ಧಾರವಾಡದಾಗ ಯಾವ ಏರಿಯಾಕ ಹೋದ್ರು ಒಬ್ರಿಬ್ರು ಸಾಹಿತಿಗಳು ಸಿಕ್ಕss ಸಿಗತಾರ, ಅಂತದ್ರಾಗ ನಾನೂ ಒಂಚೂರು ಕಥಿ, ಕವನ ಅಂತೇಳಿ ಬರಿಯಾಕ ಚಾಲು ಮಾಡೇನಿ ಅಂದ್ರ, ಅದಕ ಕಾರಣಾನ ನಮ್ಮ ಬಸು ಬೇವಿನ ಗಿಡದ ಸರು ಮತ್ತ ಭಗವತಿ ಸರು. ವಾರದಾಗ ಒಮ್ಮೆರೆ ಸಪ್ತಾಪೂರ ಭಾವಿ ಕಡೆ ಚಿಕ್ಕದೊಂದು ಹೊಟೇಲ್ದಾಗ ಕುಂತು, ಚುರು ಚುರು ಗಿರ್ಮಿಟ್ ತಿಂದ ಒಂದ ಬೈಟೂ ಸುಡ-ಸುಡೋ ಕೆಟಿ ಕುಡದ, ಮ್ಯಾಲ ಈ ಸಾಹಿತ್ಯದ ಬಗ್ಗೆ ಮಾತಾಡಿ, ಮಾತಾಡಿ, ಬರಿಯೋ ಗೀಳ ಹಚ್ಚಿದವರ ಇವರು. ಹಿಂಗs ಎಲ್ಲಿ ಹೊದಲ್ಲಿ ಬಸ್ಸು ಬೇವಿನಗಿಡದ ಸರ್ ಅಂದ್ರ ಅಭಿಮಾನ ಪಟ್ಟಕೊಂಡ ಅವರಲ್ಲಿ ರುವ ಪ್ರೋತ್ಸಾಹಿಸುವ ಗುಣ ಹೊಗಳಾವ್ರ ಭಾಳ ಮಂದಿ, ಅದಕ್ಕಂತ ಅವರ ಸಾಹಿತ್ಯದ ಬಳಗ ಎಲ್ಲಾ ಕಡೇನೂ ಅದಾರ ಅಂದ್ರ ತಪ್ಪಾಗಲಿಕ್ಕಿಲ್ಲ. ಅದ್ರಾಗ ನಾನೂ ಒಬ್ಬ.

ಮೊನ್ನೆ ಮೊನ್ನೆ ಅವರ ಹೊಸ ಪುಸ್ತಕ ಮಕ್ಕಳ ಕಾದಂಬರಿ “ಒಳ್ಳೆಯ ದೆವ್ವ” ಬಿಡುಗಡೆ ಆತು, ಅದು ಬೆಂಗಳೂರದಂತ ದೊಡ್ಡ ಊರಾಗ, ಬರೊಬ್ಬರಿ ಒಂದ ಡಜನ್ ಮಕ್ಕಳ ಪುಸ್ತಕ ಗಳನ್ನ ವಸಂತ ಪ್ರಕಾಶನದವರು ಬಿಡುಗಡೆ ಮಾಡಿದ್ರು, ಇದರ ಸಂಪಾದನೆಯನ್ನು ಖ್ಯಾತ ಸಾಹಿತಿಗಳಾಗಿ ರುವಂತ ಡಾ.ಎಚ್ ಎಸ್ ವೆಂಕಟೇಶಮೂರ್ತಿ ಯವರ ಸಂಪಾದಕತ್ವ ದಲ್ಲಿ ಬಿಡುಗಡೆಯಾದ್ವು, ಬಸ್ಸು ಬೇವಿನಗಿಡದ ಸರ್ ಅಂದ್ರ ಯಾವಾಗ್ಲು ಹೊಸ ಹೊಸದನ್ನು ಸೃಷ್ಟಿ ಮಾಡಾವ್ರು ಮತ್ತು ಬರಿಯಾವ್ರು, ಜೊತೆಗೆ ಇಂಥಾದ ಬರಿರಿ ಅಂತ ಬೇರೆಯವ ರಿಗೂ ಬರಸಾಕ ಹಚ್ಚಿ ಪ್ರೋತ್ಸಾಹಿ ಸ್ತಾರಲ ನನಗಂತೂ ಭಾಳ ಖುಷಿ ಅನಿಸ್ತದ.

