ಸಂಬಂಧಗಳಿಗೆ ಎಳ್ಳುನೀರು ಬಿಟ್ಟು ಹೊರಟಿದ್ದೇನೆ
ಹೊರಳಿ ನೋಡದಿರು
ದುಸ್ವಪ್ನದಂತೆ ನಡೆದುದ ಎಲ್ಲವನ್ನು ಮರೆತಿದ್ದೇನೆ
ಮರಳಿ ಕಾಡದಿರು

ಪ್ರಣಯದ ನಾಟಕದ ಅಂಕಕ್ಕೆ ತೆರೆಯೆಳೆಯುವಾಸೆ
ಮೈದಳೆಯುತ್ತಿದೆಯೇಕೆ
ಬಿಚ್ಚುಮನದಿ ಹೇಳಿದ ಮಾತುಗಳ ತೊರೆದಿದ್ದೇನೆ
ಮತ್ತೊಮ್ಮೆ ನೀಡದಿರು

ಪ್ರೇಮದ ಶೃಂಖಲೆಯಲಿ ಸಿಲುಕಿಸಿ ಪದೆಪದೆ
ಕೊಲ್ಲುವೆಯಲ್ಲ ಏಕೆ
ವಿರಹದ ಕಡಲಲ್ಲಿ ಈಜುಬರದವನಂತೆ ಮುಳುಗಿದ್ದೇನೆ
ಎದುರಲ್ಲಿ ಕೂಡದಿರು

ಮುರಿದ ಕೊಳಲಿನಲ್ಲಿ ಮೋಹನ ರಾಗವನು
ನುಡಿಸುವ ಯತ್ನಬೇಡ
ಬರಿದಾದ ಬಾಳಲ್ಲಿ ಮತ್ತೆ ಬಣ್ಣಹಚ್ಚದೆ ಸೊರಗಿದ್ದೇನೆ
ಚರಮಗೀತೆ ಹಾಡದಿರು

ಅಭಿನವನ ಇಹಯಾತ್ರೆ ಕೊನೆಯಾಗುವಕಾಲ
ಸನಿಹ ಬಂತೆ
ಹೃದಯ ಘಾಸಿಗೊಂಡು ಗರಿಮುರಿದ ಹಕ್ಕಿಯಾಗಿದ್ದೇನೆ
ಕಣ್ಣೆದುರು ಓಡದಿರು

✍️ಶಂಕರಾನಂದ ಹೆಬ್ಬಾಳ
ಇಲಕಲ್ಲ