ಅದು 1973ರ ನವಂಬರ್ ಒಂದನೇ ದಿನ. ಕನ್ನಡ ನಾಡನ್ನು ಶತಮಾನಗಳ ಕಾಲ ಆಳಿದ ವಿಜಯ ನಗರ ಸಾಮ್ರಾಜ್ಯದ ಆರಾಧ್ಯ ದೈವವಾದ ಹಂಪಿಯ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಕನ್ನಡ ನಾಡಿನ ಎಲ್ಲಾ ಹಿರಿಯ ಮುತ್ಸದ್ದಿಗಳು, ಕನ್ನಡ ಪರ ಹೋರಾಟಗಾರರು, ಜನರು ಮುಖ್ಯಮಂತ್ರಿ ಗಳ ಘೋಷಣೆಗಾಗಿ ಕಾಯುತ್ತಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿಯಿಂದ ತಂದ ನಾಡ ದೇವಿಯ ಚಿತ್ರಪಟಕ್ಕೆ ಪೂಜಿಸಿದ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಪಂಪಾ ವಿರುಪಾಕ್ಷದೇವರ ಸನ್ನಿಧಿಯಲ್ಲಿ ಅಧಿಕೃತವಾಗಿ ಘೋಷಿಸಿದರು.

ಜೊತೆಗೆ ತಾವು ಪೂಜಿಸಿದ ನಾಡದೇವಿಯ ಚಿತ್ರವನ್ನು ಅಧಿಕೃತವಾಗಿ ಕನ್ನಡ ಭುವನೇಶ್ವರಿ ಯ ಚಿತ್ರವೆಂದು ಅಂಗೀಕರಿಸುವುದಾಗಿ ಹೇಳಿದರು. ಕರ್ನಾಟಕ ರಾಜ್ಯದ ಜನತೆಯ ನೆಚ್ಚಿನ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ಅವರ ಆಶಯದಂತೆ ಕನ್ನಡಮ್ಮನ ಅಧಿಕೃತ ಭಾವಚಿತ್ರವಾಗಿ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಅವರ ಮನೆಯಲ್ಲಿ ರುವ ತಾಯಿ ಭುವನೇಶ್ವರಿಯ ಭಾವಚಿತ್ರ ವನ್ನು ಸರ್ಕಾರ ಘೋಷಿಸಲಿ ಎಂಬುದು ಸಮಸ್ತ ಕನ್ನಡಿಗರ ಒಕ್ಕೊರಲಿನ ಮಾತು.

ತಾಯಿ ಭುವನೇಶ್ವರಿಯ ಚಿತ್ರವನ್ನು ಅಂದಿನ ಸರ್ಕಾರದ ಸಣ್ಣ ನೀರಾವರಿ ಸಚಿವರಾಗಿದ್ದ ದಿವಂಗತ ಅಂದಾನಪ್ಪ ದೊಡ್ಡಮೇಟಿಯವರು ಕರ್ನಾಟಕ ಏಕೀಕರಣ ಹೋರಾಟದ ಸಮಯ ದಲ್ಲಿ ಅಖಂಡ ಕರ್ನಾಟಕದ ಪರಿಕಲ್ಪನೆಯನ್ನು ಶ್ರೀಯುತ ಸಿ.ಎನ್.ಪಾಟೀಲರ ಬಳಿ ಹೇಳಿ ಈ ತೈಲ ಚಿತ್ರರಚನೆಗೆ ಪ್ರೇರೇಪಿಸಿದ್ದರು. ಅಂದಾನಪ್ಪ ದೊಡ್ಡ ಮೇಟಿಯವರ ಆಶಯ ಗಳಿಗೆ ಪೂರಕ ವೆಂಬಂತೆ ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ಸಾರುವ ವಿವಿಧ ಚಿತ್ರಗಳನ್ನು ಒಳಗೊಂಡಂತೆ 1953ರ ಜನವರಿ 11ರಂದು ಗದುಗಿನ ಕಲಾವಿದ ರಾದ ಸಿ.ಎನ್. ಪಾಟೀಲರು ಆರು ಅಡಿ ಎತ್ತರದ ಕನ್ನಡ ತಾಯಿಯ ತೈಲ ಚಿತ್ರವನ್ನು ರಚಿಸಿದರು.

