ದೀಪಾವಳಿಯ ತ್ರಯೋದಶಿ ಅಥವಾ ಧನ್ ತೇರಸ್ ದಿನವನ್ನು ಧನ್ವಂತರಿ ಜಯಂತಿ ಎಂದುಸಹ ಆಚರಿಸುತ್ತಾರೆ.ಅಮೃತ ಮಥನದ ಸಂದರ್ಭದಲ್ಲಿ ಈ ದಿನ ಧನ್ವಂತರಿಯು ಜನಿಸಿ ದನೆಂದು ಪುರಾಣಗಳಲ್ಲಿ ಪ್ರತೀತಿ.

ಕ್ಷೀರ ಸಮುದ್ರ ಮಥನದ ಕಾಲದಲ್ಲಿ ರಾಕ್ಷಸರೊಂದಿಗೆ ದೇವತೆಗಳು ಹೋರಾಡುವ ಸಂದರ್ಭ ದಲ್ಲಿ ಗುಣಪಡಿಸಲು ಆಗದ ನೋವು ವ್ಯಾಧಿಗಳಿ ಗೆ ಚಿಕಿತ್ಸೆ ನೀಡಲು ಧನ್ವಂತರಿ ರೂಪ ಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ.

ಧನ್ವಂತರಿ ಪದದ ನಿಷ್ಪತ್ತಿ

ಧನು +ಏವ + ಅಂತಃ + ಅರಿ = ಧನ್ವಂತರಿ

ಧನುಷಾ + ತರತೇ+ ತಾರಯತೇ + ಪಾಪಾತ್ = ಧನ್ವಂತರಿ (ಪಾಪ ವಿಮುಕ್ತಿ)

ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ 
ಸುಧಾಕಲಶ ಹಸ್ತಂ ತಂ ವಂದೇ ಧನ್ವಂತರಿ ಹರಿಮ್ 

ಹಿಂದೂ ಧರ್ಮಗ್ರಂಥಗಳು ಭಗವಾನ್ ಧನ್ವಂತರಿಯನ್ನು ದೈವಿಕ ರೂಪದಲ್ಲಿ ತೋರಿಸು ತ್ತವೆ. ನೀಲಿ ಬಣ್ಣದ ಸುಂದರ ವ್ಯಕ್ತಿಯಾಗಿ ಪ್ರಕಾಶಮಾನವಾದ ಹಳದಿ ರೇಷ್ಮೆ ವಸ್ತ್ರವನ್ನು ಧರಿಸಿರುವರು. 4 ಕೈಗಳನ್ನು ಹೊಂದಿದ್ದು, ಒಂದರಲ್ಲಿ ಅಮೃತವನ್ನು ಹೊಂದಿರುವ ಕರಂಡಕ, ಇನ್ನೊಂದು ಕೈಯಲ್ಲಿ ರಕ್ತ ಹೀರುವ ಜಿಗಣೆ ಹಿಡಿದುಕೊಂಡಂತೆ ತೋರಿಸುತ್ತದೆ. ಇನ್ನೆರಡು ಕರಗಳಲ್ಲಿ ಶಂಖ-ಚಕ್ರಗಳು ಧಾರಣೆ ಆಗಿರುತ್ತದೆ. ಮತ್ತೆ ಕೆಲವು ಗ್ರಂಥಗಳು ಆಯುರ್ವೇದ ಪುಸ್ತಕ ಹಾಗೂ ಔಷಧೀಯ ಗಿಡಮೂಲಿಕೆಗಳನ್ನು ಕೈಯಲ್ಲಿ ಹಿಡಿದಿರುವಂತೆ ಯೂ ತೋರಿಸುತ್ತದೆ.

ಧನ್ವಂತರಿ ಭಗವಾನ್ ವಿಷ್ಣುವಿನ ಆದೇಶದಂತೆ ಮಾನವರೂಪಧಾರಿಯಾಗಿ ಕಾಶೀರಾಜನ ಮಗನಾಗಿ ಜನ್ಮವೆತ್ತಿದರು. ಧನ್ವಂತರಿ ತನ್ನ ಶಿಷ್ಯ ನಾದ ಸುಶ್ರುತನ ಮೂಲಕ ಪ್ರಪಂಚಕ್ಕೆ ಮಹತ್ತ ರವಾದ ಆಯುರ್ವೇದ ವೈದ್ಯಕೀಯ ಶಾಸ್ತ್ರವನ್ನು ತಲುಪಿಸುತ್ತಾನೆ. ಹಾಗಾಗಿಯೇ ಧನ್ವಂತರಿಯನ್ನು ಆಯುರ್ವೇದ ಪಿತಾಮಹ ಎಂದು ಕರೆಯು ವರು.

