ದಿವ್ಯ ತೇಜದ ಶಕ್ತಿ ಪುಂಜದ
ಸಗ್ಗ ಸುಂದರ ನೆಲವಿದು
ಅಮ್ಮ ಎಂದು ಅವಳ ಕರೆವ
ಪುಣ್ಯವೆಂದಿಗು ನನ್ನದು

ಕಡಲಿನಂತೆ ಇವಳ ಕರುಣೆ
ನಭದ ನಕ್ಷೆಗೂ ಎತ್ತರ
ಜಗದ ಇರುಳ ಕಳೆವ ಪರಿಯು
ಬೆಳಕ ಕಕ್ಷೆಗೂ ಸುಂದರ

ನೂರು ಭಾಷೆ, ನೂರು ನೋಟ
ಕಲೆತ ಧೂಳಿದು ಗಂಧವೇ
ಹರಿವ ನದಿಯು ಹೊಳೆವ ಮಳಲೂ
ಎಲ್ಲ ನಮ್ಮ ಬಂಧುವೆ

ಬೊಗಸೆ ತುಂಬ ಹಿಮದ ಕಂಪು
ಚೆಲ್ಲಿ ಘಮಿಸಿದೆ ಸಹನೆಯು
ಎಲ್ಲ ಗೋಡೆ, ಎಲ್ಲ ಗೊಡವೆ
ತೊರೆದು ದ್ರವಿಸಿದೆ ಒಲುಮೆಯು

ದೀಪ್ತ ತಪವಿದು, ಪೂಜ್ಯ ಪಥವಿದು
ಸತ್ಯ ಶಾಂತಿಯ ಹಂದರ

ನಿತ್ಯ ನಿರ್ಮಲ ತ್ಯಾಗ ದಳಗಳ
ಭರತ ಭೂಮಿಯೇ ಮಂದಿರ

✍️ದೀಪ್ತಿ ಭದ್ರಾವತಿ 
ಸದಸ್ಯರು,
ಕರ್ನಾಟಕ ಸಾಹಿತ್ಯ ಅಕಾಡೆಮಿ
ಬೆಂಗಳೂರು