ಪೀಠಿಕೆ : ಭಾರತದ ಸ್ವಾತಂತ್ರ್ಯ ಸಂಗ್ರಾಮ ಅದೊಂದು ರೋಚಕ ಯಶೋಗಾಥೆ. ಕೊಟ್ಯಾಂತರ ಭಾರತೀಯರ ಸಾಮುದಾಯಿಕ ಹೋರಾಟ ಮತ್ತು ಚಳುವಳಿ. ಸಾವು-ನೋವು ಗೆಲುವು ಇವೆಲ್ಲವೂ ನಮ್ಮೆಲ್ಲರ ಸ್ಮೃತಿಪಟಲ ಗಳಲ್ಲಿ ಇಂದಿಗೂ ಮಾಸದೇ ಉಳಿದಿದೆ. ಕಾರಣ ವಿಷ್ಟೇ ದಾಸ್ಯದ ಸಂಕೋಲೆಯಿಂದ ಹೊರಬರುವ ತವಕ ತಲ್ಲಣಗಳು ಒಂದೆಡೆಯಾ ದರೆ, ಅಭಿಮಾನ-ಸ್ವಾಭಿಮಾನ ಗಳು ಇನ್ನೊಂದೆಡೆ. ಸ್ವಾತಂತ್ರ್ಯ ಸಿಕ್ಕಿರುವುದಲ್ಲ ಅದು ಪಡೆದಿರುವದು ಎಂಬ ವೀರವೃತದ ಮಾತು ಗಳು ಇಂದಿಗೂ ರಾಷ್ಟ್ರಹಿತ, ರಾಷ್ಟ್ರಭಕ್ತರ ಧಮನಿ-ಧಮನಿಗಳ ಲ್ಲಿ ಪ್ರವಹಿಸುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ವರ್ಗ,ವರ್ಣ,ಲಿಂಗ ಭೇಧಗಳಿಲ್ಲದೇ ಐಕ್ಯತೆಯ ಮಂತ್ರ “ಒಂದೇ ಮಾತರಂ” ಅನ್ನು ಜಪಿಸಿದ್ದು ಸ್ಮರಣೀಯ, ಹೋರಾಡಿ ಮಡಿದ ವೀರರ ಮರಣ ಚಿರಸ್ಮರ ಣೀಯ. ಸ್ವಾತಂತ್ರ್ಯ ಹೊರಾಟ ದಲ್ಲಿ ಮಹಿಳೆ ಯರ ಪಾಲ್ಗೊಳ್ಳುವಿಕೆ ಸಕ್ರಿಯ ವಾಗಿತ್ತು ಎಂಬುದು ಸತ್ಯ. ಆಕೆ ಪ್ರತ್ಯಕ್ಷವಲ್ಲದಿದ್ದ ರೂ ಪರೋಕ್ಷವಾಗಿ ತನ್ನನ್ನು ಕ್ರಿಯಾಶೀಲಗೊಳಿ ಸಿಕೊಂಡಿರುವ ಇತಿಹಾಸವಿದೆ. ಚೈತನ್ಯಶೀಲೆ ಯರಾದ ಹೆಣ್ಣು ಮಕ್ಕಳು ಕುಟುಂಬ ಪಾಲನೆ ಯೊಂದಿಗೆ ದೇಶರಕ್ಷಣೆಗಾಗಿ ತೊಡಗಿಸಿಕೊಂಡಿ ರುವುದು ಹೆಮ್ಮೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುಬ್ಬಳ್ಳಿಯ ಪಾತ್ರ

ಆಯಾ ದೇಶದ ಸ್ವಾತಂತ್ರ್ಯ ಹೋರಾಟದ ಕಥೆ ರಕ್ತರಂಜಿತವು, ಕುತೂಹಲ ಕೆರಳಿಸುವಂತ ಹುದು, ರೋಮಾಂಚಕಾರಿ ಘಟನೆಗಳಿಂದ ಕೂಡಿದ್ದಾಗಿ ಇರುತ್ತದೆ. ತ್ಯಾಗ- ಬಲಿದಾನಗಳ ಈ ಕಥೆ ಸಹಜವಾಗಿಯೆ ತನ್ನ ಮುಂದಿನ ಜನಾಂಗಕ್ಕೆ ಚೇತೋಹಾರಿಯಾಗಿರು ತ್ತದೆ. ಆದರೆ ಭಾರತ ಸ್ವಾತಂತ್ರ್ಯ ಹೋರಾಟದ ಸಂಗ್ರಾಮ ಇನ್ನೂ ವಿಶಿಷ್ಟವಾದದ್ದು.ಇದು ವಿಶ್ವದ ಇತಿಹಾಸದಲ್ಲಿಯೆ ಅದ್ವಿತೀಯವೂ, ವಿನೂತನವೂ ಲೋಕವೇ ಕಂಡರಿಯದ ಹೋರಾಟ. ಬಾಪೂಜಿಯ ನೇತೃತ್ವ ದಲ್ಲಿ ಸತ್ಯ, ಶಾಂತಿ, ಅಹಿಂಸೆಯ ಮಾರ್ಗ ದಲ್ಲಿ ಸತ್ಯಾಗ್ರಹ ಎಂಬ ಅಸ್ತ್ರದಿಂದ ದೇಶ ಸ್ವಾತಂತ್ರ್ಯ ವನ್ನು ಪಡೆಯಿತು. ಯುದ್ಧವನ್ನು ಹೂಡದೆಯೇ ದಾಸ್ಯಶೃಂಖಲೆಗಳನ್ನು ಕಳಚಿ ಕೊಂಡ ಮೊದಲ ರಾಷ್ಟ್ರವಾಯಿತು ಭಾರತ. ತನ್ನನ್ನು ತಾನೇ ದಂಡಿಸಿಕೊಳ್ಳುವ ಈ ಅಹಿಂಸಾ ಹೋರಾಟ ದಲ್ಲಿ ಸಾವಿರಾರು ಸ್ತ್ರೀ- ಪುರುಷರು ಗುಂಡಿಗೆ ಎದೆ ಕೊಟ್ಟರು. ನೂರಾರು ಜನ ನಗುನಗುತ್ತಾ ನೇಣು ಗಂಬವೇರಿದರು. ಲೆಕ್ಕವಿಲ್ಲ ದಷ್ಟು ಜನ ಲಾಠಿ ಪೆಟ್ಟು ತಿಂದು ಜೈಲುವಾಸ ಅನುಭವಿ ಸಿದರು. ಹಳ್ಳಿಯಿಂದ ದಿಲ್ಲಿಯವರೆಗೆ, ಮಕ್ಕಳಿಂದ ಮುದುಕರ ವರೆಗೆ ಸರ್ವರೂ ಪಾಲ್ಗೊಂಡ ಜನಕ್ರಾಂತಿಯ ಈ ಹೋರಾಟ ಆಧುನಿಕ ಭಾರತ ಇತಿಹಾಸದಲ್ಲಿ ಮಹೋನ್ನತ ಅಧ್ಯಾಯವಾ ಯಿತು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರವು ಹೆಮ್ಮೆ ಪಡುವಂಥದು. ಅದರಲ್ಲಿಯೂ ಬೆಳಗಾವಿ, ಧಾರವಾಡ ಜಿಲ್ಲೆಗಳು 1942ರ ಉಗ್ರ ಹೋರಾಟದಲ್ಲಿ ಅಗ್ರಪಂಕ್ತಿಯ ಲ್ಲಿದ್ದವು. ಮೊದಲಿನ ಚಳುವಳಿಗಳಲ್ಲಿಯೂ ಈ ಜಿಲ್ಲೆಗಳಿಂದ ಹೆಚ್ಚು ಜನರು ಸೆರೆಮನೆಗೆ ಹೋಗಿ ದ್ದರು. ಈ ಎರಡೂ ಜಿಲ್ಲೆಗಳಲ್ಲಿ ಚಲೇಜಾವ (ಕ್ವಿಟ್ ಇಂಡಿಯಾ) ಆಂದೋಲನವು ಒಳ್ಳೆಯ ಸಂಯೋಜಿತ ರೀತಿಯಲ್ಲಿ ನಡೆಯಿತು.

