ಸಿದ್ದರಾಮ ಹೊನ್ಕಲ್ ರವರು ಸಗರ ನಾಡಿನ ಪ್ರತಿಭಾನ್ವಿತ ಸಾಹಿತಿಗಳು. ತನ್ನ ಬದುಕಿನ ಬಹುಪಾಲು ಸಮಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಮುಡುಪಾಗಿಟ್ಟು ವೈವಿಧ್ಯಮಯ ವಾದ ಸಾಹಿತ್ಯ ಪ್ರಕಾರಗಳಲ್ಲಿ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿ ಕನ್ನಡಾಂಬೆಯನ್ನ ತಮ್ಮ ಸುಂದರವಾದ ಪದ ಪುಷ್ಪಗಳಿಂದ ಅಲಂಕರಿಸಿ, ಸಾಹಿತ್ಯಾಭಿಮಾನಿಗಳನ್ನು ರಂಜಿಸುವ ಮೂಲಕ ಸಾಹಿತ್ಯ ಸೇವೆಗೈಯ್ಯು ತ್ತಿರುವ ಖ್ಯಾತನಾಮರಿ ವರು. ನೆಲದ ಭಾಷೆ ಯನ್ನು ಪ್ರಚುರಪಡಿಸುತ್ತಾ ಗಟ್ಟಿತನದ ಬರಹದ ಮೂಲಕ ಸಾಹಿತ್ಯ ಕ್ಷೇತ್ರ ದಲ್ಲಿ ತನ್ನದೇ ಆದ ಛಾಫು ಮೂಡಿಸುತ್ತಿದ್ದಾರೆ.

ಸೃಜನಶೀಲ ಮತ್ತು ಸಂವೇದನಶೀಲ ಬರಹ ಗಾರರೆಂದು ಪ್ರಸಿದ್ಧರಾದ ಶ್ರೀ ಸಿದ್ದರಾಮ ಹೊನ್ಕಲ್ ರವರು ತಮ್ಮ ಬರಹಗಳಲ್ಲಿ ಮಾನವ ಪ್ರೇಮ, ಸಮಾಜವಾದಿ ಕಾಳಜಿ, ವಾಸ್ತವಿಕ ಸ್ಪಂದನೆಯ ಸೂಕ್ಷ್ಮ ಜಾಡಿನಲ್ಲಿ ಚಲಿಸುತ್ತ ಬದುಕನ್ನೇ ಬರಹವಾಗಿಸಿಕೊಂಡು ನಡೆಯುತ್ತಿ ರುವರು. ಇವರ “ಹೊನ್ನಗರಿ ಹೈಕುಗಳ ಸಂಕಲನ” ಪ್ರಕಟವಾಗಿ ಓದುಗರ ಕೈ ಸೇರಿದೆ. ಜಪಾನಿ ಸಾಹಿತ್ಯ ಪ್ರಕಾರ ವಾದ ಹೈಕು ಕನ್ನಡದ ಕವಿಗಳಿಂದಲೂ ಲಾಲಿಸಿ ಕೊಂಡು, ರಮಿಸಿಕೊಂಡು, ಮೋಹಕವಾದ ರೂಪ ತಾಳಿ ಕನ್ನಡಿಗರ ನ್ನು ಸೆಳೆಯುತ್ತಿದೆ. ಚಂದ್ರ ಕಾಂತ ಕೂಸನೂರ, ಜಂಬಣ್ಣ ಅಮರ ಚಿಂತ, ಕೆ.ಬಿ. ಬ್ಯಾಳಿ, ಸರಜು ಕಾಟ್ಕರ್, ವೀರ ಹನುಮಾನ್, ಪ್ರೇಮ ಹೂಗಾರ, ಸಿದ್ದರಾಮ ಹಿರೇಮಠ್, ಎಚ್.ಎಸ್. ಶಿವಪ್ರಕಾಶ್, ಅರುಣ ನರೇಂದ್ರ, ಬಿ.ಟಿ. ಲಲಿತ ನಾಯಕ್, ರಂಜಾನ್ ಕಿಲ್ಲೆದಾರ, ಸಿ.ರವೀಂದ್ರ ಸೇರಿದಂತೆ ಬಹು ಸಂಖ್ಯಾ ತರು ಹೈಕು ರಚಿಸಿ ಗೆದ್ದಿದ್ದಾರೆ. ಇಂದಿಗೂ ಅಸಂಖ್ಯಾತ ಜನ ಹೈಕು ರಚಿಸುತ್ತಿ ದ್ದಾರೆ. ಈಗ ಈ ಬರಹಗಾ ರರ ಸಾಲಿಗೆ ಸಿದ್ದರಾಮ ಹೊನ್ಕಲ್ ರವರು ಕೂಡ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಹೈಕು ಜಪಾನಿ ಕಾವ್ಯ ಪ್ರಕಾರವಾದರೂ ಗಡಿ ಸೀಮೆಗಳನ್ನು ದಾಟಿ, ಅನೇಕ ದೇಶಗಳನ್ನು ತಲುಪಿ, ವೈವಿಧ್ಯಮಯ ಭಾಷೆಗಳಲ್ಲಿ ತನ್ನನ್ನು ದುಡಿಸಿಕೊಂಡು ಕಾವ್ಯಾಸಕ್ತರ ಗಮನ ಸೆಳೆದ ಸಾಹಿತ್ಯ ಪ್ರಕಾರವಾಗಿದೆ. ೫|೭||೫| ಒಟ್ಟು ೧೭ ಅಕ್ಷರಗಳ ಮೂಲಕ ರಚನೆಗೊಂಡು ಕಿರಿದ ರಲ್ಲಿ ಪಿರಿಯರ್ಥ ಕಟ್ಟಿ ಕೊಡುವ ಉತ್ಕೃಷ್ಟ ಕಾವ್ಯ ಶೈಲಿ ಈ ಹೈಕು. ಇದರಲ್ಲಿ ಮೂರು ಸಾಲುಗಳಿದ್ದು ಮೊದಲೆರಡು ಸಾಲುಗಳು ಹನಿಗವನದ ಸ್ವರೂ ಪದಲ್ಲಿ ಮೂಡಿಬಂದಿದ್ದು, ಮೂರನೇ ಸಾಲು ಪ್ರಬಲವಾದ ಪಂಚಿನೊಂದಿ ಗೆ ಇಡೀ ಹೈಕುವಿನ ಆಶಯವನ್ನು ಮತ್ತು ಹೈಕು ಲೇಖಕರ ಜಾಣ್ಮೆಯ ನ್ನು, ಸೃಜನಶೀಲತೆಯ ನ್ನು ಪರಿಚಯಿಸುತ್ತದೆ. ಹೈಕುವಿಗೆ ಸಾರ ತುಂಬುವುದು ಹೊಳಪು ಸೃಷ್ಟಿ ಸುವುದರಲ್ಲಿ ಈ ಪಂಚ್ ಪಾತ್ರ ಹಿರಿದಾಗಿರುತ್ತದೆ. ಹೈಕು ರಚನೆಯಲ್ಲಿ ಕೆಲವರು ಪ್ರಾಸವನ್ನು ಅನುಸರಿ ಸುವುದು ಉಂಟು. ಆದರೆ ಇದು ಹೈಕು ರಚನೆ ಯ ಗುಣಧರ್ಮದಡಿಯಲ್ಲಿ ಬರುವುದಿಲ್ಲ. ಅದು ಆಯಾ ಬರಹಗಾರರ ಶಕ್ತಿ ಮತ್ತು ಶಬ್ದ ಭಂಡಾರದ ಮೇಲೆ ನಿರ್ಧಾರಿತವಾಗುತ್ತದೆ.

ಜಪಾನಿ ಭಾಷೆಯ ಹೈಕು ರಚನೆ ಮತ್ತು ಕನ್ನಡ ಭಾಷೆಯ ಹೈಕು ರಚನೆಗೂ ವ್ಯತ್ಯಾಸವಿದೆ. ಜಪಾನಿಯರು ಉಚ್ಚಾರದಲ್ಲಿ ಬರುವ ಘಟಕ ಗಳನ್ನು ಆಧರಿಸಿ ಹೈಕು ರಚಿಸಿದರೆ ಕನ್ನಡದ ಹೈಕು ರಚನೆಯಲ್ಲಿ ಅಕ್ಷರಗಳನ್ನು ಎಣಿಸಿ, ನಮ್ಮ ಕನ್ನಡದ ಸೊಗಡಿಗೆ ಒಗ್ಗಿಸಿಕೊಂಡು ರಚಿಸು ತ್ತಾರೆ. ಪ್ರಮುಖವಾಗಿ ಹೈಕುವಿನ ಸ್ಥಾಯಿ ಭಾವ ಗಳೆಂದರೆ ಪ್ರಕೃತಿ, ಬಾನು, ಚಂದಿರ, ಆಧ್ಯಾತ್ಮ, ತಾರ್ತಿಕ ಚಿಂತನೆಗಳು. ಇತ್ತೀಚಿನ ದಿನಗಳಲ್ಲಿ ಹೈಕು ಲೇಖಕರು ಇವುಗಳನ್ನೆಲ್ಲ ದಾಟಿ ಸಮಾಜ ಮುಖಿಯಾಗಿ, ಪ್ರೀತಿ ಪ್ರೇಮ ವಿರಹ ವ್ಯಕ್ತಿತ್ವದ ಅನಾವ ರಣ ಮಾಡುವ ಹೈಕು ರಚಿಸಿ ಸೈ ಎನಿಸಿಕೊಳ್ಳುತ್ತಿ ದ್ದಾರೆ.

ಸಿದ್ದರಾಮ್ ಹೊನ್ಕಲ್ ರವರು ತಮ್ಮ ಈ ಹೊನ್ನಗರಿ ಹೈಕುಗಳು ಕೃತಿಯಲ್ಲಿ ಹೈಕುವಿನ ಇತಿಹಾಸ, ಹೈಕು ರಚನೆ ನಿಯಮಗಳು, ಕನ್ನಡ ದಲ್ಲಿ ಹೈಕು ಬೆಳೆದು ಬಂದ ರೀತಿ ಮುಂತಾದ ಮಾಹಿತಿಗಳನ್ನು ಒದಗಿಸಿ ವಿದೇಶಿ ಕಾವ್ಯದ ಬಗ್ಗೆ ಅರಿತು ಓದಲು ಓದುಗರಿಗೆ ನೆರವಾಗು ತ್ತದೆ. ಜೊತೆಗೆ ಹೈಕು ರಚನೆಕಾರ ರಿಗೂ ಹೈಕುವಿನ ನಿಯಮಗಳನ್ನು ತಿಳಿಸುತ್ತದೆ. “ಹೈಕುಗಳ ರಚನೆ ಗಳ ಹಿಂದೆ ಅಪಾರವಾದ ಮೌನವಿದೆ. ಇವು ಏನನ್ನು ನುಡಿಯುತ್ತಿಲ್ಲ ಎನ್ನುವುದು‌ ಮೌನಕ್ಕಿ ರುವ ಅಪಾರ ಶಕ್ತಿ ಯನ್ನು ಕಾಣಿಸಲಷ್ಟೇ ಮಾತು ಬಳಕೆಯಾ ದಂತೆ ಹೈಕುಗಳು ‌ಕಾಣಿ ಸುತ್ತವೆ. ಅಪರಿಮಿತ ದ ಕತ್ತಲೊಳಗೆ ವಿಪ ರೀತದ ಬೆಳಗನಿಕ್ಕಿದವರಾರೋ” ಎನ್ನುವಂತೆ ಕನ್ನಡದಲ್ಲಿ ಬೇರೆ ಬೇರೆ ರೂಪ ದಲ್ಲಿ ಅವರ ಹೈಕು ಬಂದಿವೆ ಎನ್ನುವ ಎಸ್. ನಟರಾಜ್ ಬೂದಿಹಾಳ್ ಅವರ ಹೇಳಿಕೆಯನ್ನು ಹೆಬಸೂರು ರಂಜಾನ್ ರವರು ತಮ್ಮ ಮುನ್ನುಡಿ ಯಲ್ಲಿ ಪ್ರಸ್ತಾಪಿಸುತ್ತಾ ಹೈಕುವಿನ ಮಹತ್ವವನ್ನು ತಿಳಿಸಿ ಸಿದ್ದರಾಮ ಹೊನ್ಕಲ್ ಅವರು ಈ ದಾರಿ ಯಲ್ಲಿ ಸಾಗುತಿದ್ದಾರೆ ಎಂದು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

