ಕನ್ನಡ ಸಾಹಿತ್ಯ ವಾಜ್ಞ್ಮಯದ ಅಮೂಲ್ಯ ನಿಧಿ ವಚನಗಳು. ೧೧ ಮತ್ತು ೧೨ನೇಯ ಶತಮಾನ ದಲ್ಲಿ ಶಿವಶರಣರು ನಡೆಸಿದ ಆಧ್ಯಾತ್ಮಿಕ ಮಹಾ ಕ್ರಾಂತಿಯ ಫಲ ಇದು.ಈ ಕ್ರಾಂತಿಯಲ್ಲಿ ಕನ್ನಡದ ಮೊಟ್ಟ ಮೊದಲ ಕವಯತ್ರಿ ಅಕ್ಕ ಮಹಾದೇವಿ ಬೆಳಕಿಗೆ ಬಂದದ್ದು ತನ್ನ ಅಮೋಘ ವಚನ ಸಂಪತ್ತನ್ನು ಕನ್ನಡಿಗರಿಗೆ ಬಿಟ್ಟು ಹೋಗಿದ್ದು. ಸ್ವಾಭಿಮಾನ ಹಾಗೂ ಚನ್ನಮಲ್ಲಿಕಾರ್ಜುನೆಡೆಗಿನ ಅಸೀಮ ಭಕ್ತಿಗಳು ಪ್ರಚಲಿತ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಗಿಂತ ಭಿನ್ನವಾದ ಹಾದಿಯ ನ್ನು ಅವಳು ಆರಿಸಿಕೊಳ್ಳುವಂತೆ ಮಾಡಿದವು.  ಒಂಬೈನೂರು ವರ್ಷಗಳ ಹಿಂದೆಯೇ ಮಹಿಳಾ ಅಸ್ಮಿತೆ ಸಮಾನತೆ ಹಾಗೂ ಸ್ವಾತಂತ್ರಗಳ ಮುನ್ನುಡಿ ಬರೆದವಳು ಅಕ್ಕಮಹಾದೇವಿ.  ಎಳೆ ಹರೆಯದಲ್ಲೇ ಆಧ್ಯಾತ್ಮಿಕ ಜೀವನ ನಡೆಸುತ್ತಾ ಮಹಾದೇವಿ ಅಕ್ಕಮಹಾದೇವಿ ಯಾದಳು.  ಈ ದಿಸೆಯಲ್ಲಿನ ಅವಳ ಪಯಣ ದ ಎರಡನೇಯ ಹೆಜ್ಜೆ ಅನುಭವ ಮಂಟಪದ ದರ್ಶನ.  ತನ್ನ ಪತಿ ಷರತ್ತುಗಳನ್ನು ಪೂರೈಸ ದಿದ್ದಾಗ ಉಟ್ಟ ಸೆರಗನ್ನೇ ಹಿಡಿದು ಎಳೆದಾಗ ಬಟ್ಟೆಯ ಹಂಗು ಬೇಡವೆಂದು ನಶ್ವರ ದೇಹ ಸೌಂದರ್ಯವನ್ನು ಧಿಕ್ಕರಿಸುತ್ತಾ ದಿಗಂಬರ ಳಾಗಿ ಕದಳಿವನದೆಡೆಗಿನ ತನ್ನ ಪಯಣವನ್ನು ಆರಂಭಿಸುತ್ತಾಳೆ. ಅದಕ್ಕೆ ಮುಂಚೆ ಬಸವಣ್ಣ ನವರ ಅಭಿಮಾನಿಯಾದ್ದ ರಿಂದ  ಅನುಭವ ಮಂಟಪಕ್ಕೆ ಹೋಗಿ ಶಿವ ಶರಣರ ದರ್ಶನ ಪಡೆಯಬೇಕೆಂಬ ಹಂಬಲ ಹೊತ್ತು ಕಲ್ಯಾಣದೆ ಡೆಗೆ ಸಾಗುತ್ತಾಳೆ.  

ಅನುಭವ ಮಂಟಪಕ್ಕೆ ಮಾರನೆಯ ದಿನ ಮಹಾ ದೇವಿ ಆಗಮಿಸುವಳು ಎಂಬ ಸುದ್ದಿಯನ್ನು ಸಾಕ್ಷಾತ್ ಅಲ್ಲಮಪ್ರಭುಗಳೇ ಸಭೆಯಲ್ಲಿ ಹೇಳು ತ್ತಾರೆ. ಅಂದು ಶರಣ ಶರಣೆಯರಿಂದ ಅನುಭವ ಮಂಟಪ ತುಂಬಿ ತುಳುಕುತ್ತಿರುತ್ತದೆ. ಆಗ ಮಹಾದೇವಿ ಬರುವ ಸುದ್ದಿಯನ್ನು ಮಡಿವಾಳ ಮಾಚಿದೇವರು ಉಡುತಡಿಯ ಮಹಾದೇವಿ ಅಕ್ಕನವರು ಆಗಮಿಸುತ್ತಿದ್ದಾರೆ ಎಂದು  ಹೇಳು ತ್ತಾರೆ. ಬಸವಣ್ಣನವರು “ಮಾಚಿ ದೇವರೇ ಮಹಾ ದೇವಿಯವರನ್ನು ಮರ್ಯಾದೆಯಿಂದ ಕರೆತನ್ನಿ” ಎಂದು ಹೇಳಲು ಮಾಚಿದೇವರು ಆಕೆಗೆ ನಡೆಮಡಿಯನ್ನು ಹಾಸುತ್ತಾರೆ. ಆಗ ಮಹಾದೇವಿ ಯು ಮಡಿಯನ್ನು ಸರಿಸಿ ಒಳಗೆ ಬರುತ್ತಾಳೆ. ಹಾಗೆ ಒಳಗೆ ಬಂದ ಅಕ್ಕಮಹಾ ದೇವಿ ಹಾಗೂ ಅಲ್ಲಮ ಪ್ರಭುಗಳ  ನಡೆಯುವ ಈ ಆಧ್ಯಾತ್ಮಿಕ ಸಂವಾದ ಪ್ರಭುದೇವರು ಅಕ್ಕಮಹಾ ದೇವಿಯ ಆಧ್ಯಾತ್ಮಿಕ ಅಂತಃ ಶಕ್ತಿಯನ್ನು ಪ್ರಪಂಚಕ್ಕೆ ತಿಳಿಯಪಡಿಸುವ ಉದ್ದೇಶದಿಂದ ನಡೆಸಿದುದು. 

ಬಿಗಿ ಮೊಗದ ಪ್ರಭುದೇವರು ಅಕ್ಕನನ್ನು ಸ್ವಾಗತಿ ಸದೆಲೇ ಕುಳಿತುಕೊಳ್ಳಲು ಆಸನ ನೀಡದೆಯೇ,  ಆಕೆ ಶ್ರೀಚರಣಗಳಿಗೆ ಶರಣು ಶರಣಾರ್ಥಿ ಎಂದಾಗ ಅಕ್ಕಮಹಾದೇವಿಯನ್ನು “ನೀನು ತುಂಬು ಯೌವನದ ತರುಣಿ. ಇಲ್ಲಿರುವ ಶರಣರು ಸತಿಯೆಂದರೆ ಮುನಿವರು ನಿನ್ನ ಪತಿಯ ಹೆಸರ ನ್ನು  ಹೇಳಿ ಪರಿಚಯಿ ಸಿಕೋ. ಇಲ್ಲದಿದ್ದರೆ ಈ ಶರಣ ಸಂಘದಲ್ಲಿ ನಿನಗೆ ಸ್ಥಳವಿಲ್ಲ” ಎನ್ನುತ್ತಾರೆ. 

