ಶ್ರೀ ವೈ.ಜಿ.ಭಗವತಿಯವರು ರಚಿಸಿರುವ ಮಕ್ಕಳು ಓದಿದ ಟೀಚರ್ ಡೈರಿ ಎಂಬ ಮಕ್ಕಳ ಕಾದಂಬರಿಯು ಶಾಲಿನಿ ಎಂಬ ಹಳ್ಳಿಯ ಸಾಮಾನ್ಯ ಕುಟುಂಬದ ಹುಡುಗಿಯ ಜೀವನ ವಸ್ತುವನ್ನಾಗಿಟ್ಟುಕೊಂಡು ಬೆನ್ನಟ್ಟಿದ ಕಥನ ವಾಗಿದೆ.
ಬಯಲು ನಾಡಾದ ಬೀಳಗಿಯಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರ ಗ್ರಾಮಕ್ಕೆ ಶಿಕ್ಷಕಿಯಾಗಿ ಬಂದಂತಹ ಶಾಲಿನಿ ಟೀಚರ್ ರಜೆ ಸಿಕ್ಕಾಗಲೆಲ್ಲಾ ತನ್ನೂರಾದ ಬೀಳಗಿಗೆ ಹೋಗಿ ಬರುತ್ತಿದ್ದರು. ಹೀಗೆ ಒಮ್ಮೆ ಟೀಚರ್ ಊರಿಗೆ ಹೋದಾಗ ಟೀಚರವರ ಆಣತಿಯಂತೆ ರೂಮ್ ಸ್ವಚ್ಛ ಮಾಡಲು ಬಂದಿದ್ದ ಮಕ್ಕಳು ಟೀಚರ್ ಗೆ ಗೊತ್ತಿರದ ಹಾಗೆ ಅವರ ಡೈರಿ ಓದಿದ್ದೇ “ಮಕ್ಕಳು ಓದಿದ ಟೀಚರ್ ಡೈರಿ” ಕಾದಂಬರಿಯ ವಸ್ತು.
ಈಗಾಗಲೇ ಈ ಕಾದಂಬರಿ 2021ರ “ಜಿ.ಬಿ. ಹೊಂಬಳ” ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಪುಸ್ತಕ ಪ್ರಶಸ್ತಿ ಪಡೆದುಕೊಂಡಿದೆ. ಮಕ್ಕಳ ಹೃದಯವನ್ನು ತಟ್ಟುವಂತೆ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಈ ಕಾರ್ಯವನ್ನು ವೈ.ಜಿ.ಭಗವತಿಯವರು ಅತ್ಯಂತ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಒಂದು ಸಾಮಾನ್ಯ ವಿಷಯವನ್ನು ಅತ್ಯಂತ ಗಾಂಭೀರ್ಯತೆ ಸೃಷ್ಟಿಸಿ ಸನ್ನಿವೇಶಗಳನ್ನು ಮತ್ತೆ ಸರಳೀಕರಣ ಗೊಳಿಸುವ ಕಲೆ ಶ್ರೀಯುತರಿಗೆ ಕರಗತವಾಗಿದೆ ಎಂಬುದನ್ನು ಕಾದಂಬರಿ ಸ್ಪಷ್ಟ ಪಡಿಸುತ್ತದೆ.

