ಗುರುವೇ ನೀನು ಈ ಧರೆಯ ಅರಿವಿನ ವರಗಳ ಕೀರ್ತಿ
ನೀನಿರದೆ ಕಗ್ಗಲಿನಂತ ಮಗುವಾಗದು ಮೌಲ್ಯದ ಮೂರ್ತಿ
ಹರಿಸಿ ಸಾಹಿತ್ಯ ಸಾಗರ ಸಾಹಿತಿಗಳು ಬಣ್ಣಿಸಿಹರು ಓ ಓಜ
ದೇವರಿರುವಿನ ಸಾಕ್ಷಾತ್ಕಾರವ ಜ್ಞಾನದಿ ಕಾಣಿಸಿದ ದೇವರಾಜ
ಸಾಹಿತಿಗಳಂತರಾಳದಲ್ಲಿ ನಿನಗೆ ಸರ್ವಜ್ಞನ ಘನದ ಸ್ಥಾನ
ಓ ಗುರುವೆ ಧನ್ಯವು ನಿನ್ನ ಪಡೆದ ನಮ್ಮಯ ಜೀವಮಾನ
ವ್ಯಾಸಂಗಿಗಳ ಸರ್ವಾಂಗೀಣ ಬೆಳವಣಿಗೆ ವಿಕಸನದಾತ
ಸಿರಿ ಹವ್ಯಾಸದಿ ಬದುಕು ಹಸನಾಗಿಸುವ ಜೀವನದಾತ
ಗುರುಕುಲ ಕಾಲದಿ ಭವದ ಬಂಧನ ಕಳೆವ ಮೋಕ್ಷಗಾರ
ಜಾತಿರೋಗವಳಿಸಿ ಸಮತೆ ಯೋಗ ತೋರುವ ಸಮತಾಗಾರ
ಕೆತ್ತಿ ಕಗ್ಗಲನು ಬಿತ್ತಿ ಅಕ್ಷರವನ್ನು ಸವಿಫಲದ ಮರ ಬೆಳೆಸುವಾತ
ಮಾಂಸದ ಮುದ್ದೆಗೆ ವಿದ್ಯೆ ಬುದ್ಧಿ ನೀಡಿ ಜ್ಞಾನಿಯಾಗಿಸುವಾತ
ಚಡಿ ಏಟಲಿ ಚಮಕಿಸಿ ಶಿಷ್ಯಗೆ ವಿದ್ಯೆ ಘಮಿಸುವ ದಿಗ್ದರ್ಶಕ
ಶಿಸ್ತು ಪ್ರಾಮಾಣಿಕತೆ ಕ್ಷಮಾ ನಿಯಮ ಪರಿಪಾಲಕ
ಜ್ಞಾನಿ ವಿಜ್ಞಾನಿ ವೈದ್ಯ ಪ್ರಧಾನ ಪದವಿ ನಿನ್ನ ಶ್ರಮದ ಪದಕ
ನಡೆನುಡಿಯಲಿ ನೀತಿ ಪ್ರೀತಿ ಅರ್ಥಪಡಿಸುವ ಸುಶಿಕ್ಷಕ
ಕವಿ ಘಮಕಿ ನಟ ಸುಬೋಧ ಸಕಲ ಕಲಾ ನಿರೂಪಕ
ಅಧ್ಯಾಪನದಿ ಅಧ್ಯಾಯಿಯ ವ್ಯಕ್ತಿತ್ವ ಘಮಿಸುವ ಅಧ್ಯಾಪಕ
ಯುಕ್ತಾಯುಕ್ತ ಉಪಾಯದಿ ಮನಗೆಲುವ ಉಪಾಧ್ಯಾಯ
ಪರಬ್ರಹ್ಮ ವಿಷ್ಣು ಮಹೇಶ್ವರ ತ್ರಿ ಶಕ್ತಿ ಸಂಗಮ ಗುರುರಾಯ
ಶ್ರೀ ಸುಭಾಷ್ ಹೇಮಣ್ಣಾ ಚವ್ಹಾಣ
ಶಿಕ್ಷಕ ಸಾಹಿತಿಗಳು, ಹುಬ್ಬಳ್ಳಿ ಶಹರ