ಮೇಧಿನಿ ಕಂಡಿಹ
ವೇದವೆ ಹೇಳಿದ
ಬೋಧಿಪ ಗುರುವೇ ಅತಿಶಯನು
ಭೇದವ ಎಣಿಸದೆ
ಶೋಧನೆ ಮಾಡುತ
ಸಾಧನೆ ಕಲಿಸುವ ಅಸದಳನು.
ಆರಿಕೆಯ ಮಾಡಲು
ಹರಕೆಯ ಸಲಿಸಲು
ತಿರುವಿನ ದಾರಿಯ ತೋರುವನು
ಗರಿಮೆಯ ಮೆರೆಸಿಹ
ಹಿರಿಮೆಯ ಧರಿಸಿಹ
ಅರಿವಿನ ಬಾಳಿನ ಬೆಳಕಿವನು
ಮುಂದಿನ ಹಾದಿಗೆ
ನಂದದ ದೀವಿಗೆ
ಚಂದದಿ ಬೆಳಗುತ ಹರಸಿಹನು
ಹಿಂದೆಯೆ ನಿಲ್ಲುತ
ಕಂದನೀನೆನುತ
ಸುಂದರ ಬದುಕನು ನೀಡಿಹನು
ಸುಮನದೆ ತಿಳಿವನು
ಗಮನಿಸಿ ಬಲವನು
ತಿಮಿರವನೋಡಿಸಿ ಸಲಹುವನು
ಅಮಿತ ಜ್ಞಾನವ
ರಮಿಸುತ ಕೊಡುವನು
ನಮಿಸುತ ಗುರುವಿಗೆ ವಂದಿಪೆನು.
“ಅಕ್ಷರ ಮಾತ್ರಂ ಕಲಿಸಿದಾತಂ ಗುರು” ಎನ್ನುವಾಗ ಜೀವನದ ಈ ಉದ್ದದ ಪಯಣದಲ್ಲಿ ಗುರುವಾಗಿ ಬಂದವರು ಅರಿವನ್ನು ತಂದವರು ಎಲ್ಲರಿಗೂ ಸಾಷ್ಟಾಂಗ ಪ್ರಣಾಮಗಳು.
ಶಿಕ್ಷಕ ದಿನಾಚರಣೆಯ ಶುಭ ಕಾಮನೆಗಳು.
✍️ಸುಜಾತಾ ರವೀಶ್
ಮೈಸೂರು
ನನ್ನ ಷಟ್ಪದಿಗಳನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು
ಸುಜಾತಾ ರವೀಶ್
LikeLiked by 1 person