ಭುವನೇಶ್ವರಿ ತಾಯಿ ಇರುವ ಭಂಗಿಯೇ ಕರ್ನಾಟಕದ ನಕ್ಷೆಯಂತಿದ್ದು, ಎಡಗೈಯಲ್ಲಿ ಪುಸ್ತಕವನ್ನು ಹೊಂದಿದ್ದು ವಿದ್ಯೆಯ ಅಧಿದೇವತೆ ಸರಸ್ವತಿಯ ಅವತಾರವನ್ನು, ಇನ್ನೊಂದು ಕೈಯಲ್ಲಿ ಹಿಡಿದಿರುವ ತ್ರಿಶೂಲ ದಿಂದ ಶಕ್ತಿಯ ಅಧಿದೇವತೆ ಆದಿಶಕ್ತಿ ಎಂದು, ಮತ್ತೊಂದು ಕೈಯಲ್ಲಿ ಕಮಲವನ್ನು ಹಿಡಿದಿರುವುದರಿಂದ ಧನದ ಅಧಿದೇವತೆ ಲಕ್ಷ್ಮಿ ಎಂದು ಹೇಳಬಹುದು. ಬಿಳಿ ಸೀರೆ ಮತ್ತು ಹಸಿರು ಕುಪ್ಪಸ ಶಾಂತಿ ಮತ್ತು ಸಮೃದ್ಧಿಯ ಸಂಕೇತವನ್ನು ತೋರಿಸುತ್ತದೆ. ಸುತ್ತಲೂ ಇರುವ ಹೊಯ್ಸಳರ ಲಾಂಛನ, ಬನಶಂಕರಿ ದೇವಸ್ಥಾನ, ಮೈಸೂರಿನ ಚಾಮುಂಡೇಶ್ವರಿ, ಶೃಂಗೇರಿಯ ಶಾರದಾಂಬೆ, ಚಾಲುಕ್ಯ ಶಿಲ್ಪ ವೈಭವದ ಶಿಲಾಬಾಲಿಕೆ, ಹಂಪಿ ಯ ಕಡಲೆ ಕಾಳು ಗಣಪತಿ, ಶ್ರವಣ ಬೆಳಗೊಳ ದ ಗೊಮ್ಮಟ, ಜೋಗ, ಗೋಳಗುಮ್ಮಟ, ಕರಾವಳಿ ಹಾಗೂ ಹಸಿರು ಸಿರಿಯನ್ನು ಈ ತೈಲ ವರ್ಣಚಿತ್ರವು ಒಳಗೊಂಡಿದೆ. ದೇವಿಯ ಮುಖ ದಿವ್ಯವಾದ ಸ್ವಾಭಾವಿಕ ಪ್ರಭೆಯನ್ನು ಹೊಂದಿದ್ದು ವಾಸ್ತವಿಕತೆಗೆ ಅತ್ಯಂತ ಹತ್ತಿರವಾಗಿದೆ.

ಮೊತ್ತ ಮೊದಲ ಕರ್ನಾಟಕ ಏಕೀಕರಣ ಚಳುವಳಿಗೆ ಜಕ್ಕಲಿಯ ಅನ್ನದಾನೇಶ್ವರ ಮಠ ದಲ್ಲಿ ಈ ಚಿತ್ರವನ್ನು ಪೂಜಿಸಿದ ಅಂದಿನ ಕರ್ನಾಟಕ ಏಕೀಕರಣ ಹೋರಾಟಗಾರರಾದ ಕೆಂಗಲ್ ಹನುಮಂತಯ್ಯನವರು ಇದೇ ಭಾವ ಚಿತ್ರವನ್ನು ಗದುಗಿನಲ್ಲಿ ನಡೆದ ಕರ್ನಾಟಕ ಏಕೀಕರಣ ಹೋರಾಟದ ಮೆರವಣಿಗೆಯಲ್ಲಿ ಪ್ರದರ್ಶಿಸಿದ್ದರು. ಕರ್ನಾಟಕ ಏಕೀಕರಣ ಹೋರಾಟಕ್ಕೆ ಪ್ರೇರಣೆಯಾದ ಈ ಚಿತ್ರವು ನಮ್ಮ ನಾಡಿನ ಭವ್ಯ ಸಂಸ್ಕೃತಿಯ, ಹಿರಿಮೆ,ಗರಿಮೆಗಳ ಪ್ರತೀಕವಾಗಿದೆ.