“ಬೊಗಸೆಯಲ್ಲಿ ಸಾಗರವನ್ನು ತುಂಬಿಸುವ ಕಲಾತ್ಮಕ ಸಾಹಿತ್ಯ ಈ ಹೈಕು” ಇವುಗಳ ರಚನೆ ಯಲ್ಲಿ ಸಿದ್ದರಾಮ ಹೊನ್ಕಲ್ ರವರ ಕಲಾಗಾರಿಕೆ ಕಾಣಬಹುದು. ವೈವಿಧ್ಯಮಯ ವಾದ ವಿಷಯ ವಸ್ತುಗಳನ್ನು ಇಟ್ಟುಕೊಂಡು ಪುಟ್ಟ ರಚನೆಯ ಲ್ಲೂ ತಾವು ನಿಷ್ಣಾತರೆಂದು ಸಾಬೀತುಪಡಿಸಿ ಕೊಂಡಿದ್ದಾರೆ. ಹೈಕು ರಚನೆ ಬರಹಗಾರರಿಗೆ ಸವಾಲ್ ಇದ್ದಂತೆ‌. ತೀಕ್ಷ್ಣವಾದ ಹಾಗೂ ಪ್ರಬುದ್ಧ ವಾದ ಸಶಕ್ತ ಪದಗಳ ಪ್ರಯೋಗವಿಲ್ಲದಿದ್ದರೆ ಅದರ ಮೂಲ ಸ್ವರೂಪ ಕ್ಕೆ ಪೆಟ್ಟು ಬಿದ್ದು ಅರ್ಥ ಹೀನವೆನಿಸುತ್ತದೆ. ಇದರ ಸೂಕ್ಷ್ಮ ಅರಿವಿರುವ ಹೊನ್ಕಲ್ ರವರು ಬಹಳ ಎಚ್ಚರಿಕೆಯಿಂದ ಸೊಗಸಾದ ಪ್ರತಿಮೆ ಹಾಗೂ ರೂಪಕಗಳನ್ನು ಬಳಸಿ ಹೈಕುವಿಗೆ ಗಟ್ಟಿತನ ತುಂಬಿದ್ದಾರೆ.

ಹೈಕುಗಳ ಸೌಂದರ್ಯ ಹೆಚ್ಚಿಸುವುದು ಅವುಗಳ ಮಾತು ಮತ್ತು ಮೌನದ ಸಂಯೋಜ ನೆಯಿಂದ. ಆ ದೃಷ್ಟಿಯಿಂದ ಇವರ ಹೈಕುಗಳು ಕಿರಿದರಲ್ಲಿ ಪಿರಿಯರ್ಥ ತುಂಬುತ್ತಾ ಅಗಾಧ ವಿಚಾರಗಳನ್ನು, ಆಯಾಮಗಳನ್ನು ತೆರೆದಿಟ್ಟರೆ, ಕೆಲವು ಹೈಕುಗಳು ಮೌನಭಾವ ತಾಳಿ ಹತ್ತಾರು ಅರ್ಥಗಳನ್ನು ಜ್ವಲಿ ಸುತ್ತವೆ. ಇಲ್ಲಿರುವ ಹಲವು ಹೈಕುಗಳು ಓದುಗ ರನ್ನು ಚಿಂತನೆಯಲ್ಲಿ ಮುಳುಗಿಸಿದರೆ, ಮತ್ತಷ್ಟು ಹೈಕುಗಳು ಜ್ಞಾನ ಕ್ಷಿತಿಜವನ್ನು ವಿಸ್ತರಿಸುತ್ತವೆ.

“ಹೈಕು ಕೇವಲ ನಿಯಮಗಳನ್ನು ಮಾತ್ರ ಬಯಸುವುದಿಲ್ಲ. ಅದು ಧ್ಯಾನಸ್ಥ ಸ್ಥಿತಿಯ ನ್ನು ಬಿಂಬಿಸುವ ರೀತಿಯ ತಾದ್ಯಾತ್ಮತೆ ಇಲ್ಲಿ ಬೇಕು. ಮೊದಲ ಸಾಲಿನಲ್ಲಿ ವಿಷಯ ವನ್ನು ಹೇಳುತ್ತಾ, ಎರಡನೇ ಸಾಲಿನಲ್ಲಿ ಅದನ್ನು ವಿಸ್ತರಿಸುತ್ತಾ, ಕೊನೆಯ ಸಾಲಿನಲ್ಲಿ ಓದುಗ ನಿಗೆ ಒಂದು ಅಚ್ಚರಿ ಕಾದಿರಿಸುವುದರ ಜೊತೆಗೆ ಆತನಿಗೆ ಆ ಧ್ಯಾನಸ್ಥ ಸ್ಥಿತಿ ಒದಗು ವಂತೆ ಮಾಡುವುದು ಹೈಕುವಿನ ಗುಣ ಲಕ್ಷಣ. ಈ ರೀತಿ ದಕ್ಕುವುದು ಅಷ್ಟು ಸುಲಭವಲ್ಲ. ಹೀಗಾಗಿ ಅಕ್ಷರಗಳನ್ನು ಜೋಡಿಸುವ ಮಾತ್ರ ಕ್ಕೆ ಅದು ಹೈಕು ಆಗಲಾರದು. ಪ್ರಕೃತಿಯೊಂದಿ ಗೆ ಒಂದುಗೂಡಿ ಧ್ಯಾನಸ್ಥ ಸ್ಥಿತಿಯನ್ನು ಹೈಕು ಬೇಡುತ್ತದೆ” ಎಂಬ ಸಿದ್ರಾಮ ಕೂಡ್ಲಿಗಿ ಅವರ ಪ್ರತಿಪಾದನೆಯನ್ನು ಉಲ್ಲೇಖಿಸಿ ಹೈಕು ಲೋಕ ಮತ್ತಷ್ಟು ಹೊಸತನಕ್ಕೆ ಮುಖಾ ಮುಖಿಯಾಗ ಬೇಕಿದೆ ಎಂದು ಮಹಿಪಾಲ್ ರೆಡ್ಡಿ ಮನ್ಸೂರ ರವರು ಹೈಕು ರಚನೆ ಯಾಗುವ ಸ್ಥಿತಿಯನ್ನು ಕುರಿತು ತಮ್ಮ ಆಶಯ ನುಡಿಯಲ್ಲಿ ದಾಖಲಿ ಸುತ್ತಾರೆ.

