ಅಂದಿನ ನವೋದಯ ಸಾಹಿತ್ಯದ ಬಗ್ಗೆ ಅಡಿಗರ ನುಡಿಗಳಲ್ಲೇ ಹೇಳುವುದಾದರೆ:
"ಶಬ್ದಗಳು ಅರ್ಥದ ಸ್ಥಾನವನ್ನಾಕ್ರಮಿಸಿದವು ಪ್ರತಿಯೊಂದು ಭಾವವು ಅನುಭವವು ಅತಿ ಸರಳವಾಗಿ ಸತ್ಯ ದಿಂದ ದೂರ ದೂರ ಸರಿಯುತ್ತಿದ್ದವು"
ಅಂತಹ ವಿಪನ್ನ ಪರಿಸ್ಥಿತಿಯಿಂದ ಕನ್ನಡ ಸಾಹಿತ್ಯ ಲೋಕ ವನ್ನು ಪಾರು ಮಾಡಿದ ಹೆಗ್ಗಳಿಕೆ ಗೋಪಾಲಕೃಷ್ಣ ಅಡಿಗರದು. ಅಡಿಗರ ಕಾವ್ಯ ಕನ್ನಡ ಕಾವ್ಯ ಪರಂಪರೆಯೊಂದಿಗೆ ಪ್ರತಿಕ್ರಿಯಿಸು ವುದಕ್ಕಿಂತ ಹೆಚ್ಚುಪಾಲು ಸಮಕಾಲೀನ ಬದುಕಿನ ತುಡಿತ ಗಳಿಗೆ ಪ್ರತಿಕ್ರಿಯಿಸುವುದು. ಅವರ ಸೃಜನಶೀಲ ತೆಯ ಮೂಲ ಆಶಯ ಸಾಮಾಜಿಕ ವಾದದ್ದು ಸಾಂಸ್ಕೃತಿಕವಾದದ್ದು. ಸ್ವಾತಂತ್ರ್ಯದ ಪೂರ್ವೋತ್ತರ ಕಾಲಗಳನ್ನು ಕಂಡಂತಹ ಈ ಪ್ರಜ್ಞಾವಂತ ಕವಿಯ ದೃಷ್ಟಿಯಲ್ಲಿ ಸ್ವಾತಂತ್ರದ ಅರ್ಥ, ಸ್ವಾತಂತ್ರ್ಯದ ಮುಂಚಿನ ಭಾರತೀಯ ಮನಸ್ಥಿತಿ ಹಾಗೂ ಕಂಡ ಕನಸುಗಳು ಸಾದರ ಗೊಳ್ಳುತ್ತಾ ಹೋದಂತೆ, ಸ್ವಾತಂತ್ರೋತ್ತರ ಕಾಲದಲ್ಲಿ ಅವು ನನಸಾಗದೆ ಭ್ರಮೆಯಾದ ವಿಷಾದತೆಯೂ ಮಡುಗಟ್ಟುತ್ತದೆ.

ಎಲ್ಲವೂ ಸರಿ ಹೋಗಬಹುದೆಂಬ ಆಶಾವಾದ ಧನಾತ್ಮಕತೆ ಕಂಡುಬರುವ ಇವರ ಕಾವ್ಯದಲ್ಲಿ ಸ್ವಾತಂತ್ರದ ಬಗ್ಗೆ ಪ್ರಸ್ತಾಪವಾಗಿರುವ ಕೆಲವೊಂದು ಕವನಗಳ ಪರಿಚಯ ಮಾಡಿಕೊಳ್ಳು ವುದು ಸ್ವಾತಂತ್ರ್ಯೋತ್ಸ ವದ ಅಮೃತ ಮಹೋತ್ಸವದ ಈ ಸುಸಂದರ್ಭ ದಲ್ಲಿ ನಮ್ಮ ಸೌಭಾಗ್ಯ ಹಾಗೂ ಕರ್ತವ್ಯ.
