ಹೀಗೊಮ್ಮೆಅಂದುಕೊಳ್ಳುತ್ತೇನೆ..,
ಈಚೆಗೆ ಹಾಸ್ಯೋತ್ಸವಗಳ ಕೇಕೆ ಇದೆ ..
ನಗೆ ಹಬ್ಬಗಳಿವೆ….
ಆಗೆಲ್ಲ…ಬೇರೆಯೇ..ಇತ್ತು..
ಮೆಲುಕು ಹಾಕುತ್ತೇನೆ..,
“ಹೆಣ್ಣು ನಗಬಾರದು ಗಂಡು ಅಳಬಾರದು”
ನಕ್ಕಲ್ಲವೆ ದ್ರೌಪದಿ ಕೆಡುಕನ್ನು ಎಳೆದುಕೊಂಡದ್ದು
ಕೌರವೇಂದ್ರನ ಹಗೆಯಾಗಿ ಮಹಾಭಾರತ ಕಥೆ ಆದದ್ದು..
ಹದಿನೆಂಟು ದಿನಗಳ ರೌದ್ರ ಭೀಕರ ರಣರಂಗ
ಪರ್ವಗಳಾಗಿ ಕಥೆಯ ಹೂರಣವಾಗಿದ್ದು..
ರಕ್ತ ರಾತ್ರಿಗಳಾಗಿ ಜನಮಾನಸದಲಿ ಹಸಿಗೊಂಡದ್ದು…!!
ಸಿಗ್ಗಿಲ್ಲದ ನಗೆಗೆ ಎಗ್ಗಿಲ್ಲದ ಉಪದೇಶ
ಆಗ..ಹಿರಿಯರದು..!!
“ಅದೇನು ನಗೆ.. ! ನಗುತ್ತಾರಾ ಹಾಗೆ..!
ಗಂಡುಬೀರಿ ಅಂದಾರು..!”
ಅಜ್ಜಮ್ಮನ ಅಂಬೋಣವಾಯ್ತು..
ಆಗಾಗ..!!
ನಗುವೆಂಬುದು ನನಗಾಗ ಬಂಧನ.
ನಗೆಗೆ ಬಗೆಬಗೆಯ ವರ್ಣಗಳು
ನಗೆಗೆ ಲಿಂಗ ಭೇದಗಳು
ನಗು-ಅಳು ಬೇಲಿಯಾದದ್ದು…
ಭಾವಗಳು ತಳವೂರಿ ಕುಳಿತದ್ದು
ಇನ್ನೆಂದೂ ಮೇಲೇಳದಂತೆ..
ಮಡುವಿನಲ್ಲಿ ಸೆಳೆದು ಬೇರೂರಿದ್ದು..!
ಅದಕ್ಕೆಂದೇ…ಇರಬೇಕು..,
ನಗುವೆಂಬುದು ಬಾಗಿಲ ಒಳಗೆ ಅವಿತುಹೋಯ್ತು..
ಗಂಟಲೊಳಗೆ ಹೂತುಹೋಯ್ತು.
ನಾಲ್ಕು ಗೋಡೆಯೊಳಗೆ..
ಸ್ನಾನದ ಕೋಣೆಯೊಳಗೆ..
ನಕ್ಕದ್ದು..ಸದ್ದು ಕೇಳದೆ ಇದ್ದದ್ದು..
ಅವಳಿಗೊಂದೇ ಅದು ಗೊತ್ತಾದದ್ದು…!!
ನೀರೊಳಗಿನ ವೀಣೆಯ ನಾದವಾದುದು…
ಅದೆಲ್ಲ ಹಳೆಯ ಮಾತು…!!
ಕುಲು ಕುಲು ಜುಳು ಜುಳು,ಹ.ಹ.
ಸಾಂಕೇತಿಕ ದನಿಗಳು ಗಿರಕಿ ಹೊಡೆದವು…
ಮುದುಡಿ ಕುಳಿತವು..ಅಲ್ಲೇ…!
ಚಾರದೀವಾರಿನೊಳಗಿನದು..
ಹುಚ್ಚುನಗೆಯಾಗಿ
ಪೆಚ್ಚುನಗೆಯಾಗಿ..
ಕಣ್ಣೀರು ಒತ್ತರಿಸಿತಲ್ಲ..
ಒಮ್ಮೊಮ್ಮೆ..ಅದರೊಂದಿಗೆ..!!
ಮನತಣಿದಾಗ ಮೆಚ್ಚುನಗೆ
ಭಯವಿಲ್ಲದಿದ್ದಾಗ ಬಿಚ್ಚುನಗೆ
ಶೂನ್ಯ ಆವರಿಸಿದಾಗ ಖಾಲಿನಗೆ..
ಸುಖಾ ಸುಮ್ಮನೆ ಹುಸಿನಗೆ ಚೆಲ್ಲುನಗೆ
ನಕ್ಕವು..ಒಂದಕ್ಕೊಂದು ಕಂಡು..!!
ಕೆಲವರೊಂದಿಗೆ….,
ಸರಸನಗೆ, ಮುಗುಳ್ನಗೆ, ಬಿಸುನಗೆ,
ಮೆಲುನಗೆ..ನಸುನಗೆ..
ಬಂಧದ ಕೊಂಡಿ ಜೋಡಿಸಿಕೊಂಡವಲ್ಲ ಹಾಗೆ..!