ಆಗ ಮಹಾದೇವಿಯು ಚನ್ನಮಲ್ಲಿಕಾರ್ಜುನನ ಜತೆ ತನಗಾದ ವಿವಾಹವನ್ನು ಹೀಗೆ ಹೇಳುತ್ತಾಳೆ: 

ಉರಕ್ಕೆ ಜವ್ವನಗಳು ಬಾರದ ಮುನ್ನ 
ಮನಕ್ಕೆ ನಾಚಿಕೆಗಳು ತೋರದ ಮುನ್ನ 
ನಮ್ಮವರಂದೆ ಮದುವೆಯ ಮಾಡಿದರು ಸಿರಿಶೈಲ ಚನ್ನಮಲ್ಲಿಕಾರ್ಜುನಂಗೆ. ಹೆಂಗೂಸೆಂಬ ಭಾವ ತೋರದ ಮುನ್ನ
ನಮ್ಮವರಂದೆ ಮದುವೆಯ ಮಾಡಿದರು.

ಇಲ್ಲಿ ಮನುವಿನ “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಎಂಬ ಮಾತು ನೆನಪಿಗೆ ಬರುತ್ತದೆ. ಜೀವನದ ಯಾವುದೇ ಹಂತದಲ್ಲಾಗಲಿ ಇಂತವರ ಮಗಳು, ಪತ್ನಿ, ತಾಯಿ ಎಂದೇ ಗುರುತಿಸಿ ಕೊಳ್ಳಬೇಕಾ ದಂತಹ ಅಂದಿನ ಮಹಿಳೆಯ ಸ್ಥಿತಿಯನ್ನೂ ಸೂಚಿಸುತ್ತದೆ. ಒಂಬೈನೂರು ವರ್ಷಗಳ ನಂತರ ವೂ ಈ ಪರಿಸ್ಥಿತಿ ಕೊಂಚ ವೂ ಸುಧಾರಿಸದಿರು ವುದು ವಿಷಾದನೀಯ. 

ಬಾಲ್ಯದಿಂದಲೇ ತಾನು ರೂಢಿಸಿಕೊಂಡು ಬಂದ ಲಿಂಗಪೂಜೆ ಹಾಗೂ ಚನ್ನಮಲ್ಲಿಕಾರ್ಜು ನನನ್ನು ಗಂಡನನ್ನಾಗಿ ಭಾವಿಸಿದ ತನ್ನ ಸಂಕಲ್ಪ ವನ್ನು ತಿಳಿಯಪಡಿಸುತ್ತಾಳೆ. 

ಆದರೆ ಪ್ರಭುದೇವರ ಮುಖದ ಬಿಗಿ ಸಡಿಲವಾ ಗುವುದಿಲ್ಲ. ಅವಳ ಮಾತನ್ನು ಒಪ್ಪದೆ “ನಿನ್ನ ಚರಿತ್ರೆ ಪ್ರಪಂಚಕ್ಕೆ ತಿಳಿದಿದೆ. ಕೌಶಿಕನೊಡನೆ  ಸಂಬಂಧವನ್ನು ತೊರೆದು ಮದುವೆಯನ್ನು ಧಿಕ್ಕರಿಸಿ ಬಂದಿರುವೆ. ಪತಿಯ ಮೇಲೆ ತಪ್ಪು ಹೊರಿಸುವ ಸತೀಧರ್ಮವನ್ನು ನಮ್ಮ ಶರಣರು ಒಪ್ಪರು” ಎನ್ನುತ್ತಾನೆ.  

ಗುರುವೆ ತೆತ್ತಿಗನಾದ, ಲಿಂಗವೇ 
ಮದುವಣಿಗನಾದ, ನಾನೇ ಮದುವಳಿಗೆಯಾದೆನು. ಈ 
ಭುವನವೆಲ್ಲರಿಯಲು ಅಸಂಖ್ಯಾತರೆನಗೆ ತಾಯಿ ತಂದೆಗಳು. ಕೊಟ್ಟರು ಸಾದೃಶ್ಯವಪ್ಪ ವರನನ್ನು ನೋಡಿ. ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ ಮಿಕ್ಕಿನ ಲೋಕದವರೆನಗೆ ಸಂಬಂಧವಿಲ್ಲೆಯ್ಯಾ ಪ್ರಭುವೇ 

