ಬ್ರಹ್ಮನಂತೆ ಕುಂಬಾರ ಮಾಡಿಹ ಮಣ್ಣಿನ್ಹಣತೆ
ರೈತನ್ಹತ್ತಿ ಗಾಣಿಗನೆಣ್ಣೆ ಕಾರ್ಮಿಕ ಗಣದ ಶ್ರಮತೆ
ಪ್ರಾಣವಾಯು ಅಗ್ನಿ ಸ್ಪರ್ಶದಿ ಬೆಳಗೊ ದೀಪ ಶ್ರೇಷ್ಠತೆ
ಮನೆ ಮನದ ಕತ್ತಲೆ ಕಳೆದು ನಲಿವರೋ ಜನತೆ
ಕರಗಲಿ ಜಾತಿ ಮತ ಪಂಥಗಳ ಕಾರ್ಮೋಡ ಬೆಳಕಲಿ
ಮೆರೆಯಲಿ ಶಾಂತಿ ಸೌಹಾರ್ದತೆ ಅನುದಿನವು ಜಗದಲಿ
ಮಿನುಗಲಿ ಜ್ಞಾನದೀಪ ಬೆಳಗುತ ಕ್ಷಣ ಕ್ಷಣವೂ ಸ್ಫೂರ್ತಿಯಲಿ
ಮರೆಯಲಿ ಜನಮನ ಕಹಿ ನೆನಪುಗಳ ಬೆಳಕ ಲೀಲೆಯಲಿ
ನೀಗಲಿ ತಾಮಸ ತಿಮಿರ ಪ್ರಖರ ಪ್ರಣತೆ ಜ್ವಾಲೆಯಲಿ
ನೀಡಲಿ ಅರಿವಿನ ಬೆಳಕನನವರತ ದೀಪ ಸಾಲಾವಳಿ
ಸುಡಲಿ ರಕ್ಕಸತನ ಸೃಷ್ಟಿಕರ್ತನ ಆತ್ಮ ಶಕ್ತಿ ಪ್ರಭಾವಳಿ
ಕೊಲಲಿ ಸಕಲ ವ್ಯಾಧಿ ಬೇಗುದಿ ದೀಪ ನಾಮಾವಳಿ
ಚೆಲ್ಲಲಿ ಕರುನಾಳು ಬೆಳಕು ಹೃದಯದೊಳ್ ಕಾಂತಿಕಣ
ಅರಳಲಿ ಮನುಜರೆದೆಯಲಿ ಪರೋಪಕಾರದ ಶಾಂತ ಮನ
ಮೂಡಲಿ ಸಮತೆ ಎಡ ಬಲ ಪಂಥದ ಪರದೆ ಸರಿಸರಿದು
ಹಾಡಲಿ ಸಮಗಾನ ಜಂಬ ಜಿದ್ದಿನ ಹದ್ದು ಉರಿದುರಿದು
ಹಚ್ಚಿ ಬುದ್ಧ ಬಸವ ಭೀಮರಮರಾದಿ ವೈಚಾರಿಕ ದೀಪ
ಮೆಚ್ಚಿ ಪಂಪ ಕುವೆಂಪು ಬೇಂದ್ರೆ ಬರಹ ಭಾವೈಕ್ಯ ದೀಪ
ನೆಚ್ಚಿ ಶರಣ ಸಾಧು ಸಂತ ದಾಸರಾ ಸಾಮರಸ್ಯ ದೀಪ
ಕೊಚ್ಚಿ ಮೌಢ್ಯತೆ ಬೆಳಬೆಳಗಲಿ ಮಾನವ ಪ್ರಗತಿ ದೀಪ

✍️ಶ್ರೀಸುಭಾಷ್ ಎಚ್ ಚವ್ಹಾಣ
ಶಿಕ್ಷಕ ಸಾಹಿತಿಗಳು, ಹುಬ್ಬಳ್ಳಿ