ಮೂರು ಸಾಲಿನಲ್ಲಿ ಹದವರಿತು, ಸಾರ ಬೆರೆತು, ಅರ್ಥ ಸೇರಿಸಿ, ಸಂದೇಶವನ್ನು ಅಥವಾ ಆಶಯ ವನ್ನು ಪ್ರತಿಪಾದಿಸುವುದರಲ್ಲಿ ಸಿದ್ದರಾಮ ಹೊನ್ಕಲ್ ರವರ ಪರಿಶ್ರಮ ಶ್ಲಾಘನೀಯ. ನೋವು, ನಲಿವು, ಸುಖ, ಸಂತೋಷ, ಸೌಂದರ್ಯ, ಅಂತ:ಕರಣ, ಹಸಿವು, ಬಡತನ, ಶೋಷಣೆ, ಹಿಂಸೆ, ಕ್ರೌರ್ಯ, ಪ್ರೀತಿ, ವಾತ್ಸಲ್ಯ, ಮಮತೆ, ದುಃಖ, ಸಂಕಟ, ಅಸಹಾಯಕತೆಗಳ ಸ್ವರೂಪವನ್ನು, ಸಮಸ್ಯೆ ಗಳಿಗೆ ಪರಿಹಾರವನ್ನು ಓದುಗರ ಮನಕ್ಕೆ ತಮ್ಮ ಪುಟ್ಟ ಬರಹದಲ್ಲಿ ತುಂಬುತ್ತಾ ಹೃದಯ ತಟ್ಟುವ ಹೈಕುಗಳನ್ನು ರಚಿಸಿದ್ದಾರೆ.

ಕೆಲವು ನೇರವಾಗಿ ಅರ್ಥವನ್ನು ಬಿಂಬಿಸಿದರೆ, ಮತ್ತೆ ಕೆಲವು ಹೈಕುಗಳು ಒಳಾರ್ಥಗಳನ್ನು, ಮಗದಷ್ಟು ನಿಗೂಢಾರ್ಥಗಳನ್ನು ಹೊತ್ತು ಅರ್ಥ ವಿಸ್ತಾರತೆಯನ್ನು ಸಾರುತ್ತವೆ.ಕೆಲವು ಹೈಕುಗಳು ಆಧ್ಯಾತ್ಮಿಕ ಪರಿಭಾಷೆಯನ್ನು ಹೊಂದಿದ್ದರೆ, ಮತ್ತೆ ಕೆಲವು ತಾತ್ವಿಕ ಚಿಂತನೆಗೆ ಹಚ್ಚುತ್ತವೆ, ಮಗದಷ್ಟು ಪ್ರಕೃತಿಯ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಸ್ಪಂದಿಸಿವೆ. ಇಲ್ಲಿ ಪ್ರೀತಿ ಪ್ರೇಮ ಆರಾಧನೆಗೂ ಕೊರತೆ ಇಲ್ಲ. ವಿರಹ, ಹುಸಿಮುನಿಸುಗಳಿಗೂ ಜಾಗವಿದೆ, ಸರಸ ಸಲ್ಲಾಪಗಳನ್ನು ಲೇಖಕರು ಕಡೆಗಣಿಸಿಲ್ಲ, ಜೊತೆಗೆ ಒಂದಷ್ಟು ಬುದ್ಧನ ನಡೆ, ಬಸವನ ಕಾಯಕ ತತ್ವ, ನಮ್ಮ ಸಂಸ್ಕೃತಿಯ ಪರಂಪರೆ, ದಾಂಪತ್ಯದೊಲವು, ಸೌಂದರ್ಯೋ ಪಾಸನೆ, ನಮ್ಮ ನೆಲದ ಕಸುಬು, ರೈತನ ಬಗೆಗೆ ನೈಜ ಗುಣಗಾನ, ಮಣ್ಣಿನ ಮಹಿಮೆ, ಮಹಿಳಾ ಸಂವೇದನೆ, ಬಾನು ಚಂದ್ರಮನ ವರ್ಣನೆಯು ತುಂಬಾ ನವಿರಾಗಿ ಮೂಡಿಬಂದಿದ್ದು ಮನಸ್ಸಿಗೆ ಕಚಗುಳಿಯಿಡುತ್ತವೆ.

“ಪ್ರೀತಿ ಎನ್ನುವುದು ಒಂದು ಅನುಪಮ ಹಸಿವಾದರೆ ಅನ್ನ ಮೂಲಭೂತ ಅವಶ್ಯಕತೆ ಗಳಲ್ಲಿ ಒಂದಾಗಿದೆ”. ಈ ಹಿನ್ನೆಲೆಯಲ್ಲಿ ಭೂಮಿಯ ಫಲವತ್ತತೆ ಹಾಗೂ ಅದನ್ನು ಬಳಸಿ ಕೊಳ್ಳುವ ಬಗೆಗೆ ಸಿದ್ದರಾಮ ಹೊನ್ಕಲ್ ರವರ ಹೈಕುಗಳು ಓದುಗರ ಗಮನ ಸೆಳೆಯುತ್ತವೆ ಎನ್ನುತ್ತಾರೆ ಹೈಕು ಲೇಖಕಿ ಶ್ರೀಮತಿ ಅರುಣ ನರೇಂದ್ರರವರು.

ಶಬ್ದಗಳ ಮೆರವಣಿಗೆ ಅವು ಜ್ವಲಿಸುವ ಭಾವಾ ನುಭವ ಮತ್ತು ಅರ್ಥಾನುಭವ ಬಹಳ ಮುಖ್ಯ ವಾಗುತ್ತದೆ. ಅಂತಹ ಸೂಕ್ಷ್ಮತೆಯನ್ನ ಗಂಭೀರ ವಾಗಿ ಪರಿಗಣಿಸಿ ಹೈಕುಗಳ ಕಸೂತಿ ಹೆಣೆದಿ ದ್ದಾರೆ. ಮಾನವೀಯ ಬದುಕಿಗೆ ಹಂಬಲಿಸುವ ತುಡಿತ ಮಿಡಿತ ಇವರ ಬರಹಗಳ ಹೈಲೈಟ್ ಆಗಿದೆ. ಇವರು ಕಾವ್ಯ, ಕಥೆ, ಕಾದಂಬರಿ,ಗಜಲ್, ಪ್ರಬಂಧ, ಪ್ರವಾಸ ಕಥನ ಸೇರಿದಂತೆ ಇತರ ಅನೇಕ ಪ್ರಕಾರಗಳಲ್ಲಿ ಕರಗತವಾದ ಇವರ ಲೇಖನಿಯು ಹೈಕುವಿನ ರಚನೆಯನ್ನು ಕೂಡ ತನ್ನ ಪ್ರೌಢಿಮೆಯನ್ನು ಮೆರೆದಿದೆ.

ಹೈಕುಗಳನ್ನು ಓದುತ್ತಾ ಮುಂದೆ ಚಲಿಸಿದರೆ ವಿಸ್ಮಯಕಾರಿ ವಿಚಾರಗಳು ತೆರೆದುಕೊಳ್ಳುತ್ತ ಒಂದೇ ಗುಕ್ಕಿಗೆ ಓದಿಸಿಕೊಂಡು ಓದಿನ ಖುಷಿ ಯನ್ನು ಓದುಗರಿಗೆ ತಲುಪಿಸುತ್ತವೆ. ಅಂತಹ ಸೆಳೆತವನ್ನು ಇವರ ಹೈಕುಗಳಲ್ಲಿ ಕಾಣಬಹು ದಾಗಿದೆ.ಸ್ತ್ರೀ ಕಾಳಜಿ, ಶ್ರೀ ಸಂವೇದನೆಗಳಿಗೆ ಸ್ಪಂದಿಸುವ ಇವರ ಸಹೃದಯತೆ, ಸ್ತ್ರೀಪರ ಅನೇಕ ಹೈಕುಗಳನ್ನು ರಚಿಸಲು ಪ್ರೇರೇಪಿಸಿರು ವುದಕ್ಕೆ ಸಾಕ್ಷಿಯಾಗಿ ಅನೇಕ ಹೈಕುಗಳು ಮಹಿಳಾ ಪರ ಕಲ್ಯಾಣವನ್ನು ಆಶಿಸುತ್ತವೆ.

“ಹೈಕು ರಚನೆ ಜಪಾನಿನ ಪ್ರಸಿದ್ಧ ಕಾವ್ಯ. ಮೂರು ಹೈಕು ಬರೆದರೆ ಕವಿ. ಐದು ಹೈಕು ಬರೆದರೆ ಮಹಾಕವಿ” ಎಂದು ಬಲಶ್ರೋ ಹೇಳುವ ವಿಚಾರ ಮಂಡಿಸುತ್ತಾ ಅಂತಹ ಗಟ್ಟಿತನ ಹಾಗೂ ವಿಚಾರ ಚಿಂತನೆಗೆ ಹಚ್ಚುವ ಹೈಕುಗಳು ಸಿದ್ದರಾಮ ಹೊನ್ಕಲ್ ರವರ ಕೃತಿಯಲ್ಲಿವೆ ಎಂದು ಡಾ. ಜಯದೇವಿ ಗಾಯಕವಾಡ ಹುಮ್ನಾಬಾದ್ ಅವರು ತಮ್ಮ ಆಶಯ ನುಡಿಯಲ್ಲಿ ಇವರ ಹೈಕು ರಚನೆ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

ಅಂತರ ದೃಷ್ಟಿ, ರಚನಾ ವಿನ್ಯಾಸ, ಸಾತ್ವಿಕತೆ, ಆಧ್ಯಾತ್ಮಿಕತೆ, ದಾರ್ಶನಿಕತೆಯನ್ನು ಅಗಮ್ಯಯ ವಾಗಿ ಕಟ್ಟಿಕೊಟ್ಟಿರುವುದನ್ನು ಕಾಣಬಹುದು. ಅಕ್ಷರಗಳ ಜೋಡಣೆ ಛಂದಸ್ಸು ಬಂಧ ಇವರ ಹೈಕುಗಳ ಸೊಬಗನ್ನು ಹೆಚ್ಚಿಸಿವೆ.

“ಅವಳ ಆಸ್ತಿ
ನಗು ಸಹನೆ ಶಾಂತಿ
ಗೆದ್ದವ ಧನ್ಯ

ಇದೊಂದು ಹೈಕು ಸಾಕು, ಹೆಣ್ಣಿನ ಮಹಿಮೆಯ ನ್ನು ಜಗಕ್ಕೆ ಸಾರಲು. ಅವಳು ನಗು, ಸಹನೆ, ಶಾಂತಿಯ ಸಕಾರಮೂರ್ತಿ ಎಂಬ ಲೇಖಕರ ಭಾವ ಅನನ್ಯವಾದುದು. ಅವಳಿಗೆ ಅದರ ಹೊರತು ಬೇರೆ ಆಸ್ತಿ ಇಲ್ಲ.

"ಮಳೆಗೆ ಕಾದ
ಇಳೆ: ನಿತ್ಯವಿರಹಿ
ಕಾದ ಕಾವಲಿ"

"ವಿರಹಿ ನೆಲ
ಕಾತರ ಮಳೆರಾಜ
ಧನ್ಯ ಚುಂಬನ"

ಇಳೆ ಮಳೆಗಳ ಒಲವನ್ನು, ವಿರಹವನ್ನು ಲೇಖಕ ರು ಬಹಳ ಸುಂದರವಾದ ಹೈಕುಗಳ ಮೂಲಕ ಚಿತ್ರಿಸಿದ್ದಾರೆ.ಇಳೆಯ ಕಾವು ಇವರಿಗೆ ವಿರಹದು ರಿಯಂತೆ ಕಂಡರೆ, ಮಳೆ ಇಳೆಗೆ ಚುಂಬಿಸುವ ಭಾವ ತುಂಬಾ ರಮ್ಯ ಸಾಲುಗಳಲ್ಲಿ ಸೊಗಸಾಗಿ ಮೂಡಿದೆ.

“ಬೆಳಗಾಯಿತು
ಹೂವು ಕೀಳಲು ನಾನು
ದುಂಬಿ ರೇಗಿತು”

ಈ ಪುಟ್ಟ ಹೈಕುವಿನ ಅರ್ಥ ವಿಸ್ತಾರ ಅದೆಷ್ಟು ಮಾರ್ಮಿಕವಾಗಿದೆ. ನಾವು ಹೂವಿನ ಸೌಂದ ರ್ಯಕ್ಕೆ ಮಾರುಹೋಗಿ ಅದನ್ನು ಗಿಡದಿಂದ ಕೀಳುವುದರಿಂದ ಹೂವಿನ ನಲ್ಲ ದುಂಬಿಗೆ ಅದೆಷ್ಟು ಕೋಪ ಬರುತ್ತದೆ ಎನ್ನುವುದನ್ನು ಸಾರುವ ಜೊತೆಗೆ ಹೂವು ದುಂಬಿಯ ನೈಜ ಒಲವನ್ನು ಸಾಬೀತುಪಡಿಸುತ್ತದೆ.