ಅ.ನ.ಕೃಷ್ಣರಾಯರು ತಮ್ಮ ‘ಕನ್ನಡಮ್ಮನ ಗುಡಿ ಯಲ್ಲಿ‘ ಎಂಬ ಕಾದಂಬರಿಯಲ್ಲಿ ಅಂದಾನಪ್ಪ ದೊಡ್ಡಮೇಟಿ ಅವರ ಮನೆಯಲ್ಲಿ ಪೂಜಿಸಲ್ಪಡು ತ್ತಿರುವ ಕನ್ನಡಮ್ಮನ ಭಾವಚಿತ್ರ ದ ಕುರಿತು ಮಾಹಿತಿ ನೀಡಿದ್ದಾರೆ. ಕನ್ನಡದ ಹಿರಿಯ ಸಂಶೋಧಕರಾದ ಡಾ.ಚಿದಾನಂದ ಮೂರ್ತಿ ಯವರು ಕೂಡ ತಮ್ಮ ಪುಸ್ತಕದಲ್ಲಿ ಈ ಚಿತ್ರವನ್ನು ಬಳಸಿದ್ದಾರೆ. ಪಾಟೀಲ್ ಪುಟ್ಟಪ್ಪ,ಡಾ.ಸಿದ್ದರಾಮ ಜಂಬಲ ದಿನ್ನಿ ಮುಂತಾದ ಸಾಹಿತಿಗಳು ಕೂಡ ಇದೇ ಕನ್ನಡಮ್ಮನ ಭಾವಚಿತ್ರವನ್ನು ಪೂಜಿಸಿ ದ್ದಾರೆ.

ಗದುಗಿನ ತೋಂಟದಾಯ೯ ಮಠದಲ್ಲಿ ಕನ್ನಡದ ಸ್ವಾಮೀಜಿ ಎಂದೇ ಖ್ಯಾತರಾದ ಲಿಂ.ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಈ ಭಾವಚಿತ್ರದ ಪ್ರತಿಕೃತಿ ಯನ್ನು ಇರಿಸಿ ಪೂಜಿಸಿ ಅದೇ ಭಾವಚಿತ್ರವನ್ನು ಅಧಿಕೃತವಾಗಿ ಭುವನೇಶ್ವರಿಯ ಭಾವಚಿತ್ರ ವಾಗಿ ಘೋಷಿಸ ಬೇಕೆಂದು ಒತ್ತಾಯಿಸಿದ್ದರು.

ಹಂಪೆಯಲ್ಲಿಯೂ ಕೂಡ ಇದೇ ಭಾವಚಿತ್ರ ವನ್ನು ಪೂಜಿಸಿ ಅಂದಿನ ಮುಖ್ಯಮಂತ್ರಿ ಗಳಾದ ಡಿ.ದೇವರಾಜ ಅರಸರವರು ಕರ್ನಾಟಕ‘ಎಂದು ಕನ್ನಡ ನಾಡಿಗೆ ಮರು ನಾಮಕರಣ ಮಾಡಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕೂಡ ಈ ತೈಲ ವರ್ಣಚಿತ್ರ ವನ್ನು ರಾಜ್ಯದ ಚಿನ್ಹೆಯನ್ನಾಗಿ ಮಾಡಲು ಒಪ್ಪಿಕೊಂಡಿದೆ. ಈ ಹಿಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮನು ಬಳಿಗಾರ ರವರು ಕೂಡ ಈ ಭಾವಚಿತ್ರವನ್ನು ಕನ್ನಡಮ್ಮನ ಅಧಿಕೃತ ಭಾವಚಿತ್ರ ಎಂದು ಅಂಗೀಕರಿಸಲು ಮತ್ತು ಪರಿಷತ್ತಿನ ಎಲ್ಲಾ ಘಟಕ ಗಳಲ್ಲೂ ಇದೇ ಭಾವಚಿತ್ರವನ್ನು ಬಳಸಲು ಹೇಳಿದ್ದರು.

ಇತ್ತೀಚೆಗಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷರಾಗಿ ಆಯ್ಕೆಯಾಗಿರುವ ನಾಡೋಜ ಡಾ.ಮಹೇಶ್ ಜೋಶಿ ಅವರು ಕೂಡ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ ಸ್ವೀಕಾರ ಸಮಾರಂಭಕ್ಕೂ ಮುನ್ನ ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿ ತಾಯಿ ಭುವನೇಶ್ವರಿಯ ಚಿತ್ರಪಟವನ್ನು ಪೂಜಿಸಿ ನಮಸ್ಕರಿಸಿ ಅದೇ ತೈಲ ವರ್ಣಚಿತ್ರ ವನ್ನು ಅಧಿಕೃತವಾಗಿ ಕನ್ನಡ ತಾಯಿ ಭುವನೇಶ್ವರಿಯ ಚಿತ್ರವಾಗಿ ಘೋಷಿಸಲು ಸರ್ಕಾರಕ್ಕೆ ಆಗ್ರಹಿಸಿದರು.

