ಜಾವಕ್ಕೆ ನಾನೆದ್ದು,
ಮನೆ ಗುಡಿಸಿ ಸಾರಿಸಿ,
ಮುಸುರೆ ಮೈಲಿಗೆ ತೊಳೆದು,
ಉಪ್ಪಿಟ್ಟು ಮಾಡಿದರೆ
ಮುಖ ಮುರಿಯಬೇಡ..

ಪರ್ಸೆಲ್ಲಿ, ಕೀಯೆಲ್ಲಿ?
ಟೈಯೆಲ್ಲಿ, ಬೆಲ್ಟೆಲ್ಲಿ?
ಸರ್ವಾಂತರ್ಯಾಮಿಯೇ ನಾ?!
“ಅಲ್ಲೇ ಇದೆ ನೋಡು”
ಎಂದಾಗ ಮತ್ತೊಮ್ಮೆ
ಕೂಗದಿರು ಇನ್ನೊಮ್ಮೆ

ಅದು ಬೇಡ! ಇದು ಬೇಡ!
ಇದೇ ಆಗಬೇಕೀಗ
ಎಂದು ರಂಪ ತೆಗೆದಾಗ,
ತಪ್ಪಿ ಬೈದರೆ
ತಪ್ಪು ತಿಳಿಯಬೇಡ…

ಡಬ್ಬಿಗುಪ್ಪಿನ ಕಾಯಿ,
ಕರವಸ್ತ್ರ, ಚಮಚವನು
ಮರೆತೆನೆಂದರೆ ತಿಳಿ
ನೆರವು ಬೇಕೆಂದು

ಮನೆತುಂಬ ಬಟ್ಟೆಗಳು
ಸಿಂಕಲ್ಲಿ ಪಾತ್ರೆಗಳು
ಧೂಳುಕಸ ಕಾಲಿಗಂಟಿದರೆ
ಪೇಚಾಡದಿರು ನೀನು
ಒಬ್ಬಂಟಿ ನಾನು!

ಮೂರ್ಹೊತ್ತು ಮೂರು ಥರಾ
ಮಾಡ್ಹಾಕಿ ಸಾಕಾಗಿ
ಸ್ವಲ್ಪ ಅಕ್ಕಿ ತೊಳೆದಿಡು
ಎಂದಾಗ
ಗೊಣಗಾಡಬೇಡ

ಸಂಜೆ ಐದರ ಮಳೆಗೆ
ಮಂಡಕ್ಕಿ ಬಜ್ಜಿಯನು
ಎಂದಾದರೊಮ್ಮೆ ಬಯಸಿದರೆ
ಮನೆಯಲ್ಲೆ ಮಾಡೆಂದು
ದನಿಯೆತ್ತಬೇಡ..

ಮೂರುದಿನ ನರಳಾಡಿ
ಮೂಲೆಯಲಿ ಮಲಗಿದ್ದು,
ಒಳಬಂದ ಒಡನೆಯೇ
ಒದರಾಡಬೇಡ

ಹಬ್ಬದಡುಗೆಯ ಮಾಡಿ
ಉಪವಾಸ ನಾನಿದ್ದು,
ವ್ರತವೆಂದು ದೂರವಿರೆ
ದೂರದಿರು ನನ್ನ

ಮೈಮರೆತು ಮಲಗೆದ್ದು
ನೋಡಿದರೆ ಆರಾಯ್ತು,
ಪಲ್ಯವೊಂದಕೆ
ಅಡುಗೆ ಮುಗಿಸಿದರೆ
ಮುನಿಯದಿರು…

ಅವಸರದಿ ಬೀಗವನು
ಕೊಡಲು ಮರೆತರೆ ನಾನು,
ಸಂತೆಯಲಿ ತಡವಾಗೆ
ಸಂಜೆ ಬಾಗಿಲ ಕಾದು
ಶಪಿಸದಿರು ನನ್ನ…

ದಿನವಿಡೀ ಶ್ರಮಪಟ್ಟು
ಮೈಮನವು ಹಣ್ಣಾಗಿ,
ಮನೆಗೆ ಬಂದಾಗ
ನಿನ್ನ ದನಿ ನನಗೆ
ಕೇಳಿಸದಿದ್ದರೆ
ನನ್ನ ದುರುಗುಟ್ಟಬೇಡ..

ಆಯಾಸದಲಿ ಒಮ್ಮೆ
ನೀ ಮಾತಿಗಿಳಿದಾಗ
ಗೊತ್ತಿಲ್ಲದೇ ಕಣ್ಮುಚ್ಚಿ
ತೂಕಡಿಸಿ ಬೆಚ್ಚಿದರೆ
ಕೋಪ ತೋರಿಸಬೇಡ…

✍️ಸೌಮ್ಯ ದಯಾನಂದ
ಡಾವಣಗೆರೆ