ನಮಗೆಲ್ಲ ದೆವ್ವ ಅಂದ್ರ‌ ಗೊತ್ತು ಆದ್ರ ಯಾರೂ ನೋಡಿಲ್ಲ, ಬರಿ ಅಂತೆಕಂತೆಗಳ ಮಾತುಗಳ ಮೇಲೆ ಮಹಲ ಕಟ್ಟತೀವಿ, ಆದ್ರೂ ದೆವ್ವ ಅಂದಾ ಕ್ಷಣ ಬಹುಪಾಲು ಮಂದಿಗೆ ಭಯ ಇದ್ದದ್ದೇ, ಅಂತದ್ರಾಗ ಲೇಖಕರು ಹಾಗೂ ಸ್ನೇಹಿತರಾದಂತ ಬಸ್ಸು ಸರ್ “ಒಳ್ಳೆಯ ದೆವ್ವ” ದ ಬೆನ್ನತ್ತಿ ಕತಿ ಮಾಡ್ಯಾರ. ಓದಬೇಕನ್ನೋ ತುಡಿತ ನನ್ನಲ್ಲಿ ಭಾಳ ಇತ್ತು, ದೆವ್ವ ಅಂದ್ರ ಎಲ್ಲವೂ ಕೆಟ್ಟವs ಇರ್ತಾವ ಅಂತದ್ರಗ ಇದೇನಪಾ, ಅಂದ್ಕೊಂಡಿರುವಾಗ ಒಂದಿನ ಸಪ್ತಾಪೂರ ಭಾವಿ ಹತ್ರ ಬ್ಯಾಗದಾಗಿನ “ಒಳ್ಳೆಯ ದೆವ್ವ” ತೆಗೆದು ನನ್ನ ಕೈಯಾಗ ಇಡೋದ ತಡಾ ನನಗ ಭಯದ ಬದಲು ಒಂದು ತರ ರೋಮಾಂಚ ನ ಆಯ್ತು. ಯಾಕ ಅಂತಿರೇನು ಅದು “ಒಳ್ಳೆಯ ದೆವ್ವ” ಆಗಿತ್ತರಿ. ಓದ್ಕೋತ ಹೊಂಟಾಂಗ ಎಲ್ಲೂ ನಿಲ್ಲದಾಂಗ ಗಾಡಿ ಓಡ್ತಾ ಇತ್ತು. ನಾ ನಮ್ಮೂರಿಗೆ ಹೊಂಟಿದ್ದೆ ಸುಮಾರು ಇನ್ನೂರು ಕಿಲೋ ಮೀಟರ್ ದೂರಿನ ಪಯಣ, ಊರ ಬಂದಿತ್ತು “ಒಳ್ಳೆಯ ದೆವ್ವ”ದ ದರ್ಶನವೂ ಆಗಿ ಹೋಗಿತ್ತು. ಇದೇನಪಾ ಇಂವ ಕತಿ ಓದಿ ಅದರ ಬಗ್ಗೆ ಬರೆಯೋದು ಬಿಟ್ಟು, ಇಂವಂದ ಹೇಳಾಕತ್ತಾ ನಲ್ಲ ಅಂದ್ಕೋಬ್ಯಾಡ್ರಿ.. ಹಾಂ ಇನ್ನೊಂದು ವಿಷಯ ನಾ ಹೇಳ್ಲೆಬೇಕು ಈ ಪುಸ್ತಕ ಗಳನ್ನು ಸಂಪಾದನೆ ಮಾಡಿರುವಂತ ಡಾ.ಎಚ್.ಎಸ್. ವೆಂಕಟೇಶಮೂರ್ತಿಯವರು ಆರಂಭದೊಳಗ “ಮಕ್ಕಳ ಸಾಹಿತ್ಯ ಬೆಳೆದು ಬಂದ ಬಗೆ” ಯನ್ನು ಇಷ್ಟು ಚೆಂದ ಬರದಿದ್ದಾ ರಲ್ಲ ಇಡೀ ಮಕ್ಕಳ ಸಾಹಿತ್ಯದ ಲೋಕವನ್ನೇ ತೆರೆದಿಟ್ಟಾಂಗ ಮಾಡ್ಯಾರ, ನಿಜವಾಗಿಯೂ ಮಕ್ಕಳ ಸಾಹಿತ್ಯ ಬರೆಯೋರಿಗೆ ಒಂದು ಸ್ಪೂರ್ತಿ ಯ ಚಿಲುಮೆ ಅಂದ್ರನೂ ಏನ ತಪ್ಪಿಲ್ಲ.

