ವಸಂತ ಮಾಸಿದು ಕವಿಹೃದಕೆ ಅನವರತ ಕಾಡುತ
ಹಲಬಗೆ ಚಿಂತನೆಗಿದು ಪ್ರೇರಣೆ ಅನಂತವು ನೀಡುತ
ಸೃಷ್ಟಿಯ ಸಮೃದ್ಧಿಸುವ ಸಚೇತ ಕಾಯಕ ಮಾಡುತ
ಜಗಕೆ ಅನ್ನವನೀಯುವ ಮೂಲಕೆ ಪ್ರೇರಕವಾದಾತ

ಕಾಡು ನಾಡು ಬೀಡಿನೆಲ್ಲೆಡೆ ಚೈತನ್ಯವ ಸ್ಪರ್ಷಿಸುತ
ಉತ್ಸಾಹ ಸಂಭ್ರಮ ಸಮತೆಯ ಹರ್ಷ ಸುರಿಸುತ
ಇಳೆಯ ಬೆಳೆಗೆ ಹೊನಲ ಮಳೆಯ ಪರ್ವ ಮಿಳಿಸುತ
ತಂಪಿಂಪಿನ ಗಂಧಕಂಪಿನ ಮಾಂತ್ರಿಕ ಶ್ರಾವಣನೀತ

ಮನುಕುಲ ಗೆಲುವಿನ ಪ್ರಕೃತಿ ಉಳಿವಿನ ಗುಟ್ಟು
ಶ್ರಾವಣ ವೈಭವವಿದು ಧರಣಿಗೀಗ ಹೊಸ ಹುಟ್ಟು
ಶ್ರವಣಕೆ ಶೃತಿಯ ನಂಟು ಶೃತಿಗೆ ನಾದದ ನಂಟು
ಬಹುರೂಪಿ ಶ್ರಾವಣ ಗೋಚರಾಗೋಚರದ ಗಂಟು

ನೀರುಂಡ್ಹದವಾಗಿದೆ ಹಾಳು ಬೀಳು ಪಾಲಾದ ನೆಲ
ತಂದಿದೆ ಉತ್ತಿ ಬಿತ್ತುವ ರೈತಗಣಕ್ಕೀಗ ಛಲ ಬಲ
ನಳನಳಿಸಿವೆ ಹಸಿರ ಕಾಂತಿಯಲಿ ಮೈವರಳಿಸಿ ಹೊಲ
ಕುಣಿಯುತಿದೆ ತೆನೆ ಗೊನೆಯೊಡಲಿನ ಹುಲುಸು ಫಸಲ

ಭೀಕರ ರೌದ್ರಾವತಾರ ಪಲ್ಲಟಿಸುವ ನಿಸರ್ಗದ್ವಿಸ್ಮಯ
ನವನವೋನ್ಮೇಷಶಾಲಿ ನಿನ್ನೊಳೆಲ್ಲವು ಈಗ ತನ್ಮಯ
ವೈಭವದ್ಹಾಡು ಪಾಡಿನಲಿ ಮತ್ತೇ ಬರುತಲಿಹ ಶ್ರಾವಣ
ಭೂಮಿ ಮುಗಿಲಿಗೂ ಕಡಲ ಕಾನನಕೂ ನೀ ತೋರಣ

ಬಂದನದ್ಹಿರಿಮೆ ಬಂಧನದರಿವಿನ ದಾಯಕ ಬಾರಾ
ಹರಿಹರ ಸ್ಮೃತಿ ಶೃತಿ ಧ್ಯಾನದ ಶ್ರವಣಕಾರಕ ಧಾರಾ
ಅರವಿಂದುದಯದ ಆಧ್ಯಾತ್ಮ ಘಮಲ ಸಖ್ಯಗಾರಾ
ವರಕವಿ ಬೇಂದ್ರೆ ಪ್ರಾಣ ಸಖ ಶ್ರಾವಣ ಮತ್ತೇ ಬಾರಾ *ಸುಹೇಚ ಪರಮವಾಡಿ*

✍️ಶ್ರೀಸುಭಾಷ್ ಹೇ. ಚವ್ಹಾಣ, 
ಶಿಕ್ಷಕ ಸಾಹಿತಿಗಳು, ಸ.ಹಿ.ಪ್ರಾ.ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ.