ಅಕ್ಕಿ ನೀರನ್ನು
ಬಳಸಿಕೊಳ್ಳುವುದು
ನೀರೂ ಅಕ್ಕಿಯನ್ನು
ಉಳಿಸಿಕೊಳ್ಳುವುದು
ರುಚಿಗೆ ಶಕ್ತಿ ಬೆರೆಸಿದ್ದು
ನೀರೂ ಹೇಳಲಿಲ್ಲ
ಅನ್ನವೂ ಮಾತಾಡಲಿಲ್ಲ
ಇದು ವಿಕಾಸದ ಬೆಸೆದ ಹಾದಿ
ಎಲ್ಲವೂ ಮುಗಿಯುವುದು
ದುರ್ಬಳಕೆಯಿಂದ
ಆಯ್ಕೆಯ ಸದ್ಭಳಕೆ ಸೃಷ್ಟಿ ಸತ್ಯ
ಒಮ್ಮೆ ಸೃಷ್ಟಿಯಾದದ್ದನ್ನೇ
ಮತ್ತೆ ಸೃಷ್ಟಿ ಮಾಡಲು ಹೊರಟವನಿಗೆ
ತನ್ನ ತಾನು ಹಿಡಿಯಲು
ತಿಂಡಿ ಚುಚ್ಚಿದ ಬೋನು ಬೇಕು
ಅವವನ್ನು ಅವನೇ ಹುಟ್ಟಿಸಿಕೊಂಡೆ ಎನ್ನುವ
ಮಹಾ ಮನುಷ್ಯ
ಗರ್ಭದ ಕಾವು ಮರೆತ
ದೇಹಗಾಣದ
ಜೀವನೆಣ ನೆಂಚಿಕೊಂಡು
ಬೆವರು ಕುಡಿಯಬಹುದು
ಹಿಡಿಯಲಾಗದ ಬೆಳಕನ್ನು
ಮುಡಿಯಲಾಗದ ಕತ್ತಲನ್ನು
ಬಳ ಬಳಸಿಕೊಂಡು
ಉಳಿಯುವ ಭ್ರಮೆಯಲ್ಲಿರಬಹುದು
ಹೆಣವಾಗುವ ಮೊದಲು
ಉಸಿರ ಹೋರಾಟ ಆ ದೇಹದ್ದು
ಈ ಭೂಮಿಯದ್ದು
ಉಸಿರು ಹಸಿರು ಜೀವನಾಡಿ
ನಮ್ಮದೆನ್ನುವ ಮೂರ್ಖರೇ
ಹೊರ ಬಳಕೆಯಿಂದ ಹೊರಬನ್ನಿ
ಒಳ ಬಳಕೆಯ ಬೆಳಕನ್ನು
ಇನ್ನಾದರೂ ನೋಡಿಕೊಳ್ಳಿ
ಜಾಗವೇ ಇಲ್ಲದಂತೆ
ಚುಚ್ಚಿಸಿಕೊಳ್ಳುತ್ತಲೇ ಭೂಮಿಯ ಬೆನ್ನಿಗೆ
ಮತ್ತೆಷ್ಟು ಚುಚ್ಚುತ್ತೀರಿ

✍️ಡಾ.ಬೇಲೂರು ರಘುನಂದನ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು, ವಿಜಯನಗರ
ಬೆಂಗಳೂರು