ಉತ್ತರ ಕರ್ನಾಟಕದ ಹಿರಿಯ ನಾಯಕರಾದ ಬಿ.ಎಸ್.ಹೊರಟ್ಟಿ ಅವರು ಕೂಡ ಸರ್ಕಾರಕ್ಕೆ ಪತ್ರ ಬರೆದು ದೊಡ್ಡ ಮೇಟಿ ಅವರ ಮನೆಯ ಲ್ಲಿರುವ ಭಾವಚಿತ್ರವೇ ಅಧಿಕೃತವಾದ ಕನ್ನಡ ತಾಯಿ ಭುವನೇಶ್ವರಿಯ ಚಿತ್ರವಾಗಬೇಕು ಎಂದು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದ ಹಿರಿಯ ನಾಯಕರೊ ಬ್ಬರು ಕರ್ನಾಟಕ ಏಕೀಕರಣ ಸಮಿತಿಯ ಅಗ್ರ ಹೋರಾಟಗಾರರಾಗಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸುಮಾರು 21 ದಿನಗಳ ಮೌನವ್ರತ ಮತ್ತು 7ದಿನಗಳ ಕಾಲ ಉಪವಾಸ ಆಚರಣೆ ಕೈಗೊಂಡು ‘ಕನ್ನಡಿಗರೆಲ್ಲರೂ ಒಂದಾಗಬೇಕು, ಕರ್ನಾಟಕ ಏಕೀಕರಣ ಹೋರಾಟಕ್ಕೆ ಪ್ರಾತಿನಿಧಿಕ ಶಕ್ತಿಯ ರೂಪ ದಲ್ಲಿ ತಾಯಿ ಭುವನೇಶ್ವರಿ ಮಾತೆಯ ಚಿತ್ರವು ಹೋರಾಡುವ ಎಲ್ಲರಿಗೂ ಚೈತನ್ಯ ಶಕ್ತಿಯನ್ನು ತುಂಬಬೇಕು’ ಎಂಬ ಆಶಯ ದೊಂದಿಗೆ ಸಮಗ್ರ ಕರ್ನಾಟಕದ ಕಲ್ಪನೆ ಯನ್ನು ಹೊತ್ತ ತಾಯಿ ಭುವನೇಶ್ವರಿಯ ಭಾವಚಿತ್ರ ರಚಿಸಲು ಪ್ರೇರೇಣೆ ನೀಡಿದ ಮಹನೀಯರು. 1957 ರಿಂದ ಇಂದಿನ ವರೆಗೂ ಅವರ ಮನೆ ಯಲ್ಲಿ ಪ್ರತಿದಿನ ತಪ್ಪದೇ ಕನ್ನಡಮ್ಮನ ಪೂಜೆ ಮಾಡುತ್ತಿರುವುದು ಉತ್ತರ ಕರ್ನಾಟಕದ ಜನರ ಪಾಲಿಗೆ ಹೆಗ್ಗಳಿಕೆಯ ವಿಷಯ.