ಸ್ವಾತಂತ್ರ್ಯಕ್ಕೆ ಮುನ್ನ ದೇಶಾಭಿಮಾನದ ಮಹಾಪೂರದ ಬಗ್ಗೆ
ತಮ್ಮ ಪ್ರಥಮ ಸಂಕಲನ ಭಾವ ತರಂಗದಲ್ಲಿ “ನೆನೆನೆನೆ ಆ ದಿನವ” ಕವನದ ಮೂಲಕ ಭಾರತದ ಕ್ವಿಟ್ ಇಂಡಿಯಾ ಚಳುವಳಿಯನ್ನು ನೆನಪಿಸಿಕೊಂಡಿದ್ದಾರೆ. ಗಾಂಧೀಜಿ ಕರೆ ಕೊಟ್ಟ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಆ ಕರೆಯ ಹಿಂದಿದ್ದ ದೇಶಾಭಿಮಾನದ ಕಿಚ್ಚು ಕೆಚ್ಚು ಶೌರ್ಯಗಳ ಬಗ್ಗೆ ಈ ಕವನದಲ್ಲಿ ಉಲ್ಲೇಖಿಸುತ್ತಾ ಹೋಗುತ್ತಾರೆ. ನೆನೆ ನೆನೆ ಆ ದಿನವಾ (ಆಗಸ್ಟ್9) ಎಂಬ ಶೀರ್ಷಿಕೆಯ ಈ ಕವನದಲ್ಲಿ ಭಾರತ ಬಾಂಧವರಿಗೆ ನೆನೆ ನೆನೆ ಆ ದಿನವಾ ಎಂದು ಕರೆ ಕೊಡುತ್ತಾ ಆರಂಭಿಸಿ ಇದುವರೆಗೂ ಸ್ವಾತಂತ್ರ್ಯ ಹೋರಾಟದ ದಳ್ಳುರಿ ಯಲ್ಲಿ ಬೆಂದು ಬೂದಿಯಾದ ವೀರ ದೇಶ-ಬಾಂಧವರ ತ್ಯಾಗ ಬಲಿದಾನಗಳನ್ನು ನೆನೆಸಿಕೋ, ಹಿಂದೆಂದೂ ಇಲ್ಲದ ವೈಭವ ವೀರ ಧೀರರ ಪರಾಕ್ರಮಗಳನ್ನು ಸ್ವಾತಂತ್ರ ಚಳವಳಿ ಯ ಸಮರಕ್ಕೆ ಬಲಿಯಾದ ವೀರಗಣ ವನ್ನು ನೆನೆ ಎನ್ನುತ್ತಾರೆ.

ಮುಂದೆ ಗಾಂಧೀಜಿಯವರ ಕರೆ ಭಾರತೀಯರ ಧಮನಿಧಮನಿಗಳಲ್ಲಿ ಉಕ್ಕಿಸಿದ ದೇಶಾಭಿಮಾ ನದ ಸೆಲೆಯನ್ನು ವರ್ಣಿಸುವ ಸಾಲುಗಳನ್ನು ನೋಡಿ:
ಅಂದು ಆಗ ಸೆಲೆಯೊಡೆದುದೇನೋ ಹೊರ ಹೊಮ್ಮಿ ಚಿಮ್ಮಿ ಚಿಗಿದು
ಉರುಳಿ,ಉರುಳಿ,ಹೊರಳಿ ಹೊರಳಿ ಬಂತು ಮೊರೆ ಮೊರೆದು ಬಂತು ಹೊನಲು;
ಹೊಸ ಹೊನಲು ಬಂತು ನಾಡಿನಲಿ ದಡವ ದುಡು ದುಡುಕಿ ಬಂತು ಬಂತು;
ಜನಜನದ ಧಮನಿಧಮನಿಯಲಿ ನಿಂತು ಧುಮು ಧುಮುಕಿ ಬಂತು ಬಂತು!
ದ್ವಿರುಕ್ತಿಗಳಲ್ಲಿ ಬಂದಿರುವ ಪದಗಳು ಆ ಓಘದ ರಭಸವನ್ನು ಎಷ್ಟು ಚೆನ್ನಾಗಿ ಹಿಡಿದಿಟ್ಟಿದೆ. ಓದಿದ ರೆ ಮೈ ಝುಮ್ ಎನ್ನಿಸುವಂತಹ ಭಾವ ತೀವ್ರತೆ.
ಹೀಗೆ ಸೆಲೆಯಾಗಿ ಬಂದ ದೇಶ ಭಕ್ತಿಯ ಹೊನಲು ಪ್ರವಾಹವಾಗಿ ಅರಸೊತ್ತಿಗೆಗಳನ್ನು ವಿದೇಶಿ ಆಳ್ವಿಕೆಯ ಘೋರ ಶಾಸನಗಳನ್ನು ಕಿತ್ತೊಗೆಯುತ್ತಾ ಸಾಗುವಾಗ ಹಿಂದಿನ ಕೊಳೆ ಕಸ ಕಳಚುತ್ತದಂತೆ ಪೊರೆ ಪೊರೆಯನ್ನು ಬಿಚ್ಚುತ್ತ ದಂತೆ.

ಹೀಗೆ ಪ್ರೇರಿತರಾದ ಜನ ಸಮೂಹ ಯಾವುದ ಕ್ಕೂ ಹಿಂದೆಗೆಯದೆ ತಲೆಬಾಗದೆ ಎದೆಗೆಡದೆ ಅಧಿಕಾರಬಲದ ಮದಗಜದ ತುಳಿತಕ್ಕೂ ನಗುತ್ತಾ ಎದೆಗೊಡುತ್ತದೆ. ಈ ಎಲ್ಲಾ ನಿಲುವು ಗಳು ಗೆಲುವುಗಳು ನೋವು ನಲಿವುಗಳು ಜಗಕ್ಕೆ ಹೊಸದು ಈ ಸ್ವಾತಂತ್ರ ಸಮರ ಭರತ ಕುಲಕ್ಕೆ ಹೆಸರಾದದ್ದು.

ಮುಂದೆ ಕೆಚ್ಚೆದೆಯ ಕಲಿಗಳ ಕೊರಳುಲಿ
ಭೋರ್ಗರೆವ ಪರಿ ಅಡಿಗರ ಮಾತುಗಳಲ್ಲೇ ಕೇಳಿ
ತೊಲಗು ತೊಲಗು ತೊಲಗಾಚೆ ತೊಲಗು, ಬಿಳಿದೊಗಲ ಸುಲಿಗೆಗಾರ!
ನಾವಲ್ಲ ತೊತ್ತು ನಿನಗಲ್ಲ ತುತ್ತು ನಮ್ಮ ನುಡಿ ವಿಚಾರ;
ಇಂದು ನಾವು ಮನಸಾ ಸ್ವತಂತ್ರರೋ; ನಮ್ಮ ದೇಹ ಯಂತ್ರ
ನಿನ್ನ ಬೆಸಕೆ ಸಂಚಲಿಸದಣ್ಣ, ಹೋ
ಎಂಬ ವೀರ ಮಂತ್ರ
ಹೆಣ್ಣುಗಂಡುಗಳ,ಕೂಸುಕುನ್ನಿಗಳ ಕೊರಳಿನಲ್ಲಿ ಕೆರಳಿ
ದಿಗ್ದಿಗಂತದಲಿ ಮೊಳಗಿ ಮೊಳಗಿ ಮಾರ್ಮಲೆಯೆದದುಭ್ರದಲ್ಲಿ!