“ಅಮೃತಕ್ಕಾಗಿ
ಆತ ಹಂಬಲಿಸಿದ
ಸಿಕ್ಕಳು ಸಖಿ

ಅಮೃತವೆಂದರೆ ಸಂಜೀವಿನಿ. ಇಲ್ಲಿ ಸಖಿಯ ಪ್ರೀತಿಯನ್ನು ಅಮೃತಕ್ಕೆ ಹೋಲಿಸಲಾಗಿದೆ. ಪ್ರೀತಿ ಹೃದಯಂಗಮವಾಗಿ ಅರಳಿದೆ.

“ಅವಳ ಕೋಪ
ಬೆಳಗಿನ ಇಬ್ಬನಿ
ಅರೆ ಘಳಿಗೆ”

ನಲ್ಲ ನಲ್ಲೆಯರ ಹುಸಿಗೊಪ ತಾತ್ಕಾಲಿಕವಾದ ದ್ದು. ಅದೆಂದಿಗೂ ದೀರ್ಘಕಾಲ ಉಳಿಯದು ಎಂಬುದನ್ನು ಬೆಳಗಿನ ಇಬ್ಬನಿಯ ರೂಪದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಬೆಳಗಿನ ಇಬ್ಬನಿ ಹೇಗೆ ಅರೆಗಳಿಗೆ ಇದ್ದು ಸೂರ್ಯನ ಚುಂಬನಕ್ಕೆ ಕರಗಿ ನೀರಾಗಿ ಹರಿಯುವುದೋ ಹಾಗೆ ಪ್ರೇಮಿ ಯ ಪ್ರೀತಿಯ ನುಡಿಗೆ ಪ್ರಿಯತಮನ ಕೋಪ ಮಾಯವಾಗುವುದು ಹೋಲಿಕೆ ಎಷ್ಟು ಅದ್ಭುತ.

“ಭಾನು ಬಯಲು
ಸೂರ್ಯ ಚಂದ್ರ ಅದೃಶ್ಯ
ಮಳೆ ಕಣ್ಣೀರು”

ಬಾನ ಬಯಲ ತುಂಬಾ ಕಾರ್ಮೋಡ ಆವರಿಸಿದೆ. ಇದರ ಛಾಯೆಗೆ ಸೂರ್ಯ ಚಂದ್ರ ಮೋಡದ ಮರೆಯಲ್ಲಿ ಲೀನವಾಗಿದ್ದಾರೆ. ಆಗ ಭೂಮಿಗೆ ಮಳೆ ಸುರಿಯುತ್ತದೆ ಎಂಬುದನ್ನು ಲೇಖಕರು ಮಳೆಯನ್ನು ಕಣ್ಣೀರು ಎಂಬ ರೂಪಕದ ಮೂಲಕ ಸುಂದರವಾಗಿಸಿದ್ದಾರೆ.

“ತಾನೆಂಬ ಅಹಂ
ಮೂರ್ಖಶಿಖಾ ಮಣಿಗೆ
ಬಾವಿಯ ಕಪ್ಪೆ”

ತುಂಬಿದ ಕೊಡ ತುಳುಕದು ಎಂಬ ನುಡಿ- ಯಂತೆ ಪ್ರಬುದ್ಧರು ವಿಶಾಲ ಮನೋಭಾವ ದಿಂದ ವರ್ತಿಸುತ್ತಾರೆ. ಅವರಿಗೆ ಜಗದ ಪರಿವಿರು ತ್ತದೆ. ಆದರೆ ಅರ್ಧ ಕೊಡ ಸದ್ದು ಮಾಡುತ್ತದೆ ಎಂಬಂತೆ ಅರ್ಧ ತಿಳಿದವರು ತನ್ನ‌ ಸುತ್ತ ಕೋಟೆ ಕಟ್ಟಿಕೊಳ್ಳುವರು. ತನಗಿಂತ ಜಾಣರಿಲ್ಲವೆಂದು ತಮ್ಮ ಅಲ್ಪಜ್ಞಾನವನ್ನು ಪ್ರದರ್ಶಿಸುತ್ತಾರೆ. ಇದನ್ನು ಲೇಖಕರು ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ.

“ಚೆಲುವಿಗಲ್ಲ
ಒಲವಿಗಾಗಿ ಎಲ್ಲಾ
ಮರೆತು ಹೋದ”

ಬದುಕಿನ ಜೀವಾಳವೇ ಒಲವು. ಒಲವೆಂಬುದು ನಿತ್ಯ ಹರಿವ ತೊರೆಯಿದ್ದಂತೆ‌. ಪ್ರೀತಿ ಕುರುಡು ಎನ್ನುವ ನುಡಿ ಪ್ರೀತಿ ಸೌಂದರ್ಯವನ್ನು ಬಯಸದು, ಅದೊಂದು ಭಾವನಾತ್ಮಕವಾದ ಅನುಭೂತಿಯನ್ನು ನಿರೂಪಿಸುತ್ತದೆ. ಇಲ್ಲಿ ನಲ್ಲ ಚೆಲುವಿಗೆ ಆಕರ್ಷಿತನಾಗಲಿಲ್ಲ ಬದಲಿಗೆ ಅವಳ ಒಲವಿಗೆ ಮಾರು ಹೋದ ಎನ್ನುವಲ್ಲಿ ಹೈಕು ಧ್ಯಾನಸ್ಥ ಸ್ಥಿತಿಯಲ್ಲಿ ಜೀವ ತಳೆದು ಬದುಕಿನ ಎಲ್ಲಾ ದುರಿತಗಳನ್ನು ಮರೆಸುತ್ತದೆ ಎಂಬ ಸಂದೇಶ ನೀಡುತ್ತದೆ.

“ಒಡಲ ನೋವು
ಕಣ್ಣೀರು ಕಾಣಲಿಲ್ಲ
ಹುಟ್ಟು ಕುರುಡ”

ಇಲ್ಲಿ ಸಿದ್ದರಾಮ ಹೊನ್ಕಲ್ ರವರು ಸಮಾಜದ ನೋವು ಬರಹಗಾರನ ನೋವಾಗಬೇಕು ಎನ್ನುತ್ತಾರೆ, ಜನರ ಸಂಕಟಗಳಿಗೆ ಸಾಂತ್ವನದ ಮಡಿಲಾಗಬೇಕು, ಹತಾಶೆ ನಿರಾಸೆಗಳಿಗೆ ಭರವಸೆಯ ಬೆಳಕಾಗಬೇಕು. ಅದರ ಹೊರತಾಗಿ ಬರೆದ ಕಾವ್ಯ ನಿಷ್ಪ್ರಯೋಜಕ ಎನ್ನುತ್ತಾ ಅಂತಹ ಸಾಹಿತಿ ಹುಟ್ಟು ಕುರುಡ ಎನ್ನುತ್ತಾರೆ.