ಕನ್ನಡ ನಾಡು ಒಂದು ಅಖಂಡ ಕರ್ನಾಟಕ ಎಂದು ಹಲವಾರು ನಾಯಕರು ಹಲವಾರು ಬಾರಿ ಹೇಳಿದರೂ ಅಧಿಕಾರ, ಸ್ಥಾನಮಾನ, ಸವಲತ್ತು, ಅವಕಾಶಗಳ ಪ್ರಶ್ನೆ ಬಂದಾಗ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಗಳು ಅನಾಸ್ಥೆ, ಅಸಡ್ಡೆ, ಅನಾದರ, ಅಭಿಮಾನ ಶೂನ್ಯತೆಯ ಕಾರಣಗಳಿ ಗಾಗಿ ಅವಕಾಶ ಗಳನ್ನು ಕಳೆದುಕೊಂಡು ಕೊರಗು ತ್ತವೆ. ಗಡಿ ಭಾಗದಲ್ಲಿರುವ ಹಲವಾರು ಊರು ಗಳನ್ನು ನಮ್ಮ ಅಸಡ್ಡೆಯಿಂದ ಈಗಾಗಲೇ ಕಳೆದು ಕೊಂಡಿದ್ದೇವೆ ನಾವು. ಕೇವಲ ಐದು ಜನ ತಜ್ಞರ ಸಮಿತಿಯನ್ನು ನೇಮಿಸಿ ಸರ್ಕಾರ ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಲ್ಲಿರುವ ಭುವನೇಶ್ವರಿ ಮೂರ್ತಿಯ ಪ್ರತಿಕೃತಿ ಯನ್ನು ಕನ್ನಡಮ್ಮನ ಅಧಿಕೃತ ಚಿತ್ರವೆಂದು ಪರಿಗಣಿಸಲು ನಿರ್ಧರಿಸಿದ್ದು ಉತ್ತರ ಮತ್ತು ಮಧ್ಯ ಕರ್ನಾಟಕದ ಜನರಿಗೆ ಆಘಾತವನ್ನು ತಂದಿದೆ.

ಈ ಹಿಂದೆ ಗದುಗಿನ ಸುಪ್ರಸಿದ್ದ ಕವಿಗಳಾದ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ನಾಡಗೀತೆಯನ್ನು ಕನ್ನಡ ನಾಡು ಉದಯವಾದ ಮೇಲೆ ಈ ಗೀತೆ ಅಪ್ರಸ್ತುತ ಎಂದು ಕೈ ಬಿಡಲಾಯಿತು. ಆದರೆ ಕನ್ನಡಮ್ಮನ ತೈಲವರ್ಣಚಿತ್ರದ ವಿಷಯದಲ್ಲಿ ಆ ರೀತಿ ಆಗ ಬಾರದದು. ಕನ್ನಡ ತಾಯಿ ಭುವನೇಶ್ವರಿಯನ್ನು 69 ವರ್ಷಗಳಿಂದ ಪೂಜಿಸಿ ಆರಾಧಿಸಿದ ಏಕೀಕರಣದ ರೂವಾರಿ ಗಳಾದ ಶ್ರೀಅಂದಾನಪ್ಪ ದೊಡ್ಡಮೇಟಿ ಯವರ ಆಶಯಕ್ಕೆ ಧಕ್ಕೆಯನ್ನು ತರಬಾರದು.

ಅದರಗುಂಚಿ ಶಂಕರಗೌಡರು,ಹಳ್ಳಿಕೇರಿ ಗುದ್ಲೆಪ್ಪ, ಸರ್ ಸಿದ್ದಪ್ಪ ಕಂಬಳಿ, ಆರ್.ಎಚ್.ದೇಶಪಾಂಡೆ, ರಂಗರಾಜು ದಿವಾಕರ, ಕೆಂಗಲ್ ಹನುಮಂತಯ್ಯ, ಶ್ರೀನಿವಾಸ್ ರಾವ್ ಕೌಜಲಗಿ, ಶ್ರೀನಿವಾಸ ರಾವ್ ಮಂಗಳವಾಡೆ, ಬಿ.ಡಿ.ಜತ್ತಿ, ಬಿ.ವಿ.ಕಕ್ಕಿಲಾಯ, ಎಸ್.ನಿಜಲಿಂಗಪ್ಪ, ಟಿ.ಮರಿಯಪ್ಪ, ಸಾಹುಕಾರ್ ಚೆನ್ನಯ್ಯ, ಬಿ.ವಿ. ಕಕ್ಕಿಲಾಯ, ಅನ್ನದಾನಯ್ಯ ಪುರಾಣಿಕಮಠ ರಂತಹ ಏಕೀಕರಣದ ಅಗ್ರ ಹೋರಾಟ ಗಾರರು ಮತ್ತು ಕುವೆಂಪು, ಡಾ.ದ.ರಾ.ಬೇಂದ್ರೆ, ವಿ.ಕೃ. ಗೋಕಾಕ, ಬೆಟಗೇರಿ ಕೃಷ್ಣಶರ್ಮ, ಗೋವಿಂದ ಪೈ, ಶಿವರಾಮ ಕಾರಂತ, ಕಯ್ಯಾರ ಕಿಞ್ಞಣ್ಣ ರೈ, ಅ.ನ.ಕೃಷ್ಣರಾಯರಂತಹ ಏಕೀಕರಣ ಹೋರಾಟ ದ ಸಾಹಿತಿಗಳು ನಮ್ಮ ನಾಡು ನುಡಿಗಾಗಿ ಕರ್ನಾಟಕದ ಏಕೀಕರಣ ಕ್ಕಾಗಿ ಸಲ್ಲಿಸಿರುವ ಸೇವೆಗೆ ಗೌರವ ಸಲ್ಲಿಸುವುದೇ ಆದರೆ ದಿ.ಅಂದಾನಪ್ಪ ದೊಡ್ಡಮೇಟಿ ಯವರ ಕಲ್ಪನೆಯ ತಾಯಿ ಭುವನೇಶ್ವರಿಯ ಪಟವನ್ನು ಅಧಿಕೃತ ಕನ್ನಡ ತಾಯಿ ಭುವನೇಶ್ವರಿಯ ಪಟವೆಂದು ಘೋಷಿಸಬೇಕು ಎಂಬುದು ಅಖಂಡ ಕರ್ನಾಟಕದ ಆಶಯ.