ಗುರು ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದ ಸಂಬಂಧವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿನ ಸಂಬಂಧ ಒಂದು ಹೆಜ್ಜೆ ಮುಂದೆನೆ ಅಂತ ಹೇಳಬಹುದು. ಅಲ್ಲಿ ಗುರು ಶಿಷ್ಯರ ಸಂಬಂಧ ಕೇವಲ ಪಾಠಗಳಿಗೆ ಮಾತ್ರ ಸೀಮಿತವಾಗಿರದೆ ಶಿಕ್ಷಕರ ಮನೆ ಕೆಲಸಗಳಲ್ಲಿ ಕೂಡ ಸಹಾಯ ಮಾಡುವುದು ಸಾಮಾನ್ಯ. ಅಂತಹ ಪ್ರದೇಶಗಳಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಬಹುಶಃ ಅನುಭವಿಸಿದವರೇ ಅದರ ಆನಂದದ ಆಳ ಹೇಳಬಲ್ಲರು. ಪ್ರಸ್ತುತ ಕಾದಂಬರಿಯಲ್ಲಿ ಭಗವತಿಯವರು ಮಕ್ಕಳು ಡೈರಿ ಓದಿದ ಪರಿ ವಿನೂತನವಾಗಿ ಕಟ್ಟಿಕೊಡು ವಲ್ಲಿ ಸಫಲರಾಗಿ ದ್ದಾರೆ. ಮಕ್ಕಳಿಗೆ ಡೈರಿ ಸಿಕ್ಕಾಗ ಅವರಿಗಿದ್ದ ಕುತೂಹಲ, ಗಾಂಭೀರ್ಯ ಅತ್ಯಂತ ಸೊಗಸಾಗಿ ಸೃಷ್ಟಿಸಿಕೊಂಡಿದ್ದಾರೆ. ಬಯಲುನಾಡಿನ ಗ್ರಾಮೀಣ ಭಾಗದ ಟೀಚರ್ ತಮ್ಮ ಊರಿನಲ್ಲಿ ನೀರಿಗಾಗಿ ಪರದಾಡಿದ್ದು, ಜಗಳವಾ ಡಿದ್ದು, ಇದ್ದ ಒಂದು ಬೋರವೆಲ್ ಒಂದು ವೇಳೆ ಕೆಟ್ಟರೆ, ನೀರಿಗಾಗಿ ಊರಿನಲ್ಲಿ ಹಾಹಾಕಾರ, ನೀರಿಗಾಗಿ ಗ್ರಾಮ ಪಂಚಾಯ್ತಿಗೆ ಹೋಗಿ ಮನವಿ ಸಲ್ಲಿಸುವ ಪರಿ ಹೀಗೆ ಗ್ರಾಮೀಣ ಭಾಗದ ಹಲವಾರು ಜ್ವಲಂತ ಸಮಸ್ಯೆಗಳನ್ನು ಲೇಖಕರು ಅತ್ಯಂತ ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ.

ಬಾಲ್ಯದಲ್ಲಿ ಶಾಲಿನಿ ಶಾಲೆ ಕಲಿಯುವಾಗ ರುಸ್ತುಂ ಸರ್ ಅವಳಿಗೆ ಸಹಾಯ ಮಾಡಿದ್ದು ಮತ್ತು ಅತ್ಯಂತ ಕಷ್ಟದಲ್ಲಿ ಶಾಲೆ ಕಲಿತು ಡಿ.ಎಡ್ ಪಾಸಾಗಿ ಶಿಕ್ಷಕರ ಪರೀಕ್ಷೆ ಬರೆದಿದ್ದ ಶಾಲಿನಿಗೆ ಒಂದಿನ ಏಕಾಏಕಿ ನೌಕರಿಯ ಆದೇಶ ಬಂದಾಗ ಅವಳಿಗೆ ಮತ್ತು ಅವರ ಕುಟುಂಬಕ್ಕೆ ಆಗುವ ಸಂತೋಷ, ಸಾರ್ಥಕ ಭಾವ, ಜಗತ್ತೇ ಗೆದ್ದಷ್ಟು ಸಂಭ್ರಮಿಸಿದ ಪರಿ ಕಾದಂಬರಿಯಲ್ಲಿ ಲೇಖಕರು ಸುಂದರವಾಗಿ ವ್ಯಕ್ತಪಡಿಸಿದ್ದಾರೆ. ಈ ಪುಸ್ತಕ ಮಕ್ಕಳ ಹೃದಯ ತಟ್ಟಿ ನಾವೂ ಹೀಗೇ ಬದುಕ ಬೇಕೆನ್ನುವ ಛಲ ಹುಟ್ಟಿಸುತ್ತದೆ. ಶಾಲಿನಿ ಪುಸ್ತಕದ ಹುಳುವಷ್ಟೇ ಆಗಿರದೆ ಖೋ ಖೋ ಆಟದಂತಹ ಪಠ್ಯೇತರ ಚಟು ವಟಿಕೆಗಳಲ್ಲಿಯೂ ಭಾಗವಹಿಸಿ ಭೇಷ್ ಎನಿಸಿಕೊಳ್ಳುತ್ತಾಳೆ.