ಲಿಂಗವೇ ಮದುವಣಿಗನಾಗಿ ನಾನೇ ಮದುವಣ ಗಿತ್ತಿಯಾದಾಗ ಚೆನ್ನಮಲ್ಲಿಕಾರ್ಜು ನನೇ ನನ್ನ ಗಂಡ ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧ ವಿಲ್ಲಯ್ಯಾ ಪ್ರಭುವೇ ಎನ್ನುತ್ತಾಳೆ. ಕೌಶಿಕನ ಪ್ರಸಂಗ ಒಂದು ದೈವಕೃಪೆ ಬಂದಂತೆ ಅಷ್ಟೇ ಕರ್ಮ ಜಾಲ. ಸ್ತ್ರೀಯ ಸೌಂದರ್ಯದ ವ್ಯರ್ಥ ವ್ಯಾಮೋಹ ಬಿಡಿಸಲು ದಿಗಂಬರಳಾಗಿ ಅರಮನೆ ಯನ್ನು ತ್ಯಜಿಸಿ ಬಂದೆ ಎನ್ನುತ್ತಾಳೆ.

ಆದರೂ ಒಪ್ಪದ ಅಲ್ಲಮನು “ನಿನ್ನ ದೇಹದ ಮೋಹ ನಿನಗೆ ಹೋಗಿಲ್ಲ. ಸೀರೆಯ ಹಂಗು ಬಿಟ್ಟೆ ಯಾದರೆ ಕೂದಲನ್ನೇಕೆ ಮರೆಮಾಡಿ ಕೊಂಡೆ” ಎನ್ನುತ್ತಾನೆ. 

ಆಗ ಮಹಾದೇವಿಯೂ ಇಲ್ಲ ಆ ಭಾವ ಉಳಿದಿಲ್ಲ.

ಕಾಯ ಕರ್ರನೆ ಕಂದಿದಡೇನಯ್ಯಾ ಕಾಯ ಮಿರ್ರನೆ ಮಿಂಚಿದರೇನಯ್ಯ ಅಂತರಂಗ ಶುದ್ಧವಾದ ಬಳಿಕ ಚೆನ್ನಮಲ್ಲಿಕಾರ್ಜುನನಿಗೆ ಒಲಿದ ಅಂಗವು ಹೇಗಿದ್ದರೇನಯ್ಯ?

ಎನ್ನುತ್ತಾ 

ಫಲ ಒಳಗೇ ಪಕ್ವವಾಗಿಯಲ್ಲದೆ, ಹೊರಗಳ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ
ಕಂಡು ನಿಮಗೆ ನೋವಾದಿಹಿತೆಂದು ಆ 
ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣಾ, 
ಚೆನ್ನಮಲ್ಲಿಕಾರ್ಜುನ ದೇವರ ದೇವನ
ಒಳಗಾದವಳ

ಎಂದು ತಾನು ಕೇಶದಿಂದ ಮೈಯನ್ನು ಮುಚ್ಚಿ ಕೊಂಡ ಕಾರಣವನ್ನು ಅರಹುತ್ತಾಳೆ.

ಅದಕ್ಕೆ ತೃಪ್ತನಾಗದ ಅಲ್ಲಮನು ಫಲ ಪಕ್ವವಾ ದಾಗದೆ ಹೊರಗಣ ಸಿಪ್ಪೆ ಒಪ್ಪಗೆಡದು ಆದರೆ ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗು ತ್ತದೆ ಅದನ್ನು ಮೆಚ್ಚುವುದು? ಹೇಗೆ ಎಂದು ಪ್ರಶ್ನಿಸುತ್ತಾನೆ.