ಹಲವರೊಂದಿಗೆ…,
ಕೊಂಕುನಗೆ, ಬಿಂಕನಗೆ, ಚುಚ್ಚುನಗೆ, ಕೆಚ್ಚುನಗೆ
ಒರಟು ನಗೆ ..
ಅನುಬಂಧದ ಕೊಂಡಿ ಕಳಚಿಕೊಂಡವಲ್ಲ..ಹೀಗೆ..!
ನಗುವ ರಸಪಾಕದೊಳು ಎಷ್ಟು ಪಾಲಿತ್ತೋ ಅಷ್ಟೇ ಅಲ್ಲವೇ ಸಿಕ್ಕಿದ್ದು..ದಕ್ಕಿದ್ದು..!
ಸುಖಸಾಗರದಿ ಅವರವರ ಬೊಗಸೆ ಇದ್ದಷ್ಟೇ..ಜಲ..!
ಕೂಸುಗಳು ಕೂಸಿನಂಥವರು
ಮುಗ್ಧ ನಗೆಯಲಿ ಮಿಂದರು..
ವಿಡಂಬನೆ, ಕ್ರೂರತೆ, ಅಟ್ಟಹಾಸದ ಗಹಗಹಿಸುವಿಕೆ ಧಾಂಡಿಗರ ಪಾಲಾಯ್ತು..!
ನಗುವು ಹೂವರಳಿದಂತೆ
ಕಂದೀಲ ಕದಿರಂತೆ..
ಚಂದ್ರಾಮ ನಕ್ಕಾಗಲ್ಲವೆ.. ಬೆಳದಿಂಗಳು..
ಎಂದೆಲ್ಲ..ಬಣ್ಣನೆ..ಇತ್ತಲ್ಲ..!
ಹಾಗಾದಲ್ಲಿ..,
ಚಕೋರಗಳು ನಗುತ್ತಿದ್ದವೆ..?!
ಖಗ ಮಿಗಗಳು ನಗುತ್ತವೆಯೆ…?!
ನಗುವುದು ಸ್ವಧರ್ಮ
ನಗಿಸುವುದು ಪರಧರ್ಮ
ಅಂದವರು ..
ನಕ್ಕು ನಗಿಸುತ್ತ ಮಣ್ಣಾಗಿ
ಹೋದವರು…
ಅಳುತ್ತಲೇ ನಕ್ಕು
ನಗುತ್ತಲೇ ಅತ್ತು
ನಾಣ್ಯದ ಎರಡು ಮುಖ
ಮಾಡಿದವರು….
ಏನಾದರೂ
ಏನಾದರೊಂದಾದರು.
ಅತಳ ವಿತಳ ಸುತಳ ರಸಾತಳ ತಳಾತಳ, ಮಹಾತಳ,ಪಾತಾಳ ಏಳು ಲೋಕದಲಿ..
ಸಮಸ್ತ ಚರಾಚರಗಳಲಿ..,
ಎಂಬತ್ನಾಲ್ಕು ಲಕ್ಷ ಜೀವಕೋಟಿ ರಾಶಿಯಲಿ..,
ನಗುವೆಂಬುದು ಹೇಗಿರಬಹುದು..?!
ನಗೆ ವಿಶ್ವವ್ಯಾಪಕವಾಗಿ…
ಶಬ್ದಗಳು ಮಾರ್ದನಿಸಿರಬಹುದಲ್ಲ..!
ಯಾರಾದರೂ ಗಮನಿಸುತ್ತಾರೆಂದು..
ನಿಗಾವಹಿಸುತ್ತಾರೆಂದು.
ನಿರ್ವಹಿಸುವುದೇ ಆಯ್ತು..!
ನಾವು..ನಗದೇ…ಆಗ..!!
ಬಾಯ್ತುಂಬಾ ನಗಬೇಕಿತ್ತು
ಅಂದಂದಿನದು ಅಂದಂದೇ ಆಗಬೇಕಿತ್ತು…!!
ಈಗೀಗ ಅನಿಸುತ್ತಿದೆ …,
ಸಾವು ಆವೀರ್ಭವಿಸುವಾಗಲೂ ನಕ್ಕುಬಿಡಬೇಕು
ಸುತ್ತ ಇದ್ದವರೂ ನಕ್ಕುಬಿಡಲಿ
ಸಮಾರಾಧನೆ ಸಮಯದಲೂ
ತರ್ಪಣ ಕೊಡುವಾಗಲೂ…!
ಭಾಷ್ಪಾಂಜಲಿ ಆನಂದವಾಗಿಬಿಡಲಿ
ಕವಿ ಮಿತ್ರರು..ಹಿತೈಷಿಗಳು ಸಹೃದಯರೆಲ್ಲ
ಸೇರಿದ
ಶ್ರದ್ಧಾಂಜಲಿ ಸಭೆಯಲಿ..
ನಗುತ್ತ ಸಾವ ಆಲಂಗಿಸಿದವಳೆಂದೂ
ಸುದ್ದಿಯಾಗಿಬಿಡಲಿ..
ವಿಶೇಷವಾಗಿ…,
ಅವನೂ…,
ಶ್ರದ್ಧಾಂಜಲಿ ಸಭೆಯಲಿದ್ದು
ನಗುವ ಹೂವೊಂದನು ನನ್ನ ಚಿತ್ತ ಚಿತ್ರಕೆ
ಮುಡಿಸಿಬಿಡಲಿ.!!

✍️ಅನಸೂಯ ಜಹಗೀರದಾರ.
ಕೊಪ್ಪಳ
ಧನ್ಯವಾದಗಳು.
LikeLike