ನೋಟದಲ್ಲಿ ಅಡಗಿರುವ ಮಾತನ್ನು ಕೇಳಬಲ್ಲೆ..
ಕಿವಿಗಷ್ಟೇ ಅಲ್ಲ
ಕಣ್ಣಿಗೂ ಕಿವಿಯಿದೆ..!

ಎಷ್ಟೇ ದೂರದಲ್ಲಿದ್ದರೂ
ಬರುವಿಕೆಯ ಕಾಣಬಲ್ಲೆ..
ಕಣ್ಣಿಗಷ್ಟೇ ಅಲ್ಲ
ಮನಸ್ಸಿಗೂ ದೃಷ್ಟಿಯಿದೆ..!

ಮನವರಳಿದ್ದನ್ನು
ಮುಖದಲ್ಲಿ ಕಾಣಬಲ್ಲೆ..
ಕನ್ನಡಿಯಷ್ಟೇ ಅಲ್ಲ
ಮುಖವೂ ಪ್ರತಿಬಿಂಬಿಸುತ್ತದೆ..!

ಹೂಗಳಷ್ಟೇ ಅಲ್ಲ
ಮನದ ತೋಟದಲ್ಲಿ
ಪ್ರೇಮವೂ ಅರಳುವುದು
ಅದಕ್ಕೂ ಸೌಗಂಧವಿದೆ..!

ಅಕ್ಷರಗಳಲ್ಲಿ
ಕೇವಲ ಪದಗಳಿಲ್ಲ..
ಎದೆಯ ಮೇಲೆ ಗೀಚಿದ
ಭಾವನೆಗಳಿವೆ ಓದಿಕೋ..!

ಪತ್ರವೆಂದರೆ ಬರಿಯ
ಪತ್ರವೆಂದುಕೊಂಡೆಯಾ..?!
ಹೃದಯವದು
ಭಾರವನು ತೂಗಬಲ್ಲೆಯಾ..?!

✍️ಸೌಮ್ಯಾ ದಯಾನಂದ
ಡಾವಣಗೆರೆ