ವಿದೇಶಗಳಲ್ಲಿರುವ ಬಾರತೀಯರಿಗೆ ಹಬ್ಬಗಳು ಎಂದರೆ ಬರೇ ಸಂಪ್ರದಾಯ ಮಾತ್ರವಲ್ಲ. ಅದು ತವರೂರಿನ ನೆನಪು, ಆಚರಣೆ, ತಮ್ಮತನವನ್ನು ಉಳಿಸಿಕೊಳ್ಳುವ ಪ್ರಯತ್ನ ಮತ್ತು ಜೀವಮಿಡಿತ ಎಲ್ಲವೂ ಆಗಿಬಿಡುತ್ತವೆ. ಹಾಗಾಗಿ, ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುವುದು ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ. ಈ ವರ್ಷವೂ ಇಂಗ್ಲೆಂಡಿನ ಅನಿವಾಸಿ ಭಾರತೀಯರು ನವರಾತ್ರಿ, ದಸರಾ, ವಿಜಯ ದಶಮಿ ಇತ್ಯಾದಿ ಹೆಸರುಗಳನ್ನು ಹೊತ್ತ ಒಂಭತ್ತು ದಿನಗಳ ಹಬ್ಬವನ್ನು ಇಂಗ್ಲೆಂಡಿನಲ್ಲಿ ತರಹೇವಾರಿ ಆಚರಿಸಿದರು.

ಗುಜರಾತಿಗಳು ಗರ್ಬಾ ಮತ್ತು ದಾಂಡಿಯಾ ನೃತ್ಯಗಳಲ್ಲಿ ತೊಡಗಿಕೊಂಡು ಒಂಭತ್ತು ಸಂಜೆ ಗಳ ಕಾಲ ಸಂಭ್ರಮಿಸಿದರೆ ಬೆಂಗಾಲಿಗಳೊಡನೆ ದುರ್ಗೆಯ ಪೂಜೆ ಮತ್ತು ದುನೂಚಿ ನೃತ್ಯದ ಜೊತೆ ಕೊನೆಯ ಐದು ದಿನಗಳಲ್ಲಿ ಹೆಚ್ಚು ಖುಷಿ ಪಟ್ಟರು. ತಾವೇನೂ ಕಡಿಮೆಯಿಲ್ಲ ಎನ್ನುವಂತೆ ವಿದೇಶೀಯ ಕನ್ನಡಿಗರು ದಸರಾ ಹಬ್ಬವನ್ನು ಹತ್ತು ದಿನಗಳ ಕಾಲದ ಬೊಂಬೆ ಹಬ್ಬವನ್ನಾಗಿ ಆಚರಿಸಿ ಸಂಭ್ರಮಿಸಿದರು.

ಮಕ್ಕಳು ಬೊಂಬೆಗಳಾಗಿ, ಹಿರಿಯರು ಮಕ್ಕಳಾಗಿ ಮನೆಯಲ್ಲಿರುವ ಬೊಂಬೆಗಳನ್ನೆಲ್ಲ ಸುಂದರಾಗಿ ಜೋಡಿಸಿಟ್ಟು, ತಾವು ಕೂಡ ಅಲಂಕರಿಸಿಕೊಂಡು ಗೊತ್ತಿರುವ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ಖುಷಿಪಟ್ಟರು.

ವಿದೇಶಕ್ಕೆ ಬಂದು 46ವರ್ಷಗಳೇ ಸಂದಿದ್ದರೂ, ಸ್ಕಾಟ್ಲೆಂಡಿನ ಉಷಾ ಮತ್ತು ನಟರಾಜು ದಂಪತಿಗಳು ತಮ್ಮ ಮನೆಯಲ್ಲಿ ಪ್ರತಿ ವರ್ಷ ಬೊಂಬೆ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ.

