ಅತೀತದ ಅವಘಡಗಳ
ಅರಿತದ್ದು ಇಲ್ಲೇ
ಘಟಿಸಬಹುದಾದ
ಘಟನೆಗಳು ಎಷ್ಟೊಂದು
ಭಯಂಕರವೆಂದು

ಜೀವನವೆಂದರೇನು ?

ನೋವಿನ ನೆರಳು
ಆಗ ತಾನೆ ಗೋರಿಯಾ
ಮೇಲಿಟ್ಟ ಗುಲಾಬಿ
ಖಬರಸ್ಥಾನದ ತುಂಬೆಲ್ಲಾ
ತುಂಬಿರುವ ಸುಗಂಧ

ಸಂದಿ ಗೊಂದಿಯಲಿ
ಬೀದಿ ಬದಿಯಲಿ
ಗುಡಿ ಗುಂಡಾರದಲಿ
ಮೊಹಲ್ಲಾದ ಮಸೀದಿಯಲಿ
ಕಾಣುವ ಫಕೀರನ
ನಿಟ್ಟುಸಿರು

ದೀರ್ಘ ದಾರಿಯಲ್ಲಿ
ಹುಡುಕಿದರೂ ಪತ್ತೆ
ಹಚ್ಚಲಾಗದ ಕಷ್ಟಗಳು,
ತೆರೆಗಳು ಕಾಣಲಾಗದೆ
ಕಣ್ಣುಗಳ ಕಂಠದಲಿ
ಮೂಕವಾದ ಕ್ಷಣಗಳು

ಮುಗಿದು ಹೋದ ಕಥೆಗೆ
ಎಳೆದು ಬಿಡು ಪರದೆಯೇನು
ದಕ್ಕಿದಷ್ಟು ದಕ್ಕಿಸಿಕೊಂಡು
ದೇಹವ ತ್ಯಜಿಸುವುದೇ?

ಮತ್ತೆ ಮತ್ತೆ
ಯೋಚಿಸತೊಡಗುತ್ತದೆ ಮನ
ಈಗಾಗಲೇ ಸತ್ತಿರುವವರಿಗೆ
ಮೃತ್ಯು ಮತ್ತೆಂದು?

ಹಸಿವು ಯಾರನ್ನೋ
ಹುಡುಕುತ ಹೊರಟಿದ್ದು
ಕಾಣುತ್ತಲೇ ಇಲ್ಲ
ಮುಗ್ಧ ಕೂಸುಗಳ ಕನವರಿಕೆ
ನಿತ್ಯವೂ ಕಾಡುತ್ತಿದೆ

ಈ ಜೀವನ ಹೀಗೆಯೇ
ಅನಿಸುತ್ತೆ ಒಮ್ಮೊಮ್ಮೆ
ಅಳುವಿನಲ್ಲೂ ನಗಿಸಿ‌
ಮುತ್ತಿಟ್ಟು ಮತ್ತೊಮ್ಮೆ
ನಗುವಿನಲಿ ಭಾವನೆಗಳನು
ಕುರೂಪಿಯಾಗಿಸುತ್ತದೆ.

ಆ ಜೀವನ ಎಲ್ಲಿದೆಯೋ ?
ಒಮ್ಮೆ ಅದಕ್ಕೂ
ಜಖಂ ಆಗಬೇಕು
ನೋವುಂಡ ಕಣ್ಣುಗಳನೊಮ್ಮೆ
ನೋಡಬೇಕು.

✍️ಕವಿತಾ ಸಾಲಿಮಠ
ಬಾಗಲಕೋಟೆ