ಬೆಲೆ ಬಾಳುವ ಅವಕಾಶ
ಬಯಲಾಗದೇ ಬಿಲವಾದರೆ
ಸೂರ್ಯ ತಲುಪದ ಹಾದಿ
ಕತ್ತಲ ಕಾವಿಗೆ
ಒಂದೇ ಅರ್ಥವಿಲ್ಲ

ನದಿ ಹರಿಯುವುದು
ನೆಲ ಗುರುತಿಸಿದ್ದಕ್ಕೆ
ಏರು ತಗ್ಗು ಬೆಟ್ಟ ಗುಡ್ಡಗಳ
ಹಾದಿಗೆ ಚಲನೆಯ ಹಾಡು
ಭೂಮಿಯ ಪಾಡು

ಯಶದ ತೃಷೆಗೆ
ಬಾಯಾರಿಕೆ ಹೆಚ್ಚು
ಕುಡಿದಷ್ಟೂ ನೀರು
ಇತ್ತ ಆವಿಯಾಗದು
ಅತ್ತ ಮೂತ್ರವೂ ಆಗದು
ಪ್ರಿಯ ಮನಸೇ
ಬಾಯಿಗೂ ಭಾವಕ್ಕೂ ಇರುವ
ಸಂಬಂಧ ಮರೆಯದಿರು

ಆತ್ಮೀಯ ಮನಸೇ
ನುಂಗುವುದ ಬಿಟ್ಟು
ಸಾರ ಹೀರುವುದ ತೋರು
ಅಭಾವವಿರುವ ಬದುಕಲಿ
ಕಾಲದ ಪಾಲಿನ ಜೊತೆಯಾಗು

✍️ಡಾ.ಬೇಲೂರು ರಘುನಂದನ
ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ವಿಜಯನಗರ ಬೆಂಗಳೂರು