ಶಾಲಿನಿ ಪ್ರೀತಿಯಿಂದ ಪಪ್ಪಾ ಎಂದು ಕರೆಯುವ ರುಸ್ತುಂ ಸರ್ ಕೂಡ ಒಬ್ಬ ಶಿಕ್ಷಕರಾ ಗಿದ್ದು ಶಾಲಿನಿ ಜೀವನಕ್ಕೆ ಬೇಕಾದ ಖರ್ಚುವೆಚ್ಚ ಅವರೇ ಬರಿಸು ತ್ತಿದ್ದರು. ರುಸ್ತುಂ ಸರ್ ಕೂಡಾ ತಮ್ಮ ಜೀವನ ದಲ್ಲಿ ಸಾಕಷ್ಟು ನೋವುಗಳನ್ನು ಉಂಡವರು. ಅನೇಕ ಸಮಸ್ಯೆಗಳನ್ನು ಎದುರಿ ಸಿದವರು. ಅದಕ್ಕಾಗಿಯೇ ಅವರು ತನ್ನ ತಮ್ಮಂದಿರ, ತಂಗಿಯರ ಮದುವೆ ಮಾಡಿ ತಾವು ಕೊನೆಯ ವರೆಗೂ ಮದುವೆ ಆಗದೆ ಉಳಿದು ಕೊಂಡಿದ್ದರು. ಅವರು ಶಾಲಿನಿಯ ತಂದೆತಾಯಿ ಗಳೊಂದಿಗೆ ಹೊರರಾಜ್ಯವಾದ ಮಹಾರಾಷ್ಟ್ರದ ಇಚ್ಚಲ ಕರಂಜಿಗೆ ದುಡಿಮೆ ಗಾಗಿ ವಲಸೆ ಹೋಗಿದ್ದರು. ಸಾಕಷ್ಟು ಓದಿದ ಅವರಿಗೆ ಅಲ್ಲಿ ಇದ್ದಾಗ ಶಿಕ್ಷಕ ವೃತ್ತಿ ಅರಸಿ ಬರುತ್ತದೆ. ರುಸ್ತುಂ ಸರ್ ಶಿಕ್ಷಕರಾದರೂ ಶಾಲಿನಿಯ ಕುಟುಬದ ಜೊತೆ ಅನನ್ಯವಾದ ಸಂಬಂಧ ಇಟ್ಟಿಕೊಂಡಿದ್ದು ನಾನೊಬ್ಬ ಸರ್ಕಾರಿ ನೌಕರನೆಂದು ಅವರಿಗೆಂದು ಅಹಂಭಾವ ಬರಲೇ ಇಲ್ಲ.
ಒಂದು ದಿನ ರುಸ್ತುಂ ಸರ್ ಮತ್ತು ಶಾಲಿನಿಯ ಕುಟುಂಬ ಸವದತ್ತಿಯ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ರುಸ್ತುಂ ಸರ್ ಅವರ ಕೈಯಲ್ಲಿ ಒಬ್ಬಳು ಹೆಂಗಸು ಒಂದು ಮಗು ಕೊಟ್ಟು ದೇವರ ದರ್ಶನ ಪಡೆದು ಬರುವೆ ಸ್ವಲ್ಪ ಸಮಯ ನೋಡಿ ಕೊಳ್ಳಿ ಎಂದು ಹೇಳಿ ಹೋದವಳು ಮರಳಿ ಬರಲೇ ಇಲ್ಲಾ. ಆಗ ರುಸ್ತುಂ ಸರ್ ಅವರ ಜೊತೆ ಗಿದ್ದ ಕುಟುಂಬ ಸಾಕಿಕೊಂಡ ಮಗುವೇ ಶಾಲಿನಿ. ಒಂದು ದಿನ ಆಕಸ್ಮಿಕವಾಗಿ ಶಾಲಿನಿಗೆ ಈಗ ತನ್ನನ್ನು ಪೋಷಿಸುತ್ತಿರುವವರು ತನ್ನ ಹಡೆದ ತಂದೆ ತಾಯಿಗಳಲ್ಲ ಎಂದು ಗೊತ್ತಾಗುತ್ತದೆ. ಈ ಸನ್ನಿವೇಶ ಓದಿದ ಎಂತಹವರಿಗೂ ಮೂಕ ವಿಸ್ಮಿತರನ್ನಾಗಿ ಮಾಡುವಂತೆ ಶ್ರೀಯುತರು ಅತ್ಯಂತ ಸುಂದರವಾಗಿ ಕಟ್ಟಿದ್ದಾರೆ.
