ಕಲ್ಲು ಬಂಡೆಯನು ಸುಂದರ ವಿಗ್ರಹ ಮಾಡಿದವನಿಗೆ
ನನ್ನ ಬಳಿ ಕೊಡಲು ಇದ್ದಿದ್ದಾದರೂ ಏನು?
ನನ್ನ ನಾನು ಸಮರ್ಪಿಸಿಕೊಳ್ಳುವುದರ ಹೊರತು

ಎದೆಯೊಳಗಿನ ಭಾವ ಹೊರಹೊಮ್ಮಿ ಬರುವಾಗ
ಒಡಲಾಳದ ವೇದನೆ ಹೇಳಲಾಗದೆ
ಹೃದಯ ಮಾತನಾಡಲು ಹಂಬಲಿಸಿತು

ಒಂದು ಸುದೀರ್ಘ ಇರುಳಲಿ
ಇಬ್ಬರು ತುಟಿ ಬಿಚ್ಚಿ ಮಾತಾಡಿದಾಗ
ಅಲ್ಲಿ ಮನಸ್ಸುಗಳಷ್ಟೇ ತೆರೆದುಕೊಂಡಿದ್ದವು

ಪದೇಪದೇ ನೆನಪಾಗುವ ನಿನ್ನ ತೋಳಿನ
ಬೆವರ ಅತ್ತರ್ ಮನಸ್ಸಿಗೆ ಮಲ್ಲಿಗೆಯ ಸುವಾಸನೆ ಬಿರುತ್ತಿತ್ತು

ನಿನ್ನ ಕಾಲೆoದು ತಿಳಿದು ತಡವಿದಾಗೆಲ್ಲ
ಹೂವಿನಷ್ಟೇ ಮೃದು ಎನಿಸಿ
ಎದೆಯ ಬಟ್ಟಲಿನಿಂದ.. ಜೇನು ತುಟಿಗೆ ಸವರಿದ್ದೆ

ಮುಖಪುಟವಾಗಿ ಬಂದ ನೀನು
ಮನಪುಟದಲ್ಲಿ ಅಚ್ಚಳಿಯದೇ
ಮಚ್ಚೆಯಾಗಿ ಉಳಿದುಬಿಟ್ಟೆ

ಅದೆಷ್ಟೊ ವಿರಹದ ಹಾಡುಗಳಿಗೆ ರಾಗ ಬೆರಿಸಿದ
ನಿನ್ನ ದನಿಯ ದುನಿಯಾ ಬಿಟ್ಟೊಗೋವರೆಗೂ ಕೇಳುತಲಿರುವೆ..

✍️ಕವಿತಾ ಸಾಲಿಮಠ
ಬಾಗಲಕೋಟೆ