ಸಾವಿರ ವರ್ಷಕ್ಕೂ ಮಿಕ್ಕ ಐತಿಹಾಸಿಕ ಮಹತ್ವದ ದಾಖಲೆ ಹೊಂದಿರುವ ಹುಬ್ಬಳ್ಳಿ ಆಯಾ ಅರಸು ಮನೆತನಗಳ ಆಡಳಿತ ಕ್ಕೊಳಪಟ್ಟಾಗಲೆಲ್ಲ ರಾಜಕೀಯ ವಾಗಿ ಮಹತ್ವದ ಸ್ಥಾನ ಪಡೆದಿದೆ. ವಿದೇಶಿಯ ಆಂಗ್ಲರ ಆಡಳಿತ ಭಾರತದಾದ್ಯಂತ ವ್ಯಾಪಿಸ ತೊಡಗಿದಂತೆಯೇ ಈಸ್ಟ್ ಇಂಡಿಯಾ ಕಂಪನಿ ಯ ಏಜೆಂಟರಾಗಿ ಹಳೇಹುಬ್ಬಳ್ಳಿಯ ಕಲ್ಯಾಣ ಶೆಟ್ಟರು, ನಂತರ ಬಸಪ್ಪ ಶೆಟ್ಟರು, ಬೀದರದ ಶಾಹೀ ಅರಸರ ಕಡೆಯಿಂದ ಮೊದಲಿ ಗೆ ಹುಬ್ಬಳ್ಳಿ ಸುತ್ತಮುತ್ತಲಿನ ಅನೇಕ ಗ್ರಾಮಗಳ ದೇಸಗತಿ ಪಡೆದು ನಂತರ ಪೇಶ್ವೆ ಆಡಳಿತದಲ್ಲಿ ಆಂಗ್ಲರಾಡ ಳಿತದಲ್ಲಿ ಅವೇ ದೇಸಗತಿ ಮುಂದು ವರೆಸಿ ಕೊಂಡು ಹೋದ ಅನೇಕ ಬ್ರಾಹ್ಮಣ ದೇಸಾಯಿ ಕುಟುಂಬಗಳ ವರು, ಸಾರಸ್ವತರು, ಗೌಡ ಸಾರಸ್ವತರು, ಜೈನ, ಕ್ರೈಸ್ತ, ಮುಸ್ಲಿಮ್ ಗಣ್ಯರು ಅಧಿಕಾರ ಸ್ಥಾನ ಹೊಂದಿ ಆಡಳಿತ ನಿರ್ವಹಣೆ ಯಲ್ಲಿ ಮಹತ್ವದ ಪಾತ್ರ ವಹಿಸಿದು ದನ್ನು ಕಾಣುತ್ತೇವೆ.

1947 ರಲ್ಲಿ ಸ್ವಾತಂತ್ರ್ಯ ಭಾರತದಲ್ಲಿ ಸಂಸ್ಥಾನ ಗಳ ವಿಲೀನಿಕರಣವಾಗುವತನಕ ಅಸ್ತಿತ್ವದ- ಲ್ಲಿದ್ದ ಸವಣೂರ ಸಂಸ್ಥಾನದ ಆಡಳಿತ ಹಾಗೂ ಹಲವಾರು ಲೋಕಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹುಬ್ಬಳ್ಳಿಯ ಅನೇಕ ಮುತ್ಸದ್ದಿ ಗಳ ಪಾತ್ರ ಗುರುತರವಾಗಿತ್ತೆಂಬುದು ಸಂಸ್ಥಾನ ದ ಇತಿಹಾಸದಲ್ಲಿ ಉಲ್ಲೇಖಿತವಾಗಿದೆ. ಧರ್ಮ ರಕ್ಷಣೆಯಂತೆಯೇ ಲೋಕಕಲ್ಯಾಣ ಕಾರ್ಯಕ್ರ ಮಕ್ಕೂ ಅಧಿಕ ಗಮನ ಹರಿಸಿದ್ದು, ಈಸ್ಟ್ ಇಂಡಿಯಾ ಕಂಪನಿಯ ಏಜೆಂಟ್ ಲಿಂಗೈಕ್ಯ ಬಸಪ್ಪ ಶೆಟ್ಟರು ರಾಯರ ಹುಬ್ಬಳ್ಳಿ ಯ ತಮ್ಮ ಮೂಲ ನೆಲೆಯನ್ನು ಬಿಟ್ಟುಕೊಟ್ಟು ಹೊಸ ಹುಬ್ಬಳ್ಳಿಯ ಮೊದಲ ನಗರ ವಿಸ್ತೀರ್ಣವನ್ನು ಸ್ಥಾಪಿಸಿದುದು ಸವಣೂರ ನವಾಬ ಮಜೀದ ಖಾನರ ಪ್ರೋತ್ಸಾಹದಿಂದಲೇ. 1885ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಜನ್ಮ ತಳೆದಿತ್ತು.

ಹುಬ್ಬಳ್ಳಿ ಯ ಅನೇಕ ಗಣ್ಯ, ಸುಶಿಕ್ಷಿತ ಕುಟುಂಬ ಗಳವರು, ಸುತ್ತಲಿನ ಅನೇಕ ಸಂಸ್ಥಾನಿಕರು ಕಾಂಗ್ರೆಸ್ಸನಲ್ಲಿ ಅದರ ಹುಟ್ಟಿನಿಂದಲೇ ಸೇರಿ ಸಹಕರಿಸತೊಡಗಿದ್ದ ರೆಂಬುದು ಉಲ್ಲೇಖಿಸಲ್ಪ ಟ್ಟಿದ್ದನ್ನು, ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷ ಪೀಠವೇರಿದ ಮೊದಲ ಕನ್ನಡಿಗ ಸರ್ ನಾರಾಯ ಣರಾವ್ ಚಂದಾವರಕರ ರಂಥವರ ಚಿಂತನೆ ದಾಖಲಿ ಸಿದೆ. ಜನರ ಸಮಸ್ಯೆಗಳ ಪ್ರಾಮಾಣಿಕ ಅಧ್ಯಯನದಲ್ಲಿ ಸಮಾನಾಧಿ ಕಾರ, ನಾಗರಿಕ ಹಕ್ಕುಗಳನ್ನು ಪಡೆವ ದೇಶೀಯರ ಪ್ರಬಲ ಇಚ್ಛೆ ಮುಕ್ತವಾಗಹತ್ತಿತು.

ಅದರಗುಂಚಿ ಶಂಕರಗೌಡರು
ಹುಬ್ಬಳ್ಳಿ ಬಳಿಯ ಅದರಗುಂಚಿ ಗ್ರಾಮದಲ್ಲಿ ಋಷಿ ಸದೃಶ ವಿಧಾಯಕ ಕಾರ್ಯನಿರತ ಬದುಕು ಬಾಳುತ್ತಿದ್ದ ಅದರಗುಂಚಿ ಶಂಕರಗೌಡರು ಏಕೀಕೃತ ಕರ್ನಾಟಕ ರಚನೆ ತ್ವರಿತವಾಗಿ ನಡೆಯ ಬೇಕೆಂದು ಆಗ್ರಹಿಸಿ 1953 ರಲ್ಲಿ ಆಮರಣ ನಿರಶನ ಕೈಗೊಂಡರು. ಅದರ ಪರಿಣಾಮವಾಗಿ ಇಡೀ ಹುಬ್ಬಳ್ಳಿಯೇ ರೊಚ್ಚಿಗೆದ್ದು ಅಖಂಡ ಕರ್ನಾಟಕ ರಚನೆಗೆ ಉಗ್ರ ಆಂದೋಲನ ನಡೆಸಿ ದ್ದರಿಂದ ಆಗಿನ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಒತ್ತಡ ಬಂದುದು ಹುಬ್ಬಳ್ಳಿಯ ಹೆಸರನ್ನು ಜಾಗತಿಕ ಮಟ್ಟದ ಖ್ಯಾತಿಗೆ ತಲುಪಿಸಿತ್ತು. ತತ್ಪರಿ ಣಾಮವಾಗಿ ಅಖಂಡ ಕರ್ನಾಟಕ ರಚನೆಯ ಪ್ರಕ್ರಿಯೆ ತೀವ್ರಗೊಂಡುದು ಹುಬ್ಬಳ್ಳಿಯ ಪಾತ್ರಕ್ಕೆ ಹಿಡಿದ ಕೈಗನ್ನಡಿಯೇ ಸೈ. ಹುಬ್ಬಳ್ಳಿ ಯಾವಾಗ ಲೂ ರಾಜಕೀಯದಲ್ಲಿ ಗುರುತರ ಪಾತ್ರ ವಹಿಸುತ್ತ ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ಸ್ತರದ ಲೋಕಪ್ರಿಯ ನಾಯಕರ ಕೊಡುಗೆ ನೀಡಿದೆ. ಬ್ಯಾಹಟ್ಟಿ ಸುಬ್ಬರಾವ್, ಕುಲಕರ್ಣಿ ರಾಮಣ್ಣ, ಬಿ,ಆರ್.ಕುಲಕರ್ಣಿ, ಎ.ಜೆ.ಮುಧೋಳ, ಆರ್.ಎಚ್.ಗೂಢಾವಾಲಾ, ವಾಲಿ- ನೀಲಿ, ಕೊರವಿ ಸಂಗಪ್ಪ, ಜೆ.ಟಿ.ಮೆಥಾಯಸ್, ಬಿ.ಎ. ಭಸ್ಮೆ, ರಾವ್, ಕರಗುದರಿ, ಶಂ.ಬಾ.ಮನ ಗೋಳಿ ಇವರ ಸೇವೆ ಅವಿಸ್ಮರಣೀಯ. ಗಾಂಧೀಜಿ ಅವರಿಂದ ಪ್ರಭಾವಿತರಾಗಿ ತಮ್ಮ ಹದಿಹರೆಯ ದಲ್ಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ನರಸಿಂಹ ದಾಬಡೆ ಅವರು 1941 ರಲ್ಲಿ ವೈಯಕ್ತಿಕ ಸತ್ಯಾಗ್ರಹ ಹಾಗೂ 1942 ರಲ್ಲಿ ನಡೆದ ‘ಕ್ವಿಟ್ ಇಂಡಿಯಾ ಚಳುವಳಿ’ ಯಲ್ಲಿ ಸಕ್ರಿಯ ವಾಗಿ ಪಾಲ್ಗೊಂಡಿ ದ್ದರು. “ಕ್ವಿಟ್ ಇಂಡಿಯಾ” ಚಳುವಳಿ ಘೋಷಿಸಿದ ನಂತರ ಗಾಂಧೀಜಿ ಬಂಧನಕ್ಕೊ ಳಗಾದರು.ಮುಂದೆ ಹೋರಾಟ ಗಾರರಿಗೆ ಮಾರ್ಗದರ್ಶನದ ಅಭಾವ ಉಂಟಾಯಿತು. ಗಾಂಧೀಜಿ ವಿಚಾರಗಳನ್ನು ಪಾಲಿಸಿರುವುದೇ ಇದಕ್ಕೆಲ್ಲ ಕಾರಣ ಎನ್ನುತ್ತಾರೆ ಶ್ರೀಮತಿ ಚನ್ನಬಸಮ್ಮ ಚನ್ನಪ್ಪ ರತ್ನಕಟ್ಟಿ.

“ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬ ಸುದ್ದಿ ಬಂದ ನಂತರ ಅಂದೇ ದಿನ ರಾತ್ರಿ12 ಘಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸಲು ನಿರ್ಧರಿಸಿದರು. ಎಲ್ಲರಿಗೂ ಸಂದೇಶ ಮುಟ್ಟಿಸಿ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಸೇರುವಂತೆ ತಿಳಿಸಲಾಯಿತು. ರಾತ್ರಿ ಧ್ವಜಾರೋಹಣ ಮಾಡಿ 21 ನೆಡುತೋಪು ಗಳನ್ನು ಹಾರಿಸಲಾಯಿತು. ಮಾರನೇಯ ದಿನ ಕಡಪಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಆಚರಣೆಯನ್ನು ಇಟ್ಟುಕೊ ಳ್ಳಲಾಗಿತ್ತು. ಇಡೀ ಊರನ್ನೇ ತಳಿರು ತೋರಣಗಳಿಂದ ಸಿಂಗರಿಸ ಲಾಗಿತ್ತು.”ಕೋಟ್ಯಾನು ಕೋಟಿ ಭಾರತೀಯರ ಎದೆಯ ಕದ ತೆರೆಯಿತು. “ಬಿಳಿಯರ ಸರ್ಕಾರಕ್ಕೆ ಧಿಕ್ಕಾರ, ಬ್ರಿಟಿಷರೆ, ಭಾರತ ಬಿಟ್ಟುತೊಲಗಿರಿ, ಭಾರತ ಮಾತಾ ಕಿ ಜೈ, ಗಾಂಧಿ ಮಹಾತ್ಮಾ ಕಿ ಜೈ” ಎಂದು ಕಿವಿ ಗಡಚಿಕ್ಕುವಂತೆ ಘೋಷಣೆ ಗಳನ್ನು ಕೂಗುತ್ತ, ಓಣಿ ಓಣಿಗಳಲ್ಲಿ ಪ್ರಭಾತಫೇರಿಯನ್ನು ಮಾಡುತ್ತಿತ್ತು. ಅಂದಿನ ಪ್ರಭಾತಫೇರಿ ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಯುವಕರಲ್ಲಿ ಹೋರಾಟ ದ ಕೆಚ್ಚನ್ನು, ಸಾಮಾನ್ಯರಲ್ಲೂ ಸ್ವಾತಂತ್ರ್ಯ ಪ್ರಜ್ಞೆ ಯನ್ನು ಹೆಚ್ಚಿಸಿ, ಜಿಲ್ಲೆಯ ಸಮಸ್ತ ಜನರಲ್ಲಿ ರೋಮಾಂಚನಕಾರಿ ಅನುಭವದ ಮುದ್ರೆಯ ನ್ನು ಒತ್ತಿತ್ತು. ಒಬ್ಬೊಬ್ಬರದೂ ಒಂದೊಂದು ಹೋರಾಟದ ಕಥೆ. ಹೋರಾಟಕ್ಕೆ ಇಳಿದ ಪ್ರಸಂಗಗಳು ವಿಭಿನ್ನ. ಅವರ ಜೀವನದ ಪ್ರತಿ ಪುಟದಲ್ಲಿ ತ್ಯಾಗ, ಬಲಿದಾನದ ಹೇರಳ ಉದಾ ಹರಣೆಗಳು. ಆಸ್ತಿ- ಪಾಸ್ತಿ, ಕುಟುಂಬವನ್ನೇ ತೊರೆದು ಹೋರಾಟಕ್ಕೆ ಇಳಿದಿದ್ದರು.ಎಲ್ಲರಿಗೂ ಗಾಂಧೀಜಿಯೇ ಸ್ಪೂರ್ತಿ. ಇಂದಿಗೂ ಇವರಿಗೆ ಅವರು ನಡೆದ ಹಾದಿಯೇ ಜೀವನದ ದಾರಿ. ಕೆಚ್ಚಿನಿಂದ ಬ್ರಿಟಿಷರ ಬಂದೂಕಿನ ಗುಂಡುಗಳ ನ್ನು ಎದುರಿಸಿ, ಲಾಠಿ ಏಟುಗಳಿಗೂ ಹೆದರದೇ ಸೆರೆಮನೆ ಅನುಭವಿಸಿಯೂ ಸ್ವತಂತ್ರ ಭಾರತದ ಹೊಂಗನಸನ್ನು ಸಾಕಾರಗೊಳಿಸಿದ ದಿ.ಪದ್ಮಶ್ರೀ ಸರದಾರ ವೀರನಗೌಡ ಪಾಟೀಲ, ದಿ.ನರಸಿಂಹ ದಾಬಡೆ, ಶ್ರೀಎಸ್.ವಿ. ಟೇಂಬೆ, ಶ್ರೀಮತಿ. ಲೀಲಾವತಿ ಮಾಗಡಿ, ದಿ .ಮಲ್ಲಪ್ಪ ಅಕ್ಕಿ, ದಿ.ಡಾ.ನಾರಾಯಣ್ ಸುಬ್ಬರಾವ್ ಹರ್ಡಿಕರ್, ಶ್ರೀ ವೆಂಕಟೇಶ ಮಾಗಡಿ, ದಿ.ಮುಗಳಿ, ದಿ.ಶಿರೂರ, ದಿ.ಶಿವಪ್ಪ ಫಕೀರಪ್ಪ ಕೋರ್ಲಹಳ್ಳಿ, ದಿ.ಕಮರಕರ, ದಿ.ರಾಯರೆಡ್ಡಿ, ಹಿರೇಗೌಡರ, ದಿ.ಗಾಣಿಗೇರ, ದಿ.ಹಿತ್ತಲಮನಿ, ದಿ.ಗುರಪ್ಪ ಅರ್ಕಸಾಲಿ, ದಿ.ಬಳಿಗೇರ ಹೀಗೆ ಇನ್ನೂ ಅನೇಕ ಸ್ವಾತಂತ್ರ್ಯ ಯೋಧರು ಈ ಜಿಲ್ಲೆಯಲ್ಲಿ ಹೋರಾಡಿರುತ್ತಾರೆ. ಇವರೆಲ್ಲರ ಸಾಲಿಗೆ ಸೇರುವ ಹೋರಾಟಗಾರ್ತಿ ಶ್ರೀಮತಿ. ಚನ್ನಬಸಮ್ಮ ಚನ್ನಪ್ಪ ರತ್ನಕಟ್ಟಿಯವರು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ.

ಸ್ವಾತಂತ್ರ್ಯಹೋರಾಟಗಾರ್ತಿ ಶ್ರೀಮತಿ ಚನ್ನಬಸ ಮ್ಮ ಚನ್ನಪ್ಪ ರತ್ನಕಟ್ಟಿ ಭಾರತದ ಸ್ವಾತಂತ್ರ್ಯ ಹೋರಾಟ ಅಂದಾಗ ನೆನಪಾಗುವದು ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚನ್ನಮ್ಮಾಜಿ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ಉಳ್ಳಾಲ ದ ಅಬ್ಬಕ್ಕ, ಒನಕೆ ಓಬವ್ವ ಹೀಗೆ ಅವರೆಲ್ಲರ ಪ್ರೇರಣೆ, ಸ್ಪೂರ್ತಿಗಳು ನಮ್ಮ ನಾರಿಯರನ್ನು ಬಡಿದೆಬ್ಬಿಸಿರುವುದು ರೋಮಾಂಚಕವೆ.ವಿಧವೆ ಯರಾದವರೆಷ್ಟೋ, ಅನಾಥರಾದ ವರೆಷ್ಟೋ, ತಬ್ಬಲಿಗಳಾದವರೆಷ್ಟೋ ಮಕ್ಕಳನ್ನು ಕಳೆದು ಕೊಂಡವರೆಷ್ಟೋ ಲೆಕ್ಕಕ್ಕಿಲ್ಲ. ಒಮ್ಮೊಮ್ಮೆ ಗಂಡ ನೊಂದಿಗೆ ಚಳುವಳಿಗೆ ಹೊರಟರೆ ಮತ್ತೊಮ್ಮೆ ಏಕಾಂಗಿಗಳಾಗಿ, ಮಗದೊಮ್ಮೆ ಸಾಂಘಿಕವಾಗಿ ಹೀಗೆ ಆ ದಿನಗಳ ರೋಚಕ, ರೋಮಾಂಚಕ, ಯಶೋಗಾಥೆಯನ್ನು ನಮ್ಮ ಮುಂದೆ ಏಳೆ ಏಳೆಯಾಗಿ ಬಿಚ್ಚಿಡುವ ಹೆಣ್ಣು ಜೀವವೊಂದು ನಮ್ಮ ನೆಲದ ಪ್ರತಿನಿಧಿ ಯಾಗಿದ್ದು ಹುಬ್ಬಳ್ಳಿ ಪುಣ್ಯ. 105 ರ ಗಡಿದಾಟಿ 106 ರ ಹೊಸ್ತಿಲ ತುಳಿದು, ಅಸ್ತಂಗತಳಾದ ಶತಾಯುಷಿ, ಚೈತನ್ಯಶೀಲೆ, ಸ್ವಾತಂತ್ರ್ಯದ ಉತ್ಕಟ ಪ್ರೀತಿ, ಆದರ್ಶ, ದೇಶಪ್ರೇಮಗಳನ್ನು ಇಳಿ ವಯಸ್ಸಿ ನಲ್ಲಿಯೂ ತನ್ನೊಳಗೆ ಜೀವಂತವಿರಿಸಿದ ಗಟ್ಟಿಗಿತ್ತಿ ಯೋಧೆ- ಶ್ರೀಮತಿ ಚನ್ನಬಸಮ್ಮ ಚನ್ನಪ್ಪ ರತ್ನಕಟ್ಟಿ.

ಚನ್ನಬಸಮ್ಮ ಚ ರತ್ನಕಟ್ಟಿ
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿದ ಶ್ರೀಮತಿ ಚನ್ನಬಸಮ್ಮ ಚನ್ನಪ್ಪ ರತ್ನಕಟ್ಟಿಯವರು ಶತಾಯುಷಿ. ಕ್ರಿ.ಶ 1912 ರಲ್ಲಿ ಜನಿಸಿದ ಇವರು ಪತಿಯಿಂದಲೇ ಸ್ಪೂರ್ತಿಗೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ಚನ್ನಬಸಪ್ಪನ ವರು ಮದುವೆಗೆ ಮುಂಚೆಯೇ ಹೋರಾಟದಲ್ಲಿ ತೊಡಗಿಸಿಕೊಂಡವರು. ಮೈಲಾರ ಮಹಾದೇವ, ಅದರಗುಂಚಿಯ ಶಂಕರ ಗೌಡರು ಹಾಗೂ ಹುಬ್ಬಳ್ಳಿಯ ಸರದಾರ ವೀರನಗೌಡ ಪಾಟೀಲರ ಒಡನಾಡಿಗಳಾಗಿದ್ದರು. ವಿದ್ಯಾಭ್ಯಾಸದ ವೇಳೆ ಯಲ್ಲೇ ಸ್ವಾತಂತ್ರ್ಯ ಹೋರಾಟದ ಪ್ರಭಾವಕ್ಕೆ ಒಳಗಾದ ಚನ್ನಬಸಪ್ಪ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪೂರ ಮೂಲದ ವರು. ಸಣ್ಣಪ್ಪ ಬಾಳಿಕಾಯಿ ಹಾಗೂ ಸಿದ್ದಮ್ಮ ನವರ ಉದರದಲ್ಲಿ ಜನಿಸಿದ ಚನ್ನಬಸಪ್ಪ ತಹಶೀಲದಾರ ಹುದ್ದೆ ಬಂದರೂ ನಿರಾಕರಿಸಿ ಬ್ರಿಟೀಷರ ವಿರುದ್ಧ ಹೋರಾಡಲು ಮುಂದಾದ ವರು, ಇವರ ಭಾವ ಚನ್ನವೀರಪ್ಪ ಕೂಡ ಹವಾಲ್ದಾರ ನೌಕರಿ ತ್ಯಜಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಚನ್ನಬಸಮ್ಮನವರು 14ನೇ ವಯಸ್ಸಿಲ್ಲಿಯೇ ಚನ್ನಪ್ಪ ರತ್ನಕಟ್ಟಿಯವ ರೊಂದಿ ಗೆ ದಾಂಪತ್ಯಕ್ಕೆ ಕಾಲಿಟ್ಟ ನಂತರ ಚಿಕ್ಕ ವಯಸ್ಸಿನವರಾದರೂ ಪತಿಯ ಹೋರಾಟ ಗಳಿಗೆ ಬೆನ್ನೆಲು ಬಾಗಿದ್ದರು. ಮಹಾ ಹೋರಾಟ ಗಾರನಾದ ಪತಿಯಿಂದಲೇ ಸ್ಪೂರ್ತಿಗೊಂಡು ತಾವು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸುಮಾರು ಮೂರು ವರ್ಷ (ಎರಡು ಬಾರಿ) ಕಠಿಣ ಶಿಕ್ಷೆ ಅನುಭವಿಸಿದರು. ತಮ್ಮ 19ನೇ ವಯಸ್ಸಿನಲ್ಲಿ ಯೇ ಜೈಲು ಶಿಕ್ಷೆಗೆ ಒಳಗಾಗಿ 27-02-1932 ರಲ್ಲಿ 15 ತಿಂಗಳು ಸೆರೆವಾಸದಲ್ಲಿ ದ್ದರು. ಮೂರು ತಿಂಗಳು ಮಗುವಿನೊಂದಿಗೆ ಜೈಲುವಾಸ ಅನುಭವಿಸಿದ್ದ ಲ್ಲದೇ ಶಿಕ್ಷೆ ಹಿಂತಿರುಗಿಸಲು ಹಾಗೂ ಕರ ನಿರಾಕರಿಸಿದರು.