“ಪಾಂಚಾಲಿ ಪದ
ಕೇಳದೆ ಬಂದ ಭಾಗ್ಯ
ಕುಂತಿ ಕಾಣಿಕೆ”

ಪಂಚ ಪಾಂಡವರು ತನ್ನ ತಾಯಿಗೆ ಭಿಕ್ಷೆ ತಂದಿ ದ್ದೇವೆ ಅಮ್ಮ ಎನ್ನುವಾಗ ಕುಂತಿ ವಿವೇಚಿಸದೆ ಅಜಾಗರೂಕತೆಯಿಂದ ಅದೇನು ಎಂದು ನೋಡದೆ ಐದು ಜನರು ಸಮಾನವಾಗಿ ಹಂಚಿ ಕೊಳ್ಳಿ ಎಂದು ವರ ನೀಡಿದಳು. ಇದರ ಪರಿಣಾಮವೇ ಪಂಚಪಾಂಡವರ ಪತ್ನಿಯಾಗಿ ಪಾಂಚಾಲಿ ಎಂಬ ಪಟ್ಟ ಅವಳಿಗೆ ಕುಂತಿಯ ಕಾಣಿಕೆಯಾಗಿ ದೊರೆಯಿತು ಎಂದು ತುಂಬಾ ಕಾರ್ಮಿಕವಾಗಿ ಹೇಳುತ್ತಾರೆ. ಇಲ್ಲಿ ಹೆಣ್ಣಿನ ಮನ ಸ್ಥಿತಿ ಹಾಗೂ ಮನದ ಖೇದವನ್ನು ಕಾಣಬಹುದು.

“ನೆನಪುಗಳು
ನದಿಯಂತೆ ಹರಿದು
ಸಮುದ್ರ ಸಂಗ”

ಮನುಜನ ಭಾವನಾತ್ಮಕ ಸಂಬಂಧ ಕುರಿತು ಈ ಹೈಕು ರೂಪುಗೊಂಡಿದ್ದು ನೆನಪುಗಳು ಜೀವನ ಪರ್ಯಂತ ನಮ್ಮೊಡನಿದ್ದು ಸದಾ ಕಾಡುತ್ತವೆ. ಅವು ಒಂದರ ನಂತರ ಮತ್ತೊಂದು ಜೊತೆ ಯಾಗಿ, ತೊರೆಯಾಗಿ, ನದಿಯಾಗಿ ಹರಿದು ಕೊನೆಗೆ ಸಮುದ್ರ ಸೇರುತ್ತದೆ ಎನ್ನುವಲ್ಲಿ ನಾವು ನೆನಪುಗಳ ಆಳ ಅಗಲಗಳ ವಿಸ್ತಾರತೆಯನ್ನು ಕಾಣಬಹುದು.

“ಇದು ಕಲ್ಲಲ್ಲ
ಹೊನ್ನಿನ ಹೃದಯವು
ಸಹಜ ಪ್ರೀತಿ”

ಹೃದಯ ಭಾವನೆಗಳ ಗುಡಿ. ಅಲ್ಲಿ ಪ್ರೀತಿ, ಪ್ರೇಮ ಸಹಜವಾಗಿ ಮೂಡುತ್ತದೆ. ಅದು ಕಾಠಿಣ್ಯತೆಯ ನ್ನು ಪ್ರತಿಪಾದಿಸುವ ಕಲ್ಲಲ್ಲ. ಬದಲಾಗಿ ಪ್ರೀತಿ ಬಯಸುವ ಪ್ರೇಮ ಮಂದಿರ. ಹಾಗಾಗಿ ಈ ಹೃದಯವನ್ನು ಹೊನ್ನಿಗೆ ಹೋಲಿಸಿ ದ್ದಾರೆ.

“ಮೋಡಗಟ್ಟಿದೆ
ಬಾನಲಿ ಮತ್ತೆ ಮತ್ತೆ
ನಿನ್ನ ನೆನಪು”

ನೆನಪುಗಳೇ ಹಾಗೆ ಮೋಡಗಟ್ಟಿದಂತೆ ಇರುತ್ತವೆ. ನೆನಪಾದಾಗೊಮ್ಮೆ ಮಳೆ ಸುರಿಸು ತ್ತದೆ.

“ಮದುವೆ ಅಂದ್ರೆ
ಅಂತ್ಯವಲ್ಲದು: ಶುರು
ಪ್ರೇಮ ಕಹಾನಿ”

ಪ್ರೀತಿ ಪ್ರೇಮಕ್ಕೆ ವಯಸ್ಸಿನ ಮಿತಿ ಇಲ್ಲ. ಪ್ರೇಮ ವಿವಾಹದ ಮೊದಲು ಮಾತ್ರ ಉಂಟಾಗುತ್ತದೆ ಎಂಬುದು ಸುಳ್ಳು. ವಿವಾಹದ ನಂತರ ಪ್ರೇಮ ಮುಂದುವರೆದು ಜೀವನ ಪರ್ಯಂತ ಸಾಗು ತ್ತದೆ ಎಂದು ಬಿಂಬಿಸಿದ್ದಾರೆ.

“ಜಗದೆಲ್ಲೆಡೆ
ಪ್ರೀತಿ ತುಂಬಬೇಕಿದೆ
ಮಾತ್ಸರ್ಯವಲ್ಲ”

ಜಗವು ಪ್ರೇಮಮಯವಾಗಬೇಕು‌ ಸಕಲ ಚರಾ ಚರ ಜೀವಿಗಳ ನಡುವೆ ಪ್ರೀತಿ ವಾತ್ಸಲ್ಯ ತುಂಬ ಬೇಕು ಎಂಬ ಕವಿ ಭಾವ ಸಮಾಜಮುಖಿ ಬರಹ ದ ಕೈಗನ್ನಡಿಯಾಗಿದೆ. ಇಲ್ಲಿ ಕವಿ ಮಾತ್ಸರ್ಯ ಸಲ್ಲದು ಎನ್ನುತ್ತಾ ಪ್ರೀತಿಗೆ ಕರೆ ಕೊಡುತ್ತಾರೆ.

