(ಕನಕದಾಸರ ರಚನೆಗಳನ್ನು ಆಧರಿಸಿ ಬರೆದ ಕವನ)

ದಾಸದಾಸರ ಮನೆಯ ದಾಸಿಯರ ಮಗ ನಾನು
ದಾಸನಾಗಬೇಕು ಸದಾಶಿವನ ದಾಸನಾಗಬೇಕು ಆಶಯದಿ
ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂಬ ಸಾಂತ್ವನದಿ
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಎಂದವರು ಇವರು

ಮೆರೆಯದಿರು ಮೆರೆಯದಿರು ಎಲೆ ಮಾನವ ಎಚ್ಚರಿಕೆ
ನಮಿಸುತಲಿ ಮಂಧರ ಪಾವನ ಇಂದಿರಾ ರಮಣನ ಚರಣಕೆ
ಹೂವ ತರುವವರ ಮನೆಗೆ ಹುಲ್ಲ ತರುವಾ ಅರಿಕೆ
ಬಾರೋ ಭಾಗ್ಯದ ನಿಧಿಯೆಂದು ಕೃಷ್ಣನನು ಕರೆದವರು

ಆರಿಗಾದರೂ ಪೂರ್ವ ಕರ್ಮ ಬಿಡದು ತಿಳಿ ಹೇಳುತಲಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತಲಿ
ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕವಾಗಲಿಲ್ಲೆಂದು ಹಲುಬುತಲಿ ಕುಲಕುಲಕುಲವೆಂದು ಹೊಡೆದಾಡದಿರಲು
ಬೋಧಿಸಿದವರು

ಸಜ್ಜನರ ಸಂಗದೊಳು ಇರಿಸೆನ್ನ ರಂಗ ಬೇಡಿಕೆಯ ಮುಂದಿಡುತ
ಏಳು ನಾರಾಯಣ ಏಳು ಲಕ್ಷ್ಮೀರಮಣ ಎಂದು ಏಳಿಸುತ
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎನುತ
ಜಯಮಂಗಳಂ ನಿತ್ಯ ಶುಭಮಂಗಳಂ ಪಾಡಿದವರು

✍️ಸುಜಾತಾ ರವೀಶ್
ಮೈಸೂರು