ಅಬ್ಬಾ ಎಂಥ ಸಾಲುಗಳು! ನಮ್ಮ ನುಡಿ ಆಚಾರ ವಿಚಾರಗಳನ್ನೆಲ್ಲಾ ಮರೆಸಿ ನುಂಗಿ ನೀರು ಹಾಕುವ ಪರಸಂಸ್ಕೃತಿಯ ಬಗ್ಗೆ ಹೇಳುವ ಈ ಸಾಲುಗಳು “ನಾವಲ್ಲ ತೊತ್ತು ನಿನಗಲ್ಲ ತುತ್ತು ನಮ್ಮ ನುಡಿ ವಿಚಾರ ” ಅಂದಿನ ರಾಜಕೀಯ ದಾಸತ್ವದ ಬಗ್ಗೆ ದಬ್ಬಾಳಿಕೆಯ ಬಗ್ಗೆ ಹೇಳಿದ್ದಾದ ರೂ ಈಗಲೂ ಹೆಬ್ಬಲೆಯಂತೆ ನಮ್ಮ ಯುವ ಜನಾಂಗವನ್ನು ಕೊಚ್ಚಿ ಕೊಂಡೊಯ್ಯುತ್ತಿರುವ ವಿದೇಶಿ ಸಂಸ್ಕೃತಿಯ ಬಗೆಗಿನ ಮೋಹದ ಬಗೆಗೂ ಅನ್ವಯಿಸುತ್ತದೆ. ಆಗ ರಾಜಕೀಯ ದಾಸ್ಯವಾ ದರೆ ಈಗ ಸಾಂಸ್ಕೃತಿಕ ದಾಸ್ಯಕ್ಕೆ ಅಡಿಯಾಳಾ ಗುತ್ತಿದ್ದೇವೇನೋ ಎಂಬ ಸಂದೇಹ ತರುತ್ತದೆ. ಆಗ ಮೂಡಿದ ಈ ವೀರ ಮಂತ್ರ ನಾಡಿನ ಪ್ರತಿಯೊಬ್ಬರ ಪ್ರತಿಯೊಂದು ಕೊರಳಿನಲ್ಲಿ ಮೊಳಗಿ ಆಕಾಶದೆತ್ತರಕ್ಕೆ ಮಾರ್ಧನಿಸಿತ್ತು ಎನ್ನುತ್ತಾರೆ.

ಈ ವೀರಮಂತ್ರದಲ್ಲಿ ನ್ಯಾಯದ ಛಲ ಹೃದಯ ದ ಬಲಗಳಿದ್ದವು. ಹಾಗಾಗಿ ಎಂತಹ ದಮನಿ ಸುವಂತಹ ಮುಗಿಲುದ್ದದ ಅಲೆಗಳು ಬಂದು ಬಡಿದರೂ ಜನಯುದ್ಧನೌಕೆ ಸ್ವಾತಂತ್ರ್ಯ ತೀರದೆ ಡೆಗೆ ತೇಲಾಡಿತು ಎಂದು ವರ್ಣಿಸುತ್ತಾರೆ.

ಆದರೆ ವಿಜಯ ಅಷ್ಟು ಬೇಗ ಕೈ ಸೇರಲಿಲ್ಲ. ಎಷ್ಟೋ ಜನ ಅಳಿದರು ಮಡಿದರು. ಆದರೂ ಪರತಂತ್ರದ ಯಜಮಾನಿಕೆಗೆ ತಲೆಬಾಗದಿದ್ದ, ತಮ್ಮ ಪ್ರಾಣವನ್ನೇ ಆಹುತಿ ಗೈದ ಆ ಜನಕ್ಕೆ ನೀವು ಭಕ್ತಿಯಿಂದ ಪ್ರೀತಿಯಿಂದ ತಲೆಬಾಗಿರಿ ಎಂಬ ಕರೆ ಕೊಡುತ್ತಾರೆ ಕವಿ. ನಮ್ಮ ಪೂರ್ವಿಕ ರ ತ್ಯಾಗ ಬಲಿದಾನಗಳನ್ನು ನೆನೆಯಬೇಕು ಎಂದು ಹೇಳಿರುವ ಈ ಸಾಲುಗಳನ್ನು ಗಮನಿಸಿದರೆ ಹೃದಯ ಆರ್ದ್ರವಾಗುತ್ತದೆ. ಕಣ್ಣು ಪಸೆಯಾಡು ತ್ತದೆ.ಅವರು ಮಾಡಿದ ಆ ತ್ಯಾಗದ ಮಹತ್ತರತೆ ಅರಿವಾಗುತ್ತದೆ.