“ಹಸಿವು ಕೃಷಿ
ನೆಲೆದೆಡೆಗೆ ನೋಡು
ಹಿಂಗಿಸುವನು”

ನೆಲ ರೈತನ ಕಾಯಕ ಭೂಮಿ ಅವನಿಗೆ ಮನು ಜರು ಮೋಸ ಮಾಡಬಹುದು ಆದರೆ ಅವನಪ್ಪಿ ಒಪ್ಪಿದ ಮಣ್ಣು ಎಂದಿಗೂ ಅವನಿಗೆ ನಿರಾಶೆ ಮಾಡದು. ಹಸಿದೊಡಲಿಗೆ ತುತ್ತನಿತ್ತು ಸಲಹುವು ದೆಂಬ ತತ್ವವನ್ನು ವ್ಯಕ್ತಪಡಿಸಿದ್ದಾರೆ.

“ಚಂದ್ರನೆಂದಿಗೂ
ಏಕಾಂಗಿಯಲ್ಲ: ಸುತ್ತ
ತಾರೆ ನೀರೆಯರು”

ಇಲ್ಲಿ ಕವಿ ಚಂದ್ರಮ ಮತ್ತು ತಾರೆಯರ ಒಲವಿನ ಸರಸದಾಟವನ್ನು ರಮ್ಯ ಭಾವದಲ್ಲಿ ಕಟ್ಟಿದ್ದಾರೆ. ಇಲ್ಲಿ ಚಂದ್ರಮ ಏಕಾಂಗಿಯಲ್ಲ ಅವನ ಗೆಳತಿಯ ರು ಅವನಿಗೆ ಜೊತೆಯಾಗು ವರೆಂದಿದ್ದಾರೆ.

“ಬಿತ್ತಿಕೋ ಒಮ್ಮೆ
ನಿನ್ನೊಳಗೆ ನನ್ನನು
ಮರವಾಗುವೆ”

ವಿಭಿನ್ನ ದೃಷ್ಟಿಕೋನಗಳನ್ನು ಬಿಂಬಿಸುವ ಹೈಕು ಇದಾಗಿದ್ದು ಇಲ್ಲಿ ಪ್ರೀತಿ, ಪ್ರೇಮದ ಬೀಜ ಬಿತ್ತ ಬಹುದು. ಮತ್ತೊಂದು ಜೀವದ ಸೃಷ್ಟಿಗೆ ಕಾರಣ ವಾಗಬಹುದು. ಒಟ್ಟಾರೆ ಸದಾಶಯ ವನ್ನು ಹೊತ್ತ ಸಕಾರಾತ್ಮಕ ಹೈಕು ಇದಾಗಿದೆ.

“ಸೃಷ್ಟಿಶಿಲೆಯು
ಅವಳಿಂದಲೇ ಜಗ
ಆದಿ ಅಂತ್ಯಕೆ”

ಜಗದ ಸೃಷ್ಟಿ ಹೆಣ್ಣು, ಹೆಣ್ಣೆ ಪ್ರಕೃತಿ. ಅವಳಿಂದ ಲೇ ಜಗತ್ತಿನ ಮುಂದುವರಿಕೆ.ಅವಳು ಆದಿಯೂ ಹೌದು, ಅಂತ್ಯವೂ ಹೌದು ಎಂದು ಕವಿ ಅವಳ ಗುಣಗಾನ ಮಾಡಿದ್ದಾರೆ.

“ಆಸೆಯೇ ದುಃಖ
ಬುದ್ಧನ ಕಾಣಿಕೆ ಇದು
ಕನಸು ಬಿಡು”

ಜಗತ್ತಿಗೆ ಬುದ್ಧ ನೀಡಿದ ಕಾಣಿಕೆ ಎಂದರೆ ಆಸೆಯೆ ದುಃಖಕ್ಕೆ ಮೂಲ, ಆಸೆಯನ್ನು ತ್ಯಜಿಸಿ ದಾಗ ಸುಂದರ ಸುಖಜೀವನ ದೊರೆಯುವು ದೆಂಬುದು‌ ಅದರಿಂದ ಅತಿಯಾದ ನಿರೀಕ್ಷೆಗಳ ನ್ನು ಬಿಡು ಎನ್ನುತ್ತಾರೆ.

"ಸುಟ್ಟ ಮನದಿ
ಗಿಡ ನೆಟ್ಟ ರೈತರು
ಪ್ರೇಮ ಸಂಪ್ರೀತ"

"ಮನೆ ನಿನ್ನದು
ವಿಳಾಸದ ಹಂಗೇಕೆ
ಹೃದಯ ಚೋರ"

"ಸ್ತ್ರೀಯು ಅಂದರೆ
ಆ ದೇವಗು ಅವಳೇ
ಒಡಲಗುಡಿ"

ಹೀಗೆ ಒಂದಕ್ಕಿಂತ ಮತ್ತೊಂದು ಹೈಕುಗಳು ಭಿನ್ನವಾದ ಅರ್ಥವನ್ನು, ಸಾರವನ್ನು ಬಿಂಬಿ- ಸುತ್ತಾ ಸೊಗಸಾದ ಭಾವದಲ್ಲಿ ಎಲ್ಲರಿಗೂ ಆಪ್ತವಾಗುವಂತೆ ಮೂಡಿಬಂದಿದ್ಧು ಓದುಗರಿಗೆ ಆಪ್ತವಾಗುತ್ತವೆ.

ಈ ಹೈಕುವಿನ ಪ್ರಥಮ ಕೃತಿಗೆ ಸಗರನಾಡು ಸಂಸ್ಥೆಯವರು ಕೊಡಮಾಡುವ “ಸಗರನಾಡ ಸೌರಭ ಪುರಸ್ಕಾರ“ವು ರೂ.5000/- ಗೌರವ ಧನದೊಂದಿಗೆ ದೊರಕಿರುವುದು ಕೃತಿಯ ಮೌಲ್ಯ ವನ್ನು ತೋರಿಸುತ್ತದೆ.

ಇಂತಹ ಕೃತಿಯನ್ನು ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಹೈಕುಗಳ ಲೇಖಕರಾದ ಸಿದ್ದರಾಮ ಹೊನ್ಕಲ್ ಅವರಿಗೆ ಅಭಿನಂದನೆಗಳು.

✍️ಅನುಸೂಯ ಯತೀಶ್
ಮಾಗಡಿ, ಬೆಂಗಳೂರು