ಅದೇಕೋ ನಿನ್ನ ತೊರೆಯಲು
ಆಗುತ್ತಿಲ್ಲ
ಗೊತ್ತಿದೆ ನನಗೆ ನಿನ್ನ ತಲುಪಲು
ಆಗುತ್ತಿಲ್ಲ

ಅದೇನು ಸೆಳೆತ ವರ್ತುಳದ
ಈ ಬುವಿಗೆ
ನಿನ್ನ ತಾರತಮ್ಯವ ಮನ್ನಿಸಲು
ಆಗುತ್ತಿಲ್ಲ

ಶತೃವನ್ನು ಪ್ರೀತಿಸಿದ್ದೂ ಇದೆ
ಈ ನೆಲದಲಿ
ಒಡಲ ಬೆಂಕಿಯನು
ನಂದಿಸಲು ಆಗುತ್ತಿಲ್ಲ

ಸಾವಿರ ಬಾರಿ ಹೇಳಿಕೊಳ್ಳುವೆ
ಬಿಡಲು ನನಗೆ ನಾ
ಈ ಮಾಯೆಯಿಂದ
ಹೊರಬರಲು ಆಗುತ್ತಿಲ್ಲ

ಒಮ್ಮೆಯೂ ತಿರುಗಿ
ನೋಡದೆ ಇರಬೇಕೆನ್ನುವೆ
ಬೆಂಬತ್ತಿದ ಆ ಚಹರೆ
ಅಲಕ್ಷಿಸಲು ಆಗುತ್ತಿಲ್ಲ

ಅಷ್ಟೊಂದು ಪ್ರೀತಿಯಿದೆಯೆ
ನಿನ್ನ ದ್ವೇಷದಲಿ
ಧರಿಸಿದ ವೇಷ ತಿಳಿದಿದೆ
ಒಪ್ಪಲು ಆಗುತ್ತಿಲ್ಲ

ನಿನ್ನ ಸುಳ್ಳು ಮೊಗ್ಗಿನ ಹಾರ
ಧರಿಸಿಹಳು ಅನು
ಕೆರೆಹಾರವೆಂದು ತಿಳಿದೂ
ಕಿತ್ತೆಸೆಯಲು ಆಗುತ್ತಿಲ್ಲ

✍️ಅನಸೂಯ ಜಹಗೀರದಾರ
ಕೊಪ್ಪಳ