ಬಿಗಿಯಾಗಿದ್ದ
ಬಿಳಿಯ ಹಾಳೆಯ ಚೌಕಟ್ಟಿನಲ್ಲಿ
ಚುಕ್ಕಿಗಳೆಲ್ಲಾ ಅರ್ಥ ಪಡೆದವು
ಬಣ್ಣಗಳೆಲ್ಲಾ ಚಿತ್ರವಾದವು
ಮೃದು ಬೆರಳಿಗೆ
ಮೆದು ಹಾಳೆ ಸಂಗಾತಿಯಾಯಿತು

ಅಳಿಸಿ ಬಳಸಿ ಮತ್ತೆ
ಉಳಿಯಬೇಕೆಂಬುದು
ಹಾಳೆಯ ತವಕ
ಕಲ್ಪನೆಯೆಂದರೆ
ಗೀಚುತ್ತಾ ಹೋದಂತೆ
ಕೂಡಿಕೊಳ್ಳುತ್ತಾ ಹೋಗುವುದು
ಇದುವೇ
ಕೂಸಿನ ಹಾಡು

ಬೆಳೆದು ಮಾತಾಡುವ ಮಗುವಿಗೆ
ಅಮ್ಮ ಹೇಳುತ್ತಿದ್ದಾಳೆ
ಶಾಂತ ಮನಸ್ಸು
ಉದ್ವಿಗ್ನಗೊಳ್ಳಬಾರದೆಂದು
ಅಶಾಂತಿಯ ಕಾವು
ಅರಿವ ದಾರಿಯ ಅಕ್ಷರದಲ್ಲಿ
ಹಾರಡುವ ಬಾವುಟದದಲ್ಲಿ
ಸೇರಿ ಸ್ವಾತಂತ್ರ ಸ್ರವಿಸುತ್ತಿಲ್ಲ
ಇದು ತಾಯೊಬ್ಬಳ ಪಾಡು

ಎಳೆಯ ಮಕ್ಕಳಿಗೆ
ಕೈ ಕಟ್ ಬಾಯ್ ಮುಚ್
ಪಾಠ ಜೋರಾಗಿ ಹೇಳಿ ಕೊಡಲಾಗುತ್ತಿದೆ
ಪುಟ ಪುಟದಲ್ಲೂ ಗೀಚುತ್ತಿದ್ದ ಮಕ್ಕಳನ್ನು
ಪೆಚ್ಚು ಮಾಡುವ ಹುನ್ನಾರ
ತೋಚಿದಂತೆ ಚಿತ್ತಾರವಾದ
ಹಲವು ಹಲವು
ಆಕೃತಿಗಳು ಬಿಕ್ಕುತ್ತಿದ್ದವು
ಪುಟ್ಟ ಪುಟ್ಟ ಕಣ್ಣುಗಳು
ತದೇಕಚಿತ್ತದಿಂದ ನೋಡುತ್ತಿದ್ದವು

ಬರೆವ ಸದ್ದು
ಹಾರಾಡುವ ಸದ್ದಿನಲ್ಲಿ
ಸೇರಿ ಸೋರಿ ಹೋಗುವ ಹೊತ್ತಿನಲ್ಲಿ
ಮತ್ತೆ ಸುದ್ದಿ ಬಂದಿತು
ಸೀಸದಕಡ್ಡಿಯ ಮದ್ದನ್ನು ಮೊಂಡ ಮಾಡಿ
ಬಣ್ಣಗಳನ್ನು ಕಿತ್ತು ಬಿಸಾಡಿ ಎಂದು
ಮಗುವಿನ ಜೊತೆಗೆ
ಖಾಲಿ ಹಾಳೆಯೂ ಹಾಡಿತು
ಕಂದಮ್ಮನ ಮೊಗದ ಮೇಲೆ
ಕಣ್ಣ ನೀರು ಚಿತ್ರ ಬಿಡಿಸಿತು

✍️ಡಾ.ಬೇಲೂರು ರಘುನಂದನ 
ಕನ್ನಡ ಸಹಾಯಕ ಪ್ರಧ್ಯಾಪಕರು
ಸ.ಪ್ರ.ದ.ಕಾಲೇಜು, ವಿಜಯನಗರ
ಬೆಂಗಳೂರು