ಉರಿದ ಮನಗಳನು ಮುರಿದ ಮನೆಗಳನು,ತೊರೆದ ಒಲವುಗಳನು,
ಬಸಿದ ನೆತ್ತರನು, ಹಸಿದು ಸತ್ತರನು, ಹರಿದ ನೇಹಗಳನು,
ಅಳಿದ ಆಶೆಗಳ,ಕಳೆದ ಕಾವುಗಳ, ಬೆಳೆದ ಬಳಲಿಕೆಗಳ,
ನೆನೆಯಬೇಕು ಮರೆಯಾದ ಭಾರತದ ವೀರ ಚೇತನಗಳ!
ಹೌದು ಈ ಸಂಗ್ರಾಮದ ಮಹಾ ದಳ್ಳುರಿಯಲ್ಲಿ ಅದೆಷ್ಟು ಮನಗಳು ಪ್ರಿಯರ ಅಗಲಿಕೆಯಿಂದ ಉರಿದವು ಮನೆಗಳು ಮುರಿದವು ಪ್ರೀತಿಗಳು ತುಂಡಾದವೋ! ಹಸಿದು ಸತ್ತವರಿಗೆ ಹರಿದ ರಕ್ತಕ್ಕೆ ಲೆಕ್ಕವಿಲ್ಲ. ಆಶೆಗಳು ಅಳಿದವು ಕಾವುಗಳು ಕಳೆದವು ಬಳಲಿಕೆಗಳು ಮಾತ್ರ ಬೆಳೆದವು. ಆ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಿ ಕಡೆಗೆ ತಮ್ಮ ಜೀವ ಜೀವನಗಳನ್ನೇ ಸ್ವಾತಂತ್ರದ ಯಜ್ಞಕ್ಕೆ ಹವಿಸ್ಸಾಗಿ ಧಾರೆಗೈದ ಆ ವೀರ ಚೇತನಗಳನ್ನು ನೆನೆಯಲೇಬೇಕು. ಹಾಗೆಯೇ ನಮ್ಮ ಮನವೆಂಬ ಬಯಲಿನಲ್ಲಿ ಆ ಅಕ್ಕ ತಂಗಿ ಅಣ್ಣ ತಮ್ಮಂದಿರಿಗೆ ಗೋರಿಗಳನ್ನು ಕಟ್ಟಲೇಬೇಕು.

ದೇಶಾಭಿಮಾನದ ಸ್ವಾತಂತ್ರ್ಯ ಸಮರದ ಕರೆಗೆ ಕವಿ ಕುರುಡಾಗಲು ಕಿವುಡಾಗಲು ಸಾಧ್ಯವಿಲ್ಲ. ಇವರ ಅಭಿಮಾನ ಆವೇಶ ಭರಿತ ಮಾತುಗಳು ಅದೆಷ್ಟು ಜನಕ್ಕೆ ಸ್ಫೂರ್ತಿ ತಂದಿದೆಯೋ ಅರಿತವ ರಾರು ? ಕವನದ ಕಡೆಯ ಈ ಸಾಲುಗಳ ಶಕ್ತಿ ನೋಡಿ!
ಆ ದಿನದ ದಿವ್ಯ ಆದರ್ಶದರ್ಶನಕೆ ದೀಪ್ತವಾದ ಮನವು
ಸ್ವಾಧೀನಭಾವನೆಯ ಸಂತತಾಗ್ನಿಯಂ_
ತಾಗಿ ಶೋಭಿಸಿರಲು,
ಧುಮುಧುಮುಕಿ ಬರಲಿ ದೇಶಾಭಿಮಾನ ದುನ್ಮಾದದಮೃತಪೂರ
ಬಳಿಸಾರುವಂತೆ ತೆರೆತೆರೆಯುವಂತೆ ಸ್ವಾತಂತ್ರ್ಯ ದಿವ್ಯ ತೀರ!
