ನನ್ನೆದೆಯ ಕೊಳವು
ಬರೀ ಸಿಹಿನೀರು ಪೂರ
ಶುಭ್ರ ಸುಂದರ
ಇಲ್ಲಿ ಕೊಳೆಗಿಳೆಯೆಲ್ಲ
ಉಳಿಯುವುದಿಲ್ಲ
ತೇಲುತ್ತಾ ಹೊರಡುತ್ತೆ ಹೊರಗೆ
ಒಳಿತೆಲ್ಲಾ ಕರಗಿ
ಕೆಳಕ್ಕೆ ತಳಕ್ಕೆ ಇಳಿಯುತ್ತದೆ
ಯಾರೆಷ್ಟೇ ಕಲ್ಲಾಕಿ
ನಗುತ್ತ ಕುಳಿತರೂ
ಕಲಕಿದರೂ ಕದಡಲಾಗದೆನ್ನ
ಕೊಳದ ತಿಳಿಯ
ಇಣುಕಿ ನೋಡಲು
ಕಾಣುವುದು ಹೊಳೆಯುವುದಿಲ್ಲಿ
ಮುತ್ತು ಹವಳ ನಿಚ್ಚಳ
ಸಕ್ಕರೆಯ ಸುರಿದರೆ
ಸಿಹಿಹೆಚ್ಚಿ ಕೊಳದ ಒಳಗೆಲ್ಲ
ಹಿರಿಹಿರಿ ಹಿಗ್ಗುವುದು
ಒಳಗಿನ ಹಂಸವು
ಕೆಸರೆರೆಚಿದರೂ ಕೂಡ
ಅದರಲ್ಲೂ ಅರಳೀತು ಹೂವ
ಹೊರಳೀತು ನಿನ್ನತ್ತ
ಬೀರಿತು ಕಂಪ ತಂಪ

✍️ಶಿವಾನಂದ ಉಳ್ಳಿಗೇರಿ
ಉಡಿಕೇರಿ ಜಿ:ಬೆಳಗಾವಿ