ಆಗ ಅಕ್ಕನು, ಆ ಹಣ್ಣನ್ನು ತಾನು ಹಾಗೆಯೇ ಇಟ್ಟಿಲ್ಲವೆಂದು ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿ ಬಿಟ್ಟಿದ್ದೇನೆ ಎಂದು ಹೇಳುತ್ತಾ ಅರಿಷಡ್ವರ್ಗಗಳನ್ನಳಿದು ನನ್ನ ದೇಹವನ್ನು ವ್ಯಾಪಿಸಿರುವ ಸಚ್ಚಿದಾನಂದಾತ್ಮಕವಾದ ರಸ ಅದು. ಒಪ್ಪಗೆಟ್ಟರೂ ಕೊಳೆಯಲಾರ ದು.  ನನ್ನತನ ಏನೂ ಇಲ್ಲವೆಂದು ಎಂದಿಗೂ ಅಳಿಯದ ಅಮರ ಪವಿತ್ರತೆಯ ನ್ನು ತಂದುಕೊಟ್ಟಿದೆ ಪ್ರಭುವೇ ಎನ್ನುತ್ತಾಳೆ. 

ಆಗ ಅಲ್ಲಮನು ಈ ಬಾಹ್ಯ ಬ್ರಹ್ಮದ ಬೆಡಗನ್ನು ನಾವು ಮೆಚ್ಚುವುದಿಲ್ಲ 

ನಾ ಸತ್ತೆನೆಂದು ಹೆಣ ಕೂಗುವುದುಂಟೆ? ಬೈಚಿಟ್ಟ ಬಯಕೆ ಕರೆದುದುಂಟೆ? 
ಹೆಪ್ಪಿಟ್ಟ ಹಾಲು ಸಿಹಿಯಪ್ಪುದೇ? ಈ ಮಾತು ಒಪ್ಪವಲ್ಲ ಗುಹೇಶ್ವರಲಿಂಗದಲ್ಲಿ.

ಎಂದು ಮರು ಪ್ರಶ್ನೆ ಹಾಕುತ್ತಾನೆ.  

ಆಗ ಅಕ್ಕನ ಉತ್ತರ ಈ ವಚನದ ಮೂಲಕ 

ಮರೆದೊರಗಿ ಕನಸ ಕಂಡು ಹೇಳುವಲ್ಲಿ 
ಸತ್ತ ಹೆಣ ಎದ್ದಿತ್ತು. ತನ್ನ ಋಣ ನಿಧಾನ
ಎದ್ದು ಕರೆಯಿತ್ತು. ಹೆಪ್ಪಿಟ್ಟ ಹಾಲು 
ಗಟ್ಟಿ ತುಪ್ಪಾಗಿ ಸಿಹಿಯಾಯಿತ್ತು. ಇದಕ್ಕೆ
ತಪ್ಪ ಸಾಧಿಸಲೇಕೆ ಚೆನ್ನಮಲ್ಲಿಕಾರ್ಜುನ ದೇವರ ದೇವನಣ್ಣಗಳಿರಾ? 

ನಿದ್ದೆಯೆಂದರೆ ಅದು ತಾತ್ಕಾಲಿಕ ಸಾವು ಮಲಗಿ ಎದ್ದು ಕನಸಿನ ವಿಷಯ ಹೇಳುವಾಗ ಸತ್ತ ಹೆಣ ಎದ್ದ ಹಾಗೆಯೇ. ಹಾಗೆ ಹೆಪ್ಪಿಟ್ಟ ಹಾಲು ಮೊಸ ರಾಗಲು ಬೆಣ್ಣೆಯಾಗಲು ನಂತರ ತುಪ್ಪವಾದಾಗ ಮತ್ತೆ ಸಿಹಿಯಾಗು ತ್ತದೆ.  ಇದಕ್ಕೆ ತಪ್ಪು ಸಾಧಿಸ ಲಿಕ್ಕೆ ಪ್ರಭುವೇ ಎಂದು ಆರ್ತಳಾಗಿ ಕೇಳುತ್ತಾಳೆ.