ಅಮೃತವೆಂದರೆ ಅಮರತ್ವವನ್ನು ಪಾಲಿಸು ವಂತಹದು ಮತ್ತು ಮರಣಕ್ಕೆ ಪ್ರತಿವಿಷ. ಅದನ್ನು ದೇವತೆಗಳಿಗೆ ತಲುಪಿಸುವಂತಹ ಕಾರ್ಯ ಧನ್ವಂತರಿಯಿಂದ ನಡೆಯಿತು. ಹಾಗಾಗಿ ಅಮೃತದ ಬಟ್ಟಲನ್ನು ಕೈಯಲ್ಲಿ ಹಿಡಿದಿರುವುದು. ಶಂಖ ಚಕ್ರಗಳು ವಿಷ್ಣು ಅವತಾರದ ದ್ಯೋತಕ. ಮತ್ತೊಂದು ಕೈಯಲ್ಲಿ ಜಿಗಣೆಯನ್ನು ಹಿಡಿದಿರು ವುದು ಆಯುರ್ವೇದ ವೈದ್ಯಕೀಯ ಜ್ಞಾನದ ಸಂಕೇತ. ಜಿಗಣೆಯನ್ನು ಶಸ್ತ್ರಚಿಕಿತ್ಸೆಗಳಲ್ಲಿ ಮತ್ತು ಕಲುಷಿತ ರಕ್ತವನ್ನು ಹೊರಗೆಳೆಯುವಲ್ಲಿ ಉಪಯೋಗಿ ಸುವ ಜ್ಞಾನ ಈಗಿನ ಆಧುನಿಕ ವೈದ್ಯಶಾಸ್ತ್ರದಲ್ಲಿ ಜನಜನಿತ. ಕೆಲವು ಸ್ಥಳಗಳಲ್ಲಿ ಅವನು ತನ್ನ ಕೊರಳಲ್ಲಿ ತುಳಸಿ ಬೀಜದ ಮಾಲೆಯನ್ನು ಸಸ್ಯಮಾಲೆಯ ಪ್ರಭಾವಲಯ ದೊಂದಿಗೆ ಧರಿಸಿರುವಂತೆಯೂ ಚಿತ್ರಿಸಲಾಗಿದೆ.

ಪುರಾತನ ಹಿಂದೂ ಧರ್ಮಗ್ರಂಥಗಳ ಪ್ರಕಾರ ಅರಶಿನ ಮತ್ತು ಉಪ್ಪು ಇವುಗಳ ಸಂರಕ್ಷಕ ಹಾಗು ನಂಜು ನಿರೋಧಕ ಗುಣ ಲಕ್ಷಣಗಳನ್ನು ಪ್ರಪಂಚಕ್ಕೆ ಪರಿಚಯಿಸಿದವರು ಭಗವಾನ್ ಧನ್ವಂತರಿ ಎಂದು ಹೇಳಲಾಗುತ್ತದೆ. ಅಲ್ಲದೆ ಪ್ಲಾಸ್ಟಿಕ್ ಸರ್ಜರಿಯಂತಹ ಆಧುನಿಕ ವೈದ್ಯಕೀಯ ಪದ್ಧತಿಗಳಲ್ಲಿ ಪರಿಣಿತರು ಎಂದು ಹೇಳಲಾಗುತ್ತದೆ.

ದಕ್ಷಿಣ ಭಾರತದಲ್ಲಿ ಧನ್ವಂತರಿ ದೇವತೆಗೆ ಮೀಸಲಾದ ಹಲವಾರು ದೇವಾಲಯಗಳಲ್ಲಿ ಕೇರಳದ ತಪ್ಪುವ, ತಮಿಳುನಾಡಿನ‌ ಶ್ರೀರಂಗಮ್ ನಲ್ಲಿರುವ ರಂಗನಾಥ ಸ್ವಾಮಿ ದೇವಾಲಯ ಮತ್ತು ಕಾಂಚೀಪುರಂ ನ ವರದರಾಜಸ್ವಾಮಿ ದೇವಾಲಯಗಳು ಪ್ರಮುಖವಾದವು. 

ಧನ್ವಂತರಿ ಸುಪ್ರಭಾತ, ಧನ್ವಂತರಿ ಪ್ರಪತ್ತಿ, ಧನ್ವಂತರಿ ಸ್ಮೃತಿಗಳಲ್ಲಿ ಧನ್ವಂತರಿ ದೇವರ ವಿಶೇಷತೆಯನ್ನು ಬಣ್ಣಿಸಲಾಗಿದೆ.ದಾಸ ಸಾಹಿತ್ಯ ದಲ್ಲಿ ವಿಜಯದಾಸರ ಧನ್ವಂತರಿ ಸುಳಾದಿ  ಧನ್ವಂತರಿ ದೇವತೆಗೆ ಮೀಸಲಾಗಿದೆ. ಶ್ರೀಗೋಪಾಲ ದಾಸರ “ಆವ ರೋಗವೊ ಎನಗೆ ದೇವ ಧನ್ವಂತರಿಯೇ” ರಚನೆ ಸಹ ಇಲ್ಲಿ ಉಲ್ಲೇಖಾರ್ಹ.