ಕತಿ ಆರಂಭ ಆಗೋದ ಮಂಜುನಾಥನಿಗೆ ದೆವ್ವ ಹಿಡಿಯೋದ್ರಿಂದ, ಹೋಗಿ ಹೋಗಿ ಈ ದೆವ್ವಕ್ಕೆ ಹುಡುಗನೇ ಬೇಕಿತ್ತಾ ಅನ್ನೋದನ್ನ, ಜಗತ್ತಿನಲ್ಲಿ ಎಷ್ಟೋ ಜನ ದುರುಳರು, ದುಷ್ಟರು, ಲಂಚ ಕೋರರು, ಎಲ್ಲಾ ತೆರನಾದಂತ ಮಂದಿ ಅದಾದ, ಅವರ್ನ ಬಿಟ್ಟು, ಈ ದೆವ್ವಕ್ಕೆ ಸಣ್ಣ ಹುಡುಗನೇ ಬೇಕಿತ್ತ, ಅನ್ನೋದರ ವಾಸ್ತವ ಸಂಗತಿಯನ್ನು ಕಣ್ಣಿಗೆ ಕಟ್ಟುವಂತೆ ಪಾತ್ರಗಳ ಪರಿಚಯ ಮಾಡಿ ದ್ದಾರೆ.ಈ ಮಂಜನಿಗೆ ಆಕಾಶ, ಪವನ, ಪಲ್ಲವಿ, ದುರ್ಗಾ ಎನ್ನುವ ಆತ್ಮೀಯ ಗೆಳೆಯರ ಬಾಲ್ಯದ ಹೊಳಹುಗಳಿಗೆ ಜೀವ ತುಂಬಿದ್ದಾರೆ. ಮಂಜುನಾಥ, ಪವನ, ಮತ್ತು ಆಕಾಶ ತಮ್ಮದೇ ಆದ ಲಹರಿಯಲ್ಲಿ ಸೈಕಲ್ ತುಳಿಯುತ್ತಾ ಶಾಲೆಗೆ ಹೋಗೋದು ಒಂದುಕಡೆ ಸಹಜತೆಯನ್ನು ತಂದಿಟ್ಟರೆ, ಮತ್ತೊಂದೆಡೆ ಮಂಜುನಾಥ ಸೈಕಲ್ ಬಿಟ್ಟು ಪಾದಗಳನ್ನು ನೆಲ ಊರಿದ ದಿನಗಳೇ ಇರಲಿಲ್ಲ. ಅಂದು ಪವನ (ಗಾಳಿ) ವೇಗವಾಗಿ ಸೈಕಲ್ ನ್ನು ಓಡಿಸುತ್ತ ಮನೆ ಸೇರಿದರೆ, ಅವರ ಹಿಂದೆನೇ ಆಕಾಶವೂ ಗಾಳಿಯೊಂದಿಗೆ ಲೀನವಾ‌ ದಂತೆ ಆಕಾಶನೂ ಸಹ ಬೇಗ ಮನೆ ಸೇರಿದ್ದ. ಆ ಗಾಳಿ ಮತ್ತು ಆಕಾಶಗಳ ವೇಗದಲ್ಲಿ ಮಂಜುವಿನ ಕರೆಯುವಿಕೆ ಗೌಣವಾಗುತ್ತದೆ. ಈತ ಸಾವಧಾನ ವಾಗಿ ಮನೆಗೆ ತೆರಳಬೇಕಾದರೆ ದಾರಿಯಲ್ಲಿ ಘಮಲೆಬ್ಬಿಸಿದ ಹೂವಿನ ಮಕರಂದ ಇತನನ್ನು ಸೆಳೆಯುತ್ತದೆ. ಆ ಹೂಗಳನ್ನು