ಆಗ ಅಲ್ಲಮಪ್ರಭುವು ಅದು ಹೋಗಲಿ ಅರಿಷಡ್ವರ್ಗಗಳಿಂದಲೇ ತುಂಬಿರುವ   ಕಾಯವನ್ನು ಹೊಂದಿ ಅದನ್ನು ದಾಟಿದ್ದೇನೆ ಎಂದರೆ ನಂಬುವುದು ಹೇಗೆ? ಎನ್ನುತ್ತಾರೆ. 

ಆಗ ಅಕ್ಕನು, ಕಾಮವನ್ನು ಗೆಲ್ಲುವುದಕ್ಕೆ, ನನ್ನ ಮನಸ್ಸಿನಲ್ಲಿ ಎಂದೂ ಕಾಮ ಹುಟ್ಟಿಯೇ ಇಲ್ಲ.  ಅಂಗದ ಭಂಗವ ಲಿಂಗ ಸುಖದಿಂದ ಗೆಲ್ಲಿದೆ, ಜೀವದ ಭಂಗವ ಶಿವಾನುಭಾವ ದಿಂದ ಗೆಲ್ಲಿದೆ ಕರಗದ ಕತ್ತಲೆಯ ಬೆಳಕನ್ನು ಟ್ಟು ಗೆಲ್ಲಿದೆ. ಕಾಮನ ಕೊಂದು ಮನಸಿಜನಾ ಗುಳಿದರೆ ಮನಸಿಜನ ತಲೆ ಬರಹವ ತೊಡೆದೆ ನು. ಎನ್ನ ಮನಸ್ಸಿಜನ ಜನನಕ್ಕೆ ಅವಕಾಶ ವನ್ನೇ ಕಲ್ಪಿಸಿಕೊಟ್ಟಿಲ್ಲ ಇದನ್ನು ತಮ್ಮಂತಹ ಕೆಲವರು ಮಾತ್ರವೇ ಅರ್ಥಮಾಡಿಕೊಳ್ಳ ಬಲ್ಲವರು ಪ್ರಭುವೇ.

ಎಂಬ ಸಮಂಜಸ ಉತ್ತರವನ್ನು ಕೊಡುತ್ತಾಳೆ. 

ಅದನ್ನು ಕೇಳಿದ ಅಲ್ಲಮನು ಸಂತೃಪ್ತನಾಗಿ ತಾಯೆ ನಿನ್ನ ಜ್ಞಾನ ಘನ ನಿನ್ನ ವಿರತಿ ಘನ ನೀನು ವೈರಾಗ್ಯನಿಧಿ ನಿನ್ನನ್ನು ಪಡೆದ ಜಗತ್ತು ಪಾವನ. ಮಾಯೆ ನಿನ್ನನ್ನು ಮುಟ್ಟಲಿಲ್ಲ ಮರಹು ನಿನ್ನ ಸೋಂಕಲಿಲ್ಲ, ನಿನ್ನ ಕೆಡಿಸಲಿಲ್ಲ ಮಹಾದೇವಿ ಅಕ್ಕ ನೀನು ವಿಶ್ವ ಸ್ತ್ರೀ ಕುಲದ ಜ್ಯೋತಿ. ದಿಟ್ಟ ಹೆಜ್ಜೆ ಧೀರ ನುಡಿಯ ತಾಯಿ ನೀನು ವಿನಯ ವಿಶ್ವಾಸ ಗಳ ರತ್ನಗಣಿ ನೀನು ತಾಯೇ ಮಹಾದೇವಿ ನಿನ್ನ ಸ್ತ್ರೀ ಪಾದಗಳಿಗೆ ನಮೋ ನಮೋ ಎಂದು ಕೈಮುಗಿಯುತ್ತಾನೆ.

