕರಣದ ಸಂದರ್ಭದಲ್ಲಿ ಅತಿ ಹೆಚ್ಚು ಬಾಧಿತ ರಾದವರು ಆದಿವಾಸಿಗಳು. ಅವರ ಒಕ್ಕಲೆಬ್ಬಿ ಸುವುದು ದಿನನಿತ್ಯದ ಸಂಗತಿಯಾಗಿದೆ.

“ಮಾದೇವ ವೇಳೀಪ ಎಂಬುವರು ಹಗಲು ರಾತ್ರಿಯೆನ್ನದೆ ಪರಿಸರದ ಉಳಿವಿಗೆ ಹಾಗೂ ಗಿಡಮೂಲಿಕೆ ಔಷಧಿ ನೀಡುವ ಕಾಯಕ ಇವರದು.ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯಿತಿಯ ಕಾಟೋ೯ಳಿ ಎಂಬ ಗ್ರಾಮದವರಾದ ಶ್ರೀ ಮಾದೇವ ವೇಳಿಪ, ಜೀವ ಪರಿಸರ ಮತ್ತು ಕಾಲಮಾನಕ್ಕೆ ತಕ್ಕಂತೆ ಜಾನಪದ ಹಾಡುಗಳನ್ನು ಸುಮಾರು ಸಾವಿರ ಲೆಕ್ಕದಲ್ಲಿ ನಿರಂತರವಾಗಿ ಹಾಡುವಂಥ ಕಲೆ ಕರಗತ ಮಾಡಿ ಕೊಂಡಿರುವ ಇವರಿಗೆ ಕಳೆದ ವರ್ಷ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ಜಾನಪದ ಪ್ರಶಸ್ತಿ ಕೂಡಾ ಒಲಿದು ಬಂದಿತ್ತು. ಇವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ವರು.

✍️ಶ್ರೀಮತಿ ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