ತೆಗೆದುಕೊಂಡು ಸೈಕಲ್ ತುಳಿಯುತ್ತಾ ಮನೆಗೆ ಹೋಗುವಾಗ ಏನೋ ಭಾರವಾದಂತ ಅನುಭವ, ಇದೇನನ್ನೂ ತೋರಿಸಿಕೊಳ್ಳದ ಈತ ಮನೆಗೆ ಬಂದಾಗ ಮೂಢಿಯಾಗಿ ಬಿಡುತ್ತಾನೆ. ಒಮ್ಮೊಮ್ಮೆ ಮಾತ ನಾಡುವ ಸಾಮರ್ಥ್ಯವನ್ನೇ ಕಳೆದುಕೊಂಡು ಬಿಡುತ್ತಾನೆ, ಊಟ ಬಿಡುತ್ತಾನೆ, ಬಾಯಿಂದ ಏನೇನನ್ನೋ ಬಡಬಡಿಸುತ್ತಾನೆ. ಇದೆಲ್ಲವೂ ತಾಯಿ ನೀಲವ್ವಳಿಗೆ ತನ್ನ ಜಂಘಾಬಲವೇ ಉಡುಗಿ ಹೋದ ಅನುಭವ.

ಆಸ್ಪತ್ರೆಯ ವೈದ್ಯರು ಯಾವ ಸಮಸ್ಯೆಯೂ ಇಲ್ಲ, ನರಗಳಲ್ಲಿಯ ಅಸ್ತವ್ಯಸ್ತತೆಯಿಂದ ಹೀಗಾಗಿರ ಬಹುದು, ಯಾವುದಕ್ಕೂ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯಲ್ಲಿರುವ ವಿಶೇಷ ಆಸ್ಪತ್ರೆಗೆ ತೋರಿಸಿ ಅಂದಾಗ, ಅವರೋ ಇಲ್ಲದ ಚೆಕ್ ಅಪ್ ಗಳನ್ನು ಬರೆಯುವುದು, ಅದರ ಫಲಿತಾಂಶ ಮುಂದೂಡುವುದು, ಸಿಕ್ಕಾಪಟ್ಟೆ ಬಿಲ್ ನ್ನು ಏರಿಸುವ ಪ್ರಚಲಿತ ವಿದ್ಯಮಾನಗಳ ಆಸ್ಪತ್ರೆಯ ಗೋಳಾಟವನ್ನು ಎತ್ತಿ ತೋರಿಸಿ, ಲೇಖಕರು ವಾಸ್ತವತೆಯತ್ತ ಬೆಳಕು ಚೆಲ್ಲಿದ್ದಾರೆ.ಈ ಸಂದರ್ಭ ದಲ್ಲಿ ಶಿವರಾಯಪ್ಪನ ಪಾತ್ರದ ಮೂಲಕ ಇದೆಲ್ಲ ವ್ಯನರ್ಥ, ಖರ್ಚು ಇದರ ಬದಲಾಗಿ ದೆವ್ವ ಬಿಡಿಸೋ ಗಾಳೆಪ್ಪನ ಮೋರೆ ಹೋಗಬೇಕೆನ್ನು ವುದು, ನಾವೆಷ್ಟೇ ಮುಂದುವರೆದರೂ ನಮ್ಮ ಮೌಢ್ಯತೆ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸಿ ದ್ದಾರೆ. ಇದೆಲ್ಲವೂ ಆತ ಕಲಿಯುತಿದ್ದ ಶಾಲೆಯಲ್ಲಿ ಒಬ್ಬೊಬ್ಬರು ಒಂದೊಂದು ತೆರನಾಗಿ ಬಣ್ಣ ಹಚ್ಚುವುದು. ಶಾಲೆಯ ಭಗವತಿ ಸರ್ ಇದೆಲ್ಲವು ಸುಳ್ಳು,ದೆವ್ವ -ಪವ್ವ ಅನ್ನೋದು ಒಂದು ಕಲ್ಪನೆ, ಎನ್ನುವ ವೈಚಾರಿಕ ಮನೋಧೋರಣೆಯುಳ್ಳ ವರು. ಇವರು ಮಂಜುನಾಥನ ಮನೆಗೆ ಹೋಗಿ ತಾವೇ ಒಂದು ಸುದ್ದಿಯಾಗಬಾರದೆಂಬಧೋರಣೆ ಯಿಂದ ಶಿಕ್ಷಕರ ಸಭೆ ಮಾಡಿ ಯಾರುನೂ ವೈಯಕ್ತಿಕ ಹೇಳಿಕೆ ಕೊಡದಂತೆ ಎಚ್ಚರಿಕೆ ಕೊಡು ವುದು. ಇದನ್ನೊಂದು ಪತ್ರಿಕೆ ಪ್ರಕಟಿಸಲು ಹಿಂದೇಟು ಹಾಕಿದಾಗ, ಭಗವತಿಯವರ ನಿತ್ಯ ಪ್ರಕಟಣೆಗಳನ್ನು ಕೆಣಕುತ್ತ, ಇದೆಲ್ಲವೂ ರಾಜಕೀಯ ಅನ್ನುವ ಅರ್ಥದಲ್ಲಿ ತಮ್ಮ ದಡ್ಡತನ ಪ್ರದರ್ಶಿಸುತ್ತ ಶಿಕ್ಷಕರಲ್ಲಿನ ವಾಸ್ತವ ತಲ್ಲಣಗಳನ್ನು ಕೆದಕುವ ಮೂಲಕ ಮನಷ್ಯನ ಗುಣ ಅವಗುಣ ಗಳನ್ನು ಆ ಪಾತ್ರಗಳ ಮೂಲಕ ತೋರಿಸಿದ್ದಾರೆ.
ಪಾಲಕರೂ ಸಹ ತಮ್ಮ ಮಕ್ಕಳಿಗೆ ಎಚ್ಚರಿಕೆ ಕೊಟ್ಟು ಯಾರೂನು ಮಂಜುನಾಥನ ಮನೆಗೆ ಹೋಗಕೂಡದೆಂದು ಕಟ್ಟಪ್ಪಣೆ ಮಾಡುವುದು ತಮ್ಮ ಮಕ್ಕಳಿಗೆ ಆ ದೆವ್ವ ಸೇರಿಕೊಳ್ಳದಿರಲೆಂಬ ಭಾವ ಪಾಲಕರಲ್ಲಿನ ಸ್ವಾರ್ಥ ಗುಣವನ್ನು, ಮೌಢ್ಯತೆಯನ್ನು ಬಿಂಬಿಸುತ್ತದೆ. ಇದೇ ಮಕ್ಕಳ ಕಥೆಯ ತಿರುವಿಗೆ ಕಾರಣವಾಗುವ ತಿರುಳನ್ನು ಮರೆಮಾಚುತ್ತ ಕಥೆಯ ಕುತೂಹಲವನ್ನು ಹೆಚ್ಚಿಸಿದ್ದಾರೆ.