ಇತಿಹಾಸವನ್ನು ಅಧ್ಯಯನ ಮಾಡಿ, ಚಿತ್ರದ ಚಾರಿತ್ರಿಕ ಹಿನ್ನೆಲೆಯನ್ನು ಗಮನಿಸಿ ತಜ್ಞರ ಸಮಿತಿ ಯನ್ನು ನೇಮಿಸಿ ವರದಿ ತರಿಸಿ ಜಕ್ಕಲಿಯ ಕನ್ನಡಮ್ಮನ ತೈಲ ವರ್ಣ ಚಿತ್ರವನ್ನು ಅಧಿಕೃತ ಕರ್ನಾಟಕ ಮಾತೆಯ ಚಿತ್ರವೆಂದು ಘೋಷಿಸಲಿ ಎಂಬುದು ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಡಿ.ಆರ್.ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ವಿವೇಕಾನಂದ ಗೌಡ ಪಾಟೀಲ್, ಸಾಹಿತಿ ಚಂದ್ರಶೇಖರ್ ವಸ್ತ್ರದ್ ಮತ್ತು ದಿವಂಗತ ಅಂದಾನಪ್ಪ ದೊಡ್ಡ ಮೇಟಿ ಕುಟುಂಬದ ಎಲ್ಲ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಮತ್ತು ತಾಲೂಕು ವಾರು ಘಟಕಗಳು, ಬೀಚಿ ಬಳಗ, ವಿವಿಧ ಕನ್ನಡ ಪರ ಸಂಘಟನೆಗಳು ತಮ್ಮ ತಮ್ಮ ಭಾಗದಲ್ಲಿ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದು ತಮ್ಮ ಮನವಿಗೆ ಸ್ಪಂದಿಸದೆ ಹೋದರೆ ಉಗ್ರಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

‘ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವಿಲ್ಲ’
ಎಂಬುದನ್ನು ಅರಿತು….. ಸಿರಿಗನ್ನಡ ನಾಡನ್ನು, ಅದರ ಐತಿಹಾಸಿಕ ಮಹತ್ವವನ್ನು ಸಾರಿ ಹೇಳುವ ದಿವಂಗತ ಅಂದಾನಪ್ಪ ದೊಡ್ಡಮೇಟಿ ಅವರ ಕಲ್ಪನೆಯ, ಸಿ.ಎನ್.ಪಾಟೀಲ್ ವಿರಚಿತ ಭುವನೇಶ್ವರಿಯ ತೈಲ ವರ್ಣ ಚಿತ್ರವನ್ನು ಅಧಿಕೃತ ಕನ್ನಡ ಮಾತೆಯ ಚಿತ್ರವೆಂದು ಘೋಷಿಸಬೇಕಾಗಿ ಸರ್ಕಾರವನ್ನು ಒತ್ತಾಯಿಸುವ ಈ ಅಭಿಯಾನ ದಲ್ಲಿ ಅಖಂಡ ಕರ್ನಾಟಕದ ಸರ್ವ ಜನತೆಯು ಪಾಲ್ಗೊಂಡು ಜಯ ಸಾಧಿಸಬೇಕು ಎಂಬ ಆಶಯ ಸಮಗ್ರ ಕರ್ನಾಟಕದ ಜನರದು.

ವೀಣಾ ಹೇಮಂತಗೌಡ ಪಾಟೀಲ್ 
ಮುಂಡರಗಿ ಜಿ: ಗದಗ