ರಾಯಸಾಬ ಎನ್.ದರ್ಗಾದವರ (ರಾಜು) ಅವರು ಹುಬ್ಬಳ್ಳಿ ತಾಲೂಕಿನ ಕೊಟ್ಟೂರು ಗ್ರಾಮದವರು. ಇವರು ಪೊಲೀಸ್ ಇಲಾಖೆ ಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು “ಗಾಂಧಿ ನೇಯ್ದಿಟ್ಟ ಬಟ್ಟೆ” ಇವರ ಪ್ರಥಮ ಕವನ ಸಂಕಲನವಾಗಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯ ಪಡೆದ ಕೃತಿಯಾಗಿದೆ.

ಇವರು ಸೂಕ್ಷ್ಮಾಣು ಸೂಕ್ಷ್ಮ ವಿಚಾರಗಳನ್ನು ತೆರೆದಿಡುತ್ತಾ, ಮನುಕುಲದ ಮೌಢ್ಯಗಳನ್ನು ಅಲ್ಲಗಳೆಯುತ್ತಾ, ಹೊಸ ಹೊಸ ವಿಚಾರ ಧಾರೆಗೆ ಮನಸ್ಸನ್ನು ಎಳೆದೊಯುತ್ತಾ, ಎದೆಯೊಳಗೆ ಹಲವಾರು ಪ್ರಶ್ನೆಗಳನ್ನು ನೆಟ್ಟು, ಅವುಗಳಿಗೆ ಉತ್ತರವನ್ನು ನೈಜ ಬದುಕಿನಲ್ಲಿ ತಡಕುತ್ತ ಗಾಂಧಿಯ ತತ್ವದರ್ಶಕಗಳನ್ನು, ವಿಚಾರಧಾರೆ ಗಳನ್ನು ಎದೆಯಲ್ಲಿ ಧೇನಿಸಿ ಕೊಂಡಿದ್ದರಿಂದ ಜೀವ ಪಡೆದ ಕವಿತೆಗಳೇ ಈ ಗಾಂಧಿ ನೇಯ್ದಿಟ್ಟ ಬಟ್ಟೆ.
ಗಾಂಧಿ ನೇಯ್ದಿಟ್ಟ ಬಟ್ಟೆ ಇದು ಕೇವಲ ಗಾಂಧಿ ವಸ್ತ್ರದ ಸಂಕೇತ ಮಾತ್ರವಲ್ಲ. ಅದೊಂದು ಈ ನೆಲದ ಕಸುಬಿನ, ಕಸುವಿನ ಸಂಕೇತ. ಗಾಂಧಿ ಮನದೊಳಗಿನ ಸ್ಥಾಯಿ ಭಾವಗಳಾದ ಸತ್ಯ, ಶಾಂತಿ, ಅಹಿಂಸೆ, ಪ್ರೀತಿ, ಸಮಾನತೆ, ಮಾನ- ವೀಯ ಮೌಲ್ಯಗಳನ್ನು, ಜನಮಾನಸದಲ್ಲಿ ಅಂತರ್ಗತವಾಗಿರಬೇಕಾದ ಅನಿವಾರ್ಯತೆ ಯನ್ನು ತಮ್ಮ ಕವಿತೆಯಲ್ಲಿ ಮಾರ್ಮಿಕವಾಗಿ ಬಿತ್ತರಿಸಿದ್ದಾರೆ.

ತಮ್ಮ ಜೀವನದ ವೈವಿಧ್ಯಮಯ ಅನುಭವ ಗಳ ಮಜಲುಗಳನ್ನು ಸ್ಮೃತಿ ಪಟಲದ ಮೇಲೆ ತೆರೆದಿಡು ವಲ್ಲಿ ಯಶಸ್ವಿ ಪ್ರಯೋಗ ನಡೆಸಿ ದ್ದಾರೆ. ಇಲ್ಲಿನ ಕವಿತೆಗಳು ಬಡವರು, ನಿರ್ಗತಿ ಕರು, ಅಸಹಾ ಯಕರು ದಲಿತರ ಮೇಲೆ ನಡೆಯುವ ಅನ್ಯಾಯ ಅನಾಚಾರಗಳನ್ನು ಮೌನವಾಗಿ ಪ್ರತಿಭಟಿಸುತ್ತವೆ ಎನಿಸುತ್ತಿರುವಾ ಗಲೇ ಅವರಿಗೆ ನ್ಯಾಯ ಒದಗಿ ಸಲು ಸಿಡಿದೇ ಳುತ್ತಾ ಪ್ರಶ್ನಿಸುವುದನ್ನು ಕಾಣಬ ಹುದು. ಇಂತಹ ಬರಹವೆ ನೊಂದ ಮನಸ್ಸುಗ ಳಿಗೆ ಬೇಕಾಗಿರುವುದು. ಜೀವಪರವಾಗಿ ಲೇಖನಿ ಸ್ಪಂದಿಸಿದಾಗ ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದ ರೂ ಬದಲಾವಣೆ ಕಾಣಬಹುದು. ಅಂತಹ ಬರಹದ ಜಾಡಿನಲ್ಲಿ ಕವಿ ರಾಯಸಾಬ ಸಾಗುತ್ತಿ ದ್ದಾರೆ. ತನ್ನ ಮನದೊಳಗಿನ ವಿಚಾರಗಳಿಗೆ ವೈವಿಧ್ಯಮಯವಾದ ಭಾವಗಳೆಂಬ ಬಣ್ಣ ತುಂಬಿ ಸುಂದರವಾದ ಮಳೆ ಬಿಲ್ಲಿನಂತೆ ವರ್ಣರಂಜಿತ ಮಾಡಿ, ಮನವನ್ನು ಮುದಗೊ ಳಿಸುವ ಖುಷಿಯ ಜೊತೆಗೆ, ತನ್ನೆದುರು ಕಂಡ ತಪ್ಪುಗಳಿಗೆ ಪ್ರತಿಭ- ಟಿಸಿ ಅದಕ್ಕೆ ಮಿಡಿಯುವ, ಕಣ್ಣೀರಧಾರೆ ಹರಿ ಸುವ ಸಹೃದಯತೆಗೆ ಕವಿಗೆ ಶಹಭಾಷ್ ಹೇಳಲೇ ಬೇಕು. ತನ್ನನ್ನು ಬಹುವಾಗಿ ಕಾಡುವ ತನ್ನ ಸಾಮಾಜಿಕ ಸಮಸ್ಯೆ ಗಳು, ನೊಂದವರ ಆರ್ತ ನಾದಗಳು, ಬದುಕಿನ ಬವಣೆಗಳು, ಬೆಂದವರ ಬವಣೆಗಳನ್ನೇ ಇವರು ಕಾವ್ಯವಾಗಿಸಿದ್ದಾರೆ. ಆ ಮೂಲಕ ತಾನೊಬ್ಬ ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸು ಕಾಣುವ ಕವಿಯೆಂದು ತೋರಿಸಿದ್ದಾರೆ.