ದೆವ್ವ ಬಿಡಿಸುವ ಗಾಳೆಪ್ಪನ ಮೂಲಕ, ದೆವ್ವ ಬಿಡಿಸುವ ಸಂದರ್ಭಗಳಲ್ಲಿ ನಡೆಯುವ ಚಿತ್ರ ಹಿಂಸೆಯ ವಾಸ್ತವಿಕತೆಯನ್ನು ಮತ್ತು ಗಾಳೆಪ್ಪನ ಪಾತ್ರವನ್ನು ತಿಳಿ ಹಾಸ್ಯದೊಂದಿಗೆ ಕಥೆಯುದ್ದಕ್ಕೂ ಸಾಗಿಬಂದಿರುವುದು ಲೇಖಕರ ಜಾಣ್ಮೆಯನ್ನು ತಿಳಿಸುತ್ತದೆ. ನೆರೆಹೊರೆಯವರ ಹೇಳಿಕೆಗಳು ನಿತ್ಯ ಜೀವನದಲ್ಲಿ ಹೇಗೆ ಹಾಸು ಹೊಕ್ಕಾಗಿವೆ ಎಂಬುವ ದನ್ನು ಸಂದರ್ಭಾನು ಸಾರವಾಗಿ ವಿಶೇಷವೆನಿಸು ತ್ತವೆ. ಬೆಚ್ಚಪ್ಪ ಕಾಕಾ ಅನ್ನುವುದು ಒಂದು ವಿಶೇಷ ಪಾತ್ರ, ಪ್ರಸ್ತುತ ಸನ್ನಿವೇಶದಲ್ಲಿ ಮನುಷ್ಯನ ಅತಿಯಾದ ಒತ್ತಡ ಜೀವನದಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿ ಯಾರೆನೇ ಆದರೂ ಪರವಾಗಿಲ್ಲ ತಾವು ಬದುಕಿದರೆ ಸಾಕು ಎನ್ನುವ ಸ್ವಾರ್ಥಪರ ಕಾಳಜಿ ವ್ಯಕ್ತಪಡಿಸಿದ್ದಾರೆ.

ಕಥೆಗೆ ಕ್ಲೈಮ್ಯಾಕ್ಷ ನೀಡಲು ಮಕ್ಕಳೇ ತಮ್ಮ ಪಾಲಕರ ಮೂಲಕ ಕಾರವಾರದಲ್ಲಿರುವ ದುರ್ಗಾಳ ತಂದೆ ಮತ್ತು ಭಗವತಿ ಸರ್ ಮೂಲಕ ಶಿವರಾಯಪ್ಪನನ್ನು ಬದಲಾಯಿ ಸಲು ಕಾರಣವಾಗುತ್ತಾರೆ. ಇಂಥದೇ ಆಗಿರುವ ಒಂದು ಸಂದರ್ಭ ವನ್ನು ನೆನೆಸಿಕೊಂಡು ಕಣ್ಣೀರು ಹಾಕುವ ಶಿವರಾಯಪ್ಪನ ಮಾಲೀಕ ಬದಲಾವಣೆ ಯ ಕೇಂದ್ರವಾಗುತ್ತಾನೆ. ಶಿವರಾಯಪ್ಪ ಮಾಡಿದ ತಪ್ಪುಗಳು ಸ್ಮೃತಿ ಪಟಲದ ಮೇಲೆ ಬಂದು ದು:ಖಿತನಾಗುತ್ತಾನೆ. ಮಗ ಮತ್ತು ಹೆಂಡತಿ ನೀಲವ್ವಳ ನೆನಪಿಸುತ್ತ ಅವರನ್ನು ಕೂಡುವ ತವಕ ಹೆಚ್ಚಾಗುತ್ತದೆ , ನೀಲವ್ವಳಿಗೆ ಬಿದ್ದ ಕನಸು ಕಥೆಗೆ ಮತ್ತೊಂದು ತಿರುವು ಕೊಟ್ಟಾಗ ನೀಲವ್ವ ಚೀರುವುದು ಮತ್ತು ಕೂಗುವಿಕೆಯಿಂದ ಊರ ಜನರೇ ಜಮಾಯಿಸುವುದು. ಕಾಯಿಲೆ ಬಿದ್ದ ಮಗ ಮಂಜುನಾಥನೇ ತಾಯಿಯ ಆರೈಕೆ ಮಾಡಲು ಮುಂದಾದಾಗ ಇಡೀ ಊರಿನವರು ಮಗನಿಗಿಡಿದ ದೆವ್ವ ನೀಲವ್ವಳಿಗೆ ಬಡಕೊಂಡಿದೆ ಎಂದು ಹಾಸ್ಯಭರಿತರಾಗಿ ನಗುತ್ತಾರೆ. ಇದೇ ಸಂದರ್ಭದಲ್ಲಿ ಭಗವತಿ ಸರ್, ನೀಲಕಂಠ ಮತ್ತು ಶಿವರಾಯಪ್ಪನ ಆಗಮನದಿಂದ ಇಡೀ ಮನೆಗೆ ಹೊಸ ಕಳೆ ಬರುತ್ತದೆ.

