ಭಾರತೀಯರು ನಾವೆಲ್ಲ ಎಂದೆಂದಿಗೂ ಒಂದೇ
ಬಹುತ್ವದಲಿ ಐಕ್ಯತೆ ಕಾಣೋಣ ಮನುಜರೆಲ್ಲರೊಂದೇ
ಜಗದೊಳು ವಿಶಿಷ್ಟವೀ ಸಾಮರಸ್ಯ ಸೇತುವೆ ಹಿಂದುಸ್ತಾನ
ಜಗಕೆ ಶಾಂತಿ ಸೌಹಾರ್ದ ಬೋಧಿಸಿದೀ ಭರತದೇಶ ಮಹಾನ

ಹಲ ಭಾಷೆ ಆಚಾರ ವಿಚಾರದಾಳದಾ ಭಾವವೊಂದೇ
ಹಲ ವೇಷ ರೂಢಿ ಸಂಪ್ರದಾಯದಾಳದಾ ಧ್ಯೇಯವೂಂದೇ
ವೇದ ಪುರಾಣ ಕುರಾನ ಬೈಬಲ್ ಸಮ್ಮೇಕ ತತ್ವವೊಂದೇ
ಹಿಂದೂ ಕ್ರೈಸ್ತ ಮುಸ್ಲಿಂ ಬೌದ್ಧ ಮತದ ಮಾನವತ್ವವೊಂದೇ

ಗುಡಿ ಚರ್ಚು ಮಸೀದಿಯೊಳಗಿನ ಜನ ಒಂದಾಗಲಿಂದೇ
ಮೇಲು ಕೀಳಿನ ಭೇದವಳಿಸಲು ಸರ್ವರೂ ಮುಂದಾಗಲಿಂದೇ
ಕುಡಿವ ಜಲ ನಡೆವ ನೆಲ ಉಂಬುವನ್ನ ಉಸಿರ ಗಾಳಿಯೊಂದೇ
ಪರಮತ ಸಹಿಷ್ಣುತೆ ಅಹಿಂಸೆ ಆದರ್ಶ ಗೆಲುವಾಗಲಿಂದೇ

ಭಾವೈಕ್ಯತೆಯ ಹಾದಿಯಲಿ ಹೂವಾಗಿ ಘಮಿಸೋಣವಿಂದೇ
ರಾಷ್ಟ್ರಾಭ್ಯುದಯ ದಾರಿಯಲಿ ಒಂದಾಗೋಣವಿಂದೇ
ಸ್ವಾತಂತ್ರ್ಯ ತ್ಯಾಗ ಬಲಿದಾನದ್ಹಿರಿಮೆ ಸ್ಮರಿಸೋಣವಿಂದೇ
ಸಂವಿಧಾನದ ಪರಮ ಘನತೆ ಎತ್ಹಿಡಿಯೋಣ ನಾವೋಂದೆ

ಕೇಸರಿ ಬಿಳಿ ಹಸಿರು ತ್ರಿವರ್ಣ ಧ್ವಜದ ಧ್ಯೇಯವೊಂದೇ
ನರ ನಾಡಿಯಲಿ ರಿಂಗಣಿಸುವ ರುಧೀರ ಗೇಯವೊಂದೇ
ಜಾತಿ ಮೌಢ್ಯದಾಟಿ ಪ್ರೀತಿ ಸಾಗರದೊಳೊಂದಾಗೋಣವಿಂದೇ
ಭೀತಿ ಅರಾಜಕತೆ ತಳ್ಳಿ ನೀತಿ ಅಮೃತ ಸವಿಯೋಣವಿಂದೇ

✍️ಸುಹೇಚ ಪರಮವಾಡಿ
(ಶ್ರೀ ಸುಭಾಷ್ ಹೇಮಣ್ಣಾ ಚವ್ಹಾಣ)
ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ,ಹಳೆ ಹುಬ್ಬಳ್ಳಿ