ಹಿಂಡಲಗಾ ಜೈಲ್
ನಂತರ 24-04-1941ರಲ್ಲಿ ಬೆಳಗಾವಿಯ ಹಿಂಡಲಗಾ ಜೈಲು ರೂ.ನಂ.05 ರಲ್ಲಿ ಖೈದಿಯಾ ಗಿದ್ದರು. ಆಗ 2ನೇ ಮಗುವನ್ನು ಹೊಟ್ಟೆಯಲ್ಲಿಟ್ಟು ಕೊಂಡೆ ಸೆರೆವಾಸ ಅನುಭವಿಸಿದರು. ಮೈಲಾರ ಮಹದೇವಪ್ಪ, ರತ್ನಗಿರಿ ಭವಾನಿಬಾಯಿ, ಸುಣಕಲ್ಲ ಬಸಮ್ಮ ನವರು, ಸರದಾರ ವೀರನ ಗೌಡರು, ಅವರ ಪತ್ನಿ ನಾಗಮ್ಮ, ಪಣಜಿಕರ್ ಕೃಷ್ಣಾಬಾಯಿ, ಹೀಗೆ ಮುಂತಾದವರ ಜತೆ ಸೆರೆವಾಸ ಅನುಭವಿಸಿದ್ದು, ಪತಿಗೆ ಕಠಿಣವಾದ ಕಬ್ಬಿಣದ ಕಪಾಲಿಯ ಕೆಲಸ ನೀಡಿ ಕೈಯಿಂದ ರಕ್ತ ಸುರಿದರೂ ಧೃತಿಗೆಡಲಿಲ್ಲ. ಜೈಲಿನಲ್ಲಿದ್ದಾಗ ಲೇ ಮಗುವಿನ ಆರೋಗ್ಯ ಗಂಭೀರ ಸ್ಥಿತಿಗೆ ಹೋದರೂ, ಸ್ವಾತಂತ್ರ್ಯಕ್ಕಾಗಿ ಮಗನ ಪ್ರಾಣ ಹೋದರೂ ಚಿಂತೆಯಿಲ್ಲ ಎಂದ ಗಟ್ಟಿಗಿತ್ತಿ. ಶಿಕ್ಷೆ ಮುಗಿದ ನಂತರ ಮನೆಯ ಪುಟ್ಟ “ನಂದಾದೀಪ” ಆರಿದಾಗ ಹಿಂಜರಿಯದೆ ಮುನ್ನೆಡೆದರು.

ಸರ್ದಾರ ವೀರನಗೌಡ ಹಾಗೂ ನಾಗಮ್ಮ ದಂಪತಿಗಳು

ಹೋರಾಟದಲ್ಲಿ ತೊಡಗಿಸಿಕೊಂಡವರಿಗೆ ಹಾಗೂ ಭೂಗತರಾದ ಕ್ರಾಂತಿ ಕಿಡಿಗಳಿಗೆ ಚನ್ನಬಸಮ್ಮ ಅವರು ಮನೆಯಲ್ಲಿಯೇ ಅಡಿಗೆ ಸಿದ್ಧಪಡಿಸಿ ಕಳುಹಿಸುತ್ತಿದ್ದುದು ನಿಸ್ವಾರ್ಥಸೇವೆ ಯಾಗಿತ್ತು. 105ರ ಇಳಿವಯಸ್ಸಿನಲ್ಲಿ ಅಂದಿನ ದಿನಗಳನ್ನು ಗಟ್ಟಿಧ್ವನಿಯಲ್ಲಿ ಬಿಚ್ಚಿಡುವ ಚನ್ನಬಸಮ್ಮ ಬೆಳಿಗ್ಗೆ 4 ಗಂಟಗೆ ಎದ್ದು ಸ್ನಾನ ಪೂರೈಸಿ, ಲಿಂಗಪೂಜೆ ಮಾಡುತ್ತಾರೆ. ನಾನು ನನ್ನ ಕುಟುಂಬ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಕ್ಕೆ ನನಗೆ ಹೆಮ್ಮೆ ಯಿದೆ.ಚಳುವಳಿ ಸಂದರ್ಭದಲ್ಲಿ ಬಂದವರಿಗೆ ಊಟ ನೀಡಿ ಸಹಕರಿಸಿದೆ, ಆ ವಿಷಯದಲ್ಲಿ ನಾನು ಭಾಗ್ಯಶಾಲಿ ಎನ್ನುವ ಚನ್ನಬಸಮ್ಮನಂತಹ ಎಲೆಮರೆಯ ಎಷ್ಟೋ ಸ್ವಾತಂತ್ರ್ಯ ಹೋರಾಟ ಗಾರರು ಕಷ್ಟಪಟ್ಟಿದ್ದರಿಂದ ಇಂದು ನಾವೆಲ್ಲ ಸುಖವಾಗಿದ್ದೇವೆ ಎಂದರೆ ತಪ್ಪಾಗಲಾರದು. ನಿಸ್ವಾರ್ಥ ಸೇವೆಸಲ್ಲಿಸಿದ ತಾಯಿ ಶ್ರೀಮತಿ ಚನ್ನಬಸಮ್ಮ ಚನ್ನಪ್ಪ ರತ್ನಕಟ್ಟಿ, ಮಹಿಳೆ ಹಾಗೂ ಹರಿಜನರ ಉದ್ಧಾರಕ್ಕಾಗಿ ದುಡಿದ ಕೆ.ಎಲ್.ಇ ಸಪ್ತರ್ಷಿಗಳಲ್ಲಿ ಒಬ್ಬರಾದ ಹುಬ್ಬಳ್ಳಿಯ ಮಹಿಳಾ ವಿದ್ಯಾ ಪೀಠದ ಸಂಸ್ಥಾಪಕರಾದ ಸರದಾರ ವೀರನಗೌಡ ಪಾಟೀಲ ಹಾಗೂ ನಾಗಮ್ಮತಾಯಿ ಪಾಟೀಲರ ಒಡನಾಡಿಗಳಾಗಿದ್ದರು.
ಚನ್ನಬಸಮ್ಮನವರ ಒಬ್ಬ ಗಂಡುಮಗ ಸುಭಾಷ್ ಚಂದ್ರ ಬಿ.ಎ.ಪದವೀಧರರು, ಕೆ.ಇ.ಬಿ ಯಲ್ಲಿ ಕ್ಲಾರ್ಕ ಹುದ್ದೆಯಲ್ಲಿದ್ದರೆ, ಇಬ್ಬರು ಹೆಣ್ಣು ಮಕ್ಕಳಲ್ಲಿ ಕಮಲಾ ಅವರು ಈಗಿಲ್ಲ, ಪ್ರೇಮಾ ಅವರು ಬಳ್ಳಾರಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಚನ್ನ ಬಸಮ್ಮನವರ ಮೊಮ್ಮಗಳಾದ ಪ್ರಭಾವತಿ ಸದ್ಯ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನ ಕೊಪ್ಪರವರ ಪತ್ನಿಯಾಗಿದ್ದಾರೆ.

ಗಾಂಧೀಜಿಯವರ ಗುಜರಾತಿನ ಸಾಬರಮತಿ ಆಶ್ರಮದಂತೆ ಹುಬ್ಬಳ್ಳಿಯಲ್ಲಿ ಹರಿಜನ ಬಾಲಿಕಾಶ್ರಮ 1934 ರಲ್ಲಿ ಕಾರ್ಯ ಪ್ರಾರಂಭಿ ಸಿತು. ಆಶ್ರಮದಲ್ಲಿರುವ ಹರಿಜನ ಮಕ್ಕಳ ಆರೈಕೆ ಹಾಗೂ ಶಿಕ್ಷಣಕ್ಕಾಗಿ ಈರವ್ವ ಸಂಗೂರು, ಸಿದ್ದಮ್ಮ ಮೈಲಾರ ಅವರೊಂದಿಗೆ ಶ್ರೀಮತಿ ಚನ್ನಬಸಮ್ಮ ರತ್ನಕಟ್ಟಿ ಯವರು ಸೇವೆ ಸಲ್ಲಿಸಿ ದ್ದಾರೆ. ಭೂಗತರಾಗಿದ್ದ ಮೈಲಾರ ಮಹಾದೇವಪ್ಪ ನವರಿಗೆ ರೊಟ್ಟಿ ಬುತ್ತಿ ಕಳುಹಿಸುವ ಮೂಲಕ ಅನ್ನದಾತೆಯಾಗಿ ದ್ದಾರೆ.