ಬಹಳ ದಿನಗಳ ಹಿಂದೆ ಶಿವರಾಯಪ್ಪ, ನೀಲವ್ವ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ, ತನ್ನ ಚಟಕ್ಕಾಗಿ ಮಗನನ್ನು ಅಂಗಡಿಯಿಂದ ಸಿಗರೇಟ್ ತಂದು ಕೊಡುವಂತೆ ಹೇಳಿದಾಗ, ಸಿಗರೇಟ್ ಸೇವನೆ ಒಳ್ಳೆಯದಲ್ಲವೆಂಬ ಮಗನ ಪ್ರತಿವಾದಕ್ಕೆ ಸಿಟ್ಟಿನಿಂದ ಹೊಡೆಯುತ್ತಾನೆ, ಆ ಭರದಲ್ಲಿ ಮಂಜುನಾಥನಿಗೆ ತಲೆಗೆ ಪೆಟ್ಟಾಗಿ ಅದು ಈಗ ತೊಂದರೆ ಕೊಟ್ಟಿದ್ದು, ದೆವ್ವದ ಕಥೆ ಕಟ್ಟಿದ್ದು, ಮಂಜುನಾಥ ತನ್ನ ತಾಯಿಗೂ ಹೇಳದೇ ತನ್ನ ತ್ಯಾಗ ಗುಣವನ್ನು ಮೆರೆದದ್ದು, ಇದೆಲ್ಲವೂ ನನ್ನಿಂದಲೇ ಆಗಿದ್ದರೂ ಮೂರ್ಖತನ ಪ್ರದರ್ಶಸಿ ದ್ದೇನೆ. ನನ್ನ ಸೋಲನ್ನು ಒಪ್ಪಿಕೊಳ್ಳದೇ ಮಗ ಮತ್ತು ಹೆಂಡತಿಯೊಂದಿಗೆ ಆಟವಾಡಿದ್ದೇನೆ ಎಂದು ಶಿವರಾಯಪ್ಪನ ಮೂಲಕ ಹೇಳಿಸುವದ ರೊಂದಿಗೆ ಮನುಷ್ಯನ ಮನಸ್ಸೆ ಒಳ್ಳೆಯ ದೆವ್ವದ ಪ್ರತೀಕ. ಮೌಢ್ಯತೆಯ ಬದಲು ಪರಿವರ್ತನೆ ಜಗದ ನಿಯಮ ಅದನ್ನು ಮಾರ್ಮಿಕವಾದ ಕಥೆಯ ಮೂಲಕ ಹೇಳಿಸುವಲ್ಲಿ ಲೇಖಕರು ಸಫಲವಾಗಿದ್ದಾರೆ.

ಲೇಖಕರು:ಡಾ.ಬಸು ಬೇವಿನಗಿಡದ
ಪ್ರಕಾಶನ: ವಸಂತ ಪ್ರಕಾಶನ ಬೆಂಗಳೂರು
ಪುಸ್ತಕದ ಬೆಲೆ:160

✍️ಶ್ರೀ ಶ್ರೀಧರ ಗಸ್ತಿ
ಶಿಕ್ಷಕರು, ಧಾರವಾಡ