ಶ್ರಾವಣ ಹೋಯಿತು ಭಾದ್ರಪದ ಬಂತು
ಗೌರಿಯು ಬಂದಳು ಗಣಪತಿ ಬಂದನು

ಅಮ್ಮನ , ಮಗನ ಸ್ವಾಗತದಾಟ
ಹೋಳಿಗೆಯೂಟ ಮೋದಕದಾಟ
ಗಣಪಗೆ ಕಡುಬು ಏಕವಿಂಶತಿ
ಗೌರಿಗೆ ಹೋಳಿಗೆ ಮೊರದಜೊತಿ

ಸಂಭ್ರಮ ಸಂಭ್ರಮ ಎಲ್ಲೆಡೆ ಸಂಭ್ರಮ
ಗೌರಿಗಣಪತಿ ಹಬ್ಬದ ಸಂಭ್ರಮ!
ಮಾರುಕಟ್ಟೆಯಲಿ ನಡೆದಿದೆ ಜಾತ್ರೆ
ನೂರಾರು ಗೌರಿ ಗಣಪತಿ ಯಾತ್ರೆ

ಗೌರಿ ಬಂದಳು ಅಪ್ಪನ ಮನೆಗೆ
ಕರೆಯಲು ಬಂದ ಗಣಪನಲ್ಲಿಗೆ
ಮಗನ ನೋಡುವ ಕಾತರದಲ್ಲಿ
ಇಟ್ಟ ತೊಟ್ಟ ಪುಟ್ಟಗೌರಿ ಅಲ್ಲಿ

ಪಟ್ಟೆಯ ಸೀರೆಗೆ ಅಂಚಿನ ಕುಪ್ಪುಸ
ಬೊಟ್ಟುಬೊಟ್ಟಿನ ಸೆರಗು ಸುರಸ
ಹಿಂದಿನ ಕಾಲದ ಸೀರೆಯ ಪಟ್ಟು
ತುಂಬು ನೆರಿಗೆಯ ದಪ್ಪನೆ ಮಟ್ಟು

ಕೊರಳಿಗೆ ಕಟ್ಟಿದೆ ತಾಳಿಯ ಕಟ್ಟು
ಹಣೆಗೆ ಸಿಂಗಾರ ಬಿಂದಿಯ ಬೊಟ್ಟು
ಗೌರಿಯ ಬೊಂಬೆಗೆ ಕಾಲನು ಕಾಣೆ
ಏತಕೆ ಶಿಲ್ಪಿಗೆ ಸಂಕೋಚ? .. ಕಾಣೆ

ಚಿನ್ನದ ಸರಿಗೆಯ ಹಾರದ ಝೋಕು
ಕಲ್ಯಾಣ ಡಾಬು ಕಿರೀಟ ಬೇಕು
ಅಯ್ಯೋ ಮರೆತೆ ಗೌರಿಯ ಕೊರತೆ!
ಸೊಂಟದ ಕೆಳಗಿನ ಬಿಂಬದ ಶೂನ್ಯತೆ

ಅರೆಬರೆ ಗೌರಿಗೆ ಪಟ್ಟೆಯ ಸೀರೆ
ಪೀತಾಂಬರದ ರವಿಕೆಯ ನೀರೆ
ಫಳಫಳ ಹೊಳೆವ ಮೂಗಿನ ನತ್ತು
ಕಿವಿಯೋ? ಪೂರ್ಣಚಿನ್ನದ ಸ್ವತ್ತು

ಮುದ್ದುಸುರಿವ ಮುಖದ ಚೆಲುವೆ
ಕಾಮನಬಿಲ್ಲಿನ ಹುಬ್ಬಿನ ನಡುವೆ
ಸಂಪಗೆ ಎಸಳಿನ ಮೂಗಿನ ಇರವು
ಲಿಪ್ಸ್ಟಿಕ್ ಹಚ್ಚಿದ ತುಟಿಯ ಹರವು

ಕಿವಿಯನೆ ಜಗ್ಗಿಪ ಹಿರಿ ಚೊಳತಂಬು
ಭಾರಕೆ ಮೂಗಿನ ಸರಪಣಿ ಇಂಬು
ಗೌರಿಯ ಬಣ್ಣ ಹಳದಿಯೋ ಕೆಂಪೋ
ಫಳಫಳ ಹೊಳೆಯುವ ಬಣ್ಣದ ಕಂಪೋ

ಗೌರ ವರ್ಣದ ರೂಪಸಿಯವಳು
’ಗೌರಿ’ ಎಂದಾದಳು ಮುದ್ದಿನ ಮಗಳು
ಬಿಳಿಯ ಗೌರಿಯ ಕಾಣೆನು ನಾನು
ಅರ್ಥವನರಿತು ನಡೆಯದು ಏನೂ

ಚಿತ್ರಿಸುತ್ತಲಿ ಗೌರಿಯ ಆ ಅಂದ
ಮರೆತೇ ಬಿಟ್ಟೆನು ಆತ್ಮದ ಬಂಧ
ಗೌರಿಯ ಆತ್ಮವ ಧ್ಯಾನಿಸಬೇಕೋ ?
ಗೌರಿಯ ಅಂದವ ವರ್ಣಿಸಬೇಕೋ ?

ಗೌರಿಯ ಅಂದ ಚೆಂದದ ರೀತಿಯ
ನಾನವಳಿಗೆ ಸಿಂಗರಿಸಿದ ರೀತಿಯ
ಬಂದವರೆಲ್ಲ ಹೊಗಳಿದರಾಯಿತು
ನನ್ನೀ ಗೌರಿಯ ಕೀರ್ತಿಸಿದರಾಯಿತು

ನನ್ನಯ ಶ್ರಮಕೆ ಪ್ರತಿಫಲ ದೊರಕಿತು
ಗೌರಿಹಬ್ಬದ ಜಾಗಟೆ ಮೊಳಗಿತು
ನನಗೇಕೆ ಗೌರಿಯ ಆತ್ಮದ ಚಿಂತನೆ
ಹೂವು ಹಣ್ಣೂ ಏರಿಸು ಸುಮ್ಮನೆ!

ಮಂಗಳಾರತಿ ಬೆಳಗು ಮರೆಯದೆ
ಹೋಳಿಗೆ ಪ್ರಸಾದ ತಿನ್ನೂ ಬಿಡದೆ!
ಮತ್ತೇನು ಬೇಕು ಹಬ್ಬದ ಜೋರಿಗೆ
ಹೊಳೆಯುವ ದೀಪದಿ ಮೆರೆವಾ ತೇರಿಗೆ!

ಕಣ್ಣು ಬಾಯ್ಗಳಲ್ಲಿದ್ದರೆ ಸಾಕು
ಗೌರಿಯು ಮನದಲ್ಲೇತಕೆ ಬೇಕು?
ಮಾಡುವ ಹಬ್ಬವು ಒಂದೊಂದೂ
ಅರ್ಥವ ಮರೆತು ನಡೆದಿವೆ ಇಂದು

✍️ಡಾ.ಸತ್ಯವತಿ ಮೂರ್ತಿ ಮ್ಯಾಂಚೆಸ್ಟರ್,ಇಂಗ್ಲೆಂಡ್