ಈ ಧನ ತ್ರಯೋದಶಿ ದಿನ ಶಾಸ್ತ್ರೋಕ್ತವಾಗಿ ಧನ್ವಂತರಿಯ ಆರಾಧನೆ ಮಾಡಿ ಈ ಮಂತ್ರ ವನ್ನು ಹೇಳಿಕೊಳ್ಳುತ್ತಾರೆ. ಧನ್ವಂತರಿಯ ಪ್ರಾರ್ಥನೆಯಿಂದ ದೈಹಿಕ ಮಾನಸಿಕ ಅಸ್ವಸ್ಥತೆ ಗಳು ದೂರವಾಗುತ್ತದೆ ಎಂಬ ನಂಬಿಕೆ.

ಓಂ ನಮೋ ಭಗವತೇ ವಾಸುದೇವಾಯ
ಧನ್ವಂತರೇ ಅಮೃತಕಲಶ ಹಸ್ತಾಯ
ಸರ್ವರೋಗ ವಿನಾಶಾಯ ತ್ರೈಲೋಕ್ಯನಾಥಾಯ 
ಶ್ರೀ ಮಹಾ ವಿಷ್ಣವೇ ನಮಃ  

ಧನ್ವಂತರಿ ಭಾರತದ ಮೊದಲ ವೈದ್ಯನೆಂಬ ಪ್ರತೀತಿ. ವೈದಿಕ ಸಂಪ್ರದಾಯದ ರೀತ್ಯ ಧನ್ವಂತರಿ ಆಯುರ್ವೇದದ ಹರಿಕಾರ.ಹಾಗಾಗಿ ಈ ದಿನ ವನ್ನು “ರಾಷ್ಟ್ರೀಯ ಆಯುರ್ವೇದ ದಿನ” ವೆಂದೂ ಆಚರಿಸುವ ರೂಢಿಯಿದೆ ಈ ಧನ್ವಂತರಿ ಜಯಂತಿಯನ್ನು ದೆಹಲಿಯ ಧನ್ವಂತರಿ ಭವನ ದಲ್ಲಿ ಆಯುರ್ವೇದ ಮಹಾ ಸಮ್ಮೇಳನದ ಕಚೇರಿಯಲ್ಲಿರುವ ಭಗವಾನ್ ಧನ್ವಂತರಿಯ ಬೃಹತ್ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತದೆ.

ಭಗವಾನ್ ಧನ್ವಂತರಿಯ ಆಶೀರ್ವಾದ ಆರಾಧ ಕರಿಗೆ ಗಂಭೀರ ಕಾಯಿಲೆಗಳು ಮತ್ತು ಗುರುತಿಸ ಲಾಗದ ಕಾಯಿಲೆಗಳಿಂದ ಪರಿಹಾರ ಕೊಡುತ್ತದೆ. ಈ ಕೆಳಕಂಡ ಶ್ಲೋಕದೊಂದಿಗೆ ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಪ್ರಾರಂಭಿಸಿದರೆ ದಿನವಿಡೀ ಚೈತನ್ಯ ಪೂರ್ಣತೆ ಉಳಿಯುತ್ತದೆ ಎಂದು ಹೇಳಲಾಗಿದೆ.

ನಮಾಮಿ ಧನ್ವಂತರಿಯಸದಿದೇವಂ
ಸುರಾಸುರ ವಂದಿತ ಪಾದಪದ್ಮಮ್
ಲೋಕೇ ಜರಾಋಗ್ವಯ ಮೃತ್ಯು ನಾಶಂ
ದಾತಾರಮೀಶಂ ವಿವಿಧೌಷಧೀನಾಮ್.

ಬನ್ನಿ ಈ ಶುಭದಿನದಂದು ಹಾಗೂ ದಿನವೂ ಧನ್ವಂತರಿ ದೇವತೆಯು ನಾಮಸ್ಮರಣೆ ಮಾಡುತ್ತಾ ಈ ಭವ ರೋಗಗಳಿಗೆ ವೈದ್ಯನಾದ ಅವನ ಕೃಪೆಗೆ ಪಾತ್ರರಾಗೋಣ.

✍️ಸುಜಾತಾ ರವೀಶ್
ಮೈಸೂರು