ಹುದಲಿ ಗ್ರಾಮದಲ್ಲಿ ಗಾಂಧೀಜಿವರು
1937ರ ಏಪ್ರೀಲ್‍ನಲ್ಲಿ ಮಹಾತ್ಮ ಗಾಂಧೀಜಿ ಯವರು ಬೆಳಗಾವಿ ಜಿಲ್ಲೆ ಹುದಲಿಗೆ ಆಗಮಿಸಿ ದ್ದರು. ಆಗ ಎಲ್ಲ ವಿಧಾಯಕ ಕಾರ್ಯಕರ್ತರು, ಮಹಿಳೆ ಯರು ಹಾಗೂ ಮಹನೀಯರು ವೀರನ ಗೌಡರ ಮುಂದಾಳತ್ವದಲ್ಲಿ ಹುಬ್ಬಳ್ಳಿ ಯಿಂದ ಹುದಲಿಗೆ ಬಂದರು. ಚನ್ನಬಸಮ್ಮ ಪತಿಯ ಜೊತೆಗೆ ಹುದಲಿ ಗೆ ಬಂದರು. ಗಾಂಧೀಜಿಯವ ರು ಸದರಿ ಕುಟೀರದ ಸ್ವಯಂ ಸೇವಕರಾಗಿ ಕೆಲಸ ಮಾಡುವಾಗ ಅವರೊಂದಿಗೆ ನೂಲಲಿಕ್ಕೆ ಹಂಜಿ ಮಾಡಿ ಕೊಡುವುದು ಹಾಗೂ ಇನ್ನಿತರ ಕೆಲಸಗಳಿ ಗೆ ನೆರವಾದರು. ಮುಂಜಾನೆಯ ಪ್ರಭಾತಪೇರಿಗೆ ಹಾಡುವುದು ಹಾಗೂ ಮಹಿಳೆಯರನ್ನು ಸಂಘಟಿ ಸುವ ಕೆಲಸವನ್ನು ನಿರ್ವಹಿಸಿದರು.
ಹುಬ್ಬಳ್ಳಿಯಲ್ಲಿ ಇವರು ಆಶ್ರಮದ ಮಕ್ಕಳನ್ನೂ ಕೂಡಿಸಿಕೊಂಡು ಸತ್ಯಾಗ್ರಹ ಮಾಡುವಾಗ ಪೋಲಿಸರು ಇವರನ್ನೂ ಬಂಧಿಸಿ ಲಾಕಪ್‍ನಲ್ಲಿ ಹಾಕಿದರು. ಮುಂದೆ ವಿಚಾರಣೆ ನಡೆಸಿ ಮಕ್ಕಳು ಚಿಕ್ಕವರಿರುವದರಿಂದ ಅವರನ್ನು ಬಿಟ್ಟು ದೊಡ್ಡ ದೊಡ್ಡ ಮಹಿಳೆಯರನ್ನು ಹಾಗೂ ಆಶ್ರಮವಾಸಿ ಯಾದ ಯಶೋದಾ ಎಂಬುವಳನ್ನು ಸೇರಿಸಿ ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಿದರು. ಅಲ್ಲಿ ಅವರನ್ನು ಅಪರಾಧಿ ಎಂದು ನೋಡದೇ ಡೆಟಿನ್ಯೂ ಎಂದು ಒಂದೂವರೆ ವರ್ಷ ಇಟ್ಟಿದ್ದರು. ಜೈಲಿಗೆ ವಿಜಾಪೂರ, ಬೆಳಗಾವಿ, ಧಾರವಾಡ, ಕಾರವಾರ ಜಿಲ್ಲೆಗಳಿಂದ ಮಹಿಳೆ ಯರು ಬಂದಿದ್ದ ರಂತೆ. ಅವರನ್ನು ಉಟ್ಟ ಬಟ್ಟೆ ಯಲ್ಲೆ ಗಾಡಿ ತುಂಬಿಸಿ ಕರೆದುಕೊಂಡು ಬಂದಿದ್ದ ರಂತೆ. ಆಗ ಕರ್ನಾಟಕದಲ್ಲಿ ಇದ್ದದ್ದು ಇದೊಂದೇ ಜೈಲಾದುದರಿಂದ ಎಲ್ಲರನ್ನೂ ಇಲ್ಲಿಗೆ ತರಲಾಗು ತ್ತಿತ್ತಂತೆ. ಈ ಎಲ್ಲ ಮಹಿಳೆಯರು ತಮಗೆಲ್ಲ ಬಟ್ಟೆ ಬರೆ ಬೇಕೆಂದು ಕೇಳಿದಾಗ ಅಲ್ಲಿದ್ದ ಜೈಲರ್ ಎನೂ ಮಾಡಲಿಲ್ಲ ವಂತೆ. ಆಗ ಮಹಿಳೆಯರಲ್ಲಿ ಮುಖ್ಯಸ್ಥರಾದ ಮಣಿಬೆನ್, ಕೃಷ್ಣಾಬಾಯಿ ಪಣಜೀಕರ, ಉಮಾಬಾಯಿ ಕುಂದಾಪೂರ ಇವರೂ ಇದ್ದರಂತೆ. ಎಲ್ಲ ಮಹಿಳೆಯರೂ ಕೂಡಿ ಸತ್ಯಾಗ್ರಹ ಮಾಡಿದರಂತೆ. ಇದರಿಂದ ಬ್ರಿಟಿಷ್ ಜೈಲರ ಅವರಿಗೆ ಬಟ್ಟೆಬರೆ, ಎಣ್ಣೆ ಸೋಪು, ಚಹಾ ವಗೈರೆ ಸಿಗುವಂತೆ ಮಾಡಿದನಂತೆ. ಹಳ್ಳಿಗಳಿಂದ ಬಂದ ಹೆಣ್ಣು ಮಕ್ಕಳಿಗೆ ತಾವು ಜೈಲಿಗೆ ಏಕೆ ಬಂದ್ದಿದ್ದೇವೆ ಎಂಬುದು ಸಹ ತಿಳಿದಿರಲಿಲ್ಲವಂತೆ.