ರೈತನೊಬ್ಬ ಭೂಮಿಯನ್ನು ಹದಗೊಳಿಸಿ, ಬೀಜ ಬಿತ್ತಿ, ಸಮೃದ್ಧ ಫಸಲು ಪಡೆಯಲು ತನ್ನ ಬೆವರ ನೆಲ್ಲ ಭೂತಾಯಿಗೆ ಬಸಿದು, ಬೇಗುದಿ ಯಲ್ಲಿ ಭರವಸೆ ಆಶಾಕಿರಣ ಹೊತ್ತು ತನ್ನ ಕಾಯಕದ ಫಲವನ್ನು ಹಾತೊರೆದು ಕಾಯುತ್ತಾ ನೋ, ಹಾಗೆ ಇಲ್ಲಿ ಕವಿಯು ತನ್ನ ಅಂತರಾಳ ದಲ್ಲಿ ಹುದುಗಿ ಕುದಿಯುತ್ತಿರುವ ಕಾವು ಅಂಕೆ ಮೀರಿ ಹೊರಚೆಲ್ಲಿ ಅವೆಲ್ಲ ಒಳಿತಿನ ಹಂಬಲ ಹೊತ್ತು ಸಮಾಜ ನಿರ್ಮಾಣದ ಕನಸು ನನಸಾಗಿಸಲು ಕವಿತೆಗಳು ಆಶಿಸುತ್ತವೆ. ಇವರ ಕವಿತೆಗಳ ಮೇಲೆ ಇವರ ಬಾಲ್ಯದ ಅನುಭವ ಗಳು ಅಗಾಧ ಪರಿಣಾಮ ಬೀರಿ ಇವರನ್ನು ಕಾಡುತ್ತಾ ಪದ್ಯ ರೂಪದಲ್ಲಿ ಪುಟಿದೆದ್ದಿವೆ. ಬದುಕಿನಲ್ಲಿ ಕಂಡ ನೂರಾರು ದುರಿತಗಳನ್ನು, ದುಃಖ ದುಮ್ಮಾನಗಳನ್ನು, ಶೋಷಣೆ ದಬ್ಬಾಳಿಕೆ ಗಳನ್ನು, ತಮ್ಮ ತೀಕ್ಷ್ಣವಾದ ಲೇಖನಿ ಯಿಂದ ಬಟ್ಟಿ ಇಳಿಸಿದ್ದಾರೆ. ಇವು ಜನರ ನ್ನು ತಮ್ಮ ಹಕ್ಕುಗಳಿಗಾಗಿ ಹೋರಾಡಲು ದಾರಿ ದೀಪದಂತಿವೆ.
ಕವಿಯಿಲ್ಲಿ ಜಾಗೃತ ಪ್ರಜ್ಞೆಯಡಿಯಲ್ಲಿ ಚರ್ಚಿಸುತ್ತ, ಕಾವ್ಯ ಕಟ್ಟುತ್ತಾ ಸಾಗಿದ್ದಾರೆ. ಕವಿಯ ಅನುಭವ ಅನುಭಾವವಾಗಿ ಕಾವ್ಯ ಸೃಷ್ಟಿಗೆ ಎಡೆ ಮಾಡಿಕೊಟ್ಟರೆ, ಕರುಳು ಹಿಂಡುವ ದೃಶ್ಯಾವಳಿ ಗಳನ್ನು, ಕಣ್ಣೀರು ಕೋಡಿ ಹರಿಸುವ ಘಟನೆಗ ಳನ್ನು, ದೃಶ್ಯ ಕಾವ್ಯದಂತೆ ಕಣ್ಮುಂದೆ ಸೆಳೆದು ಆದ್ರ ಭಾವದಲ್ಲಿ ಮುಳುಗಿ ಸುವಂತೆ ಕವಿತೆಗಳನ್ನು ರಚಿಸಿದ್ದಾರೆ.
ಕವಿ ಮನಸ್ಸು ಅವರೊಬ್ಬರ ಪರವಾಗಿ ಚಿಂತಿಸದೆ, ತನ್ನವರೆಲ್ಲರ ಎದೆಯೊಳಗಿನ ನೋವಿನ ಕಿಡಿಯಾಗಿ ಸಿಡಿದು, ವಿಭಿನ್ನ ಕವಿತೆ ಗಳ ಬಸಿರಿಗೆ ಕಾರಣವಾಗಿ ಸಾಂತ್ವನ, ಹಾರೈಕೆ, ಸದಾಶಯ, ಹತಾಶೆ, ನಿರಾಶೆಯ ಶಿಶುಗಳು ಜನಿಸಿವೆ. ಇದರೊಟ್ಟಿಗೆ ಮಾನವ ಪ್ರೇಮದ ಬಿತ್ತನೆ ಮಾಡುವ ಆಶಯ ಇವರದಾಗಿದೆ.
ವ್ಯಂಗ್ಯವಾದ ಬರಹ, ಕಟುವಾದ ಪ್ರಶ್ನೆಗಳು, ವಿಡಂಬನ ಶೈಲಿಯಲ್ಲಿ ಸಮೀಕರಿಸಿದ ಕಾವ್ಯಗ ಳಲ್ಲಿ, ಅಸಹಾಯಕರ ಶೋಷಣೆ ದಬ್ಬಾಳಿಕೆ ದರ್ಪ ದವಲತ್ತುಗಳೆಂಬ ಕುದಿಯುವ ರಕ್ತದ ಕಮಟು ವಾಸನೆಯೆ ವಿರಾಜಮಾನವಾಗಿ ಕವಿತೆ ಗಳು ನ್ಯಾಯ ಕೇಳುತ್ತವೆ. ಇಷ್ಟು ದೀರ್ಘಕಾಲ ಕಳೆದರೂ ಸಿಗದ ನ್ಯಾಯಕ್ಕಾಗಿ ಇವರ ಮನದಲ್ಲಿ ಬಾಲ್ಯದಿಂದ ಹೆಪ್ಪುಗಟ್ಟಿದ್ದ ಅವಿತಿದ್ದ ಹಲವಾರು ಘಟನೆಗಳು, ನೋವುಗಳು ಈಗ ಗರಿಬಿಚ್ಚಿ ಹಾರಿದ್ದರ ಫಲವೇ ಈ ಗಾಂಧಿ ನೇಯ್ದಿಟ್ಟ ಬಟ್ಟೆಯ ಎಳೆಗಳಾಗಿವೆ.

ಇವರ ಕವಿತೆ ಹೆಣಿಗೆಯಲ್ಲಿ ಗದ್ಯಲಯ ಮೈದೋರಿದೆ. ಭಾಷಾಹಿಡಿತ ಪ್ರಯೋಗಶೀಲತೆ ದೃಷ್ಟಿಯಿಂದ ಸುಂದರವಾದ ರಚನೆಯಾಗಿವೆ. ಭಾವುಕತೆ ಮತ್ತು ಆಲೋಚನಾ ಪ್ರಜ್ಞೆಯನ್ನು ತೋರುವ ಇಲ್ಲಿಯ ಕವಿತೆಗಳು ಭೂತದಲ್ಲಿದ್ದ ಪರಿಸ್ಥಿತಿ, ಜೀವನ ಕ್ರಮ, ಸಾಮಾಜಿಕ ನಡವಳಿಕೆ ಗಳು, ವರ್ತಮಾನದಲ್ಲೂ ಏನೂ ಬದಲಾವಣೆ ಆಗದಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾ, ಭವಿಷ್ಯದ ಭರವಸೆಯ ಬಗ್ಗೆ ಆತಂಕ ಪಡುತ್ತಾರೆ. ಕವಿಯ ಹೊಣೆಗಾರಿಕೆ ಎಂದರೆ ವಾಸ್ತವ ಪ್ರಜ್ಞೆ ಯಿಂದ ಜೀವನವನ್ನು ಎದುರುಗೊಳ್ಳುವುದು. ಅಲ್ಲಿನ ಅನುಭವ ಗಳನ್ನು ಅವಲೋಕನ ಗಳನ್ನು ಕಾವ್ಯವಾಗಿಸಿ ವಿಭಿನ್ನ ನೆಲೆಗಳಲ್ಲಿ ಅವುಗಳನ್ನು ಚರ್ಚಿಸಲು ವೇದಿಕೆ ಕಲ್ಪಿಸುವು ದಾಗಿದೆ. ಇವರ ಕವಿತೆಗಳು ಈ ನಿಟ್ಟಿನಲ್ಲಿ ಸಶಕ್ತವಾಗಿ ಮೂಡಿ ಬಂದಿವೆ.
