ಶೋಧವಿಲ್ಲದ ಹಾಡು
ಆರ್ಭಟಿಸುತ್ತಿದೆ
ಹುಟ್ಟಿ ಸಾಯುವ ಅಕ್ಷರ
ನಾದವಾಗದೇ ಅರಚುತ್ತಿದೆ
ಕಲೆಯೊಳಗೆ ಅಕ್ಷರವೇ
ಅಕ್ಷರ ಕಲೆಯನ್ನೇ ನುಂಗುವ ಬಗೆಯೇ
ಮೂರ್ಖನ ಪ್ರೆಶ್ನೆ

ನೆಲದ ಕವಿಯ ಹಾಡಿನ ಬೇರು ಕಿತ್ತು
ಚಪ್ಪಡಿ ಎಳೆದು
ಮೇಲೊಂದು ಕಿರೀಟವಿಡಬಹುದು
ಕಲ್ಲಿನಡಿ ಹುಲ್ಲನ್ನು
ಅದುಮಿಟ್ಟರೆ
ಚಿಗುರಿಗೆ ನಗುವುದು ಗೊತ್ತಿಲ್ಲವೇ
ಕವಿ ಮರಣ
ಕಾವ್ಯ ಜನನ ಆಗುತ್ತಿದೆಯೇ ಗೊತ್ತಿಲ್ಲ
ಮೂರ್ಖನ ಚಿಂತನೆ

ಎರಚಿಡೆದೆ ಬೆಳೆಯಲು
ಅಕ್ಷರ ವಿಷ ಬೀಜವಲ್ಲ
ನೋವುಂಡು ನಗುವ ಭಾವ ಬೀಜ
ಚಿಪ್ಪಿನಿಂದ ಕಿತ್ತು ತಂದ
ಮುತ್ತಿನ ಮಾಲೆಗೆ ಬೇಡಿಕೆ ಹೆಚ್ಚು
ಜಗವ ಪೋಣಿಸುವ ಸೂಜಿ
ಭುವಿಯ ಹೊಲೆಯುವ ದಾರವಿಲ್ಲದೇ
ಯಾವುದಕ್ಕೂ ಬಾಳುವೆಯಿಲ್ಲ
ಮೂರ್ಖನಿಗೆ ಗೊತ್ತಿಲ್ಲ

ಸತ್ಯಾಕ್ಷರ ಶುದ್ಧ
ಸುಳ್ಳೆಲ್ಲಾ ಅಶುದ್ಧ
ಕಾವ್ಯ ಭಾಷೆಯ ಮೌನ
ಮೂರ್ಖರಿಗೆ ಗೊತ್ತಿಲ್ಲ
ನೆಲಜಗದ ಕಾವ್ಯ
ಅನಾದಿ ಕಾಲದಿಂದ ಬಿತ್ತಲಾಗುತ್ತಿದೆ
ಮುನಿಸು ಕನಸಿನ ನಡುವೆ
ಮಣ್ಣು ಮಾತಾಡಿಯೇ ತೀರುತ್ತದೆ
ಮೂರ್ಖನ ಅನಿಸಿಕೆ

ಚಿನ್ನದ ಪೆನ್ನು
ಕಬ್ಬಿಣದ ಪೆನ್ನು
ಅನ್ನಾಕ್ಷರವನ್ನು ಹುಟ್ಟಿಸುವುದಿಲ್ಲ
ನಾಚಿಕೆಗೇಡಿ ಕವಿಗಳು
ಆಸನದಲ್ಲಿದ್ದಾರೆ
ನಿಂತ ನೆಲ ಮರೆತು ಆಳುವವನಿಗೆ
ಬಿತ್ತಿ ಬೆಳೆವುದು ತಿಳಿದಿಲ್ಲ
ನವಕವಿಗಳೇ
ನೆಲದ ಕವಿಗಳೇ ಎಚ್ಚರಿಕೆ
ಬೆಲೆ ಬಾಳುವ ಪೆನ್ನಿನ
ಕನಸು ಕಾಣಬೇಡಿ
ಅಂತರಂಗದ ಭಾವಕ್ಕೆ
ಅಕ್ಷರ ಪೆನ್ನು ಹಾಳೆಯ ಹಂಗಿಲ್ಲ
ಮೂರ್ಖನ ಮಾತು

✍️ಡಾ.‌ಬೇಲೂರು ರಘುನಂದನ
ಬೆಂಗಳೂರು