1.ಚಿರ ಚಿರಂತನ ದಿನ
ಪ್ರತಿ ಮನೆ ಮನೆಯಲ್ಲೂ
ರಾಷ್ಟ್ರಧ್ವಜ ಭವ್ಯ ನರ್ತನ
ಪ್ರತಿ ಮನ ಮನದಲ್ಲೂ
ರಾಷ್ಟ್ರಪ್ರೇಮ ಸಂಕೀರ್ತನ
ಎಲ್ಲರ ಉಸಿರುಸಿರಲ್ಲೂ
ರಾಷ್ಟ್ರಭಕ್ತಿಯ ಸಂವರ್ತನ
ಇದು ಭಾರತೀಯತೆಯ
ದಿವ್ಯಾತಿದಿವ್ಯ ನಿದರ್ಶನ
ಅಮೃತಮಹೋತ್ಸವದ
ಈ ಅನನ್ಯ ಪುಣ್ಯ ಸುದಿನ
ಸಕಲರೆದೆಯೆದೆಯಲ್ಲೂ
ಎಂದಿಗೂ ಚಿರಚಿರಂತನ.!

2.ಅರ್ಪಣೆ..!
ಭಗತ್, ಬೋಸ್, ಆಜಾದ್
ಗಾಂಧಿ, ಶಾಸ್ತ್ರಿ, ಪಟೇಲ್
ಸಾವಿರದ ಸಾವಿರ ಸಾವಿರ
ಚೇತನಗಳೇ ನಿತ್ಯ ನಮನ.!
ಸ್ವಾತಂತ್ರ್ಯದ ಈ ಬೆಳಕಿಗೆ
ಸ್ವಾಭಿಮಾನದ ಈ ಬದುಕಿಗೆ
ನೀವೇ ಕಾರಣ, ಪ್ರೇರಣ
ಉಸಿರಿರುವರೆಗೆ ಶರಣು
ನಿಮಗೆ ನಮ್ಮೀ ಜೀವನ.!
3.ಪ್ರಗತಿ!
ಕೇವಲ ಏಳುವರೆ ದಶಕಗಳಲ್ಲಿ
ಸ್ವತಂತ್ರಭಾರತ ಶೂನ್ಯದಿಂದ
ಅಭಿವೃದ್ದಿಯ ಶೃಂಗದವರೆಗೆ.!
ಹಿಂದಿದೆ ಸಹಸ್ರ ಸಹಸ್ರಾರು
ನಿಸ್ವಾರ್ಥ ಜೀವಗಳ ಬಲಿದಾನ
ಶ್ರಮದಾನಗಳ ಮಹಾಕೊಡುಗೆ.!
ದೇಶದಿಂದ ಬೇಡುವವರಿಂದ
ಆಗದೆಂದೆಂದೂ ಸಮೃದ್ಧಿ ಪ್ರಗತಿ
ಫಲಾಪೇಕ್ಷೆಗಳಿಲ್ಲದೆ ತ್ಯಾಗದಿ
ಸೇವಿಸುತ ನೀಡುವವರಿಂದಷ್ಟೇ
ನಿತ್ಯ ಸತ್ಯ ಅಭಿವೃದ್ದಿಯ ಆರತಿ.!
4.ನಿದರ್ಶನ.!
ಬದ್ದತೆಯಿಲ್ಲದ ಭೋಧನೆಗಳಿಂದ
ಸಿದ್ದತೆಗಳಿಲ್ಲದ ಸಿದ್ಧಾಂತಗಳಿಂದ
ನಿಷ್ಠೆ ಕ್ಷಮತೆಗಳಿಲ್ಲದ ನಡೆಗಳಿಂದ
ಕಟ್ಟಿರುವಂತದ್ದಲ್ಲ ನಮ್ಮೀ ದೇಶ.!
ಭಗತರ ಶೌರ್ಯದ ಸಿಂಹಗುಂಡಿಗೆ
ಶಾಸ್ತ್ರೀಜಿಯ ಪ್ರಾಮಾಣಿಕ ಕೊಡುಗೆ
ಪಟೇಲರ ದಿಟ್ಟ ಉಕ್ಕಿನ ನಡಿಗೆ
ಕೋಟಿಕೋಟಿ ವೀರ ವಿವೇಕಿಗಳ
ತತ್ವ ಸತ್ವ ನೀತಿಗಳಿಂದು ಕಟ್ಟಿದ್ದು
ನಮ್ಮೀ ಸದೃಢ ಸ್ವತಂತ್ರ ಭಾರತ.!
ಇದಕೆ ನಿದರ್ಶನವೇ ಇಂದಿನ
ಅಮೃತೋತ್ಸವದ ಯಶೋಗೀತ.!

5.ಭಾರತೀಯತೆ
ಕೇಸರಿ, ಬಿಳಿ, ಹಸಿರುಗಳ
ತ್ರಿವರ್ಣ ಧ್ವಜದ ಭವ್ಯತೆ
ವಿವಿಧತೆಯಲ್ಲೂ ಮೆರೆವ
ಏಕತೆ ಐಕ್ಯತೆ ಸಮಾನತೆ
ರಾಷ್ಟ್ರಭಕ್ತಿಯ ಪ್ರಜ್ವಲಿಸುವ
ಭವ್ಯ ದಿವ್ಯ ಮಹಾಪ್ರಣತೆ
ಎಪ್ಪತ್ತೈದು ವರ್ಷಗಳಿಂದ
ಜಗಕೆಲ್ಲ ನಿತ್ಯ ಸತ್ಯ ಆದರ್ಶ
ನಮ್ಮೀ ಭಾರತೀಯತೆ.!
6.ಐತಿಹಾಸಿಕ ದಿನ
ಅಂದು ಈದಿನವೇ ನಮಗೆ
ದೇಶದ ಜೀವ-ಜೀವನಗಳಿಗೆ
ಹಾಕಿದ್ದ ಸಂಕೋಲೆ ತೊಡೆದದ್ದು
ನಡೆ-ನುಡಿಯ ಸ್ವಾತಂತ್ರ್ಯ
ಉಡುಗೆ-ತೊಡುಗೆ ಸ್ವಾತಂತ್ರ್ಯ
ತಲೆಯೆತ್ತಿ ನಿಲ್ಲುವ ಸ್ವಾತಂತ್ರ್ಯ
ಆಳುವ ಬಾಳುವ ಸ್ವಾತಂತ್ರ್ಯ
ಸಕಲವನು ಗಳಿಸಿಕೊಂಡಿದ್ದು.!
ವಿಶ್ವದೆದುರು ಆತ್ಮವಿಶ್ವಾಸ ಹೆಮ್ಮೆ
ಗರ್ವ ಸ್ವಾಭಿಮಾನದಿ ನಿಂದಿದ್ದು.!

✍️ಎ.ಎನ್.ರಮೇಶ್. ಗುಬ್ಬಿ.