ಮಣಿಬೆನ್
ಆಗ ಹಿರಿಯ ರಾದ ಕೃಷ್ಣಾಬಾಯಿ ಪಣಜೀಕರ, ಮಣಿಬೆನ್, ಉಮಾಬಾಯಿಯವರು ಎಲ್ಲರಿಗೂ ತಿಳಿಹೇಳಿ ಅವರಿಗೆ ಓದುಬರಹ, ಪ್ರಾರ್ಥನೆ ಹಾಗೂ ಸ್ವಚ್ಛತೆ ಕಾರ್ಯಕ್ರಮ ಗಳನ್ನು ಹಮ್ಮಿ ಕೊಂಡು ಅವರನ್ನು ಸುಶಿಕ್ಷಿತ ರನ್ನಾಗಿ ಮಾಡಿದ ರಂತೆ. ಅಲ್ಲದೇ ನೂಲುವದು, ಹೆಣೆಯುದು, ಕೈಕೆಲಸ ಇವೆಲ್ಲವ ನ್ನೂ ಅವರಿಗೆ ಕಲಿಸಿದರಂತೆ.

ಉಮಾಬಾಯಿ ಕುಂದಾಪೂರ
ಹೀಗೆ ಜೈಲಿನಲ್ಲಿ ಮಹಿಳೆಯರು ಉದ್ಯೋಗಗ ಳನ್ನು ಕಲಿತ ಕುರಿತು ಸ್ವಾತಂತ್ರ್ಯದ ಸಾರ್ಥಕತೆ ಯ ಬದುಕನ್ನು ಹೆಮ್ಮೆಯಿಂದ ಹೇಳುತ್ತಾರೆ. ನೈತಿಕತೆ ಗೆ, ಚಾರಿತ್ರ್ಯಕ್ಕೆ, ಪ್ರಾಮಾಣಿಕತೆಗೆ ಮಹತ್ವ ಕೊಟ್ಟವರು. ಸದಾ ನಮ್ಮ ಹಕ್ಕಿಗಾಗಿ ಬಡಿದಾಡಬೇಕು, ಅದಕ್ಕಾಗಿ ಕೈ ಒಡ್ಡಬಾರದು ಎಂದು ಹೇಳುವ ಸ್ವಾಭಿಮಾನಿಗಳಾದ ಇವರು, ಅಂದಿನ ದೇಶದ ಸ್ವಾತಂತ್ರ್ಯ ಸಂಗ್ರಾಮದ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ಬಿಡಿಸಿ ಹೇಳುತ್ತಾರೆ.

ಕೇಂದ್ರ ಸರ್ಕಾರದಿಂದ ಸನ್ಮಾನ
ಉಪಸಂಹಾರ: ಚನ್ನಬಸಮ್ಮ ರತ್ನಕಟ್ಟಿ ಇವರಿಗೆ 15-08-1947ರಲ್ಲಿ ಭಾರತ ಸ್ವಾತಂತ್ರ್ಯ ದ ನೆನಪಿಗಾಗಿ ಬ್ಯಾಡಗಿಯ ಖಟಾವಕರ ಬಂಧುಗಳ ಭಾರತನಕ್ಷೆಯಾಕಾರದ ಬೆಳ್ಳಿ ಪದಕ ನೀಡಿದ್ದಾರೆ. 2016 ಜುಲೈ 23 ರಂದು ಆಜಾದ್ ಚಂದ್ರಶೇಖರ ಹಾಗೂ ಲೋಕಮಾನ್ಯ ಟಿಳಕರ ಜಯಂತಿ ಸಂದರ್ಭ ದಲ್ಲಿ ಭಾರತ ಸರಕಾರವು ದೆಹಲಿ ಯಲ್ಲಿ ಸನ್ಮಾನಿಸಿದೆ. 28-08-2016 ರಂದು ತಿರಂಗ ಯಾತ್ರೆಯ ಅಂಗವಾಗಿ ಹುಬ್ಬಳ್ಳಿ ಯಲ್ಲಿ ಕೇಂದ್ರ ಸಚಿವ ಜಾವಡೇಕರ ಅವರು ಅಭಿನಂದನಾ ಸಮಾರಂಭ ಏರ್ಪಡಿಸಿ ಗೌರವಿಸಿ ದ್ದಾರೆ. ಭಾರತ ಸರಕಾರದ ರೇಲ್ವೆ ಮಂತ್ರಾಲಯ ದಿಂದ ಉಚಿತ ರೇಲ್ವೆ ಸೌಲಭ್ಯ ಹಾಗೂ ಪಿಂಚಣಿ ಸೌಲಭ್ಯ ಪಡೆದಿದ್ದಾರೆ. ಆದರೆ ಸ್ವಂತ ನಿವೇಶನ ವನ್ನು ಹೊಂದುವ ಆಶೆ ಕೊನೆಯವರೆಗೂ ಇಡೇರಲೇ ಇಲ್ಲ. ನಿಸ್ವಾರ್ಥ ಸೇವೆಸಲ್ಲಿಸಿದ ತಾಯಿ ತಮ್ಮ 106ನೇ ವಯಸ್ಸಿ ನಲ್ಲಿ ದಿನಾಂಕ: 06-01-2018 ರಂದು ನಮ್ಮನ್ನೆಲ್ಲ ಅಗಲಿದ್ದಾರೆ. ಇದರಿಂದಾಗಿ ಬಹುತೇಕ ಹುಬ್ಬಳ್ಳಿಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಕೊನೆಯ ಕೊಂಡಿ ಯೂ ಕಳಚಿದಂತಾಗಿದೆ.
ಅಭ್ಯಾಸ ಗ್ರಂಥಗಳು ಮತ್ತು ವಕ್ತೃಗಳು
- ನಾಗಶ್ರೀ ಸೇವಾ ಕೇಂದ್ರ – ಸಂ. ಡಾ. ಸರೋಜಿನಿ ಚವಲಾರ – ಪ್ರ. ಎಂ.ವಿ.ಪಿ. ಹುಬ್ಬಳ್ಳಿ 2006.
- ಬೆಳಗಾವಿ ಜಿಲ್ಲಾ ಸ್ವಾತಂತ್ರ್ಯ ಹೋರಾಟ ಗಾರರು – ಲೇ. ಡಾ. ಸರೋಜಿನಿ ಚವಲಾರ – ಪ್ರ. ಮೂರು ಸಾವಿರ ಮಠ ಹುಬ್ಬಳ್ಳಿ 2002.
- ವಕ್ತೃಗಳು: ಶ್ರೀಮತಿ ಚನ್ನಬಸಮ್ಮ ಚನ್ನಪ್ಪ ರತ್ನಕಟ್ಟಿ ಹುಬ್ಬಳ್ಳಿ 2016.
- ವಕ್ತೃಗಳು: ಶ್ರೀಮತಿ ಪ್ರಿಯಾ ರತ್ನಕಟ್ಟಿ ಹುಬ್ಬಳ್ಳಿ 2016.
- ಸ್ವಾತಂತ್ರ್ಯ ಯೋಧ ಚನ್ನಪ್ಪ ಯರಗಣವಿ – ಲೇ. ವಾಯ್.ಎಮ್.ಯಾಕೊಳ್ಳಿ – ಪ್ರ. ತೋಂಟದಾರ್ಯ ಪ್ರಕಾಶನ ಗದಗ 2015.
✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಸಾಹಿತಿಗಳು ಬೆಳಗಾವಿ