ಚಿಂತನೆಡೆಗೆ ಸಾಗುವ ಇವರ ಕವಿತೆಗಳಲ್ಲಿ ತನ್ನವರು ಸಾಗಿ ಬಂದ ಕರಾಳ ನೋವಿನ ಅನಾವರಣ ಮಾಡುತ್ತಲೇ ಸಾಮಾಜಿಕ ಬದುಕಿ ನಲ್ಲಿ ಮಾನವನು, ತಿಂದುಂಡ ಬವಣೆಗಳನ್ನು ಅಕ್ಷರ ರೂಪದಲ್ಲಿ ಕಾವ್ಯ ಶಿಲ್ಪವಾಗಿಸಿದ್ದಾರೆ.
ಪ್ರಜಾಪ್ರಭುತ್ವದ ಆಶಯಗಳನ್ನು ಬಿಂಬಿಸುವ ಜಾತ್ಯತೀತತೆ, ಸಮಾಜವಾದಿ ತತ್ವವನ್ನು ಬಿತ್ತುತ್ತ ಇಸಂಗಳ ನಿವಾರಣೆಯತ್ತ ಕವನಗಳು ತಿರುಗು ತ್ತವೆ. ಕವಿಯ ಮನದೊಳಗೆ ಕೊತ ಕೊತ ಕುದಿಯುವ ಹತಾಶೆ, ನಿರಾಸೆಯ ಬಿಂದುಗಳು ಹನಿ ಹನಿಯಾಗಿ ಸಿಡಿದು, ಹೊತ್ತಿಗೆಯ ತುಂಬಾ ಕವಿತೆಗಳಾಗಿ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುತ್ತಾ ರಾಡಿಯಂತಿದ್ದ ಮನಸ್ಸನ್ನು ಸ್ವಚ್ಛ ಸಲೀಲದಂತೆ ತಿಳಿಯಾಗಿಸುವಂತಹ ಇವರ ಬರಹದ ಕಲಾಗಾರಿಕೆ ಮೆಚ್ಚುವಂಥದ್ದು. ನಮಗೆ ಗಣರಾಜ್ಯ ದೊರೆತು ಇಷ್ಟು ದಶಕಗಳಾದರೂ
ಸಮ ಸಮಾಜದ ನಿರ್ಮಾಣ ಆಗಿರುವುದಕ್ಕೆ ಕವಿಯ ಮನದಲ್ಲಿ ನೋವು ಮೌನಮಡುವಾ ಗಿದೆ.
ಕವಿತೆಗಳನ್ನು ಓದುತ್ತಾ ಕುಳಿತರೆ ಎದೆ ಹೊಕ್ಕು ಎಂದು ಮರೆಯದ ಹಾಡಂತೆ ಮನದೊಳಗೆ ಸದಾ ಗುನುಗುತ್ತವೆ. ಅಂತಹ ಸಾಮರ್ಥ್ಯ ಈ ಕವಿತೆಗಳ ಭಾವಾಭಿವ್ಯಕ್ತಿಯಲ್ಲಿ ಗೋಚರಿಸು ತ್ತದೆ. ಇಲ್ಲಿರುವ ಕವಿತೆಗಳು ಸಶಕ್ತವಾದ ಮನ ಸೆಳೆವ ರೂಪಕಗಳನ್ನು ಹೊತ್ತು ತಂದಿವೆ. ಇದು ತಲುಪಿಸಬೇಕಾದ ವಿಷಯಕ್ಕೆ ಗಟ್ಟಿತನವನ್ನು ಒದಗಿಸುತ್ತದೆ.
ಓದುಗರೊಂದಿಗೆ ಮುಖಾಮುಖಿ ಸಂಧಾನ ನಡೆಸುವ ಕವಿತೆಗಳು ಹೊಸದೊಂದು ಚಿಂತನೆ ಯನ್ನು ಸೃಷ್ಟಿಸಿ ಆ ದಾರಿಯಲ್ಲಿ ತೊಡರುವ ಕಲ್ಲುಗಳನ್ನು ಪಕ್ಕಕ್ಕೆ ಸರಿಸಿ ಅಲ್ಲೊಂದು ಹೂವಿನ ಪಥವನ್ನು ನಾವೇ ನಿರ್ಮಿಸಿಕೊಳ್ಳ ಬೇಕೆಂದು ಕವಿ ಹೇಳುತ್ತಾರೆ. ಮುಂದೆ ಆಭರಣ ತೊಟ್ಟ ಮೇಲೆ ಮೊಗಕ್ಕೆ ಬರುವ ಕಳೆ ವರ್ಣನಾ ತೀತ. ಅಂತಹ ಹೊಳಪು ತುಂಬುವ ಪ್ರಾಬಲ್ಯ ಈ ಕವಿತೆಗಳ ಲ್ಲಿದೆ. ಅಲ್ಲಲ್ಲಿ ಲಯಬದ್ಧತೆಗೆ ಹೊಂದಿಸುವ ಕೆಲವು ಅನ್ಯಭಾಷೆಯ ಶಬ್ದ ಗಳು ಕವಿತೆಯ
ಮೆರುಗು ಹೆಚ್ಚಿಸಿವೆ.
ಇಲ್ಲಿ ಕವಿಯು ಪದ್ಯದ ಲಯಕ್ಕೆ ಅತಿಯಾಗಿ ಜೋತು ಬೀಳದೆ, ಪ್ರಾಸ ಹೆಣಿಗೆಯ ತ್ರಾಸವಿಲ್ಲ ದೆ, ಕಟ್ಟಿರುವ ಕವಿತೆಗಳಾದರೂ, ಓದುಗರಿಗೆ ಹೆಚ್ಚು ಅರ್ಥವಾಗಲು ಅಲ್ಲಿರುವ ಕವಿತೆಗಳು ಅನ್ಯಾಯದ ವಿರುದ್ಧದ ಪ್ರತಿಭಟನೆಯ ವ್ಯಾಖ್ಯಾನ ಬರೆದಿರುವುದು ಹೊಸ ಆಲೋಚ ನೆಯೆಡೆಗೆ ಕರೆದೊಯ್ಯುತ್ತವೆ. ಕಾವ್ಯದ ಚೌಕಟ್ಟು ಪರಿಮಿತವಾಗಿದ್ದರೂ, ಬಿಂಬಿಸುವ ಗೂಡಾರ್ಥ ಶಬ್ದಾರ್ಥಗಳು ಅಪರಿಮಿತ ವಾಗಿವೆ. ಈ ಕವಿತೆ ಗಳು ಹೆಚ್ಚಾಗಿ ಮಧ್ಯಮ ವರ್ಗದ ಬದುಕಿನ ಬವಣೆಗಳನ್ನು, ಚಿತ್ರ ಚಿತ್ರವಾಗಿ ತೆರೆದಿಡುತ್ತಾ ಅವುಗಳ ಬಗ್ಗೆ ಅನುಕಂಪ ತೋರದೆ ವ್ಯವಸ್ಥಿತ ಕಾರ್ಯ ಯೋಜನೆಗಾಗಿ ಪರಿತಪಿಸುತ್ತವೆ.