ಬಸವಣ್ಣನು ಸಹ ಹೌದು ಪ್ರಭುವೇ, ಈಕೆ ನಮ್ಮೆಲ್ಲರಿಗೂ ಹಿರಿಯೆ. ನಮ್ಮೆಲ್ಲರಿಗೂ ಗುರುವಾ ಗುವ ಯೋಗ್ಯತೆಯುಳ್ಳವಳು ಎಂದು ಶರಣಾರ್ಥಿ ಎನ್ನುತ್ತಾರೆ. ಅಕ್ಕ ವಿನಯ ದಿಂದ ನಾನು ನಿಮ್ಮೆಲ್ಲರ ಕರುಣೆಯ ಶಿಶು ನಿಮ್ಮೆದುರಿನಲ್ಲಿ ಅತಿ ಚಿಕ್ಕವಳು ಎಂದು ಸಂಕೋಚವನ್ನು ವ್ಯಕ್ತಪಡಿಸು ವಾಗ ಚನ್ನಬಸವಣ್ಣನವರು ಎದ್ದು ನಿಂತು ಈ ವಚನ ಹೇಳುತ್ತಾರೆ. 

ಅಜ ಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೇ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ? 
ನಡು ಮುರಿದು ತಲೆ ನಡುಗಿ ಮತಿಗೆಟ್ಟು
ಒಂದನಾಡ ಹೋಗಿ ಒಂಬತ್ತನಾಡುವ ಜ್ಞಾನಿಗಳೆಲ್ಲರು ಹಿರಿಯರೇ? 
ಅನುವನರಿದು ಘನವ ಬೆರೆಸಿ 
ಹಿರಿದು ಕಿರಿದೆಂಬ ಭೇದವ ಮರೆತು 
ಕೂಡಲ ಚನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿಯತನ ನಮ್ಮ ಮಹದೇವಿಯಕ್ಕಂಗಾಯಿತ್ತು…..

ನಿಜವಾಗಿಯೂ ಅಕ್ಕನ ಮಹತ್ವವನ್ನು ಮಹಾನತೆಯನ್ನು ಸಾರುವ ವಚನ ಇದು.

ಹೀಗೆ ಅನುಭವ ಮಂಟಪದಲ್ಲಿ ನಡೆದ ಈ ತುರೀಯ ಆಧ್ಯಾತ್ಮಿಕ ಅನುಭವದ ಅನುಭೂತಿ ಅಂದು ಅಲ್ಲಿ ನೆರೆದಿದ್ದ ಶಿವಶರಣರಿಗೆಲ್ಲಾ ಆಗಿತ್ತು. ಈ ಹೊಸ ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡಿ ಬಂಡಾಯಗಾರ್ತಿ ಎನಿಸಿದ ಉತ್ಕೃಷ್ಟ ವಚನಗಾರ್ತಿಯಾದ ಅಕ್ಕ ಸಿದ್ಧ ರೂಢಿ ಗತ ಸಂಪ್ರದಾಯವನ್ನೇ ಧಿಕ್ಕರಿಸಿ ಅಲೌಕಿಕ ಚೆನ್ನ ಮಲ್ಲಿಕಾರ್ಜುನನ ಸಾಂಗತ್ಯ ಅರಸಿ  ಹೊರಟ ಮಹಾನ್ ಭಕ್ತೆ. ಹೆಣ್ಣಿನ ಸ್ವಾಭಿಮಾನ ಸ್ವಾತಂತ್ರ್ಯ ಅಪೇಕ್ಷೆಗಳ ಪ್ರತೀಕ. ಶಾಂತ ಶೀತಲ ರೀತಿಯಲ್ಲಿ ತನ್ನ ವಿರೋಧ ವನ್ನು ವ್ಯಕ್ತಪಡಿಸುತ್ತಾ ಭಾವ ಪೂರ್ಣ ನೆಲೆಗಟ್ಟಿನಲ್ಲಿ ಆಂತರಿಕ ತುಮುಲಗಳ ನ್ನು ವೈಚಾರಿಕತೆಯನ್ನು ವ್ಯಕ್ತಪಡಿಸುತ್ತಾ ವ್ಯಕ್ತ ಪಡಿಸುವ ಅಕ್ಕನ ವಚನಗಳು ಸಾರ್ವಕಾಲಿಕ ಪ್ರಸ್ತುತ.

✍️ಸುಜಾತಾ ರವೀಶ್ 
ಮೈಸೂರು