ತಿಂದುಂಡು ತೇಗಿ ಕಬಳಿಸುವರಿಗೆ
ಬಲಿ ಎಂದರೆ
ರಕ್ತವೇ ಬರಬೇಕಾಗಿಲ್ಲ
ದೇಹವನ್ನು ತುಂಡರಿಸಿ
ಸಿಗಿಯಬೇಕಿಲ್ಲವೆಂದು
ಗೊತ್ತಿಲ್ಲ

ತನ್ನ ತೆವಲಿಗೆ
ಸಕಲವನು ಆಪೋಷಣೆ ಮಾಡುವವರಿಗೆ
ಹಲ್ಲೆ ಎಂದರೆ
ಮೈ ಮುರಿಯುವಂತೆ
ಹೊಡೆದು ಹಿಂಸೆ ಮಾಡಬೇಕಿಲ್ಲವೆಂದು
ತಿಳಿದಿಲ್ಲ

ಎಲ್ಲವೆಲ್ಲವನ್ನೂ ಹೀರಿ
ಅವವಮಾನಿಸಿ
ಘಾಸಿ ಮಾಡುವ
ಮೋಸದ ಜಗತ್ತಿಗೆ
ಅರ್ಥವಾಗದ ಮನದ ಮಾತಿನ
ಅರಿವಿಲ್ಲ

ಗಟ್ಟಿಯಾದ ದಿಟ್ಟ ನಡಿಗೆಯಲ್ಲಿ
ಮಿಡಿಯುತ್ತದೆ ನಿಜದ ಮನಸು
ಯಾತನೆಗಳನ್ನು ಉಂಡ ಜೀವ
ಆಗೀಗ ಯಾವಾಗಲೂ ಯೋಚಿಸುತ್ತದೆ
ಇಲ್ಲವೇ ಮಾತಾಡಿ ಕಿತ್ತಾಡಿ ಸತ್ತುಹೋಗುತ್ತದೆ

ಅಯ್ಯೋ ಅವಕಾಶವಾದಿ ಮಿತ್ರರೇ
ನಿಮಗೆ ಗೊತ್ತಿಲ್ಲ
ಭುವಿಯೆಂಬ ನ್ಯಾಯಾಲಯದಲ್ಲಿ
ಏನೂ ಅರಿಯದ
ಮಗುವಿಗೆ
ಎಲ್ಲವನ್ನೂ ಮರೆತು
ಕ್ಷಮಿಸಿ ಹಾಲುಣಿಸುವ ತಾಯಿಗೆ
ಕಟಕಟೆಯ ಹಂಗಿಲ್ಲ

✍️ಡಾ.ಬೇಲೂರು ರಘುನಂದನ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ವಿಜಯನಗರ
ಬೆಂಗಳೂರು