ಮಕ್ಕಳು ಓದಿದ ಟೀಚರ್ ಡೈರಿ ಕಾದಂಬರಿ ಪ್ರಸ್ತುತ ಸಮಾಜಕ್ಕೆ ಪಿಡುಗಾಗಿ ಕಾಡುತ್ತಿರುವ ಕೋಮುವಾದಕ್ಕೆ ಔಷಧಿಯಂತಿದೆ. ಅದರಲ್ಲಿ ಹಿಂದೂ ಮುಸ್ಲಿಂ ಕುಟುಂಬದ ಭಾವೈಕ್ಯತೆಗೆ ಕನ್ನಡಿಯಂತೆ ಪಾತ್ರಗಳ ಸೃಷ್ಟಿ, ಭಾವಬೆಸುಗೆ ಗಳು ಚೆನ್ನಾಗಿ ಮೂಡಿಬಂದಿವೆ. ಜೊತೆಗೆ ಹಸಿರೇ ಕಾಣದ ಬಯಲುನಾಡಿನ ಶಾಲಿನಿ ಟೀಚರ್ ತಾನು ಕೆಲಸ ಮಾಡುವ ಇಂದೂರ ಗ್ರಾಮದ ಹಸಿರು ಪರಿಸರ, ಅಲ್ಲಿನ ಸುಂದರ ಕಾಡು, ರಸ್ತೆ ಗಳ ವರ್ಣನೆ ಅತ್ಯಂತ ಸುಂದರ ವಾಗಿ ತಮ್ಮ ಡೈರಿಯಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ದೈಹಿಕವಾಗಿ ಬೆಳೆದರೂ ಮಾನಸಿಕವಾಗಿ ಬೆಳೆಯದ ಫಕ್ಕೀರ ಎಂಬ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಎಲ್ಲಾ ಶಿಕ್ಷಕರು ತಿರಸ್ಕರಿಸಿದ್ದರೂ ಶಾಲಿನಿ ಟೀಚರ್ ಆ ಮಗುವಿಗೆ ಬಹಳಷ್ಟು ಕಾಳಜಿವಹಿಸಿ ಅವನನ್ನು ಬದಲಿಸುತ್ತಾರೆ. ಕೊನೆಯಲ್ಲಿ ಮಕ್ಕಳು ಟೀಚರ್ ಡೈರಿ ಕದ್ದು ಓದಿದ್ದು ಟೀಚರಗೆ ಗೊತ್ತಾಗುತ್ತದೆ. ಮಕ್ಕಳು ಶಾಲಿನಿ ಟೀಚರ್ ಹತ್ತಿರ ಕ್ಷಮೆಯನ್ನು ಕೇಳುತ್ತಾರೆ. ಶಾಲಿನಿ ಟೀಚರ್ ಆ ಮಕ್ಕಳನ್ನು ಕ್ಷಮಿಸುವುದರೊಂದಿಗೆ ಮತ್ತು ಫಕ್ಕಿರನ ಬಾಳಲ್ಲಿ ಬೆಳಕಾಗುವುದರೊಂದಿಗೆ ಈ ಕಾದಂಬರಿ ಸುಖಾಂತ್ಯ ಕಾಣುತ್ತದೆ.

✍️ ರೆಹಮಾನ್ ಗೋಲಳ್ಳಿ
ಸಾಹಿತಿಗಳು, ಧಾರವಾಡ