ವ್ಯವಸ್ಥೆಯ ಅಥವಾ ಸಮಾಜದ ಅಧಿಕಾರ ವರ್ಗದ ನಾಟಕ ದೃಶ್ಯಗಳು ಓದುಗರೆದೆಯನ್ನು ಝಲ್ಲೆನಿಸಿ, ಪ್ರಶ್ನೋತ್ತರದ ಮೂಲಕ ಮನೋ ದೌರ್ಭಲ್ಯವನ್ನು ಅಣಕಿಸುತ್ತವೆ. ಪ್ರತಿ ಕವಿತೆಯು ವಿಶೇಷವಾಗಿ ಒಳನೋಟಗಳನ್ನು ಗರ್ಭಿಕರಿಸಿ ಕೊಂಡು, ಆಳ ಅಗಲ ಹಿರಿದಾಗಿ ಅರ್ಥ ವಿಸ್ತಾರ ಗೊಳ್ಳುತ್ತಾ ಸಾಗುತ್ತವೆ. ಕವಿತೆಯ ವಸ್ತು ಒಂದು ಎನಿಸಿದರು ಆ ಕವಿತೆಗಳನ್ನು ವಿವಿಧ ಆಯಾಮ ಗಳಲ್ಲಿ ಕಾಣಬಹುದು. ಇಲ್ಲಿ ಕವಿಯು ತಾನು ವೈಯಕ್ತಿಕವಾಗಿ ಎದುರಿಸಿದ ತಲ್ಲಣಗಳನ್ನು, ಸಾಮಾಜಿಕವಾಗಿ ಗ್ರಹಿಸಿದ ಸಮುದಾಯದ ಸಂಕಟಗಳನ್ನು, ಬಲವಂತರ ಅತಿರೇಕದ ನಡಾ ವಳಿಗಳನ್ನು, ತಮ್ಮ ಕಾವ್ಯದಲ್ಲಿ ದಾಖಲಿಸು ವಲ್ಲಿ ಹೆಜ್ಜೆ ಇಟ್ಟು ಬೇರು ಬಿಟ್ಟ ಕೆಲವು ಅಮಾನುಷ ಕಟ್ಟಳೆಗಳನ್ನು ಅವು ಬದುಕಿನಲ್ಲಿ ಹಾಸು ಹೊಕ್ಕಾಗಿ ನೀಡಿದ ಖೇದದ ಪ್ರತಾಪಗಳನ್ನು ದರ್ಶನ ಮಾಡಿಸುತ್ತದೆ.

ಇಲ್ಲಿ ಕವಿಯು ತನ್ನ ಕವಿವಾಣಿಯಲ್ಲಿ ಬದುಕು ಹೆತ್ತ ಕವಿತೆಗಳ ಮೊದಲ ಸಂಭ್ರಮ ಎಂದು ಮಾತು ಆರಂಭಿಸಿದ್ದಾರೆ. ಇದು ಯಾರ ಸಂಭ್ರಮ? ಇದು ಅವರೊಬ್ಬರಿಗೆ ಎನ್ನುವುದಾ ದರೆ ಈ ಸಾಹಿತ್ಯದಿಂದ ಸಮಾಜಕ್ಕೆ ಆಗುವ ಲಾಭವೇನು? ಇದರ ಅರಿವು ಇರುವುದರಿಂದ ಲೇ ಕವಿ ಇಲ್ಲಿ ಅದನ್ನು ಸಾರ್ವತ್ರಿಕ ಸಂಭ್ರಮ ವಾಗಿಸಿದ್ದಾರೆ. ಮೊದಲ ಹೆರಿಗೆಯಲ್ಲಿ ಕವಿತೆಗಳು ವೈಯಕ್ತಿಕ ನೆಲೆಯನ್ನು ದಾಟಿ ಸಾರ್ವತ್ರಿಕ ನೆಲೆ ಯಲ್ಲಿ ಜನರ ನೋವಿಗೆ ಸ್ಪಂದಿಸುತ್ತಾ, ಪ್ರತಿಯೊ ಬ್ಬರ ಅಳಲಿಗೆ ನಗು ಬೆರೆಸುವ ಪ್ರಯತ್ನ ಮಾಡಿ ದ್ದಾರೆ. ಇವರ ಚೊಚ್ಚಲ ಕೃತಿಯಲ್ಲಿ ಇವರು ಕಾವ್ಯ ವನ್ನು ಅಗಾಧವಾಗಿ ಧ್ಯಾನಿಸಿ ಬರೆದಿದ್ದಾರೆ ಎಂಬ ಅನುಭವ ನೀಡುತ್ತದೆ. ಈ ಹೊತ್ತಿಗೆಗೆ ಬೆನ್ನುಡಿ ಬರೆದ ಖ್ಯಾತ ಲೇಖಕರಾದ “ಕೇಶವ ಮಳಗಿ” ಯವರು ಕವಿಯ ಬಗ್ಗೆ “ಅಪ್ಪಟ ಪ್ರತಿಭೆಯ ಹೊಸ ಕವಿಯೊಬ್ಬನನ್ನು ಹೇಗೆ ಬರಮಾಡಿ ಕೊಳ್ಳಬೇಕು, ಬಾಚಿ ತಬ್ಬುವ ಮೂಲಕ ಅನ್ನುವು ದಾದರೆ ರಾಯಸಾಹೇಬ್ ಎನ್ ದರ್ಗಾದವರನ್ನು ಅವರು ಉಸಿರುಗಟ್ಟು ವಂತೆ ತಬ್ಬಿ, ತಬ್ಬಿಬ್ಬುಗೊ ಳಿಸುತ್ತೇನೆ” ಎಂದಿರುವುದು ಕವಿಯ ಕಲಾತ್ಮಕ ಕಾವ್ಯ ಶಿಲ್ಪದ ರಚನೆಗೆ ಹಿಡಿದ ಕೈಗನ್ನಡಿಯಲ್ಲವೆ.

ಇವರ ಗಾಂಧಿ ನೈದಿಟ್ಟ ಬಟ್ಟೆಯನ್ನು ಬಿಚ್ಚಿದಾಗ ಓದುಗರನ್ನು ಮೊದಲು ಎದುರಾಗುವುದು “ಬಿಟ್ಟು ಹೋದವರ ಚಮರ ಗೀತೆ” ಕವಿತೆ.