ಕಳೆದ ಹನ್ನೆರಡು ವರ್ಷಗಳಲ್ಲಿ ಅವರ ಬೊಂಬೆ ಗಳ ಸಾಲುಗಳು ಬೆಳೆದು ನಿಂತಿವೆ. ಇವರ ಬೊಂಬೆಗಳ ಉತ್ಸವದ ಕರೆಯೋಲೆಗೆ ಬೆರಗಾಗಿ ಬಂದು ಈಜಿಪ್ಟ್‌, ಗ್ರೀಸ್‌, ಇಟಲಿ, ಜರ್ಮನಿ, ಜಪಾನ್‌ ಚೈನಾ, ರಷಿಯಾ ಮತ್ತು ಅಮೇರಿಕೆಯ ಬೊಂಬೆಗಳು ಕೂಡ ಪ್ರದರ್ಶನ ಕೊಟ್ಟಿವೆ. ಒಟ್ಟು 19 ದೇಶಗಳ ಬೊಂಬೆಗಳು ಇವರ ಮನೆಯ ಕನ್ನಡ ಹಬ್ಬದಲ್ಲಿ ಭಾಗವಹಿ ಸಿವೆ.

ಬ್ರಿಟಿಷ್‌ ಸೊಸೆ ಮತ್ತು ಇಲ್ಲಿಯೇ ಹುಟ್ಟಿ ಬೆಳೆದ ಮಗನ ಜೊತೆಗೆ ಭಾರತವನ್ನು ನೋಡಿರದ ಮೊಮ್ಮಕ್ಕಳು ಕೂಡ ಸೇರಿಕೊಂಡು ಕರ್ನಾಟಕ ದ ಸಂಭ್ರಮದಲ್ಲಿ ಒಂದಾಗಿದ್ದಾರೆ. ಇವರ ಉತ್ಸಾಹ ವನ್ನು ನೋಡಿ ಹಲವರು ತಮ್ಮ ಲ್ಲಿದ್ದ ಗೊಂಬೆಗ ಳನ್ನು ಇವರಿಗೆ ನೀಡಿ ತಾವೂ ಅವರೊಡನೆ ಬೆರೆತು ಸಡಗರ ಪಟ್ಟಿದ್ದಾರೆ.


ಚೆಲ್ಟನ್‌ ಹ್ಯಾಮ್‌ ನಗರದಲ್ಲಿರುವಂತಹ ಅನ್ನಪೂರ್ಣ ಮತ್ತು ಆನಂದ್‌ ದಂಪತಿಗಳು ತಮ್ಮ ಮನೆಯಲ್ಲಿ ಪ್ರತಿ ವರ್ಷ ದಸರಾ ಬೊಂಬೆ ಹಬ್ಬದ ಆಚರಣೆ ನಡೆಸಿಕೊಂಡು ಬಂದಿದ್ದಾರೆ. ಇವರ ಮನೆಯಲ್ಲಿ ಅವರ ತಾಯ್ತಂದೆಯರ ಕಾಲದ ಗೊಂಬೆಗಳು ಮತ್ತೊಂದು ದೇಶ ಮತ್ತು ಕಾಲವ ನ್ನು ಪ್ರವೇಶಿಸಿ ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡುತ್ತ ಬಂದಿವೆ.

ಕೆಲವು ಗೊಂಬೆಗಳು ಎಪ್ಪತ್ತು ವರ್ಷಗಳಿಗೂ ಹಳೆಯವು ಎನ್ನುವ ಅನ್ನಪೂರ್ಣ ಒಬ್ಬ ಗಮಕಿ ಗಳು. ಅವರ ತಮ್ಮ ಮಗಳಿಗೂ ಗಮಕ ಸಂಗೀತ ದ ತರಬೇತಿ ನೀಡಿ ಒಂದು ಅನನ್ಯ ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸಿ ದ್ದಾರೆ. ಅಂತೆಯೇ ಈ ಬೊಂಬೆಗಳು ಕೂಡ ಮೂರನೇ ತಲೆ ಮಾರಿಗೆ ಸಾಗಿದರೆ ಆಶ್ಚರ್ಯ ವಿಲ್ಲ.

ಬರ್ಮಿಂಗ್ ಹ್ಯಾಮಿನ ಸಂಗೀತ ಮತ್ತು ಭಾಸ್ಕರ್‌ ದಂಪತಿ ಗಳು ತಮ್ಮ ಮನೆಯಲ್ಲಿ ಈ ಬಾರಿ ಅದ್ದೂರಿ ಯಾಗಿ ಗೊಂಬೆ ಹಬ್ಬವನ್ನು ಆಚರಿಸಿದ್ದಾರೆ. ಮೈಸೂರು ದಸರಾದ ವೈಭವ- ವನ್ನು ವಿದೇಶದಲ್ಲಿ ತೆರೆದಿಟ್ಟಿದ್ದಾರೆ.

ದಶಾವತಾರದ ಪೂರ್ಣ ದೃಶ್ಯಾವಳಿಗಳನ್ನು ಬೊಂಬೆಗಳ ಮೂಲಕವೇ ಪ್ರದರ್ಶಿಸಿ, ಗೆಳೆಯ- ಗೆಳತಿಯರನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿ ದ್ದಾರೆ.

ಯುನೈಟೆಡ್‌ ಕಿಂಗ್ಡಮ್ಮಿನಲ್ಲಿ ನೆಲೆಸಿರುವ ಇಂತಹ ನೂರಾರು ಕನ್ನಡ ಕುಟುಂಬಗಳು ತಮ್ಮದೇ ಆದ ವೈಶಿಷ್ಟ್ಯಪೂರ್ಣ ಬೊಂಬೆ ಪ್ರದರ್ಶನಗಳನ್ನು ಮಾಡಿದ್ದಾರೆ. ದಸರಾ ಹಬ್ಬದ ಕುಸುರಿಯನ್ನು ಇಂಗ್ಲೆಂಡಿನಲ್ಲಿಯೂ ತೆರೆದಿಟ್ಟಿದ್ದಾರೆ. ಶತಮಾನ ದಲ್ಲಿ ಒಮ್ಮೆ ಘಟಿಸುವ ಕೋವಿಡ್‌ ನಂತಹ ಮಹಾಮಾರಿ ಬಂದು ಜನರನ್ನು ಹೈರಾಣಾಗಿಸಿದೆ. ರಷಿಯಾ-ಉಕ್ರೇನ್‌ ಯುದ್ಧಗಳು ನಡೆಯುತ್ತಿವೆ. ಈ ಎಲ್ಲ ಆತಂಕಗಳ ನಡುವೆಯೂ ದಸರಾ ಹಬ್ಬ ಮತ್ತೆ ಕಳೆಗಟ್ಟಿರುವುದು ಎಲ್ಲರಿಗೂ ಖುಷಿಯ ವಿಚಾರವಾಗಿದೆ.

ಇಂಗ್ಲೆಂಡಿನ ಲೆಸ್ಟರ್‌ ಎನ್ನುವ ನಗರದಲ್ಲಿ ಶೇ.೨೫ ಭಾಗ ಭಾರತೀಯರೇ ನೆಲೆಸಿದ್ದಾರೆ. ಇಲ್ಲಿ ನವರಾತ್ರಿಯ ಹಬ್ಬದ ಸಂಭ್ರಮವನ್ನು ಎಲ್ಲ ಭಾರತೀಯರು ಮತ್ತು ಬ್ರಿಟಿಷರೂ ಸೇರಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಇದೇ ಊರಿ ನಲ್ಲಿ ಅಕ್ಟೋಬರ್‌ 09ನೇ ತಾರೀಖು ಭಾನುವಾರ ದಿನ ಬೆಲ್ಗ್ರೇವ್‌ ಎನ್ನುವ ರಸ್ತೆಯ ದೀಪಗಳ ಅಲಂಕಾರಕ್ಕೆ ದೊಡ್ಡ ಸಮಾರಂಭ ದೊಡನೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಆ ಮೂಲಕ ದಸರಾ ಹಬ್ಬದ ಸಂಭ್ರಮ ದೀಪಾವಳಿಗೂ ಮುಂದುವರೆಯಲಿದೆ.

✍️ಡಾ.ಪ್ರೇಮಾಲತ ಬಿ.
ದಂತ ವೈದ್ಯರು
ಲಂಡನ್, ಇಂಗ್ಲೆಂಡ್