ಇರುಳುಗಳು ಜೊತೆಗಿದ್ದ ಕ್ಷಣವೆಲ್ಲ
ಅವಳು ವೇದನೆಯ ಕಣ್ಣುಗಳ
ಆಗಸದಲ್ಲಿ ನೆಟ್ಟು ಸುಮ್ಮಗೆ
ಕೂತಿದ್ದೇ ಹೆಚ್ಚು
ಹೊಳೆಯುವ ತಾರೆಗಳು, ಖಾಲಿ ಆಕಾಶ
ಉಕ್ಕೇರುವ ಚಂದ್ರ
ಒಂಟಿತನವನ್ನು ಗೇಲಿ ಹಾಕಿ ನಗುವಾಗಲೆಲ್ಲ
ತುಟಿ ಕಚ್ಚಿಕೊಳ್ಳುತ್ತಾಳೆ..

ಹೇಗಿರಬಹುದು ಅವನೆಂಬ ಸುಖ, ಸಖ?
ಕಿಟಕಿ ಸರಳುಗಳ ನಡುವೆ
ನೋಟ ತೂರಿಸುತ್ತಾಳೆ
ಹೊಳೆವ ಚಂದ್ರ ಕಣ್ಣಿನಲಿ ಕೂತು
ದಿಂಬಿನ ಎಳೆಗಳಲ್ಲಿ ಚಿತ್ತಾರ ಬಿಡಿಸುವಾಗ
ಎಲ್ಲಿಂದಲೋ ಗಾಳಿಯೊಂದು
ಕುತ್ತಿಗೆಯ
ಕರಿಮಣಿಯ ಸರ ಒಮ್ಮಿಂದೊಮ್ಮೆಲೆ
ಚಲನೆಗೊಳ್ಳತ್ತದೆ..
ಹಣೆಗಿಟ್ಟ ಬಿಂದಿ, ಕೈ ಬಳೆ,
ಒಂದಿನಿತೂ ಅತ್ತಿತ್ತಾಗದೆ
ಅಲ್ಲಿಯೇ ಮರಗಟ್ಟು ಮಾತನಾಡಿದಾಗಲೆಲ್ಲ
ಆಸೆಗಣ್ಣಿನಲಿ ಅವಳು
ಬೆರಳುಗಳ ಹೂವಿನ ತೆಕ್ಕೆಗಳಲ್ಲಿ
ತೇಲಿ ಬಿಡುತ್ತಾಳೆ..
ಎದ್ದ ಬಯಕೆ, ಉಕ್ಕಿದ ಕಾವು..
ಬೆಳಗಾಗುವದರೊಳಗೆ
ಆರಿದ ಒಲೆಯಂತಾಗಿ
“ಅಚ್ಚುಕಟ್ಟಿನ ಗೃಹಿಣಿಯೊಬ್ಬಳು”
ಎದ್ದು ಕೂರುತ್ತಾಳೆ..

✍️ದೀಪ್ತಿ ಭದ್ರಾವತಿ