“ನನ್ನವರು ಇನ್ನು ಜೀವಂತವಾಗಿದ್ದಾರೆ,
ಯಾರದೋ ಕಾಲಿನಲ್ಲಿ ಪಾದುಕೆಯಾಗಿ
ಭವ್ಯ ಬಂಗಲೆಯ ಗೋಡೆಯ ಮೇಲೆ ಆಟಿಕೆಯಾಗಿ
ಉತ್ಸವ ಹೊರಡುವ ದೇವಾಲಯದ ಮುಂಭಾಗದಲ್ಲಿರುವ ನಗಾರಿಯಾಗಿ”
ಈ ಸಾಲುಗಳು ಶೋಷಣೆಯ ತೀವ್ರತೆಯ ಪ್ರತೀಕವಾಗಿವೆ. ಇಲ್ಲಿ ಕವಿ ನೊಂದವರು, ಶೋಷಿತರು, ಅಸಹಾಯಕರು ಹಾಗೂ ದಲಿತರು ಎಲ್ಲರನ್ನು ನನ್ನವರು ಎಂಬ ಭಾವ ದಲ್ಲಿ ಅಪ್ಪಿ ಕೊಂಡು ಅವರನ್ನು ಸಂತೈಸುವ ಪರಿ ಸೊಗಸಾಗಿ ಮೂಡಿಬಂದಿದ್ದು, ಇವರಲ್ಲಿ ಶ್ರೀಮಂತರ ಕಾಲಡಿಯ ಪಾದುಕೆಯಾಗಿ ಮೇಲ್ವರ್ಗದವ ನಗಾರಿಯಾಗಿ, ಉಳ್ಳವರು ಬಳಸಿ ಬಿಸಾಕುವ ಆಟಿಕೆಯಾಗಿ, ಅನುಭವಿ ಸುವ ನೋವಿಗೆ ಮಿಡಿದ ಕವಿಯ ಅಂತಕರಣ ಬಹಳ ಮೆಚ್ಚು ವಂಥದ್ದು.ಇದು ಬಹಳ ಹಿಂದಿನಿಂದಲೂ ನಡೆದು ಕೊಂಡು ಬಂದಿರುವ ಅಸ್ಪ್ರಶ್ಯತೆಯ ಅನಾವರಣ ವಾಗಿದೆ. ಈ ಅನಿಷ್ಠ ತೊಲಗಿಸಲು ಕವಿಯ ಕಾವ್ಯ ಹೋರಾಡಿದೆ.

ಶೀರ್ಷಿಕೆ ಕವಿತೆ “ಗಾಂಧಿ ನೇಯ್ದಿಟ್ಟ ಬಟ್ಟೆ” ಸಾಲುಗಳು ಹೀಗಿವೆ.
“ಬಣ್ಣಗಳೀಗ ಜಾತಿಗಳಾಗಿ ಮಾರ್ಪಟ್ಟಿವೆ
ಹೊತ್ತು ಮುಳುಗುವ ಹೊತ್ತಿನಲ್ಲಿ
ನೆತ್ತಿ ಮೇಲೆ ಇಟ್ಟ ಕತ್ತಿಗೂ
ಒಂದು ಜಾತಿಯ ನಂಟಿದೆ”.
ಎಂದು ವಿಷಾದ ವ್ಯಕ್ತಪಡಿಸುತ್ತಾ ಬಣ್ಣಗಳೀಗ ಜಾತಿಯ ಕುರುಹುಗಳಾಗಿವೆ ಎಂದು ವಿಷಾದ ವ್ಯಕ್ತಪಡಿಸುತ್ತಾ ಈ ಬಣ್ಣಗಳು ಧರ್ಮ ಮತ್ತು ಜಾತಿಯ ಸೂಚಕಗಳಾಗಿ ಸಂಕುಚಿತ ಭಾವದಲ್ಲಿ ಮನವನ್ನು ಆವರಿಸುತ್ತವೆ ಎನ್ನುವ ಕವಿ ನೆತ್ತಿ ಮೇಲೆ ಕತ್ತಿ ಇಡಲು ಅಂದರೆ ಕೆಡುಕು ಮಾಡು ವಾಗಲೂ ಜಾತಿಯ ನೋಡುತ್ತಾರೆ. ಶತಮಾನ ಗಳ ಈ ಜಾಡ್ಯ ತೊಲಗಿಸಬೇಕೆಂಬ ಆಗ್ರಹ ಕವಿಯದಾಗಿದೆ. ವ್ಯತ್ಯಾಸ ಇಷ್ಟೇ ಬಣ್ಣಗಳು ಬದುಕಿಗೆ ರಂಗು ತುಂಬಿದರೆ, ಜಾತಿಯ ಬಣ್ಣ ಗಳು ಸಮಾಜ ಜೀವನವನ್ನು ಹಾಳುಗೆಡವುತ್ತವೆ. ಕಾಮನಬಿಲ್ಲಿನಲ್ಲಿ ಎಲ್ಲ ಬಣ್ಣಗಳು ಒಟ್ಟಿಗೆ ಕೂಡಿರುವುದರಿಂದಲೇ ಅದರ ಸೊಬಗು ರಾರಾಜಿಸುತ್ತದೆ. ಅಂದರಂತೆ ಮನುಷ್ಯನು ಎಲ್ಲರೊಡನೆ ಬೆರೆತು ಬದುಕಿದರೆ ರಾಷ್ಟ್ರ ಸುಭದ್ರವಾಗಿರುತ್ತದೆ ಎಂಬುದನ್ನು ಮನುಜರು ಅರಿಯಬೇಕಿದೆ. ಆ ಅರಿವು ಮೂಡಿಸುವಲ್ಲಿ ಕವಿಯ ಅಕ್ಷರ ಧ್ಯಾನ ಪ್ರಶಂಸಾರ್ಹ ಎನ್ನ ಬಹುದು.

“ಮಾನವೀಯತೆ ಈಗ
ಸುಡು ಬಿಸಿಲ ದಾರಿಯಲ್ಲಿ
ನರಳುತ್ತಾ ಬಿದ್ದಿದೆ
ಎತ್ತಿ ಮುದ್ದು ಮಾಡಿ
ಹೊತ್ತು ತಿರುಗಿ
ಖುಷಿಪಡುವವರು ಬೇಕಾಗಿದ್ದಾರೆ”
ಇದು ಅಕ್ಷರಶಃ ಸತ್ಯ ಸಂಗತಿ. ಸ್ವಾರ್ಥ, ಲಾಲಸೆ, ಅನ್ಯಾಯ, ಅನಾಚಾರ, ಹಿಂಸೆ, ಕ್ರೌರ್ಯ, ಭ್ರಷ್ಟತೆ, ಪ್ರಾಮಾಣಿಕತೆಗಳು ಹಣ ಐಶ್ವರ್ಯ ಅಧಿಕಾರಗಳ ದಾಸರಾಗಿ ಮನುಜ ಬದುಕಿಗೆ ಬೇಕಾಗುವ ಮಾನವೀಯ ಗುಣಗಳನ್ನು ಕಡೆಗಣಿಸಿ ನಡೆಯುವವರಿಗೆ ಇದನ್ನೆಲ್ಲಾ ಕಲಿಸುವ ಜೀವವೊಂದು ಬೇಕಾಗಿದೆ ಎಂದು ಕವಿ ಉಲ್ಲೇಖಿಸುತ್ತಾರೆ.ಇದು ನಮ್ಮಲ್ಲಿ ಮಾನ ಮೌಲ್ಯ ಗಳು ಕುಸಿಯುತ್ತಿರುವ ಸೂಚನೆ ನೀಡುತ್ತವೆ. ಜೊತೆಗೆ ಮತ್ತೇ ಬುದ್ದ ಬಸವ ಗಾಂಧಿಯಂತಹ ವರು ಜನಿಸಿ ಬರಬೇಕು ಇಲ್ಲವೆ ಇರುವವರು ಅವರ ದಾರಿಯಲ್ಲಿ ಸಾಗಬೇಕು ಎಂಬ ಆಶಯ ವನ್ನು ಕವಿತೆ ಪ್ರತಿಪಾದಿಸುತ್ತದೆ.