ಹೀಗೆ ಸ್ವಾತಂತ್ರ ತೀರವನು ಹುಡುಕಿ ಹೊರಟ ಈ ಮಹಾನ್ ಪ್ರಯಾಣ ಕಡೆಗೂ ಗಮ್ಯ ಸೇರಿತ್ತು. ನಮಗೆಲ್ಲಾ ದಿವ್ಯ ಸ್ವಾತಂತ್ರ್ಯದ ದೀಕ್ಷೆಯಾಯಿತು. ತ್ಯಾಗ ಬಲಿದಾನಗಳ ತಳಿಗೆಯಲ್ಲಿ ಇಟ್ಟುಕೊಟ್ಟ ಈ ಸ್ವಾತಂತ್ರ್ಯದ ಹೊನ್ನ ಕಿರೀಟವನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಿದ್ದೇವೆಯೆ ಅದು ಮಿಲಿಯನ್ ಡಾಲರ್ ಪ್ರಶ್ನೆ !

ಕವಿ ಮುಂದಿನ ಭವಿಷ್ಯದ ಪ್ರವಾದಿಯಾಗಿರ ಬಹುದು, ಹಿಂದಿನ ಇತಿಹಾಸದ ಲೇಖಕನೂ ಆಗಬಹುದು. ಸಮಾಜದ ಸಮಕಾಲೀನತೆಯ ದರ್ಪಣವೂ ಅವನೇ; ಪ್ರತಿಬಿಂಬವೂ ಹೌದು. ಅಂದಿನ ದಿನಗಳ ನೇರ ಭಾಗೀದಾರರು ನಾವಾಗ ದಿದ್ದರೂ ಆ ಕಾಲದ ತಳಮಳ ತುಮುಲಗಳ ಅನಾವರಣವನ್ನು ಕಟ್ಟಿಕೊಡು ತ್ತದೆ ಅಂದಿನ ಕವಿಗಳ ರಚನೆಗಳು. ಹಾಗಾಗಿಯೇ ಅವುಗಳ ಓದು ಇಂದಿನ ಪರಿಸ್ಥಿತಿಯ ಬೆಲೆಯನ್ನು ಅರಿತು ನೆಲೆಗಾಣಲು ತುಂಬಾ ಸಹಾಯಕ. ಹಿಂದಿನ ಆರ್ಜಿತ ಸ್ವಾತಂತ್ರ್ಯದ ಮಹತ್ವವನ್ನು ಅರಿಯಲು ಪೂರಕ.

✍️ಸುಜಾತಾ ರವೀಶ್
ಮೈಸೂರು
ಪೂರಕ ಚಿತ್ರಗಳು ತುಂಬಾನೇ ಸೊಗಸಾಗಿದೆ . ಲೇಖನದ ಭಾವವನ್ನು ಅವು ಬಹಳ ಚೆನ್ನಾಗಿ ಪ್ರತಿಬಿಂಬಿಸುತ್ತಿವೆ . ಅವುಗಳನ್ನು ಹುಡುಕಿ ಪ್ರಕಟಿಸಿದ ನಿಮ್ಮ ಶ್ರಮ ನಿಜಕ್ಕೂ ಎಷ್ಟು ಪ್ರಶಂಸಿಸಿದರೂ ಕಡಿಮೆಯೇ . ತುಂಬಾ ತುಂಬಾ ಧನ್ಯವಾದಗಳು ಸಂಪಾದಕ ಶ್ರೀ ರವಿಶಂಕರ್ ಅವರಿಗೆ ..
LikeLiked by 1 person