“ಕೆಂಡದಂತೆ ಉರಿಯುವ ಸೂರ್ಯನಿಗೂ
ಕಿರುಬೆರಳ ಉಗುರಿನಂತಿರುವ ಚಂದ್ರನಿಗೂ
ಜಾತಿಯ ಸ್ಟಿಕ್ಕರ್ ಅಂಟಿಸುವ
ದೊಡ್ಡ ಸ್ಥಿತಿಯ ಮನುಷ್ಯನಿಗೇನು ಗೊತ್ತು
ಪ್ರೇಮ ಮುಂದೊಂದು ದಿನ ಪ್ರೇಮ ಕೋಟಿನಲ್ಲಿ ಧಾವೆ ಹೂಡುವುದೆಂದು”
ಎನ್ನುವ ಕವಿತೆಯಲ್ಲಿ ತಾತ್ವಿಕವಾದ ಪವಿತ್ರ ವಾದ ಪ್ರೇಮವನ್ನ ಜಾತಿಯ ಲೇಬಲ್ ಗಳಿಂದ ಕಳಂಕಿತ ವಾಗಿಸುವ ಆತಂಕದ ಪ್ರಶ್ನೆಯನ್ನು ನಾವು ಕಾಣ ಬಹುದು.

“ಬಡತನದ ಮರುಗು
ತರುವುದಿಲ್ಲ ಮೆರುಗು
ಆಳಿದ್ದು ಸಾಕು
ಅರಸನಾಗ ಬೇಡ
ಬಡವರ ಬದುಕಾಗು“
ಇದು ಬಡವರ ಹಿತಾಸಕ್ತಿ ಹಾಗೂ ಅಧಿಕಾರ ಶಾಹಿ ಪದ್ಧತಿಯ ನಿಷಿದ್ಧತೆಯ ಅಗತ್ಯವನ್ನು ಸಾರುತ್ತದೆ. ಬಡವನು ಕಷ್ಟದಿಂದ ಮರುಗಿದರೆ ನೀನು ಅರಸನಾಗಿ ಆಳುವುದರಿಂದ ಏನು ಲಾಭ? ನೀನು ದರ್ಪ, ಸ್ವಾರ್ಥ ತ್ಯಜಿಸಿ ಬಡವರ ಬದುಕಿಗೆ ಆಸರೆ ಯಾಗಬೇಕೆಂಬ ಕಿವಿಮಾತು ಕವಿಯದಾಗಿದೆ. ಇಂತಹ ಜಾಗೃತಿ ಮೂಡಿಸುವ ಬರಹಗಳು ಸಮಾಜದಲ್ಲಿ ತುಸು ಮಾತ್ರವಾದ ರೂ ಬದಲಾವಣೆಯೆಡೆಗೆ ಎಡೆಮಾಡಿಕೊಡಲಿ ಎಂಬ ಹಂಬಲ ಎಲ್ಲರದಾಗಿದೆ.
“ಸತ್ಯ ಕಣ್ಣಿಂದ ಆಚೆ ಬಂದರೆ
ಬರಲಿ ಬಿಡು
ಅದಕ್ಕೂ ಬಣ್ಣ ಬಳಿದು
ಸುಳ್ಳು ಮಾಡೋಣ”
ಈ ಸಾಲುಗಳು ಇಂದಿನ ದಿನ ಮಾನವನ್ನ ಸುಳ್ಳು ಸಾಕ್ಷಿ ಹೇಳಿ ನಂಬಿಸುವ ಜನರ ಕಪಟತನವನ್ನು ಅಣಕಿಸುತ್ತವೆ. ಎಂತಹ ಕಟು ಸತ್ಯವನ್ನಾದರೂ ಸುಳ್ಳಿನ ಲೇಪನ ಹಚ್ಚಿ ನಂಬಿಸುವ ಮನುಷ್ಯನ ನೈತಿಕ ಮೌಲ್ಯಗಳ ಅಧ:ಪತನವನ್ನು ಕುರಿತು ಇಲ್ಲಿ ವಿಶ್ಲೇಷಿಸು ತ್ತಾರೆ. ಸತ್ಯವನ್ನು ಮರೆಮಾಚು ವಷ್ಟು ಸಾಮರ್ಥ್ಯ ಸುಳ್ಳಿಗಿದೆ. ಆದರೆ ಅದರ ಆಯಸ್ಸು ಕಡಿಮೆ. ಸತ್ಯ ಬೂದಿ ಮುಚ್ಚಿದ್ದರೂ
ಪುಟಿದೆದ್ದು ಪ್ರಜ್ವಲಿಸುವ ಜ್ಯೋತಿಯಂತೆ. ಇದು ತಡವಾಗಿಯಾದರೂ ಗೆದ್ದೆ ಗೆಲ್ಲುತ್ತದೆ ಎಂಬ ನಿಲುವು ಕವಿಯದಾಗಿದೆ.
“ಕಲ್ಲು ಬಂಡೆಗೆ ಚಿಮ್ಮಿದ ಹಸಿ ರಕ್ತದ
ವಾಸನೆಗೆ ಇರುವೆ ಸಾಲುಗಳೆ ಸಾಕ್ಷಿ
ಮೋಡಕ್ಕಿನ್ನು ಪುರಾವೆಗಳನ್ನು ಸಲ್ಲಿಸಬೇಡ
ಅದಕ್ಕೂ ತೇಪೆ ಹಾಕಿ ಹೆಜ್ಜೆ ಗುರುತು ಸಿಗದಂತೆ ತಿರುಗಿಸಲಾಗಿದೆ”
ಎನ್ನುವಲ್ಲಿ ಜನರು ತಮ್ಮ ಹುಳುಕು ಮುಚ್ಚಿ ಕೊಳ್ಳಲು ಏನೆಲ್ಲ ತಂತ್ರಗಳನ್ನು ಹೆಣೆದು ಬಚಾ ವಾಗುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಜೇಡರ ಬಲೆಯ ದಿಗ್ಬಂಧನ ಕವಿತೆ ರೂಪಿತಗೊಂಡಿದೆ.

“ಈ ದೇಶಕ್ಕೆ ಏನಿದ್ದರೇನೋ
ನೀನೇ ಎಲ್ಲವನ್ನು ಗಾಂಧಿ…?
ಎನ್ನುತ್ತಾ ಮುಂದೆ ಸಾಗುವ ಕವಿತೆಯಲ್ಲಿ
“ನೀನಿರುವ ಹಾಳೆಯ
ಚೂರೊಂದು ಸಾಕು
ಅದರಿಂದಲೇ ಇಲ್ಲೆಲ್ಲವೂ
ಬಲೆಯುಳ್ಳವಾಗಿವೆ”
ಇಂದು ಗಾಂಧಿ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಆದರ್ಶಗಳನ್ನು ಗೂಟಕ್ಕೆ ಕಟ್ಟಿ, ಕೇವಲ ಮಾತು, ಭಾಷಣ, ಆಚರಣೆಗಳಲ್ಲಿ, ಮಾತ್ರ ಗಾಂಧಿಯನ್ನು ನೋಡುತ್ತೇವೆ ಎಂಬ ವ್ಯಂಗ್ಯದ ಜೊತೆಗೆ ನೀನಿರುವ ಹಾಳೆಯ ಚೂರು ಅಂದರೆ ಗಾಂಧಿ ನೋಟು ಸಾಕು ಈ ಜಗತ್ತಿನಲ್ಲಿ ಎಲ್ಲವೂ ಸಿಗುತ್ತದೆ ಎಂದು ವಿಡಂಬನೆ ಮಾಡತ್ತಾ ಗಾಂಧಿ ವಿಚಾರಗಳು ಮರೆಯಾಗು ತ್ತಿರುವುದಾಗಿ ಟೀಕಿಸುತ್ತಾರೆ.
“ಅವಳು ನಕ್ಷತ್ರ ವಾಗುವ ಅರ್ಹತೆಯುಳ್ಳವಳು
ನಕ್ಷತ್ರವಾಗದೆ ಕಲ್ಲು ಬಂಡೆಯಾದಳು
ಕಲ್ಲು ಬಂಡೆಯಾಗಿರುವುದಕ್ಕೇನೋ
ಎಲ್ಲರು ಮೆಟ್ಟುತ್ತಾ ಮುಟ್ಟುತ್ತ
ಮುಂದೆ ನಡೆದರು ಇವಳು ಇಲ್ಲಿಯೇ ಕಲ್ಲಾಗಿ ಉಳಿದಳು”
ಬೀದಿಗೆ ಬಿದ್ದವಳು ಕವಿತೆಯ ಈ ಸಾಲುಗಳು ಹೆಣ್ಣೊಬ್ಬಳ ಅಸಹಾಯಕ ಹಾಗೂ ಮಡು- ಗಟ್ಟಿದ ದುಃಖದ ನಿರ್ಭಾವುಕ ಮನೋಗತದ ರೋದನೆ, ವೇದನೆಯ ಪರಿಯನ್ನು ಹಾಗೂ ಅವೆಲ್ಲವನ್ನು ಹಾಸಿ ಹೊದ್ದರೂ ಅವಳಲ್ಲಿ ಅಡಗಿ ರುವ ತಾಳ್ಮೆ, ಸಹನೆಯ ಗುಣವನ್ನು ಹಾಗೂ ಸಾಮಾಜಿಕ ಪೆಟ್ಟುಗಳನ್ನು ತಿಂದು ಜಡ್ಡುಗಟ್ಟಿ ರುವ ಜಡತ್ವದ ಭಾವನೆಯನ್ನು ಎಲ್ಲರೂ ಮೆಟ್ಟುತ್ತಾ ನಡೆದರು, ಇವಳು ಕಲ್ಲಾಗಿ ಉಳಿದಳು ರೂಪಕದಲ್ಲಿ ಚಿತ್ರಿಸಿದ್ದಾರೆ.

“ಇನ್ನೆಷ್ಟು ಹೊಸ ಹಾಳೆಯಲ್ಲಿ
ಅದೆಷ್ಟು ಗೆರೆಗಳು
ನಿಬ್ಬರಗಾಗಿ ಕುಳಿತುಕೊಳ್ಳುವವೋ ? ಕ್ಯಾಲೆಂಡರ್ ಹಾಳೆ ಹೊಸದಿರಬಹುದು
ಅದರಲ್ಲಿ ನಮೂದಿಸಿದ ಅಲಂಕಾರದಂತೆ ಕಾಣುವ
ಎಲ್ಲ ದಾಖಲೆಗಳು ಅದೇ ನೋವಿನ
ಅಳತೆ ಸಾರುವ ಹಳೇ ಪದ್ಯಗಳು”
ಎಂದು ಇಷ್ಟು ಸೂಕ್ಷ್ಮ ಭಾವದಲ್ಲಿ ಹೆಣ್ಣಿನ ಮುಟ್ಟಿನ ಸಮಯದ ಭಾವ ತೀವ್ರತೆಯನ್ನು ಹೊರಹಾಕುವ ಮೂಲಕ ಸ್ತ್ರೀ ಸಂವೇದನೆಗೆ ತುಡಿಯುವ ಮನೋಗತ ಅವರಿಗೆ ಇದೆ ಎಂದು ಈ ಕವನದ ಮೂಲಕ ಸಾರಿದ್ದಾರೆ.

“ಮುಟ್ಟಬೇಡ ಮುಟ್ಟಬೇಡ
ನನ್ನ ಮುಟ್ಟಾಗಿರುವೆ
ಹೌದು ಮುಟ್ಟಬೇಡ ನಾನೀಗ
ಹೊರಗುಳಿದವಳು”
ಇವರ ಬಹುತೇಕ ಕವಿತೆಗಳು ಬವಣೆಗಳ ಬಾಣಲೆ ಯಲ್ಲಿ ಬೆಂದು ಸಾಂತ್ವನದಲ್ಲಿ ಹದ ಗೊಂಡು, ಸಮಾಜದ ಕಣ್ಣು ತೆರೆಸುವ ನಿಟ್ಟಿನಲ್ಲಿ ಸುಂದರವಾಗಿ ಮೂಡಿಬಂದಿದ್ದು ಕವಿಗೆ ಸಾಹಿತ್ಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ವಿದೆ ಎಂದು ಸಾರಿ ಸಾರಿ ಹೇಳುತ್ತವೆ. ಮೊದಲ ಕವನ ಸಂಕಲನವೇ ಸಾಹಿತ್ಯ ಕ್ಷೇತ್ರದಲ್ಲಿ ಇವರಿಗೊಂದು ಉತ್ತಮ ನೆಲೆ ಒದಗಿಸಿಕೊ ಟ್ಟಿದೆ ಎಂದರೆ ಉತ್ಪ್ರೇಕ್ಷೆಯೆನಿಸದು. ಉದಯೋನ್ಮುಖ ಕವಿ ರಾಯಸಾಬ ಎನ್. ದರ್ಗಾದವರಿಗೆ ಶುಭವಾಗಲಿ.
ಇದು ಮುಟ್ಟಾದ ಹೆಣ್ಣಿನ ಮನದ ಅರ್ಥನಾದ ವನ್ನು ಸ್ಪಷ್ಟಪಡಿಸುತ್ತದೆ ಮುಟ್ಟಿನ ಹೆಸರಲ್ಲಿ ಅವಳಿಗೆ ಆಗುವ ಮನೋವೇದನೆ, ಅಸ್ಪೃಶ್ಯತಾ ಭಾವವನ್ನು ಎಳೆ ಎಳೆಯಾಗಿ ತೆರೆದಿಡುವ ಮೂಲಕ ಜನರ ಮೌಢ್ಯಕ್ಕೆ ವೈಜ್ಞಾನಿಕ ಚಿಂತನೆ ಯ ಚಾಟಿ ಬೀಸಿದ್ದಾರೆ.
“ಈ ಸಲವೂ ಬಂದವನು ನನ್ನವನಲ್ಲ
ಪ್ರತಿ ಸಲವೂ ಹೀಗೆ
ನನ್ನವನಾಗಿದ್ದರೆ ಬೆಳ್ಳಿ ಬೆಳಕು ಹೊತ್ತು
ಹೆಸರಿಡಿದು ಕೂಗುತ್ತಾ
ಮನೆಯೊಳಗೆ ಬರಲು ಅನುಮತಿಯಾದರು ಕೇಳುತ್ತಿದ್ದ”
ಇದು ವೇಶ್ಯೆಯೊಬ್ಬಳ ದುಃಖದ ಮಡುವಿನಲ್ಲಿ ಅದ್ದಿ ತೆಗೆದ ಬೆಂಕಿಯ ಉಂಡೆಯಂತಹ ಸಾಲು ಗಳು. ನಮ್ಮ ಸಮಾಜದ ಕರಾಳ ಮನಸ್ಸಿನ ವಿರಾಟ್ ದರ್ಶನವನ್ನು ಮಾಡಿಸುವ ಹೆಣ್ಣಿನ ಸ್ವಗತವಾಗಿದ್ದು ಅವಳಿಗೂ ಒಂದು ಮನಸ್ಸಿದೆ ಬಂದವರೆಲ್ಲ ಅವಳ ಕಾಯದ ಮೇಲೆ ಪ್ರಭುತ್ವ ಸಾಧಿಸಿದರೆ ಹೊರತು ಅವಳ ಮನಸ್ಸು ಸದಾ ಪರಿಶುದ್ಧ ಎಂದು ಪ್ರತಿಪಾದಿಸುತ್ತಾರೆ.

“ನೀವು ಮೆಟ್ಟಿ ನಡೆಯುವ ದಾರಿಯಲ್ಲಿ
ಹೆಜ್ಜೆ ಗುರುತುಗಳು
ಬಿಕ್ಕಿ ಬಿಕ್ಕಿ ಅಳುತ್ತಿದ್ದವು
ಬೆನ್ನು ಬಿದ್ದ ನೆರಳು
ನರಳುತ್ತಾ ನಡೆಯುತ್ತಿದೆ”
ಎನ್ನುವ ಸಾಲುಗಳಲ್ಲಿ ಮನುಜನ ಜೀವನ ಯಾನದಲ್ಲಿ ಜೊತೆಯಾದ ನೋವು ಸಂಕಟ ಗಳು ಕ್ರೌರ್ಯ ಹಿಂಸೆ ವರ್ತಮಾನದಲ್ಲೂ ಅಣಕಿಸುತ್ತಿ ರುವುದನ್ನು ಇಲ್ಲಿ ನೆನಪು ಮಾಡುತ್ತದೆ.
“ಅವಾಗಲೂ ನಿಮ್ಮನ್ನೇ ಹೊಗಳಿದ್ದು ನೀವು ಹುಟ್ಟಿಸಿದ ಭಯದಿಂದಲೇ ಹೊರತು
ಯಾವ ಪ್ರೇಮವು ಅಚ್ಚಿನಂತೆ
ನಮ್ಮಲ್ಲಿ ಉಳಿಯುವುದೂ
ಎನ್ನುವ ಸಾಲುಗಳು ಪ್ರೀತಿಯಿಂದ ಪಡೆಯ ಬೇಕಾದದ್ದನ್ನು ಬಾಯಿಗೆ ಬಂದೂಕು ಹಿಡಿದು ಹೆದರಿಸಿಕೊಳ್ಳುವ ಕುರಿತು ಆಕ್ಷೇಪ ವ್ಯಕ್ತಪಡಿ ಸುತ್ತದೆ.
“ಮಲಗಿರುವ ಎಲ್ಲರದೂ
ಒಂದೇ ಅಳತೆಯ
ಒಂದೇ ಆಳದ
ಮಹಡಿ ಇಲ್ಲದ ಸೂರು
ತಲೆಯ ಮೇಲೆ ಅದೇ
ಮೊದಲಿದ್ದ ಹಳೆ ಅಡ್ರೆಸ್”
ಕವಿತೆಯ ಈ ಸಾಲುಗಳು ಮನುಜನಿಗೆ ಜೀವನ ವೆಂಬ ಜಾತ್ರೆ ಮುಗಿಸಿ ಕೊನೆಗೆ ಎಲ್ಲರೂ ಸೇರುವ ತಾಣ ಕುರಿತು ಎಚ್ಚರಿಸು ತ್ತವೆ. ಕವಿತೆಯ ಈ ಸಾಲುಗಳು ಮನುಜನಿಗೆ ಜೀವನವೆಂಬ ಜಾತ್ರೆ ಮುಗಿಸಿ ಕೊನೆಗೆ ಎಲ್ಲರೂ ಸೇರುವ ತಾಣ ಕುರಿತು ಎಚ್ಚರಿಸುತ್ತವೆ. ಕೊನೆಗೆ ತಿನ್ನಲು ತುತ್ತು ಸಿಗದೆ ಬರಿ ನೀರು ಕುಡಿದು ಮಲಗಿದವನು ಕೂಡ ಸೇರುವುದು ಅದೇ ಆರಡಿ ಮೂರು ಹಿಡಿ ಜಾಗದಲ್ಲಿ ಎಂಬ ಅರಿವನ್ನು ಕವಿತೆ ಹೊತ್ತು ತಂದಿದೆ.
“ನನ್ನವರ ಮನೆಗಳು ಎಂದಿಗೂ ಮನೆಗಳಾಗಿರಲಿಲ್ಲ
ಹೂತ ಶವಗಳ ದಿಬ್ಬಣಗಳಂತಿದ್ದವು”
ಎನ್ನುವ ಕವಿ ಬಿಟ್ಟು ಹೋದವರ ಚಮರ ಗೀತೆ ಕವನದಲ್ಲಿ ಬಡತನ ಹಾಗೂ ಉಳ್ಳವರ ಅಟ್ಟಹಾಸವನ್ನು ವಿಶ್ಲೇಷಿಸಿದ್ದಾರೆ.

ಪಟ್ಟಣಕ್ಕೆ ಬುದ್ಧ ಬರಬೇಕಿತ್ತು ಎನ್ನುವ ಕವಿತೆ ಪ್ರಸಕ್ತ ದಿನಮಾನದಲ್ಲಿ ಬುದ್ಧ ಬೆಳದಿಂಗಳ ಅನಿವಾರ್ಯತೆಯನ್ನು ಪ್ರತಿಪಾದಿಸುತ್ತದೆ.
ರೀಚಾರ್ಜ್ ಖಾಲಿಯಾದ ದಿನ ಮನುಷ್ಯ ಮೃಗದಂತೆ ವರ್ತಿಸುವ ಪರಿಯನ್ನ ಈ ಕವಿತೆ ಹೊತ್ತು ತಂದಿದೆ ನಗ್ನ ಸತ್ಯ ಕವಿತೆ ನಮಗೆ ಸ್ವಾಸ್ಥ್ಯ ಸಮಾಜ ನಿರ್ಮಾಣದ ಆಶಯ ಬಿಂಬಿಸುತ್ತದೆ.

ಗಾಂಧಿ ನೇಯ್ದಿಟ್ಟ ಬಟ್ಟೆ ಹಲವಾರು ನೊಂದ ಜೀವಿಗಳ ನೋವಿನೆಳೆಯೊಂದಿಗೆ ತಯಾರಾಗಿ
ಆ ನೋವನ್ನು ನಲಿವಿನ ಸಂಭ್ರಮವಾಗಿಸಿ ಸುಖ ಸಮಾಜವನ್ನು ಸೃಷ್ಟಿಸುವ ಮಹದಾಸೆ ಹೊಂದಿದ್ದು ಇವರ ಕನಸುಗಳಿಗೆ ರೆಕ್ಕೆಮೂಡಲಿ ಹತಾಶೆಯ ಕಂಗಳಲಿ ಭರವಸೆಯ ಬೆಳಕು ಗೋಚರಿಸಲಿ ಎಂದು ಹಾರೈಸುತ್ತಾ ರಾಯಸಾಬ್ ಎನ್. ದರ್ಗಾದವರು ಕವನಗಳ ನ್ನು ರಚಿಸುವಾಗ ಒಂದಷ್ಟು ಲಯ ಬದ್ದತೆ ಯೆಡೆಗೆ ಗಮನ ಹರಿಸಿ ಪದ್ಯದ ಸ್ವರೂಪ ನೀಡಿದರೆ ಅಲ್ಲಲ್ಲಿ ವಾಚ್ಯವೆನಿಸುವ ಕೆಲವು ಕವನಗಳು ಓದುಗರಿಗೆ ಮತ್ತಷ್ಟು ಆಪ್ತವಾಗುತ್ತವೆ ಎಂಬ ಸಲಹೆಯೊಂದಿಗೆ ಅವರ ಸಾಹಿತ್ಯ ಕೃಷಿಗೆ ಶುಭಕೋರುತ್ತೇನೆ.
✍️ ಅನುಸೂಯ ಯತೀಶ್
ಮಾಗಡಿ, ಬೆಂಗಳೂರು